ಉದ್ಯೋಗ ಹೋದರೇನಾಯ್ತು ; ಸಮೋಸಾ ಸಾಮ್ರಾಜ್ಯವನ್ನೇ ಕಟ್ಟಿದ ಇಂಜಿನಿಯರ್, ವಾರ್ಷಿಕ 70 ಲಕ್ಷ ರೂ. ವಹಿವಾಟು!
ನಿರುದ್ಯೋಗದಿಂದ ಕಂಗಾಲಾಗದೇ, ಧೈರ್ಯ ಮತ್ತು ಸ್ಥಿರತೆಯೊಂದಿಗೆ ಏನಾದರೂ ಹೊಸತನದಿಂದ ಯೋಚಿಸಬೇಕು ಎಂಬ ಅವರ ಮಾತು ಅನೇಕರಿಗೆ ಸ್ಪೂರ್ತಿ ನೀಡುವುದಂತೂ ಸುಳ್ಳಲ್ಲ.


Published : January 10, 2026 at 5:27 PM IST
ಪಾಟ್ನಾ (ಬಿಹಾರ): ಪಾಟ್ನಾದ ಜನರಿಗೆ ಪಿಲ್ಲರ್ ನಂ. 15, ಜಗದೇವ್ ಪಾತ್ ಎಂದಾಕ್ಷಣ ನೆನಪಿಗೆ ಬರುವುದು ಸಮೋಸಾ. ಸಮೋಸಾ ಪ್ರಿಯರ ಮೆಚ್ಚಿನ ತಾಣವೇ ಆಗಿ ಇದು ಪರಿವರ್ತನೆಯಾಗಿದೆ. ತಂದೂರಿ ಪನೀರ್ ಅಥವಾ ಸಾದಾ ಆಲೂ, ಚೀಸ್ ಕಾರ್ನ್ ಅಥವಾ ಅಣಬೆ ತುಂಬಿದ ಆಲೂ ಸೇರಿದ ಬಗೆ ಬಗೆಯ ಸಮೋಸಾಗಳು ಇಲ್ಲಿ ಕಾಣಬಹುದಾಗಿದೆ. ಸಮೋಸಾ ಹಬ್ ಆಗಿರುವ ಈ ಅಂಗಡಿ ಈ ಉದ್ಯಮ ಆರಂಭಿಸಿದ ಪರಿ ಎಲ್ಲರಲ್ಲೂ ಸ್ಪೂರ್ತಿ ಜೊತೆ ಅಚ್ಚರಿ ಮೂಡಿಸುತ್ತದೆ. ಕಾರಣ ಈ ಉದ್ಯಮ ಆರಂಭವಾಗಿರುವ ಕುಟುಂಬದ ಉದ್ಯಮವಲ್ಲ. ಇಂಜಿನಿಯರ್ ಒಬ್ಬರ ಕನಸಿನ ಕೂಸು.
ಕಾರ್ಪೊರೇಟ್ನಲ್ಲಿ ಯಶಸ್ವಿ ವೃತ್ತಿ ಜೀವನ ಹೊಂದಿದ್ದ ಮೆಕಾನಿಕಲ್ ಎಂಜಿನಿಯರ್ ರವಿ ರಂಜನ್ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಉದ್ಯಮವನ್ನು ಹುಟ್ಟು ಹಾಕಿದರು. ಸಮೋಸಾ ಅಡ್ಡಾ ಆರಂಭಿಸಬೇಕು ಎಂದು ನಿರ್ಧರಿಸಿದ ಅವರು, ಸಮೋಸಾ ಕಿಂಗ್ ಎಂಬ ಉದ್ಯಮ ಆರಂಭಿಸಲು ಮುಂದಾದರು. ಸದ್ಯ ಮೂರು ಮಳಿಗೆಯಲ್ಲಿ ಈ ವ್ಯವಹಾರ ನಡೆಸುತ್ತಿರುವ ಇವರು ವಾರ್ಷಿಕವಾಗಿ 60 ರಿಂದ 70 ಲಕ್ಷ ವ್ಯವಹಾರ ನಡೆಸುತ್ತಿದ್ದಾರೆ. ಈ ಮಳಿಗೆಗಳಿಗಿಂತ ಮುಂಚಿತವಾಗಿ ಇವರು ಕೈಗಾಡಿ ಮೂಲಕ ಈ ಉದ್ಯಮವನ್ನು ಶುರು ಮಾಡಿದ್ದರು.
ಕೋವಿಡ್ನಿಂದ ನಿರುದ್ಯೋಗಿ: ಇಂಜಿನಿಯರಿಂಗ್ ಮುಗಿಸಿದ ಬಳಿಕ ರವಿ ಗಾಜಿಯಾಬಾದ್ನಲ್ಲಿ ಉತ್ತಮ ಸಂಬಳದ ಉದ್ಯಮ ಹೊಂದಿದ್ದರು. ಆದರೆ, ಕೋವಿಡ್ ಸಮಯದಲ್ಲಿ ಉದ್ಯೋಗ ನಷ್ಟ ಅನುಭವಿಸಿದ ಅವರು ಪಾಟ್ನಾಕ್ಕೆ ಮರಳಿದರು. ಇದು ರವಿಗೆ ಕಷ್ಟದ ಸಮಯ ಮಾತ್ರವಲ್ಲ. ಸುಸ್ಥಿರ ಜೀವನ ನಡೆಸಲು ಏನಾದರೂ ಮಾಡುವ ಸಮಯವೂ ಆಗಿತ್ತು.
ಈ ವೇಳೆ, ಅವರು ಇನ್ಮುಂದೆ ವೇತನಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದರು. ತಮ್ಮದೇ ಏನಾದರೂ ಉದ್ಯಮ ಶುರು ಮಾಡಬೇಕು ಎಂಬ ಅಚಲ ನಿರ್ಧಾರವೊಂದನ್ನು ಮಾಡಿದರು. ಆದರೆ, ಯಾವ ಉದ್ಯಮ ಮಾಡುವುದು ಎಂಬ ಯೋಚನೆಗೆ ಬಿದ್ದರು.
ಸ್ವಯಂ ಸಮೋಸಾ ಪ್ರಿಯರಾಗಿರುವ ರವಿ, ಸ್ಥಳೀಯವಾಗಿ ಸಿಗುವ ಸಮೋಸಾ ಅಂಗಡಿ ಬಳಿ ಸದಾ ಬಾಯಿ ಚಪ್ಪರಿಸಿ ಅದರ ರುಚಿ ಸವಿಯುತ್ತಿದ್ದರು. ಈ ವೇಳೆ ಸಮೋಸಾ ಏಕೆ ಯಾವಾಗಲೂ ಆಲೂಗಡ್ಡೆ ಮಸಾಲೆಯಿಂದ ಕೂಡಿರುತ್ತದೆ. ಇದರಲ್ಲಿ ಹಲವು ವಿಧವಿದ್ದರೆ ಎಷ್ಟು ಚೆಂದ ಅಲ್ಲವಾ ಎಂದು ತಮ್ಮನ್ನು ತಾವು ಕೇಳಿ ಕೊಳ್ಳುತ್ತಿದ್ದರು.
ಅಮ್ಮ ಕಲಿಸಿದ ಸಮೋಸಾ: ಯಾವುದೇ ವೃತ್ತಿಪರ ಅಡುಗೆ ಮಾಡಿದ ಅನುಭವ ಹೊಂದಿರದ ರವಿ, ತಮ್ಮ ಉದ್ಯಮ ಆರಂಭಕ್ಕೆ ನಂಬಿದ್ದು ಅವರ ತಾಯಿಯನ್ನೇ. ಅವರ ಮಾರ್ಗದರ್ಶನದಲ್ಲಿ ಸಮೋಸಾ ಮಾಡುವುದು ಹೇಗೆ ಎಂಬುದನ್ನು ಕಲಿತರು. ಶೀಘ್ರದಲ್ಲೇ ಮನೆಯಲ್ಲಿ ಆಲೂ, ಪನ್ನೀರ್, ಚೀಸ್, ಅಣಬೆಯ ಸಮೋಸಾವನ್ನು ತಯಾರಿಸಿ, ಕುಟುಂಬಕ್ಕೆ ನೀಡಿದರು. ಇದರ ರುಚಿ ಸವಿದ ಕುಟುಂಬಸ್ಥರು ಬಹುವಾಗಿ ಮೆಚ್ಚಿಕೊಂಡರು. ಇದು ಇವರ ಉದ್ಯಮ ಆರಂಭಕ್ಕೆ ಹೊಸ ಐಡಿಯಾವೊಂದನ್ನು ನೀಡಿತು.
ರವಿ ಮೊದಲಿಗೆ ಪಿಲ್ಲರ್ 15 ಜಗದೇವ್ ಪತ್, ಪಾಟ್ನಾದಲ್ಲಿ ತಮ್ಮ ಮೊದಲ ಮಳಿಗೆಯನ್ನು ತೆರೆದರು. ಸಣ್ಣ ಗಾಡಿಯನ್ನು ಆರಂಭಿಸಿದ ಅವರ ಉದ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶೀಘ್ರದಲ್ಲೇ ಅವರು ಸಮೋಸಾ ಕಿಂಗ್ ಎಂಬ ಹೆಸರಿನಲ್ಲಿ ಅಂಗಡಿ ತೆರೆದರು. 20 ಬಗೆಯ ಸಮೋಸಾಗಳನ್ನು ತಯಾರಿಸುವ ಮೂಲಕ ಎಲ್ಲರನ್ನು ಸೆಳೆದು ಶೀಘ್ರದಲ್ಲೇ ಮತ್ತೆ ಎರಡು ಮೂರು ಅಂಗಡಿ ತೆರೆದರು.
ಹಲವು ಬಗೆಯ ಸಮೋಸಾ: ಕೇವಲ ನಾಲ್ಕು- ಐದು ವರ್ಷದಲ್ಲಿ ನಮ್ಮ ಸಮೋಸಾ ಕಿಂಗ್ ಪಾಟ್ನಾ ಬ್ರಾಂಡ್ ಸ್ಥಳೀಯರಲ್ಲಿ ಜನಪ್ರಿಯವಾಯಿತು. ಸಾಮಾನ್ಯವಾಗಿ 13 ರಿಂದ 35 ರೂ ನಡವೆ ಸಮೋಸಾ ದರ ನಿಗದಿ ಮಾಡಿದರು. ರುಚಿಯಲ್ಲಿ ಗುಣಮಟ್ಟ ಕಾಯ್ದುಕೊಂಡರು. ಇವರ ಬಳಿ 35ರೂಗೆ ಚೀಸ್ ಕಾರ್ನ್ ಸಮೋಸಾ, 25 ರೂ.ಗೆ ಪಂಜಾಬಿ ಪನ್ನೀರ್ ಸಮೋಸಾ, ತಂದೂರಿ ಪನ್ನೀರ್ ಸಮೋಸಾ, ಮಲೈ ಪನ್ನೀರ್ ಸಮೋಸಾ, 30 ರೂಪಾಯಿಗೆ ಮಶ್ರೂಮ್ ಪನ್ನೀರ್ ಸಮೋಸಾ, 20 ರೂ.ಗೆ ಪಿಜ್ಜಾ ಸಮೋಸಾ, 22 ರೂ.ಗೆ ಮಂಚೂರಿಯನ್ ಸಮೋಸಾ, 13ರೂ.ಗೆ ಆಲೂ ಸಮೋಸಾ, 30ರೂಪಾಯಿಗೆ ಖೋಯಾ ಸಮೋಸಾ ಹಾಗೂ 30ರೂಪಾಯಿಗೆ ಚಾಕೋಲೆಟ್ ಸಮೋಸಾಗಳನ್ನು ಮಾರಾಟ ಮಾಡುವ ನಿರ್ಧಾರ ಮಾಡಿದರು.
ಇವರ ಅಂಗಡಿಯಲ್ಲಿ ಎಲ್ಲರ ಅಚ್ಚು ಮೆಚ್ಚು ಚೀಸ್ ಕಾರ್ನ್ ಸಮೋಸಾ ಬೆಣ್ಣೆಯಂತಹ ಕಾರ್ನ್ ಮತ್ತು ಚೀಸ್‌ನಿಂದ ತುಂಬಿರುತ್ತದೆ. ಇದರ ಜೊತೆಗೆ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಮಸಾಲೆಗಳಿಂದ ಕೂಡಿದ ತಂದೂರಿ ಪನೀರ್ ಸಮೋಸಾ. ಗಮಭರಿತ ಮಲೈ ಪನ್ನೀರ್ (ಶಾಹಿ) ಸಮೋಸಾ ಆಹಾರ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಫಾಸ್ಟ್-ಫುಡ್ ಪ್ರಿಯರಿಗೆ, ಪಿಜ್ಜಾ ಸಮೋಸಾ ಚೀಸ್ ಇಷ್ಟವಾದರೆ. ಸಿಹಿ ಪ್ರಿಯರಿಗೆ, ಖೋಯಾ ಮತ್ತು ಚಾಕೊಲೇಟ್ ಸಮೋಸಾ ಅಚ್ಚುಮೆಚ್ಚು.
ಚಳಿಗಾಲದಲ್ಲಿ ಬಟಾಣಿ ಸಮೋಸಾ ಸೇರ್ಪಡೆಯಾಗಿದೆ, ಮಸಾಲೆ ಪ್ರಿಯರು ಯಾವಾಗಲೂ ತಟ್ಟೆ ತುಂಬ ಪಂಜಾಬಿ ಪನ್ನೀರ್ ಮತ್ತು ಮೆಣಸಿನಕಾಯಿ ಪನ್ನೀರ್ ಇಷ್ಟಪಡುತ್ತಾರೆ. ಇದರ ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚೀಸ್ ಬರ್ಸ್ಟ್ ಸಮೋಸಾ, ಚೋಕೊ ಲಾವಾ ಸಮೋಸಾ, ಪಾಸ್ತಾ ಸಮೋಸಾ, ಸೋಯಾ ಚಾಪ್ ಸಮೋಸಾ ಮತ್ತು ಮಿಕ್ಸ್ ವೆಚ್ನಂತಹ ಕಸ್ಟಮೈಸ್ ಮಾಡಿದ ಸಮೋಸಾಗಳನ್ನು ಇಲ್ಲಿ ಕಾಣಬಹುದು.
ಇಲ್ಲಿ ಮಿಲೆಟ್ ಸಮೋಸಾ ಕೂಡಾ ಲಭ್ಯ: ಈ ಪ್ರಯೋಗದ ಹೊರತಾಗಿ ಇದೀಗ ಜನರಿಗೆ ಆರೋಗ್ಯಕರ ಮಿಲೆಟ್ ಸಮೋಸಾವನ್ನು ನೀಡುವ ಕುರಿತು ರವಿ ಚಿಂತಿಉತ್ತಿದ್ದು, ಈ ಮಿಲ್ಲೆಟ್ಗಳನ್ನು ಗರಿಗರಿಯಾಗಿ ಹೇಗೆ ಮಾಡುವುದು ಎಂಬುದರ ಪ್ರಯೋಗ ನಡೆಸಿದ್ದಾರೆ. ಇವರ ಸಮೋಸಾಗಳು ಫುಡ್ ಡೆಲಿವರಿ ಆ್ಯಪ್ಗಳಲ್ಲೂ ಲಭ್ಯವಿದ್ದು, ಇದಕ್ಕೂ ಬೇಡಿಕೆ ಹೆಚ್ಚಿದೆ.
ಸಮೋಸಾದ ಹುಟ್ಟು: ಸಮೋಸಾ ಎಲ್ಲಿ ಮತ್ತು ಯಾವಾಗ ಕಾಣಿಸಿಕೊಂಡಿತು ಎಂದು ಹುಡುಕಿದರೆ, ಇದರ ಮೂಲ 10 ನೇ ಶತಮಾನದ ಇರಾನ್ ಮತ್ತು ಮಧ್ಯ ಏಷ್ಯಾದಲ್ಲಿ ಆರಂಭವಾಯಿತು ಎಂಬ ಮಾಹಿತಿ ಸಿಗುತ್ತದೆ. ಅಲ್ಲಿ ಇದನ್ನು ಸಾಂಬುಸಾಕ್ ಎಂದು ಕರೆಯಲಾಗುತ್ತಿತ್ತು. ಇದು 13-14 ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಮೂಲಕ ಭಾರತವನ್ನು ತಲುಪಿತು ಎಂದು ಹೇಳಲಾಗುತ್ತದೆ. ದೆಹಲಿ ಸುಲ್ತಾನರ ಅವಧಿಯಲ್ಲಿ ರಾಜಮನೆತನದ ಅಡುಗೆಯಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. 16ನೇ ಶತಮಾನದಲ್ಲಿ ಪೋರ್ಚುಗೀಸರು ಪರಿಚಯಿಸಿದ ಆಲೂಗಡ್ಡೆ ನಂತರ ಸಾಂಪ್ರದಾಯಿಕ ತಿನಿಸಾಗಿ ಮಾರ್ಪಟ್ಟಿತು.
ವರ್ಷಗಳು ಉರುಳಿದಂತೆ ಈ ತಿಂಡಿ ವಿಕಸನಗೊಂಡಿದೆ. ಇದೀಗ ರವಿ ರಂಜನ್ ಅದಕ್ಕೆ ಆಧುನಿಕ ರುಚಿಯ ಸ್ಪರ್ಶ ನೀಡಿದ್ದಾರೆ. ನಿರುದ್ಯೋಗದಿಂದ ಕಂಗಾಲಾಗದೇ, ಧೈರ್ಯ ಮತ್ತು ಸ್ಥಿರತೆಯೊಂದಿಗೆ ಏನಾದರೂ ಹೊಸತನದಿಂದ ಯೋಚಿಸಬೇಕು. ಇದರಿಂದಾಗಿ ಇದೀಗ ವಾರ್ಷಿಕ 70 ಲಕ್ಷದ ವಹಿವಾಟು ನಡೆಸುತ್ತಿರುವುದಾಗಿ ಅವರು ಆತ್ಮ ವಿಶ್ವಾಸದಿಂದ ಹೇಳುತ್ತಿದ್ದಾರೆ. ಅವರ ಈ ಮಾತು ಅನೇಕರಿಗೆ ಸ್ಪೂರ್ತಿ ನೀಡುವುದಂತೂ ಸುಳ್ಳಲ್ಲ.
ಇವುಗಳನ್ನೂ ಓದಿ:
ಗರಿಗರಿಯಾದ 'ಅವಲಕ್ಕಿ ಸಮೋಸಾ' ತಯಾರಿಸಿ: ಬಾಯಲ್ಲಿ ನೀರೂರಿಸುವಷ್ಟು ರುಚಿ
ಮಳೆಗಾಲದ ಸಂಜೆಯ ಖುಷಿಗೆ ಗರಿಗರಿಯಾದ ಮೆಕ್ಕೆಜೋಳದ ಸಮೋಸ ಮಾಡೋದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ

