ಸೊನ್ನೆ ಸುತ್ತಿದ ಜನ ಸುರಾಜ್ ಪಕ್ಷ: ವಿಫಲವಾದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ!
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯು ಬಿಹಾರದಲ್ಲಿ ಕೆಲಸ ಮಾಡಿಲ್ಲ. ಜನ್ ಸುರಾಜ್ ಪಕ್ಷವು ಖಾತೆ ತೆರೆಯುವಲ್ಲಿ ವಿಫಲವಾಗಿದೆ.


By ANI
Published : November 15, 2025 at 10:44 AM IST
ಪಾಟ್ನಾ (ಬಿಹಾರ): ಜನ ಸುರಾಜ್ ಪಕ್ಷ ಕಟ್ಟಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ರಾಜ್ಯದ 243 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ಚುನಾವಣಾ ತಂತ್ರಗಾರನ ತಂತ್ರಗಾರಿಕೆ ಕೆಲಸ ಮಾಡಿಲ್ಲ.
ಪ್ರಶಾಂತ್ ಕಿಶೋರ್ ಅವರ ಪಾದಯಾತ್ರೆ, ಪ್ರಚಾರದಿಂದ ಜನ ಸುರಾಜ್ ಪಕ್ಷ ಈ ಬಾರಿ ಬಿಹಾರ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ನೀಡಲಿದ್ದು, ತ್ರಿಕೋನ ಹಣಾಹಣೆ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಜೆಡಿಯು, ಬಿಜೆಪಿ ನೇತೃತ್ವದ ಎನ್ಡಿಎ ಮುಂದೆ ಪ್ರಶಾಂತ್ ಕಿಶೋರ್ ಪಕ್ಷ ನೆಲಕಚ್ಚಿದೆ.
ಆರಂಭದಲ್ಲಿ ತೇಜಸ್ವಿ ಯಾದವ್ ವಿರುದ್ಧ ರಾಘೋಪುರ್ ಅಥವಾ ಕಾರ್ಗಹರ್ ನಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಪ್ರಶಾಂತ್ ಅವರು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. 'ಪಕ್ಷದ ಸದಸ್ಯ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಲು ಗಮನಹರಿಸಬೇಕೆಂದು ನಿರ್ಧರಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ' ಎಂದು ಪ್ರಶಾಂತ್ ತಿಳಿಸಿದ್ದರು.
ರಾಜಕೀಯ ಪಕ್ಷಗಳಿಗೆ ಹಲವು ವರ್ಷಗಳ ಕಾಲ ತಂತ್ರಗಳನ್ನು ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರು 2024 ಅಕ್ಟೋಬರ್ 2ರಂದು ಪಾಟ್ನಾದಲ್ಲಿ ಜನ ಸುರಾಜ್ ಪಕ್ಷವನ್ನು ಅಧಿಕೃತವಾಗಿ ಪ್ರಾರಂಭಿಸಿ, ತಾವೇ ಖುದ್ದು ನೇರವಾಗಿ ರಾಜಕೀಯಕ್ಕೆ ಇಳಿದಿದ್ದರು. ಬಿಹಾರದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಿದ್ದು, ಜನರು ತಮ್ಮನ್ನು ಪ್ರರ್ಯಾಯವಾಗಿ ನೋಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಶಾಂತ್ ಕಿಶೋರ್, ಜನರು ತಮ್ಮನ್ನು ಪರ್ಯಾಯ ಪಕ್ಷವಾಗಿ ನೋಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧವನ್ನು ತಕ್ಷಣವೇ ತೆಗೆದುಹಾಕುತ್ತೇವೆ. ತೆರಿಗೆ ಆದಾಯ, ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಲ್ಲದೇ, ಚುನಾವಣಾ ಪ್ರಚಾರದ ಉದ್ದಕ್ಕೂ ಉದ್ಯೋಗ, ಮೂಲಸೌಕರ್ಯ, ಕಾನೂನು ಮತ್ತು ಸುವ್ಯವಸ್ಥೆಗೆ ಒತ್ತು ನೀಡಿದ್ದರು.
ಈ ಬಾರಿ ಬಿಹಾರದಲ್ಲಿ ವ್ಯವಸ್ಥೆ ಬದಲಾಗಿ, ಜನ ಸುರಾಜ್ ಪಕ್ಷ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಚುನಾವಣೆಯಲ್ಲಿ 120-130 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ ಅದು ನಮ್ಮ ಸೋಲು ಎಂದು ಪದೆ ಪದೇ ಚುನಾವಣಾ ಪ್ರಚಾರದಲ್ಲಿ ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಫಲಿತಾಂಶದಲ್ಲಿ ಪಕ್ಷ ಖಾತೆ ತೆರೆಯುವಲ್ಲೇ ವಿಫಲವಾಗಿದೆ.
ಜನಾದೇಶವನ್ನು ಸ್ವೀಕರಿಸುತ್ತೇವೆ. ಪಕ್ಷದ ಎಲ್ಲಾ ಹಿರಿಯ ನಾಯಕರು ಒಟ್ಟಾಗಿ ಕುಳಿತು ಏನು ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸುತ್ತೇವೆ. ನಮ್ಮ ಪಕ್ಷವು ಮತ್ತೆ ಹೊಸ ಶಕ್ತಿಯೊಂದಿಗೆ ಹೋರಾಡುತ್ತದೆ ಮತ್ತು ಬಿಹಾರದ ಯುವಕರು ಮತ್ತು ಮಹಿಳೆಯರ ಪರ ಹೋರಾಟವನ್ನು ಮುಂದುವರಿಸುತ್ತೇವೆ. ಬಿಹಾರದಲ್ಲಿ ವ್ಯವಸ್ಥೆ ಬದಲಾಗುವವರೆಗೆ, ಪ್ರಶಾಂತ್ ಕಿಶೋರ್ ಬಿಟ್ಟು ಹೋಗುವುದಿಲ್ಲ ಮತ್ತು ಜನ್ ಸುರಾಜ್ ಪಕ್ಷ ಕೂಡ ದುರ್ಬಲವಾಗುವುದಿಲ್ಲ" ಎಂದು ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಪಕ್ಷದ ವಕ್ತಾರ ಸಂಜಯ್ ಠಾಕೂರ್ ತಿಳಿಸಿದ್ದಾರೆ.
ಉನ್ನತ ಮಟ್ಟದ ಪ್ರಚಾರ ಮತ್ತು ಭರವಸೆಗಳ ಹೊರತಾಗಿಯೂ, ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿ ಕಳಪೆ ಫಲಿತಾಂಶವನ್ನು ಕಂಡಿದೆ. ತಾರಾಪುರದಲ್ಲಿ, ಅದರ ಅಭ್ಯರ್ಥಿ ಸಂತೋಷ್ ಕುಮಾರ್ ಕೇವಲ 3,898 ಮತಗಳನ್ನು ಗಳಿಸಿದರು. ಅಲಿನಗರದಲ್ಲಿ, ಜನ್ ಸುರಾಜ್ ಅಭ್ಯರ್ಥಿ 2,275 ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಸ್ವತಂತ್ರ ಅಭ್ಯರ್ಥಿ ಸೈಫುದ್ದೀನ್ ಅಹ್ಮದ್ 2,803 ಮತಗಳನ್ನು ಗಳಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಗಾಯಕಿ ಮೈಥಿಲಿ ಠಾಕೂರ್ ಅಲಿನಗರ ಸ್ಥಾನವನ್ನು 11,730 ಮತಗಳ ಅಂತರದಿಂದ ಗೆದ್ದು, ಬಿಹಾರದ ಅತ್ಯಂತ ಕಿರಿಯ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಹಲವು ರಾಜಕೀಯ ಪಕ್ಷಗಳಿಗೆ ತಂತ್ರಗಾರಿಕೆ ಹೆಣೆದಿದ್ದ ಪ್ರಶಾಂತ್ ತಮ್ಮ ಸ್ವಂತ ಪಕ್ಷಕ್ಕೆ ಸರಿಯಾದ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಮೊದಲ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದಾರೆ.
ಇದನ್ನೂ ಓದಿ:
ಇದನ್ನೂ ಓದಿ:

