ಪ್ರಧಾನಿ ಮೋದಿ ಅಂಕಪಟ್ಟಿ ಕೇಸ್: ಕೇಜ್ರಿವಾಲ್ಗೆ ₹25 ಸಾವಿರ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ
ಪ್ರಧಾನಿ ಮೋದಿ ಅಂಕಪಟ್ಟಿ ಪ್ರಕರಣದಲ್ಲಿ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Published : September 2, 2026 at 3:52 PM IST
ಅಹಮದಾಬಾದ್ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ ಗುಜರಾತ್ ಹೈಕೋರ್ಟ್ನ ಏಕಸದಸ್ಯ ಪೀಠದ ಆದೇಶವನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಸಿಂಘ್ವಿ ಅವರು, ಏಕಸದಸ್ಯ ಪೀಠವು ಹಾಕಿದ ದಂಡ ಮತ್ತು ಕೇಜ್ರಿವಾಲ್ ವಿರುದ್ಧ ಮಾಡಿದ ಟೀಕೆಗಳನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು. ಈ ಹೇಳಿಕೆ ಮತ್ತು ದಂಡ ಅನುಚಿತ, ಅನಗತ್ಯ ಮತ್ತು ಕಾನೂನುಬದ್ಧವಲ್ಲ ಎಂದು ವಾದಿಸಿದರು.
ವಿವಿ ವೆಬ್ಸೈಟ್ನಲ್ಲಿ ಮೋದಿ ಪದವಿ ಇಲ್ಲ: ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರ ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಲಭ್ಯವಿದೆ. ಎಲ್ಲವೂ ಸ್ಪಷ್ಟವಾಗಿದ್ದರೂ ಕೇಜ್ರಿವಾಲ್ ಅವರು ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ ಎಂದು ಏಕಸದಸ್ಯ ಪೀಠವು ಈ ಹಿಂದೆ ತೀರ್ಪಿನಲ್ಲಿ ಹೇಳಿತ್ತು. ಆದರೆ, ಈ ಎರಡೂ ಅಂಶಗಳನ್ನು ಬಲವಾಗಿ ನಿರಾಕರಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಮೋದಿ ಅವರ ಪದವಿ ಪ್ರಮಾಣಪತ್ರ ಇಂದಿಗೂ ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಲಭ್ಯವಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಕೇಜ್ರಿವಾಲ್ ಮೂಲ ಅರ್ಜಿದಾರರಲ್ಲ: ಮೇಲಾಗಿ, ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮೂಲ ಅರ್ಜಿದಾರರಲ್ಲ. ಬದಲಿಗೆ ಕೇವಲ ಪ್ರತಿವಾದಿಗಳಾಗಿದ್ದಾರೆ. ಹೀಗಾಗಿ ಅವರು ಪ್ರಕರಣ ಹಠ ಹಿಡಿದು ಮುಂದುವರಿಸುತ್ತಿದ್ದಾರೆ ಎಂಬ ಕೋರ್ಟ್ನ ಅಭಿಪ್ರಾಯ ತಪ್ಪು. ಪ್ರಧಾನಿ ಪದವಿ ವಿವರಗಳನ್ನು ಕೋರಿ ಆರ್ಟಿಐ ಸಲ್ಲಿಸಿದ್ದೂ ಕೇಜ್ರಿವಾಲ್ ಅವರಲ್ಲ. ಆದರೂ, ಮಾಜಿ ಸಿಎಂಗೆ 25 ಸಾವಿರ ದಂಡ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ವಾದಿಸಿದರು.
ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸ್ವಯಂಪ್ರೇರಿತವಾಗಿ ಈ ವಿಚಾರಣೆಯನ್ನು ಪ್ರಾರಂಭಿಸಿದೆ. ಕೇಜ್ರಿವಾಲ್ ಅವರು ಕೇವಲ ಪ್ರತಿವಾದಿಗಳಾಗಿದ್ದರಿಂದ ಅವರ ವಿರುದ್ಧದ ದಂಡ ಮತ್ತು ಟೀಕೆಗಳನ್ನು ಕೈಬಿಡಬೇಕು ಎಂದು ಕೋರಿದರು.
ಸೆಪ್ಟೆಂಬರ್ 2ಕ್ಕೆ
ಅಭಿಷೇಕ್ ಮನು ಸಿಂಘ್ವಿ ಅವರ ವಾದ ಆಲಿಸಿದ ನಂತರ, ತನ್ನ ನಿಲುವನ್ನು ಮಂಡಿಸಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ 2ಕ್ಕೆ ಮುಂದೂಡಿತ್ತು.
ಇವುಗಳನ್ನೂ ಓದಿ:

