15 ವರ್ಷದ ಹಿಂದೆ ನಾಪತ್ತೆ; ಸಾಮಾಜಿಕ ಜಾಲತಾಣದ ಮೂಲಕ ಮರಳಿ ಕುಟುಂಬ ಸೇರಿದ ವ್ಯಕ್ತಿ
ಬಲದೇವ್ಗೆ ಆಶ್ರಯ ನೀಡಿದ್ದ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿಯಿಂದಾಗಿ ಅವರು ಮರಳಿ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.


Published : December 9, 2025 at 4:42 PM IST
ಹಮೀಪುರ್ (ಹಿಮಾಚಲ ಪ್ರದೇಶ): 15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಮತ್ತೆ ಕುಟುಂಬಕ್ಕೆ ಸೇರಿಸುವಲ್ಲಿ ಸಾಮಾಜಿಕ ಮಾಧ್ಯಮ ಸಹಾಯ ಮಾಡಿದೆ.
ಹದಿನೈದು ವರ್ಷಗಳ ಹಿಂದೆ, ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ಗೆ ನೇಮಕಗೊಂಡಿದ್ದ ಬಲದೇವ್, ದೆಹಲಿಯಿಂದ ಯಾವುದೇ ಸುಳಿವಿಲ್ಲದಂತೆ ಕಣ್ಮರೆಯಾಗಿದ್ದರು.
ಇಷ್ಟು ವರ್ಷಗಳ ಕಾಲ ಕಣ್ಮರೆಯಾಗಿದ್ದ ಬಲದೇವ್ ಇದೀಗ ಮರಳಿ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬನಾಲ್ ಪಂಚಾಯತ್ ವ್ಯಾಪ್ತಿಯ ಗಿರ್ತೋಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಅವರನ್ನು ಕುಟುಂಬ ಮಾತ್ರವಲ್ಲದೆ, ಇಡೀ ಗ್ರಾಮ ಅವರನ್ನು ಪ್ರೀತಿಯಿಂದ ಸ್ವೀಕರಿಸಿದೆ.
ಬಲದೇವ್ ಗ್ರಾಮಕ್ಕೆ ಮರಳುತ್ತಿದ್ದಂತೆ ಗ್ರಾಮಸ್ಥರು ಅವರನ್ನು ಡೋಲು ಮತ್ತು ತುತ್ತೂರಿಯೊಂದಿಗೆ ಸ್ವಾಗತಿಸಿದರು. ಆರತಿಯೊಂದಿಗೆ ಕುಟುಂಬ ಕೂಡ ಅವರನ್ನು ಬರಮಾಡಿಕೊಂಡಿದ್ದು, ಇಷ್ಟು ವರ್ಷಗಳ ಕಾಲ ಅವರನ್ನು ಕಾಣದ ಕುಟುಂಬ ಅವರು ಸುರಕ್ಷಿತವಾಗಿ ಮರಳಿರುವುದನ್ನು ಕಂಡು ಭಾವುಕರಾದರು.
ಬಲದೇವ್ ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಎಂಬ ವಿವರಣೆ ನೀಡಿದ ಅವರ ಹಿರಿಯ ಸಹೋದರ ಪ್ರತಾಪ್ ಸಿಂಗ್, ಬಲದೇವ್ ಕಣ್ಮರೆಯಾದ ಸಂದರ್ಭದಲ್ಲಿ ತಮ್ಮ ಸ್ಮರಣಶಕ್ತಿ ಕಳೆದುಕೊಂಡಿದ್ದರು. ಇದರಿಂದ ಅವರು ಹರಿಯಾಣದ ಹಿಸಾರ್‌ನಲ್ಲಿರುವ ಹಸುಗಳ ಆಶ್ರಯ ತಾಣದಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಇದ್ದರು. ಕೋವಿಡ್ ಸಮಯದಲ್ಲಿ ಅವರನ್ನು ಅಲ್ಲಿಂದ ಹೊರ ಹಾಕಲಾಗಿದೆ. ಈ ವೇಳೆ ಅವರನ್ನು ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಮಾಲೋಟಿ ಗ್ರಾಮದ ಬಿಷ್ಣೋಯ್ ಕುಟುಂಬ ಕರೆದೊಯ್ದು ಆಶ್ರಯ ನೀಡಿತು ಎಂದರು.
ಅಲ್ಲಿ ಹಲವಾರು ತಿಂಗಳುಗಳ ಕಾಲ ಇದ್ದ ಅವರು ಆಗಾಗ್ಗೆ ಜನರೊಂದಿಗೆ ಮಾತನಾಡುತ್ತಾ ತಮ್ಮ ಮನೆ ಹಮೀರ್‌ಪುರ್ ಚಬುತಾರಾದಲ್ಲಿದೆ ಎಂದು ಹೇಳುತ್ತಿದ್ದರು. ಬಿಷ್ಣೋಯ್ ಕುಟುಂಬವು ಅವರ ವಿಡಿಯೋವನ್ನು ಮಾಡಿ ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಿತು.
ಈ ವಿಡಿಯೋ ವೈರಲ್ ಆದ ಬಳಿಕ ಬಲ್ದೇವ್ ನಾದಿನಿ ಅವರನ್ನು ಪತ್ತೆ ಮಾಡಿದರು. ಇಡೀ ಕುಟುಂಬ ರಾಜಸ್ಥಾನಕ್ಕೆ ತೆರಳಿ ಅವರನ್ನು ಮರಳಿ ಕರೆತರಲು ಮುಂದಾದರು. ಬಿಷ್ಣೋಯಿ ಕುಟುಂಬ ಕೂಡ ಬಲದೇವ್ ಅವರನ್ನು ಅವರ ಕುಟುಂಬದೊಂದಿಗೆ ಮರಳಿ ಕಳುಹಿಸಲು ಸಂತಸ ವ್ಯಕ್ತಪಡಿಸಿದರು.
ಬಲದೇವ್ ಜಿಆರ್ಇಎಫ್ಗೆ ಸೇರಿದ್ದರು. ತ್ರಿಪುರದಲ್ಲಿ ಕರ್ತವ್ಯಕ್ಕೆ ಸೇರಬೇಕಿತ್ತು ಎಂದು ನಮಗೆ ತಿಳಿಸಿದ್ದರು. ಅವರನ್ನು ಕೊನೆಯ ಬಾರಿಗೆ ದೆಹಲಿಯಲ್ಲಿ ಮಾತನಾಡಿಸಿದ್ದೆವು. ಇದಾದ ಕೆಲವು ದಿನಗಳ ನಂತರ ಕಣ್ಮರೆಯಾದರು. ಅವರು ಕರ್ತವ್ಯಕ್ಕೂ ಸೇರಿರಲಿಲ್ಲ ಎಂಬುದು ನಂತರ ತಿಳಿದು ಬಂದಿತು. ಬಳಿಕ ಅವರು ಮನೆಗೂ ಹಿಂತಿರುಗಲಿಲ್ಲ. ದಿಕ್ಕು ಕಾಣದೇ ಕುಟುಂಬ ನಾಪತ್ತೆ ದೂರು ದಾಖಲಿಸಿತು. ವರ್ಷಗಳು ಉರುಳಿದರೂ ಅವರ ಕುರಿತು ಯಾವುದೇ ಸುಳಿವು ಸಿಗಲಿಲ್ಲ. 15 ವರ್ಷಗಳ ನಂತರ ಕುಟುಂಬವು ಸಾಮಾಜಿಕ ಜಾಲತಾಣಗಳ ಮೂಲಕ ಬಲದೇವ್‌ನ ಸುಳಿವು ಪತ್ತೆ ಮಾಡಿತು.
ಬಲದೇವ್ ಅವರ ಸ್ಮರಣಶಕ್ತಿ ದುರ್ಬಲವಾಗಿದ್ದು, ಅವರು ಕುಟುಂಬದ ಎಲ್ಲಾ ಸದಸ್ಯರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ಬಲದೇವ್ ಅವರನ್ನು ಮತ್ತೆ ನೋಡುತ್ತೇವೆ ಎಂದು ನಾವು ತಿಳಿದಿರಲಿಲ್ಲ. ಅವರ ಆಗಮನದಿಂದ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಅವರನ್ನು ನೋಡಿಕೊಂಡ ಕುಟುಂಬಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪಂಚಾಯತ್ ಪ್ರಧಾನ್ ಕಾಂತಾ ದೇವಿ ತಿಳಿಸಿದರು.
ಬಲದೇವ್ ಮರಳಿ ಬಂದಿರುವ ಸುದ್ದಿ ತಿಳಿದು ಇಳಿ ವಯಸ್ಸಿನಲ್ಲಿರುವ ಅವರ ತಂದೆ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.
ಇವುಗಳನ್ನೂ ಓದಿ: ಸಿನಿಮಾ ನೋಡಿ ಮನೆ ಬಿಟ್ಟು ಮುಂಬೈಗೆ ಹೋದ ಬಾಲಕ; ಒಟಿಪಿಗಾಗಿ ಕುಟುಂಬವನ್ನು ಸೇರಿದ ಮಗ!
ಚಿಕ್ಕಮಗಳೂರು: ಕಸ ಆಯ್ದು, ಭಿಕ್ಷೆ ಬೇಡಿ ಬದುಕುತ್ತಿದ್ದ ಆಂಧ್ರದ ವೃದ್ಧೆ ಮರಳಿ ಗೂಡಿಗೆ

