ETV Bharat / bharat

ಬಿಹಾರ ಸೋಲಿನ ಹೊಣೆ ನಾನೇ ಹೊರುವೆ, ಒಂದು ದಿನ ಮೌನ ವ್ರತ ಆಚರಣೆ: ಪ್ರಶಾಂತ್​ ಕಿಶೋರ್​

ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಅವರ ಪಕ್ಷವು ಬಿಹಾರ ಚುನಾವಣೆಯಲ್ಲಿ ಖಾತೆ ತೆರೆಯದೆ ಕಳಪೆ ಪ್ರದರ್ಶನ ನೀಡಿದೆ. ಇದರ ಸಂಪೂರ್ಣ ಹೊಣೆಯನ್ನು ತಾವೇ ಹೊರುವುದಾಗಿ ಕಿಶೋರ್​ ಹೇಳಿದ್ದಾರೆ.

BIHAR POLITICS
ಪ್ರಶಾಂತ್​ ಕಿಶೋರ್ (ANI)
author img

By ETV Bharat Karnataka Team

Published : November 18, 2025 at 8:03 PM IST

2 Min Read
Choose ETV Bharat

ಪಾಟ್ನಾ(ಬಿಹಾರ): ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಒಂದೂ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ. ಇದರ ಹೊಣೆಯನ್ನು ತಾನೇ ಹೊರುವುದಾಗಿ ಕಿಶೋರ್​ ಅವರು ತಿಳಿಸಿದರು.

ಪಕ್ಷದ ಚುನಾವಣೆ ವೈಫಲ್ಯದ ಬಗ್ಗೆ ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಮುಗಿದ ಚುನಾವಣೆಯಲ್ಲಿ ತಮ್ಮ ಪಕ್ಷವು ವೈಫಲ್ಯ ಅನುಭವಿಸಿದೆ. ರಾಜ್ಯದಲ್ಲಿ ಬದಲಾವಣೆ ತರಲು ಸಂಘಟನೆಗೆ ಸಾಧ್ಯವಾಗಲಿಲ್ಲ. ಸರ್ಕಾರವನ್ನು ಬದಲಿಸಲು ವಿಫಲವಾದಕ್ಕಾಗಿ ಅವರು ಒಂದು ದಿನದ ಮಟ್ಟಿಗೆ ಮೌನ ವ್ರತ ನಡೆಸುವುದಾಗಿ ತಿಳಿಸಿದರು.

ಹಿನ್ನಡೆಯ ಹೊರತಾಗಿಯೂ, ಬಿಹಾರವನ್ನು ಉತ್ತಮಗೊಳಿಸುವ ತಮ್ಮ ಸಂಕಲ್ಪವನ್ನು ಪೂರೈಸಲು ಮುಂದಿನ ದಿನಗಳಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದ ಚುನಾವಣಾ ನಿಪುಣ, "ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ, ಅದು ಸಂಪೂರ್ಣವಾಗಿ ವಿಫಲವಾಯಿತು. ಇದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ನಾವು ಅಧಿಕಾರದಲ್ಲಿ ಬದಲಾವಣೆಯನ್ನು ತರಲು ಸಹ ಸಾಧ್ಯವಾಗಲಿಲ್ಲ. ಆದರೆ ಬಿಹಾರದ ರಾಜಕೀಯವನ್ನು ಬದಲಾಯಿಸುವಲ್ಲಿ ಖಂಡಿತವಾಗಿಯೂ ಪಾತ್ರ ವಹಿಸಿದ್ದೇವೆ" ಎಂದು ಹೇಳಿದರು.

ಪಕ್ಷದ ವೈಫಲ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ಕಿಶೋರ್, "ನಮ್ಮ ಪ್ರಯತ್ನಗಳಲ್ಲಿ, ನಮ್ಮ ಆಲೋಚನೆ ಹಿನ್ನಡೆ ಕಂಡಿವೆ. ನಾವು ಪ್ರಸ್ತಾಪಿಸಿದ ವಿಷಯಗಳಲ್ಲಿಯೇ ಏನೋ ತಪ್ಪಿರಬೇಕು. ಹೀಗಾಗಿ, ಜನರು ನಮ್ಮನ್ನು ಆಯ್ಕೆ ಮಾಡಿಲ್ಲ. ಈ ಸೋಲಿನ ಸಂಪೂರ್ಣ ಜವಾಬ್ದಾರಿ ನನ್ನದು" ಎಂದರು.

ಒಂದು ದಿನ ಮೌನ ವ್ರತ: ಪಕ್ಷದ ಸೋಲಿಗೆ ಪ್ರಾಯಶ್ಚಿತ್ತವಾಗಿ ನವೆಂಬರ್ 20 ರಂದು ಗಾಂಧಿ ಭಿತಿಹರ್ವ ಆಶ್ರಮದಲ್ಲಿ ಒಂದು ದಿನದ ಮೌನ ವ್ರತ ನಡೆಸುವುದಾಗಿ ಪ್ರಶಾಂತ್​ ಕಿಶೋರ್​ ಘೋಷಿಸಿದರು.

"ಕಳೆದ ಮೂರು ವರ್ಷಗಳಿಂದ ನಾನು ನೀವು ನೋಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಶ್ರಮಿಸಿದ್ದೇನೆ. ನನ್ನ ಎಲ್ಲಾ ಶಕ್ತಿಯನ್ನು ಹಾಕಿದ್ದೇನೆ. ಆದರೂ ಸೋಲಾಗಿದೆ. ನನ್ನ ಪ್ರಯತ್ನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಹಾರವನ್ನು ಉತ್ತಮ ರಾಜ್ಯವನ್ನಾಗಿ ಮಾಡುವ ನನ್ನ ಸಂಕಲ್ಪ ಮುಂದುವರೆಸುವೆ. ಜನರು ಯಾವ ಆಧಾರದ ಮೇಲೆ ಮತ ಚಲಾಯಿಸಬೇಕು. ವ್ಯವಸ್ಥೆಯನ್ನು ಏಕೆ ತರಬೇಕು ಎಂಬುದನ್ನು ವಿವರಿಸಲು ನಾನು ವಿಫಲನಾಗಿದ್ದೇನೆ. ಇದಕ್ಕೆ, ಪ್ರಾಯಶ್ಚಿತ್ತವಾಗಿ, ನವೆಂಬರ್ 20ರಂದು ಮೌನ ಉಪವಾಸ ವ್ರತ ಆಚರಿಸುವೆ" ಎಂದು ಹೇಳಿದರು.

"ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗ ಮಾಡಲಿಲ್ಲ. ಹಿಂದೂ-ಮುಸ್ಲಿಂ ರಾಜಕೀಯ ಮಾಡಿಲ್ಲ. ರಾಜ್ಯದ ಜನರಿಗೆ ಹಣ ನೀಡುವ ಮತ್ತು ಅವರ ಮತಗಳನ್ನು ಖರೀದಿಸಲಾಗಿದೆ" ಎಂದು ಕಿಶೋರ್​ ಅವರು ಎನ್​ಡಿಎ ಕೂಟದ ಮೇಲೆ ಆರೋಪಿಸಿದರು.

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಖಾತೆ ತೆರೆಯಲು ವಿಫಲವಾಗಿದೆ. 243 ವಿಧಾನಸಭಾ ಸ್ಥಾನಗಳ ಪೈಕಿ 238 ರಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ 236 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಎನ್‌ಡಿಎ ಕೂಟ 202 ಸ್ಥಾನ ಗಳಿಸುವ ಮೂಲಕ ಹೊಸ ಅಲೆ ಎಬ್ಬಿಸಿದೆ. ಕಾಂಗ್ರೆಸ್, ಆರ್​ಜೆಡಿ ಸೇರಿ ವಿಪಕ್ಷಗಳು ಕೇವಲ 35 ಸ್ಥಾನ ಪಡೆದಿವೆ.

ಇವುಗಳನ್ನೂ ಓದಿ: 238ರ ಪೈಕಿ 236 ಅಭ್ಯರ್ಥಿಗಳ ಠೇವಣಿ ಕಳೆದುಕೊಂಡ ಪ್ರಶಾಂತ್​ ಕಿಶೋರ್​ರ ಜನ ಸುರಾಜ್​ ಪಕ್ಷ

ಸೊನ್ನೆ ಸುತ್ತಿದ ಜನ ಸುರಾಜ್ ಪಕ್ಷ: ವಿಫಲವಾದ ಪ್ರಶಾಂತ್​ ಕಿಶೋರ್​ ತಂತ್ರಗಾರಿಕೆ!