9 ವರ್ಷಗಳ ಬಳಿಕ ಪ್ರಧಾನಿ ಮೋದಿ 2ನೇ ಸಲ ಇಸ್ರೇಲ್ ಪ್ರವಾಸ: ಈ ಭೇಟಿಗೇಕೆ ಇಷ್ಟೊಂದು ಮಹತ್ವ?: ಯಾವೆಲ್ಲಾ ಒಪ್ಪಂದಗಳಾಗಬಹುದು?
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲಿನ ಇಣುಕುನೋಟ ಇಲ್ಲಿದೆ.

Published : February 24, 2026 at 1:42 PM IST
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ (ಫೆಬ್ರವರಿ 25, 26) ಎರಡು ದಿನ ಯಹೂದಿ ರಾಷ್ಟ್ರವಾದ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಹಲವು ಮಹತ್ವದ ಒಪ್ಪಂದಗಳು ನಡೆಯಲಿವೆ ಎಂದು ಹೇಳಲಾಗಿದೆ.
ಪಿಎಂ ಮೋದಿ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತದ ಪ್ರಧಾನಿ ನನ್ನ ಆಪ್ತ ಮಿತ್ರ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ಅವರೂ ಯಹೂದಿ ರಾಷ್ಟ್ರ ಭೇಟಿ ಬಗ್ಗೆಯೂ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
This morning, at the opening of our Cabinet meeting, I spoke about the historic visit of my dear friend, Prime Minister @narendramodi, to Israel this coming Wednesday. 🇮🇱🤝🇮🇳
— Benjamin Netanyahu - בנימין נתניהו (@netanyahu) February 22, 2026
The bond between Israel and India is a powerful alliance between two global leaders. We are partners in… pic.twitter.com/8cW2ltKdzK
ಭಾರತ-ಇಸ್ರೇಲ್ ನಡುವಿನ ಸಂಬಂಧಗಳು ಹೀಗಿವೆ
ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ: ಇದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಇಸ್ರೇಲ್ ಭೇಟಿ. ಇದಕ್ಕೂ ಮೊದಲು ಅವರು 2017ರ ಜುಲೈನಲ್ಲಿ ಪ್ರವಾಸ ಕೈಗೊಂಡಿದ್ದರು. ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಯೂ ಮೋದಿಗಿದೆ. 9 ವರ್ಷಗಳ ನಂತರ ಅವರು ಮತ್ತೊಮ್ಮೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ಇಸ್ರೇಲ್‌ನೊಂದಿಗೆ ಭಾರತದ ನಿಕಟ ಸಂಬಂಧಗಳು ಗಮನಾರ್ಹ ಪ್ರಮಾಣದಲ್ಲಿ ಬೆಳೆದಿವೆ. ಇಸ್ರೇಲ್ ನಾಯಕರು ಮತ್ತು ಅಧಿಕಾರಿಗಳು ಆಗಾಗ್ಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಇದಕ್ಕೂ ಮೊದಲು, ಭಾರತೀಯ ವಿದೇಶಾಂಗ ಇಲಾಖೆ ಸಚಿವರು, ಅಧಿಕಾರಿಗಳು ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಎಲ್.ಕೆ. ಅಡ್ವಾಣಿ ಗೃಹ ಸಚಿವರಾಗಿ ಇಸ್ರೇಲ್‌ಗೆ ಹೋಗಿದ್ದರು. ಜಸ್ವಂತ್ ಸಿಂಗ್ ಮತ್ತು ಎಸ್.ಎಂ. ಕೃಷ್ಣ ಅವರು ವಿದೇಶಾಂಗ ಸಚಿವರಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಇಸ್ರೇಲ್‌ಗೆ ಪ್ರವಾಸ ಕೈಗೊಂಡಿದ್ದಾರೆ.
Thank you, my friend, Prime Minister Netanyahu.
— Narendra Modi (@narendramodi) February 22, 2026
I fully agree with you on the bond between India and Israel as well as the diverse nature of our bilateral relations. India deeply values the enduring friendship with Israel, built on trust, innovation and a shared commitment to… https://t.co/snGra7RB3g
2003 ರಲ್ಲಿ ಭಾರತಕ್ಕೆ ಬಂದಿದ್ದ ಇಸ್ರೇಲ್ ಪ್ರಧಾನಿ: ಭಾರತವು, 1992 ರಲ್ಲಿ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು. ಅಲ್ಲಿಯವರೆಗೂ ಯಾವುದೇ ಭಾರತೀಯ ಪ್ರಧಾನಿ ಅಥವಾ ರಾಷ್ಟ್ರಪತಿ ಇಸ್ರೇಲ್‌ಗೆ ಭೇಟಿ ನೀಡಿರಲಿಲ್ಲ. ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಅವರು 2003 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು. ಉಭಯ ರಾಷ್ಟ್ರಗಳ ನಡುವೆ ರಕ್ಷಣೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ರಕ್ಷಣೆ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಚರ್ಚೆ: ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಅಭಿವೃದ್ಧಿ ಮತ್ತು ಹೊಸ ರಕ್ಷಣಾ ತಂತ್ರಜ್ಞಾನಗಳ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಮಿಷನ್ ಸುದರ್ಶನ್ನ ಮುಖ್ಯ ಆಧಾರವಾಗಿರುವ ಇಸ್ರೇಲ್ ಜೊತೆ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಭಾರತ ಎದುರು ನೋಡುತ್ತಿದೆ. ಶತ್ರುಗಳ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ಭಾರತವನ್ನು ರಕ್ಷಿಸಲು ಮಿಷನ್ ಸುದರ್ಶನ್ ಒಂದು ಪ್ರಮುಖ ಸಾಧನವಾಗಿದೆ.
ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್ ಬಲಿಷ್ಠ: ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯುವ ತಾಕತ್ತು ಹೊಂದಿರುವ ಭಾರತದಲ್ಲಿನ ಮಿಷನ್ ಸುದರ್ಶನ್ನಂತೆ ಇಸ್ರೇಲ್ ಐರನ್ ಡೋಮ್ ಎಂಬ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಕಳೆದ ಜೂನ್‌ನಲ್ಲಿ ಇರಾನ್ ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಶೇಕಡಾ 98ರಷ್ಟು ಕ್ಷಿಪಣಿಗಳನ್ನು ಹೊಡೆದು ಹಾಕಿತ್ತು. ಹೀಗಾಗಿ, ಭಾರತ ಇಸ್ರೇಲ್‌ನೊಂದಿಗೆ ರಕ್ಷಣಾ ಸಹಕಾರ ಒಪ್ಪಂದವನ್ನು ಬಯಸುತ್ತಿದೆ.
ನೆತನ್ಯಾಹು ರಚಿತ ಷಡ್ಭುಜಾಕೃತಿ ಒಕ್ಕೂಟಕ್ಕೆ ಭಾರತ?: ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಇತ್ತೀಚೆಗೆ ಷಡ್ಭುಜಾಕೃತಿ ಒಕ್ಕೂಟವನ್ನು ಘೋಷಿಸಿದರು. ಇದರಲ್ಲಿ ಅರಬ್, ಆಫ್ರಿಕನ್, ಗ್ರೀಕ್, ಸೈಪ್ರಿಯೋಟ್, ಏಷ್ಯನ್ ದೇಶಗಳಿದ್ದು, ಭಾರತವೂ ಸೇರಲಿದೆ. ಇದರ ಉದ್ದೇಶ ಕೇವಲ ಹಣ ಅಥವಾ ವ್ಯವಹಾರ ನಡೆಸುವುದಲ್ಲದೇ, ಮೂಲಭೂತ ಶಕ್ತಿಗಳ ವಿರುದ್ಧ ಹೋರಾಡಲು ರಚಿಸಿರುವ ಗುಂಪಾಗಿದೆ.
ಈ ಒಕ್ಕೂಟ ರಚನೆಯು, ಸಂಪರ್ಕ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನ್ನು ಹೋಲುತ್ತದೆ. ನೆತನ್ಯಾಹು ಇದನ್ನು ಜಾಗತಿಕ ಭದ್ರತೆಗೆ ನಿರ್ಣಾಯಕ ಎಂದು ಬಣ್ಣಿಸಿದ್ದಾರೆ.
ಭಾರತ ಮತ್ತು ಇಸ್ರೇಲ್ ಬಾಂಧವ್ಯ ವೃದ್ಧಿ: ಭಾರತ ಮತ್ತು ಇಸ್ರೇಲ್ ಎರಡೂ, ನೆರೆಯ ದೇಶಗಳು ನಡೆಸುವ ಭಯೋತ್ಪಾದನೆಯಿಂದ ಬಳಲುತ್ತಿವೆ. ಹೀಗಾಗಿಯೇ ಉಭಯ ದೇಶಗಳ ಸಂಬಂಧ ಮತ್ತಷ್ಟು ಬಲಪಡಿಸಲು ಕಾರಣವಾಗಿದೆ. ಜೊತೆಗೆ, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಹಕಾರವೂ ಹೆಚ್ಚಾಗಿದೆ.
ಹಲವು ಪ್ರಮುಖ ಸಂದರ್ಭಗಳಲ್ಲಿ ಭಾರತವು, ಇಸ್ರೇಲ್ ಅನ್ನು ಬಹಿರಂಗವಾಗಿ ಬೆಂಬಲಿಸಿದೆ. ಉದಾಹರಣೆಗೆ ಗಾಜಾ ಯುದ್ಧದಲ್ಲಿ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧದ ಮತದಾನದಲ್ಲಿ ತಟಸ್ಥ ನಿಲುವು ತಳೆದಿತ್ತು. ಇದು ಇಸ್ರೇಲ್‌ಗೆ ದೊಡ್ಡ ಬೆಂಬಲವಾಗಿತ್ತು. ವೈಯಕ್ತಿಕವಾಗಿ ಮೋದಿ ಮತ್ತು ನೆತನ್ಯಾಹು ಅವರ ಸ್ನೇಹವೂ ಪ್ರಮುಖವಾಗಿದೆ.
ಇವುಗಳನ್ನೂ ಓದಿ:

