ETV Bharat / bharat

ಸುಳ್ಳು ಕೇಸಲ್ಲಿ ಜೈಲು ಪಾಲು: ಪೊಲೀಸರಿಂದ ವಸೂಲಿ ಮಾಡಿ ಸಂತ್ರಸ್ತಗೆ ₹14 ಲಕ್ಷ ಪರಿಹಾರ ನೀಡಲು ಹೈಕೋರ್ಟ್​ ಸೂಚನೆ

ಪೊಲೀಸರ ಅಧಿಕಾರ ದುರ್ಬಳಕೆಯಿಂದ ಅನ್ಯಾಯವಾಗಿ ಜೈಲುಪಾಲಾಗಿ ಕೆಲಸ ಕಳೆದುಕೊಂಡ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ನೀಡಲು ಕೇರಳ ಹೈಕೋರ್ಟ್​ ಆದೇಶಿಸಿ, ಪೊಲೀಸರ ವಿರುದ್ಧ ತನಿಖೆಗೂ ಸೂಚಿಸಿದೆ.

WRONGFUL ARREST COMPENSATION
ಕೇರಳ ಹೈಕೋರ್ಟ್ (ETV Bharat)
author img

By ETV Bharat Karnataka Team

Published : January 8, 2026 at 8:25 PM IST

2 Min Read
Choose ETV Bharat

ಎರ್ನಾಕುಲಂ (ಕೇರಳ): ಪೊಲೀಸ್ ಆಡಳಿತ ಬಲು ಅಪಾಯಕಾರಿ. ಇಲಾಖೆಯು ದ್ವೇಷ ಸಾಧಿಸಿದರೆ, ಅಧಿಕಾರ ದುರುಪಯೋಗ ಮಾಡಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಸಹಾಯ ಕೋರಿದಾಗ ನೆರವು ನೀಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಕಳ್ಳತನ ಕೇಸ್​ ದಾಖಲಿಸಿ ಬಂಧಿಸಿದ್ದರಿಂದ ಆತ 54 ದಿನ ಜೈಲು ಶಿಕ್ಷೆಯ ಜೊತೆಗೆ ಕತಾರ್​ನಲ್ಲಿ ಕೆಲಸವನ್ನೂ ಕಳೆದುಕೊಂಡ.

ಬಳಿಕ ಅಲ್ಲಿನ ಕಾನೂನು ಉಲ್ಲಂಘನೆಗೆ 23 ದಿನ ಅಲ್ಲಿಯೂ ಜೈಲು ಸೇರಿ ಗಡೀಪಾರಾಗಿದ್ದಾನೆ. ಇದರಿಂದ ಆತನ ಕುಟುಂಬ ತೀವ್ರ ಸಂಕಷ್ಟ ಮತ್ತು ಮಾನಸಿಕ ಹಿಂಸೆಗೆ ಗುರಿಯಾಗಿದೆ. ಪೊಲೀಸರ ದೌರ್ಜನ್ಯದ ವಿರುದ್ಧ ಕೇರಳ ಹೈಕೋರ್ಟ್​ನಲ್ಲಿ ಕೇಸು ದಾಖಲಿಸಿದ ಆತ ಗೆಲುವು ಸಾಧಿಸಿದ್ದಾನೆ. ಆದರೆ, ಅನುಭವಿಸಿದ ಯಾತನೆ, ಆದ ನಷ್ಟ ಸರಿ ಮಾಡಲು ಸಾಧ್ಯವೇ?

ಪ್ರಕರಣದ ವಿವರ: ಕಣ್ಣೂರಿನ ತಲಶ್ಶೇರಿ ಮೂಲದ ವಿ.ಕೆ. ತಾಜುದ್ದೀನ್ ಈ ಪ್ರಕರಣದ ಸಂತ್ರಸ್ತ. ಈತ ಕತಾರ್​​ನಲ್ಲಿ ಉದ್ಯೋಗಸ್ಥನಾಗಿದ್ದ. ರಜೆಯ ಮೇಲೆ 2018ರ ಜುಲೈನಲ್ಲಿ ಊರಿಗೆ ಬಂದಿದ್ದ. ಜುಲೈ 11 ರಂದು ರಾತ್ರಿ ಪೊಲೀಸ್ ಗಸ್ತು ಜೀಪ್ ತಾಜುದ್ದೀನ್ ಅವರ ಮನೆಯ ಬಳಿ ಮಣ್ಣಿನಲ್ಲಿ ಸಿಲುಕಿಕೊಂಡಿತ್ತು. ವಾಹನವನ್ನು ತಳ್ಳಲು ಅಧಿಕಾರಿಗಳು ತಾಜುದ್ದೀನ್ ಸಹಾಯ ಕೋರಿದ್ದಾರೆ.

ಆದರೆ, ಬೆನ್ನು ನೋವಿನ ಕಾರಣ ಆತ ನಿರಾಕರಿಸಿದ್ದಾನೆ. ಬಳಿಕ ಪೊಲೀಸರು ಇತರರ ಸಹಾಯ ಪಡೆದಿದ್ದಾರೆ. ನೆರವು ನೀಡಲು ನಿರಾಕರಿಸಿದ್ದ ತಾಜುದ್ದೀನ್​ ಮೇಲೆ ಕೋಪಗೊಂಡ ಪೊಲೀಸರು ಆತನನ್ನು ಮನೆಯಿಂದ ಹೊರಗೆಳೆದು ಫೋಟೋ ಕ್ಲಿಕ್ಕಿಸಿಕೊಂಡು ಸರಣಿ ಚಿನ್ನ ಕಳ್ಳತನದ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆಯ ಹಿನ್ನೆಲೆ ಆತ 54 ದಿನ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಅಂತಿಮವಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಕತಾರ್​ಗೆ ವಾಪಸ್​ ತೆರಳಿದ್ದಾರೆ.

ಕತಾರ್​ನಲ್ಲೂ ಬಂಧನ: 15 ದಿನಗಳ ರಜೆ ಪಡೆದಿದ್ದ ತಾಜುದ್ದೀನ್​ 50 ದಿನಕ್ಕೂ ಅಧಿಕ ಅನಧಿಕೃತ ಗೈರಾಗಿದ್ದರಿಂದ ಕಂಪನಿಯು ಆತನನ್ನು ಕೆಲಸದಿಂದ ವಜಾ ಮಾಡಿತ್ತು. ಅಲ್ಲದೇ, ನಿಯಮ ಉಲ್ಲಂಘಿಸಿದ್ದಕ್ಕೆ 23 ದಿನ ಜೈಲು ಶಿಕ್ಷೆಗೆ ಗುರಿಪಡಿಸಿ ಅಲ್ಲಿಂದ ಗಡೀಪಾರು ಮಾಡಲಾಗಿದೆ.

ಪೊಲೀಸರ ದರ್ಪಕ್ಕೆ ಗುರಿಯಾಗಿ, ಕೆಲಸ ಕಳೆದುಕೊಂಡಿದ್ದಲ್ಲದೇ ತನ್ನನ್ನು ಅನ್ಯಾಯವಾಗಿ ಜೈಲಿಗೆ ಹಾಕಿದ್ದರ ವಿರುದ್ಧ ಕೇರಳ ಹೈಕೋರ್ಟ್​​ನಲ್ಲಿ ತಾಜುದ್ದೀನ್​ ದಾವೆ ಹೂಡಿದ್ದರು. ಇದರ ವಿಚಾರಣೆಯಲ್ಲಿ ದೂರುದಾರ ನಿರಪರಾಧಿ ಎಂದು ಸಾಬೀತಾಗಿದೆ. ಪೊಲೀಸರ ವೈಯಕ್ತಿಕ ದ್ವೇಷದ ಕಾರಣಕ್ಕೆ ಆತ ತೀವ್ರ ನಷ್ಟ ಅನುಭವಿಸಿದ್ದನ್ನು ಕೋರ್ಟ್​ ಗುರುತಿಸಿದೆ.

ಪೊಲೀಸರಿಗೆ ದಂಡ ವಿಧಿಸಲು ಸೂಚನೆ: ಕೆಲಸ ಕಳೆದುಕೊಂಡು, ಜೈಲು ಪಾಲಾಗಿ ಮಾನಸಿಕ ಹಿಂಸೆ ಮತ್ತು ಘನತೆಗೆ ಧಕ್ಕೆಯಾಗಿದ್ದಕ್ಕೆ ಕೋರ್ಟ್​ ಆತನಿಗೆ 14 ಲಕ್ಷ ರೂಪಾಯಿ ಪರಿಹಾರ ಮತ್ತು ಇತರ ವೆಚ್ಚಗಳೆಂದು 25 ಸಾವಿರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಈ ಪರಿಹಾರದ ಹಣವನ್ನು ಆರೋಪಿತ ಪೊಲೀಸರಿಂದ ವಸೂಲಿ ಮಾಡಬೇಕು. ಅವರ ವಿರುದ್ಧ ತನಿಖೆ ನಡೆಸಬೇಕು ಎಂದೂ ಆದೇಶಿಸಿದೆ.

ಇವುಗಳನ್ನೂ ಓದಿ: