ಎರಡು ದಿನಗಳ ಇಸ್ರೇಲ್ ಭೇಟಿ ಮುಗಿಸಿದ ಪ್ರಧಾನಿ ಮೋದಿ ದೆಹಲಿಗೆ ವಾಪಸ್
ಇಸ್ರೇಲ್‌ಗೆ ಎರಡು ದಿನಗಳ ಭೇಟಿ ಮುಗಿಸಿದ ಪ್ರಧಾನಿ ಮೋದಿ ಭಾರತಕ್ಕೆ ಮರಳಿದ್ದಾರೆ. ಈ ಭೇಟಿ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.


By ANI
Published : February 27, 2026 at 7:00 AM IST
ನವದೆಹಲಿ: ಒಂಬತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಇಸ್ರೇಲ್‌ಗೆ ಐತಿಹಾಸಿಕ ಎರಡು ದಿನಗಳ ಭೇಟಿ ನೀಡಿದ್ದ ಪ್ರಧಾನಿ ಮೋದಿ ಇಂದು ನವದೆಹಲಿಗೆ ವಾಪಸ್ ಆಗಿದ್ದಾರೆ. ಇಸ್ರೇಲ್ನ 2 ದಿನಗಳ ಭೇಟಿ ವೇಳೆ ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನ ಗಟ್ಟಿಗೊಳಿಸಿಕೊಂಡವು.
ಈ ಭೇಟಿಯು ನಾವೀನ್ಯತೆ, ಸಾಂಸ್ಕೃತಿಕ ವಿನಿಮಯ, ಉತ್ಪಾದನೆ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಆರ್ಥಿಕ ಸಹಕಾರ, ರಾಜತಾಂತ್ರಿಕತೆ ಮತ್ತು ಭದ್ರತೆ ಸೇರಿದಂತೆ ವಿವಿಧ ವಲಯಗಳಲ್ಲಿ 27 ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದೆ. ಭಾರತ ಮತ್ತು ಇಸ್ರೇಲ್ ಶೀಘ್ರದಲ್ಲೇ ಪರಸ್ಪರ ಪ್ರಯೋಜನಕಾರಿ ಮುಕ್ತ ವ್ಯಾಪಾರ ಒಪ್ಪಂದ FTA ಅಂತಿಮಗೊಳಿಸುತ್ತವೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಘೋಷಿಸಿದರು.
ಹೈಟೆಕ್ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಯೋಗವನ್ನು ಇನ್ನಷ್ಟು ಗಾಢವಾಗಿಸಲು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಪಾಲುದಾರಿಕೆಯನ್ನು ಸ್ಥಾಪಿಸುವುದಾಗಿಯೂ ಪ್ರಧಾನಿ ಮೋದಿ ಇದೇ ವೇಳೆ ಘೋಷಿಸಿದರು.
ಭಯೋತ್ಪಾದನೆ ವಿರುದ್ಧ ಹಂಚಿಕೊಂಡ ಸಂಕಲ್ಪವನ್ನು ಪ್ರಧಾನಿ ಮೋದಿ ತಮ್ಮ ಹೇಳಿಕೆಗಳಲ್ಲಿ ಪುನರುಚ್ಚರಿಸಿದರು. ಭಾರತ ಮತ್ತು ಇಸ್ರೇಲ್ ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತವೆ ಎಂದರು. ಭಯೋತ್ಪಾದನೆ ಅದು ಯಾವುದೇ ರೂಪದಲ್ಲಿರಲಿ ಅದನ್ನು ಉಭಯ ರಾಷ್ಟ್ರಗಳು ಒಪ್ಪುವುದಿಲ್ಲ ಎಂದು ಮೋದಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಅದರ ಬೆಂಬಲಿಗರ ವಿರುದ್ಧ ಎರಡೂ ರಾಷ್ಟ್ರಗಳು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತವೆ ಎಂದು ಅವರು ಇದೇ ವೇಳೆ ದೃಢಪಡಿಸಿದರು. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯು ಭಾರತದ ಭದ್ರತೆಗೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಸಂವಾದ ಮತ್ತು ಶಾಂತಿಯುತ ನಿರ್ಣಯಗಳಿಗೆ ಭಾರತದ ಸ್ಥಿರ ಬೆಂಬಲ ಇದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನಗಳನ್ನು ಎತ್ತಿ ತೋರಿಸಿದರು.
ಗಾಜಾ ಶಾಂತಿ ಯೋಜನೆಯನ್ನು ಅವರು ಇದೇ ವೇಳೆ ಸ್ವಾಗತಿಸಿದರು. ಸ್ಥಿರತೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಮಾನವೀಯತೆಯು ಎಂದಿಗೂ ಸಂಘರ್ಷದ ಬಲಿಪಶುವಾಗಬಾರದು ಎಂದು ಅವರು ಪ್ರತಿಪಾದಿಸಿದರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ಮೋದಿಯವರ ಭೇಟಿಯನ್ನು ಅದ್ಭುತ ಮತ್ತು ಅಸಾಧಾರಣ ಎಂದು ಬಣ್ಣಿಸಿದರು.
ಬುಧವಾರ ನೆಸ್ಸೆಟ್ ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಅವರು ಇದೇ ವೇಳೆ ಶ್ಲಾಘಿಸಿದರು. ಶಾಶ್ವತ ಸ್ನೇಹಕ್ಕಾಗಿ ಭಾರತಕ್ಕೆ ಇಸ್ರೇಲ್ ಸಾಕಷ್ಟು ಋಣಿಯಾಗಿದೆ ಎಂದು ನೇತನ್ಯಾಹು ಹೇಳಿದರು.
ಇವುಗಳನ್ನು ಓದಿ:
ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಮೊದಲ ವಿಶ್ವ ನಾಯಕ ನರೇಂದ್ರ ಮೋದಿ!ಇಸ್ರೇಲ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

