ನೇಪಾಳ ಪ್ರವಾಹ: 275ಕ್ಕೂ ಹೆಚ್ಚು ಭಾರತೀಯರು ಇನ್ನೂ ನಾಪತ್ತೆ, 108 ಜನರ ರಕ್ಷಣೆ
ಭಾರತೀಯ ವಾಯುಪಡೆಯ ನೇಪಾಳಕ್ಕೆ ವಿಮಾನವನ್ನು ಕಳಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಲಕರಣೆಗಳ ಜೊತೆಗೆ ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ತಜ್ಞರ ತಂಡವನ್ನೂ ಇದು ಹೊಂದಿದೆ.

By PTI
Published : August 30, 2026 at 9:59 AM IST
ನವದೆಹಲಿ: ಐದು ದಿನಗಳ ಹಿಂದೆ ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಇನ್ನೂ ಕೂಡ 275ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. 108 ಜನರನ್ನು ರಕ್ಷಿಸಲಾಗಿದೆ. ಅಲ್ಲದೆ, ಭಾರತೀಯ ಮೂಲದ 128 ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ (MEA) ಶನಿವಾರ ತಿಳಿಸಿದೆ.
ಕಳೆದ ಎರಡು ದಿನಗಳಲ್ಲಿ 598 ಭಾರತೀಯ ಪ್ರಜೆಗಳು ಚೀನಾದಿಂದ ನೇಪಾಳಕ್ಕೆ ಸುರಕ್ಷಿತವಾಗಿ ಪ್ರವೇಶಿಸಿದ್ದಾರೆ. ಸುಮಾರು 900 ಭಾರತೀಯರು ಚೀನಾದಲ್ಲೇ ಸುರಕ್ಷಿತವಾಗಿದ್ದು, ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತೀಯ ವಾಯುಪಡೆಯ ಸಿ-130ಜೆ ಮಿಲಿಟರಿ ಸಾರಿಗೆ ವಿಮಾನದಲ್ಲಿ ನೇಪಾಳಕ್ಕೆ 11 ಟನ್ ಪರಿಹಾರ ಸಾಮಗ್ರಿಗಳ ನಾಲ್ಕನೇ ಕಂತನ್ನು ಕಳುಹಿಸಿದೆ. ವಿಮಾನವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಲಕರಣೆಗಳ ಜೊತೆಗೆ ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ತಜ್ಞರ ತಂಡವನ್ನೂ ಸಹ ಹೊಂದಿದೆ. ಪ್ರವಾಹದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಗುರುತಿಸುವಲ್ಲಿ ನೇಪಾಳ ಅಧಿಕಾರಿಗಳಿಗೆ ವಿಧಿವಿಜ್ಞಾನ ತಂಡ ಸಹಾಯ ಮಾಡಲಿದೆ. ಜೊತೆಗೆ, 230 ಅಡಿ 'ಸಿಂಗಲ್ ಲೇನ್ ಮಾಡ್ಯುಲರ್ ಸ್ಟೀಲ್ ಸೇತುವೆ'ಗಾಗಿ ಉಪಕರಣಗಳನ್ನು ಹೊತ್ತ 16 ಟ್ರಕ್‌ಗಳು ನೇಪಾಳವನ್ನು ತಲುಪಿವೆ. ಇನ್ನೂ ಏಳು ಬೈಲಿ ಸೇತುವೆಗಳ ನಿರ್ಮಾಣಕ್ಕೆ ಸಲಕರಣೆಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು. ಅವುಗಳ ನಿರ್ಮಾಣಕ್ಕೆ ತಾಂತ್ರಿಕ ತಂಡಗಳು ಶೀಘ್ರದಲ್ಲೇ ತಲುಪಲಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಭಾರತ ಇದುವರೆಗೆ ಒಟ್ಟು 68.5 ಟನ್ ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಿದೆ. ಇಲ್ಲಿಯವರೆಗೆ, ನೇಪಾಳದಲ್ಲಿ 108 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ. ಈ ಹಿಂದೆ ಸಂಪರ್ಕ ಕಳೆದುಕೊಂಡಿದ್ದ ಸುಮಾರು 50 ಭಾರತೀಯ ಪ್ರಜೆಗಳೊಂದಿಗೆ ಮರಳಿ ಸಂಪರ್ಕ ಸಾಧಿಸಲಾಗಿದೆ. ಚೀನಾದ ಸ್ಥಳೀಯ ಸರ್ಕಾರಿ ಮೂಲಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ 598 ಭಾರತೀಯ ಪ್ರಜೆಗಳು ಚೀನಾದಿಂದ ನೇಪಾಳಕ್ಕೆ ಸುರಕ್ಷಿತವಾಗಿ ದಾಟಿದ್ದಾರೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.
ರಸುವಾದಲ್ಲಿನ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಿಪು ಕುಮಾರ್, ಚಾನೇಶ್ವರ್ ನರ್ಜರಿ, ಕೃಪಾ ಶಂಕರ್ ಮತ್ತು ಮೊಹಮ್ಮದ್ ಮಿನ್ಹಾಜುದ್ದೀನ್ ಎಂಬ ನಾಲ್ವರು ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ. ಅವರು ಶೀಘ್ರದಲ್ಲೇ ಕಠ್ಮಂಡು ತಲುಪುವ ನಿರೀಕ್ಷೆಯಿದೆ. ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ರಸುವಾ ಕೂಡ ಒಂದು.
ನೇಪಾಳದಲ್ಲಿ ಆಗಸ್ಟ್ 26 ರಂದು ಸಂಭವಿಸಿದ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ ಸದ್ಯ 675ಕ್ಕೆ ಏರಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಮತ್ತಷ್ಟು ಶವಗಳು ಪತ್ತೆಯಾಗಿವೆ. ಸಾವಿರಾರು ಜನರು ಇನ್ನೂ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಅಧಿಕಾರಿಗಳು ಹಂಚಿಕೊಂಡ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ನೇಪಾಳದಲ್ಲಿ ಐವರು ಸ್ನೇಹಿತರ ಪ್ರಾಣ ಉಳಿಸಿದ ಒಂದು ಕಪ್ ಚಹಾ!: ದುರಂತದ ಭಯಾನಕತೆ ಬಿಚ್ಚಿಟ್ಟ ಗೆಳೆಯರು

