ETV Bharat / bharat

ಸೋನಿಯಾ ಗಾಂಧಿ ಆತ್ಮಚರಿತ್ರೆಯ ಪ್ರಕಾಶಕರಲ್ಲ: ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿಕೆ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಿಸಲು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆ ನಿರಾಕರಿಸಿದೆ.

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (X@PawanKhera)
author img

By ETV Bharat Karnataka Team

Published : August 28, 2026 at 6:10 PM IST

2 Min Read
Choose ETV Bharat

ನವದೆಹಲಿ: ನಾವು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಾಶಕರಲ್ಲ ಎಂದು ಇಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕನ್ ಪ್ರಕಾಶಕ ಸಂಸ್ಥೆ ಆಲ್ಫ್ರೆಡ್ ಎ ನಾಫ್ ಈ ಪುಸ್ತಕವನ್ನು ನವೆಂಬರ್ 10ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದಾದ ಕೆಲವು ದಿನಗಳ ನಂತರ ಈ ಹೇಳಿಕೆ ಹೊರಬಂದಿದೆ.

ಸೋನಿಯಾ ಗಾಂಧಿ ಅವರು ಕೆಲವು ಸಂಪಾದಕೀಯ ಬದಲಾವಣೆಗಳನ್ನು ಮಾಡುವುದಕ್ಕೆ ನಿರಾಕರಿಸಿದ ನಂತರ ಪ್ರಕಾಶಕರು ಪುಸ್ತಕ ಪ್ರಕಟಿಸುವುದರಿಂದ ಹಿಂದೆ ಸರಿದರು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸ್ಥೆ, ಈ ಆರೋಪವು ಸಂದರ್ಭಗಳನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದೆ.

ಅದೇ ರೀತಿ, ಪುಸ್ತಕವನ್ನು ಪ್ರಕಟಿಸಲು ಸಂಸ್ಥೆ ಉತ್ಸುಕವಾಗಿದ್ದರೂ ವಾಸ್ತವಿಕತೆಯ ಪರಿಶೀಲನೆ (fact check) ಮತ್ತು ಆ ವಿಚಾರವಾಗಿ ಶಿಫಾರಸುಗಳನ್ನು ಒದಗಿಸುವುದು ಪ್ರಕಾಶಕರ ಹಕ್ಕು ಮತ್ತು ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದೆ.

ಇದರ ಜತೆಗೆ, ಲೇಖಕರೊಂದಿಗಿನ ಚರ್ಚೆಗಳುದ್ದಕ್ಕೂ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆಯು ಪುಸ್ತಕ ಪ್ರಕಟಿಸಲು ಸಿದ್ಧವಿರುವುದು ಮತ್ತು ಉತ್ಸುಕವಾಗಿರುವ ನಿಲುವನ್ನು ಹೊಂದಿತ್ತು. ಪುಸ್ತಕದ ಕುರಿತಾಗಿ ಲೇಖಕರೊಂದಿಗೆ ನಡೆದ ಗೌಪ್ಯ ಚರ್ಚೆಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲಾಗದು ಎಂದು ಹೇಳಿಕೆಯಲ್ಲಿ ಸೇರಿಸಿದೆ.

ಅಮೆಜಾನ್ ನಲ್ಲಿ ಪುಸ್ತಕದ ಇ-ಆವೃತ್ತಿ ಲಭ್ಯ!: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಇದೀಗ ಈ ಪುಸ್ತಕದ ವಿತರಕರ ಸ್ಥಿತಿ ಅನಿಶ್ಚಿತವಾಗಿದೆ. ಆದರೆ, ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ 2,615 ರೂಪಾಯಿಗೆ ಪ್ರೀ-ಆರ್ಡರ್‌ಗಾಗಿ ಇ-ಪುಸ್ತಕದ ಆವೃತ್ತಿಯನ್ನು ತೋರಿಸಲಾಗುತ್ತಿದೆ. ಇ-ಕಾಮರ್ಸ್ ವೆಬ್‌ಸೈಟ್ ಪ್ರಕಾರ, ಆತ್ಮಚರಿತ್ರೆಯ ಇ-ಪುಸ್ತಕವನ್ನು ಹಾರ್ಪರ್‌ಕಾಲಿನ್ಸ್ ಯುಕೆಯ ವಿಲಿಯಂ ಕಾಲಿನ್ಸ್ ಪ್ರಕಟಿಸಿದೆ.

ಸೋನಿಯಾ ಆತ್ಮಚರಿತ್ರೆಯಲ್ಲೇನಿದೆ?: ಭಾರತದ ಅತ್ಯಂತ ಚರ್ಚಾಸ್ಪದ ರಾಜಕೀಯ ವ್ಯಕ್ತಿಗಳ ಪೈಕಿ ಒಬ್ಬರಾದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ದೇಶದ ಅತ್ಯಂತ ಶಕ್ತಿಶಾಲಿ ರಾಜಕೀಯ ಕುಟುಂಬವೊಂದರಿಂದ ಬಂದ ರಾಜೀವ್ ಗಾಂಧಿ ಅವರನ್ನು ಮದುವೆಯಾದ ವಿಚಾರಗಳನ್ನು ಈ ಪುಸ್ತಕದಲ್ಲಿ ಹಂಚಿಕೊಳ್ಳಲಿದ್ದಾರೆ. ನಂತರ ರಾಜೀವ್ ಗಾಂಧಿಯನ್ನು ಕಳೆದುಕೊಂಡ ದುರಂತ ಅವರನ್ನು ರಾಜಕೀಯಕ್ಕೆ ಎಳೆದು ತಂದ ಪರಿ ಹಾಗು 2004ರಲ್ಲಿ ಪ್ರಧಾನ ಮಂತ್ರಿ ಹುದ್ದೆಯನ್ನು ತಿರಸ್ಕರಿಸಿರುವ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಅಮೆರಿಕನ್ ಪ್ರಕಾಶಕ ಸಂಸ್ಥೆ ಆಲ್ಫ್ರೆಡ್ ಎ ನಾಫ್ ಹೇಳಿದೆ.

ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಖಾಸಗಿ ಜೀವನವನ್ನು ವಿರಳವಾಗಿ ಹಂಚಿಕೊಂಡಿರುವ 79 ವರ್ಷದ ಸೋನಿಯಾ ಗಾಂಧಿ, ಯುದ್ಧಾನಂತರದ ಇಟಲಿಯಲ್ಲಿ ತಮ್ಮ ಬಾಲ್ಯ, ಭಾರತಕ್ಕೆ ಬರುವ ಪ್ರಣಯದವರೆಗೆ, ತಮ್ಮ ಸ್ವಂತ ಭವಿಷ್ಯ ಮಾತ್ರವಲ್ಲದೆ ದತ್ತು ಪಡೆದ ಮನೆಯ ಭವಿಷ್ಯವನ್ನೂ ಮರುರೂಪಿಸುವ ನಷ್ಟಗಳವರೆಗೆ ವಿವರಿಸಲಿದ್ದಾರೆ ಎಂದು ಅದು ಹೇಳಿದೆ.

ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆಯ ಇತ್ತೀಚಿನ ವಿವಾದ: ಈ ವರ್ಷದ ಫೆಬ್ರವರಿಯಲ್ಲಿ ಪೆಂಗ್ವಿನ್ ಇಂಡಿಯಾ ಪ್ರಕಾಶಕರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಆತ್ಮಚರಿತ್ರೆಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿ ಸುದ್ದಿ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಈ ಪುಸ್ತಕದ ಪ್ರತಿಯನ್ನು ಪ್ರದರ್ಶಿಸಿದ ಕೆಲವು ದಿನಗಳ ನಂತರ ಸಂಸ್ಥೆಯಿಂದ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: ಪೂರ್ಣ ವಂದೇ ಮಾತರಂ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ: ಬಿಜೆಪಿ ಆರೋಪ, ಕಾಂಗ್ರೆಸ್​ನಿಂದ ನಿರಾಕರಣೆ