ETV Bharat / bharat

ಇರಾನ್ ದಾಳಿ ಖಂಡಿಸಿದ ಮೋದಿ: ನಿಮ್ಮೊಂದಿಗೆ ನಾವಿದ್ದೇವೆ - ಯುಎಇ ಅಧ್ಯಕ್ಷರಿಗೆ ಪ್ರಧಾನಿ ಫೋನ್

ಇಸ್ರೇಲ್, ಅಮೆರಿಕ ಜಂಟಿ ದಾಳಿಗೆ ಪ್ರತೀಕಾರವಾಗಿ ಯುಎಇ ಮೇಲೆ ಇರಾನ್​ ನಡೆಸಿದ ಕ್ಷಿಪಣಿ ದಾಳಿಯನ್ನು ಭಾರತ ಖಂಡಿಸಿದೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (PTI)
author img

By ETV Bharat Karnataka Team

Published : March 2, 2026 at 8:37 AM IST

2 Min Read
Choose ETV Bharat

ನವದೆಹಲಿ: ಗಲ್ಫ್ ರಾಷ್ಟ್ರದ ಮೇಲಿನ ಇರಾನ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಭಾನುವಾರ ರಾತ್ರಿ ದೂರವಾಣಿಯಲ್ಲಿ ಮಾತನಾಡಿರುವ ಮೋದಿ, ಸಂಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ಭಾರತ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರದಲ್ಲಿ ವಾಸಿಸುವಾಗಿರುವ ಭಾರತೀಯ ಸಮುದಾಯವನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಕ್ಕಾಗಿ ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಉದ್ವಿಗ್ನತೆ ನಿವಾರಣೆ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಭಾರತ ಬೆಂಬಲಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.

"ಯುಎಇ ಅಧ್ಯಕ್ಷರು, ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಜೊತೆ ಮಾತನಾಡಿದೆ. ಯುಎಇ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದೆ. ಈ ದಾಳಿಗಳಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದೆ. ಸಂಕಷ್ಟದ ಸಮಯದಲ್ಲಿ ಭಾರತ ಯುಎಇಯೊಂದಿಗಿರಲಿದೆ. ಯುಎಇಯಲ್ಲಿ ವಾಸಿಸುವ ಭಾರತೀಯ ಸಮುದಾಯವನ್ನು ನೋಡಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದೆ. ಉದ್ವಿಗ್ನತೆ ಶಮನ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತೇವೆ" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ರೇಲ್, ಅಮೆರಿಕದ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್, ಗಲ್ಫ್ ರಾಷ್ಟ್ರದ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡುತ್ತಿದೆ. ಇದರಿಂದ ಕಳೆದ ಎರಡು ದಿನಗಳಲ್ಲಿ ಯುಎಇಯಾದ್ಯಂತ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಭಾರತೀಯ ಪ್ರಜೆ ಸೇರಿದಂತೆ 58 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ.

ಭಾರತೀಯ ಪ್ರಜೆ ಗಾಯಗೊಂಡಿದ್ದು, ಆತ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.

ಇರಾನ್​ ದಾಳಿ ಮಾಡಿದ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಇ ರಕ್ಷಣಾ ಸಚಿವಾಲಯ ತಡೆಹಿಡಿದಿದೆ. ಈ ಪೈಕಿ 152 ನಾಶವಾಗಿವೆ, 13 ಸಮುದ್ರದಲ್ಲಿ ಮುಳುಗಿ ಹೋಗಿವೆ. ಎರಡು ಕ್ರೂಸ್ ಕ್ಷಿಪಣಿಗಳು ಮತ್ತು 541 ಡ್ರೋನ್‌ಗಳನ್ನೂ ಸಹ ಹೊಡೆದುರುಳಿಸಿದ್ದೇವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

ಶನಿವಾರ ಬೆಳಗ್ಗೆ ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲಿ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸೇನಾ ಮುಖ್ಯಸ್ಥರು ಮತ್ತು ಹಲವು ಕಮಾಂಡರ್‌ಗಳು ಹತರಾಗಿದ್ದಾರೆ. ತನ್ನ ಸುಪ್ರೀಂ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಪ್ರತಿದಾಳಿ ತೀವ್ರಗೊಂಡಿದ್ದು, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಜೊತೆಗೆ ಅಮೆರಿಕದ ಸೇನಾ ಶಿಬಿರಗಳ ಮೇಲೂ ದಾಳಿ ಮಾಡಿದೆ.

ಯುಎಇ ಮೇಲಿನ ಇರಾನ್ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ವಿಮಾನಯಾನ ಸೇವೆ ರದ್ದುಗೊಂಡಿದೆ. ಪರಿಣಾಮ ಲಕ್ಷಾಂತರ ಭಾರತೀಯರು ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಹಲವೆಡೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇವುಗಳನ್ನೂ ಓದಿ: