ETV Bharat / bharat

ಗರ್ಭಕಂಠ ಕ್ಯಾನ್ಸರ್​ ತಡೆಯುವ HPV ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಗರ್ಭಕಂಠ ಕ್ಯಾನ್ಸರ್​ ತಡೆಯುವ HPV ಉಚಿತ ಲಸಿಕೆ ಅಭಿಯಾನಕ್ಕೆ ರಾಜಸ್ಥಾನದ ಅಜ್ಮೀರ್​ನಲ್ಲಿ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು.

HPV VACCINATION DRIVE
ಬಾಲಕಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ (ANI)
author img

By ETV Bharat Karnataka Team

Published : February 28, 2026 at 1:51 PM IST

2 Min Read
Choose ETV Bharat

ಜೈಪುರ (ರಾಜಸ್ಥಾನ): 9 ರಿಂದ 14 ವರ್ಷದೊಳಗಿನ ಬಾಲಕಿಯರು ಎದುರಿಸುವ ಗರ್ಭಕಂಠ ಕ್ಯಾನ್ಸರ್​ ರೋಗವನ್ನು ತಡೆಯುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

ಅಜ್ಮೀರ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಬಾಲಕಿಯರಿಗೆ ಲಸಿಕೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ನಡೆಸಲಾಗುವ ಅಭಿಯಾನಕ್ಕೆ ಔಪಚಾರಿಕವಾಗಿ ಉದ್ಘಾಟಿಸಿದರು. ಇದೇ ವೇಳೆ, ಪ್ರಧಾನ ಮಂತ್ರಿ ಹಲವು ಫಲಾನುಭವಿ ಹುಡುಗಿಯರೊಂದಿಗೆ ಸಂವಾದ ಕೂಡ ನಡೆಸಿದರು.

ಸಿಂಗಲ್​ ಡೋಸ್​ ಇಂಜೆಕ್ಷನ್​: ಅಧಿಕಾರಿಗಳ ಪ್ರಕಾರ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ 'ಗಾರ್ಡಸಿಲ್ 4' ಲಸಿಕೆಯ ಒಂದು ಡೋಸ್ ಅಭಿಯಾನದಲ್ಲಿ ನೀಡಲಾಗುವುದು. ಇದು, ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಟೈಪ್​ 16 ಮತ್ತು 18 ಹಾಗೂ ಟೈಪ್ 6 ಮತ್ತು 11 ರ ವಿರುದ್ಧ ಇದು ಹೋರಾಡಲಿದೆ.

ದೇಶಾದ್ಯಂತ ಈ ಅಭಿಯಾನ ನಡೆಯಲಿದೆ. ಈ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಲಿದೆ. 14 ವರ್ಷದೊಳಗಿನ ಎಲ್ಲಾ ಬಾಲಕಿಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 'ಗಾರ್ಡಸಿಲ್ 4' ಲಸಿಕೆಯ ಒಂದೇ ಡೋಸ್ ನೀಡಲು ಸೂಚಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಫೆಬ್ರವರಿ 25 ರಂದು ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಸೂಚಿಸಿದೆ.

ಸವಾಲಾಗಿರುವ ಗರ್ಭಕಂಠದ ಕ್ಯಾನ್ಸರ್: ದೇಶದಲ್ಲಿ ಹದಿಹರೆಯದ ಹುಡುಗಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಅತ್ಯಂತ ಮಾರಕ ಸಹಜ ಕ್ಯಾನ್ಸರ್ ಆಗಿದೆ. ವಾರ್ಷಿಕವಾಗಿ ಸುಮಾರು 80 ಸಾವಿರ ಪ್ರಕರಣಗಳು, 42 ಸಾವಿರಕ್ಕೂ ಹೆಚ್ಚು ಸಾವುಗಳು ಇದರಿಂದ ವರದಿಯಾಗುತ್ತಿವೆ. ಗರ್ಭಕಂಠದ ಕ್ಯಾನ್ಸರ್‌ನ ಬಹುತೇಕ ಪ್ರಕರಣಗಳಲ್ಲಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ಸೋಂಕಿನಿಂದ ಉಂಟಾಗುತ್ತದೆ.

ಈ ಅಭಿಯಾನದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ವರ್ಷ 14 ವರ್ಷ ವಯಸ್ಸಿನೊಳಗಿನ ಸುಮಾರು 1.15 ಕೋಟಿ ಹುಡುಗಿಯರಿಗೆ ಈ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು: ಈ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಲೈಂಗಿಕವಾಗಿ ಸಕ್ರಿಯರಾಗುವ ಮೊದಲು ಅಂದರೆ, 15 ವರ್ಷದೊಳಗಿನ ಬಾಲಕಿಯರಿಗೆ ಈ ಲಸಿಕೆ ನೀಡಿದಲ್ಲಿ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಾಬೀತಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 2 ಡೋಸ್‌ಗಳು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3 ಡೋಸ್‌ಗಳನ್ನು ನೀಡಬಹುದು ಎಂದು ಡಬ್ಲ್ಯೂಹೆಚ್​​ಒ ಹೇಳಿದೆ.

ಇವುಗಳನ್ನೂ ಓದಿ: