ರಾಮೋಜಿ ಶ್ರೇಷ್ಠತಾ ಪ್ರಶಸ್ತಿ 2025: ಅನ್ಯ ಭಾಷೆಗಳಿಂದ ಬುಡಕಟ್ಟುಗಳ ಸಂಸ್ಖೃತಿ ಮೇಲೆ ಪರಿಣಾಮ - ಭಾಷಾಶಾಸ್ತ್ರಜ್ಞೆ ಪ್ರೊ. ಸತುಪತಿ ಪ್ರಸನ್ನ ಶ್ರೀ
ಭಾಷಾಶಾಸ್ತ್ರಜ್ಞೆ, ಆಂಧ್ರಪ್ರದೇಶದ ಮೊದಲ ಬುಡಕಟ್ಟು ಮಹಿಳಾ ಉಪಕುಲಪತಿ ಎಂಬ ಶ್ರೇಯಕ್ಕೆ ಪಾತ್ರರಾದವರು ಪ್ರೊ.ಸತುಪತಿ ಪ್ರಸನ್ನ ಶ್ರೀ. 19 ಬುಡಕಟ್ಟು ಭಾಷೆಗಳಿಗೆ ಲಿಪಿಗಳನ್ನು ರಚಿಸಿರುವ ಅವರೊಂದಿಗಿನ ಸಂದರ್ಶನ ಇಲ್ಲಿದೆ.

Published : November 18, 2025 at 10:27 AM IST
|Updated : November 18, 2025 at 12:11 PM IST
ಹೈದರಾಬಾದ್: ಭಾರತದ ಅತ್ಯಂತ ಪ್ರಭಾವಿ ಭಾಷಾಶಾಸ್ತ್ರಜ್ಞರಲ್ಲಿ ಒಬ್ಬರು, ಆಂಧ್ರಪ್ರದೇಶ ರಾಜ್ಯದಲ್ಲಿ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೊ.ಸತುಪತಿ ಪ್ರಸನ್ನ ಶ್ರೀ ಅವರು ಚೊಚ್ಚಲ ರಾಮೋಜಿ ರಾವ್ ಶ್ರೇಷ್ಠತಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾನುವಾರ (ನ.16) ಫಿಲ್ಮ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸತುಪತಿ ಪ್ರಸನ್ನ ಶ್ರೀ ಅವರು ತಮ್ಮ ವೃತ್ತಿಜೀವನದಲ್ಲಿ ಬುಡಕಟ್ಟು ಸಮುದಾಯಗಳ ಘನತೆ ಮತ್ತು ಗುರುತಿಸುವಿಕೆಗಾಗಿ ಅವರ ಭಾಷೆಗಳ ಸಂರಕ್ಷಣೆಗೆ ಹೋರಾಡಿದವರು. ಅಳಿವಿನಂಚಿನಲ್ಲಿರುವ ಭಾಷೆಗಳ ದಾಖಲೀಕರಣದ ಮೂಲಕ, ಮೌಖಿಕವಾಗಿ ಮಾತ್ರ ಅಸ್ತಿತ್ವದಲ್ಲಿದ್ದ ಭಾಷೆಗಳಿಗೆ ಲಿಪಿಗಳನ್ನು ರಚಿಸಿದ ಅವರು ದೀರ್ಘಕಾಲದಿಂದ ಹಿಂದುಳಿದ ಜನರ ಸಾಂಸ್ಕೃತಿಕ ಮತ್ತು ಬೌದ್ಧಿಕತೆಯನ್ನು ಸಮಾಜದ ಮುನ್ನೆಲೆಗೆ ತಂದರು.
ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ ಅವರಿಗೆ ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಸತುಪತಿ ಪ್ರಸನ್ನ ಶ್ರೀ ಅವರು, ಭಾಷಾಶಾಸ್ತ್ರದತ್ತ ತಮ್ಮ ಅಮೋಘ ಪ್ರಯಾಣ, ತಮ್ಮ ಧ್ಯೇಯವನ್ನು ರೂಪಿಸಿದ ಭಾವನಾತ್ಮಕ ಮತ್ತು ಸಾಮಾಜಿಕ ವಾಸ್ತವತೆ ಹಾಗೂ ಭಾಷೆಯ ಪ್ರಾಮುಖ್ಯತೆಯ ಕುರಿತಂತೆ 'ಈಟಿವಿ ಭಾರತ'ದ ಸಿದ್ಧಾರ್ಥ್ ರಾವ್ ಅವರೊಂದಿಗೆ ಮಾತನಾಡಿದ್ದಾರೆ.
ಸಿದ್ಧಾರ್ಥ್ ರಾವ್: ಸ್ಟುವರ್ಟ್‌ಪುರಂನಿಂದ ನೀವು ಇಂದು ತಲುಪಿರುವ ಯಶಸ್ಸಿನ ಪ್ರಯಾಣದ ಬಗ್ಗೆ ನಿಮ್ಮ ನೆನಪುಗಳೇನು?
ಪ್ರೊ.ಸತುಪತಿ ಪ್ರಸನ್ನ ಶ್ರೀ: ನಾನು ಸ್ಟುವರ್ಟ್‌ಪುರಂನವಳು ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ, ನಾನು ಅಲ್ಲಿಯವಳಲ್ಲ. ನನ್ನ ಅಜ್ಜ ಶಿಕ್ಷಕರಾಗಿದ್ದರು, ಬಳಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಅವರು 14ನೇ ವಯಸ್ಸಿನಲ್ಲಿ ತಮ್ಮ ಈ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಬಳಿಕ ಅವರು ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜಿಗೆ ಸೇರಿದ್ದು, ರೈಲ್ವೆ ಇಲಾಖೆಯಲ್ಲಿದ್ದರಿಂದ ವೃತ್ತಿಪರವಾಗಿ ಕಲ್ಕತ್ತಾಗೆ ಪ್ರಯಾಣಿಸುತ್ತಿದ್ದರು. ಹೀಗಾಗಿ, ನಾವು ವಿವಿಧ ಸ್ಥಳಗಳಿಗೆ ಸ್ಥಳಾಂತರ ಆಗಬೇಕಾಯಿತು. ಆದ್ದರಿಂದ, ನನ್ನ ಪೋಷಕರು ಸ್ಟುವರ್ಟ್‌ಪುರಂಗೆ ಸೇರಿದವರಲ್ಲ, ಆದರೆ ಅವರ ಪೂರ್ವಜರು ಅಲ್ಲಿನವರು.
ಸಿದ್ಧಾರ್ಥ್ ರಾವ್: ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಏಕಮುಖ ಅಧ್ಯಯನ ವಿಧಾನವನ್ನು ನೋಡುತ್ತೇವೆ, ಯುವಜನತೆ ಒಂದೋ ಎಂಜಿನಿಯರ್ ಅಥವಾ ವೈದ್ಯರಾಗುವ ಗುರಿಯೊಂದಿಗೆ ಅಧ್ಯಯನ ಮಾಡುತ್ತಾರೆ. ಆದರೆ ನೀವು ಈ ದಿಕ್ಕಿನತ್ತ ತಿರುಗಲು ಕಾರಣವೇನು? ಅದರಲ್ಲೂ ಭಾಷೆಗಳು ಅಥವಾ ಭಾಷಾಶಾಸ್ತ್ರದ ಕಡೆಗೆ ನೀವು ನಿಮ್ಮನ್ನು ಆಕರ್ಷಿಸಿದ್ದು ಏನು?
ಪ್ರೊ.ಸತುಪತಿ ಪ್ರಸನ್ನ ಶ್ರೀ: ನನ್ನದು ಮೊದಲೇ ಯೋಜಿತವಾದ ಪ್ರಯಾಣವಲ್ಲ. ಕೆಲ ಸರಣಿ ಸಮಸ್ಯೆಗಳಿಂದ ನಾನು ಅನುಭವಿಸಿದ ಕಿರುಕುಳ ಹಾಗೂ ನೆಮ್ಮದಿ ಕಳೆದುಕೊಂಡಿದ್ದರಿಂದ ಒತ್ತಾಯಪೂರ್ವಕವಾಗಿ ಈ ಆಯ್ಕೆ ಮಾಡಿಕೊಳ್ಳಬೇಕಾಯಿತು. ಆ ಪರಿಸ್ಥಿತಿಯು ನಿಮ್ಮ ಮನಸ್ಥಿತಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಅಂತಹ ವ್ಯಾಕುಲತೆ ಎದುರಾದಾಗ ಹಾಗೂ ಜೊತೆಗಿದ್ದ ಮನುಷ್ಯರೇ ನಿಮ್ಮನ್ನು ಮನುಷ್ಯನೆಂದು ಪರಿಗಣಿಸದಿದ್ದಾಗ, ಅದನ್ನು ಪ್ರಶ್ನೆ ಮಾಡುವಂತೆ ನಿಮಗೆ ಆ ಸನ್ನಿವೇಶವು ಪ್ರೇರೇಪಿಸುತ್ತದೆ.
ಆಗ ನಾನು 'ನನ್ನನ್ನು ಏಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ?' ಎಂದು ಯೋಚಿಸಲು ಪ್ರಾರಂಭಿಸಿದೆ. ನಾನು ಕೀಳು ಮತ್ತು ಬೇರೆಯವರು ಶ್ರೇಷ್ಠರು ಎಂದಲ್ಲ. ಅವರು ಯಾರು? ನಾವು ಕೂಡ ಇಲ್ಲಿ ಒಬ್ಬರಾಗಿದ್ದೇವೆ ಎಂದು ಅನಿಸಿತು. ಈ ರೀತಿಯ ಅಸಮಾನತೆಗಳು, ಸಾಮಾಜಿಕವಾಗಿ ಇರುವ ಭಾವನಾತ್ಮಕ ಕಿರುಕುಳ ಇದ್ದರೂ, ನನ್ನಲ್ಲಿ ಎಲ್ಲಾ (ಅಪೇಕ್ಷಿತ) ಗುಣಗಳಿರುವಾಗ, ನಾನು ಏಕೆ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ ಮತ್ತು ವಿಚಲಿತನಾಗುತ್ತಿದ್ದೇನೆ? ಎಂಬ ಆಲೋಚನೆ ನನಗೆ ಮೂಡಿತು.
ಆಗ ಅರಿವಾಗಿದ್ದೇನೆಂದರೆ, ಇದು ನನಗೆ ಮಾತ್ರ ಎದುರಾದ ಸಮಸ್ಯೆಯಲ್ಲ. ಸಾವಿರಾರು ಜನರು, ನನ್ನ ಪೂರ್ವಜರು, ಸ್ಟುವರ್ಟ್‌ಪುರಂನಂತಹ ಊರಿನೊಂದಿಗೆ ಸಂಬಂಧ ಹೊಂದಿರುವುದರಿಂದ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು, ಅವರಿಗೆ ಕಿರುಕುಳ ನೀಡಲಾಯಿತು. ಆದರೆ ಮೂಲಭೂತವಾಗಿ, ಯಾರಾದರೂ ಸ್ಟುವರ್ಟ್‌ಪುರಂ ಅಥವಾ ಬೆಂಗಳೂರಿನವರು ಎಂಬುದು ಮುಖ್ಯವಲ್ಲ. ಆದರೆ ಇಲ್ಲಿ, ಅವರೆಲ್ಲರೂ ಬುಡಕಟ್ಟು ಗುಂಪಿನವರು ಎಂಬುದು ಮುಖ್ಯ. ಅವರು ಶಿಕ್ಷಿತರಲ್ಲದಿರಬಹುದು, ಆದರೆ ಭಾವನಾತ್ಮಕ ಮತ್ತು ಮಾನಸಿಕ ಬುದ್ಧಿವಂತಿಕೆ ಹೊಂದಿದ್ದಾರೆ. ಅವರ ಮೆದುಳು ಸುಂದರವಾಗಿ ಕೆಲಸ ಮಾಡುತ್ತದೆ. ಆದರೆ ಅವರಿಗೆ ತಮ್ಮದೇ ಆದ ಗುರುತಿಲ್ಲ, ವಿಶೇಷವಾಗಿ ಅವರು ಲಿಪಿಯುಳ್ಳ ಭಾಷೆಯನ್ನು ಹೊಂದಿರಲಿಲ್ಲ.
ನಿಮಗೆ ಅಂತಹ ಗುರುತು ಇಲ್ಲದಿದ್ದಾಗ, ಜನರು ನೀವು ಅವರೊಂದಿಗೆ ಸರಿಸಮಾನರಲ್ಲ ಎಂದು ನಿಮಗೆ ಅನ್ನಿಸುವಂತೆ ಮಾಡುತ್ತಾರೆ. ನಿಮ್ಮ ಗುರುತು ಅವರಿಗಿಂತ ಕೆಳಮಟ್ಟದಲ್ಲಿದೆ. ನೀವು ಅವರ ಪಾದಗಳಡಿ ಕುಳಿತುಕೊಳ್ಳಬೇಕು. ಆದ್ದರಿಂದ ಸಮಾಜದಲ್ಲಿ ಶಿಕ್ಷಣವು ದೊಡ್ಡ ಬದಲಾವಣೆ ತರುತ್ತದೆ. ಒಂದು ಲಿಪಿಯು ಬಹುದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ, ಏಕೆಂದರೆ ನೀವು ಶೈಕ್ಷಣಿಕ ಕ್ಷೇತ್ರದ ಸುಗ್ಗಿಯನ್ನು ಬೆಳೆಸುತ್ತಿರುವಾಗ, ನೀವು ಓಟದಲ್ಲಿ ಮುಂದೆ ಇಲ್ಲದಿದ್ದರೆ, ಜನರು ನಿಮ್ಮನ್ನು ಕೆಳಕ್ಕೆ ತಳ್ಳುತ್ತಾರೆ. ಆದರೆ ನಾನು ಹಾಗೆ ಆಗಲು ಬಯಸಲಿಲ್ಲ.
ಸಿದ್ಧಾರ್ಥ್ ರಾವ್: ಭಾಷೆಗಳು ಗುರುತಿದ್ದಂತೆ ಮತ್ತು ಭಾಷೆ ಯಾರನ್ನಾದರೂ ನಡೆಸಿಕೊಳ್ಳುವ ಒಂದು ಮಾರ್ಗ ಎಂದು ನೀವು ಹೇಳುತ್ತೀರಿ. ಅದುವೇ ನಿಮ್ಮನ್ನು ಈ ಅಳಿವಿನಂಚಿನಲ್ಲಿರುವ ಭಾಷೆಗಳತ್ತ ಸೆಳೆಯಿತು ಮತ್ತು ಈ ಲಿಪಿಗಳನ್ನು ರಚಿಸುವ ಕೆಲಸದಲ್ಲಿ ತೊಡಗುವಂತೆ ಮಾಡಿತೆ?
ಪ್ರೊ.ಸತುಪತಿ ಪ್ರಸನ್ನ ಶ್ರೀ: ನಾನು ಆರಂಭದಲ್ಲಿ ಹೆಜ್ಜೆ ಇಟ್ಟಾಗ, ಯಾವುದೇ ನಿರ್ದಿಷ್ಟ ಗುರಿಯಿಲ್ಲದೇ, ಹಾಗೆಯೇ ಮುನ್ನಡೆಯುತ್ತಿದ್ದೆ. ಆದರೆ ಬಳಿಕ ನನಗೆ ನನ್ನ ಸುತ್ತಲಿನ ಸಮಸ್ಯೆಗಳ ಅಗಾಧತೆಯು ಅರ್ಥವಾಯಿತು. ತದನಂತರ, ಇಲ್ಲಿರುವುದು ನಾನು ಮಾತ್ರವಲ್ಲ, ತಮ್ಮ ಜೀವನದಲ್ಲಿ ಈ ರೀತಿಯ ಬೆಳಕನ್ನು ಎಂದಿಗೂ ನೋಡದ ಅನೇಕ ಜನರಿದ್ದಾರೆ. ಅವರ ಪೋಷಕರು ವಿದ್ಯಾವಂತರಲ್ಲ ಹಾಗೂ ಅವರೂ ಸ್ವತಃ ವಿದ್ಯಾವಂತರಲ್ಲ. ಶಿಕ್ಷಣ, ಶೈಕ್ಷಣಿಕ.. ಎಂಬ ಪದವು ಅವರಲ್ಲಿ ಎಂದಿಗೂ ಅಸ್ತಿತ್ವದಲ್ಲಿಲ್ಲ ಎಂದು ತಿಳಿಯಿತು.
ನಾನು ಇದನ್ನೆಲ್ಲಾ ನೋಡಿದಾಗ, ಭಾರತದ ಜನಸಂಖ್ಯೆಯ ಸುಮಾರು 7% ಬುಡಕಟ್ಟು ಜನಾಂಗದವರು ಎಂದು ನನಗೆ ನೆನಪಾದರು. ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ದುಃಸ್ಥಿತಿ ಇದು. ಭಾಷೆ ತಿಳಿಯದ ಬಹುತೇಕ ಎಲ್ಲಾ ಬುಡಕಟ್ಟು ಜನಾಂಗದವರ ಕಥೆ ಇದು. ಅವರು ಮಾತನಾಡಲು ಭಾಷೆಗಳಿವೆ, ಆದರೆ ಅದನ್ನು ನಾವು ಮೌಖಿಕ ಸಾಹಿತ್ಯ ಎಂದು ಕರೆಯುತ್ತೇವೆ.
ಕಾಲಕ್ರಮೇಣ, ನೀವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಭಾಷೆಯೊಂದನ್ನು ಮಾತನಾಡುತ್ತಿದ್ದರೆ, ಆ ಭಾಷೆಗೆ ಜೀವವಿದೆ ಎಂದು ನನಗೆ ಅನಿಸಿತು. ಆದರೆ ರಾಜ್ಯಮಟ್ಟದ ಪ್ರಾಬಲ್ಯಯುತ ಭಾಷೆಗಳು ಅಥವಾ ನೆರೆಯ ಭಾಷೆಗಳ ಎದುರು ನಿಮ್ಮ ಭಾಷೆಯ ಮೂಲರೂಪ ಹಾಗೂ ಸಂಯೋಜನೆಯು ಅದರ ಘಮವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನೀವು ನಿಮ್ಮ ಗುರುತನ್ನು ಹೊಂದಿರಬೇಕು. ಅದರ ಜೊತೆಗೆ, ನಿಮಗೆ ನಿಮ್ಮ ಭಾಷೆ ಬೇಕು ಹಾಗೂ ಅದಕ್ಕೆ ಲಿಪಿ ಇರಬೇಕು.
ಸಿದ್ಧಾರ್ಥ್ ರಾವ್: ನೀವು ಬುಡಕಟ್ಟು ಜನರ ಭಾಷೆಯನ್ನು ಮೌಖಿಕ ಸಂಪ್ರದಾಯ, ಲಿಪಿ ಇಲ್ಲದ ಮೌಖಿಕ ಸಾಹಿತ್ಯ ಎನ್ನುತ್ತೀರಿ. ಹೀಗಿರುವಾಗ, ನೀವು ತಲೆಮಾರುಗಳ ಮೂಲಕ ವಿಕಸನಗೊಂಡು ಬಾಯಿ ಮಾತಿನ ಮೂಲಕ ಹರಡಿದ ಮೌಖಿಕ ಸಾಹಿತ್ಯ ಹೊಂದಿರುವ ಭಾಷೆಗೆ ಲಿಪಿ ರಚಿಸಲು ಮುಂದಾದಾಗ ನಿಮ್ಮ ಆರಂಭ ಹೇಗಿತ್ತು?
ಪ್ರೊ.ಸತುಪತಿ ಪ್ರಸನ್ನ ಶ್ರೀ: ಆ ದಿನಗಳಲ್ಲಿ, ಬುಡಕಟ್ಟು ಜನಾಂಗದವರು ತಮ್ಮದೇ ಆದ ಸೀಮಿತ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರ ಪೂರ್ವಜರು ಮೌಖಿಕ ಸಾಹಿತ್ಯದ ಮೂಲಕವೇ 'ಕುಟುಂಬ ವ್ಯವಸ್ಥೆ' ಎಂದು ಕರೆಯಬಹುದಾದ ಕಲ್ಪನೆಯನ್ನು ರವಾನಿಸಿದರು. ಆದರೆ ಇಂದು, ನಮ್ಮ ಬುಡಕಟ್ಟು ಜನರ ಮೇಲೆ ಇತರ ಭಾಷೆಗಳ ಒತ್ತಡವಿದೆ. ಇಂತಹ ಸಂದರ್ಭದಲ್ಲಿ, ಜನರು ನಿಧಾನವಾಗಿ ತಮ್ಮನ್ನು ಬುಡಕಟ್ಟು ಜನಾಂಗದವರು ಎಂದು ಗುರುತಿಸಿಕೊಳ್ಳುವುದನ್ನು ಬಿಡುತ್ತಿದ್ದಾರೆ.
ನನ್ನ ಗುರುತು, ನಾನು ಬುಡಕಟ್ಟು ಜನಾಂಗ ಎಂದು ಜಗತ್ತಿಗೆ ಬಹಿರಂಗವಾದರೆ ಎಲ್ಲರೂ ನನ್ನನ್ನು ಕೀಳಾಗಿ ನೋಡಲಾರಂಭಿಸುತ್ತಾರೆ. ಅಲ್ಲದೇ, ಜನರು ತಮ್ಮನ್ನು ವಿದ್ಯಾವಂತ ಬುಡಕಟ್ಟು ವ್ಯಕ್ತಿ ಎಂದು ನೋಡುವುದಿಲ್ಲ. ಹಳೆಯ ಸಾಂಪ್ರದಾಯಿಕ ವ್ಯವಸ್ಥೆಗಳೊಂದಿಗೆ ಹಿಂದೊಮ್ಮೆ ಕಾಡುಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗವೆಂದೇ ನಮ್ಮನ್ನು ನೋಡುತ್ತಾರೆ. ಅದು ಅವರ ಏಕೈಕ ಚಿತ್ರಣ ಎಂದು ಅಂದುಕೊಳ್ಳುತ್ತಾರೆ. ಆದರೆ ನಾನು ಹೇಳುತ್ತೇನೆ: ಆ ಜನರು ಸಹ ಬುದ್ಧಿವಂತರಾಗಿದ್ದರು ಮತ್ತು ನೀವು ಬ್ರಹ್ಮಾಂಡದ ಭಾಷೆ ಎಂದು ಕರೆಯಬಹುದಾದ ಭಾಷೆಯೊಂದಿಗೆ ಸಂಪರ್ಕ ಸಾಧಿಸುವ ವಿಶೇಷ ಸಾಮರ್ಥ್ಯ ಅವರಿಗಿತ್ತು. ಹಾಗೂ ಅವರು ಅದನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಿದರು.
ನೀವು ಇಂದು ಏನಾಗಿದ್ದೀರಿ ಎಂಬುದು ನಾಳೆ ನಿಮಗೆ ನೆನಪಿರುವುದಿಲ್ಲ. ಈಗ ನಮ್ಮ ಮನಸ್ಸಿನ ಮೇಲೆ, ನಮ್ಮ ಜೀವನಶೈಲಿಯ ಮೇಲೆ (ಆಧುನಿಕ ಕಾಲದಲ್ಲಿ) ಅನೇಕ ಪ್ರಭಾವಗಳಾಗಿವೆ. ಈ ಎಲ್ಲಾ ಪರಿಣಾಮಗಳಿಂದಾಗಿ, ನೀವು ಒಂದು ನಿರ್ದಿಷ್ಟ ಕುಲದಿಂದ, ಒಂದು ನಿರ್ದಿಷ್ಟ ಬುಡಕಟ್ಟಿನಿಂದ ಬಂದವರು ಎಂಬ ಭಾವನೆಯನ್ನು ನಿಮಗೆ ನೀಡುವುದಕ್ಕಾಗಿ ಒಂದು ಗುರುತು ನಮಗೆ ಬೇಕು ಎಂದು ನಾನು ಭಾವಿಸಿದೆ.
ಇದನ್ನು ಅರ್ಥಮಾಡಿಕೊಳ್ಳಿ: ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ಸಾಂಸ್ಕೃತಿಕ ಕುರುಹು ಅಗತ್ಯ. ಭಾರತ ಜಾತ್ಯತೀತ ದೇಶ. ಅಮೆರಿಕನ್ನರು ಅಥವಾ ಪಾಶ್ಚಿಮಾತ್ಯ ಸಮಾಜಗಳು ನಮ್ಮನ್ನು ಯಾಕೆ ಕುತೂಹಲದಿಂದ ನೋಡುತ್ತವೆ? ಏಕೆಂದರೆ ನಮ್ಮ ಸಾಂಸ್ಕೃತಿಕ ನೆಲೆಯು ಅಷ್ಟು ಪ್ರಬಲವಾಗಿದೆ. ನೀವು ಮಲಯಾಳಿ, ತಮಿಳರು ಅಥವಾ ಇನ್ನಾವುದೋ ಎಂಬುದನ್ನು ಹೊರತುಪಡಿಸಿ ಭಾರತೀಯರು ಎಂಬುದು ಮುಖ್ಯ. ನೀವು ವಿದೇಶಕ್ಕೆ ಹೋದಾಗ, ಯಾರೂ ನೀವು ಬುಡಕಟ್ಟು ಅಥವಾ ಹಿಂದೂ ಅಥವಾ ಬ್ರಾಹ್ಮಣ ಎಂದು ಕೇಳುವುದಿಲ್ಲ. ಅವರು ಸರಳವಾಗಿ ಹೇಳುತ್ತಾರೆ, 'ನೀವು ಭಾರತೀಯರು'. ಅದು ಅಲ್ಲಿ ನನಗೆ ಬೇಕಾದ ಗುರುತು. ಆದರೆ ಇಲ್ಲಿ, ನಮ್ಮ ಸ್ವಂತ ಸಮಾಜದಲ್ಲಿ, ನಿಮ್ಮ ಗುರುತೇ ನಿಮ್ಮ ವಿಶಿಷ್ಟ ಶಕ್ತಿ. ನೀವು ಪ್ರತಿನಿಧಿಸುವ ಭಾಷೆ ಹಾಗೂ ನಿಮ್ಮ ಪೂರ್ವಜರು ನಿಮಗೆ ನೀಡಿದ ಸಂಸ್ಕೃತಿಯನ್ನು ಮುಂದುವರೆಸುವ ಮೂಲಕ ನಿಮ್ಮ ಸ್ವಂತ ಗುರುತನ್ನು ನೀವು ಹೊಂದಿರಬೇಕು.
ಸಿದ್ಧಾರ್ಥ್ ರಾವ್: ಗುರುತಿಸಲ್ಪಡುವಿಕೆಗೆ ಭಾಷೆಯೇ ಕೇಂದ್ರಬಿಂದು, ಅದು ಧರ್ಮ ಅಥವಾ ಜನಾಂಗಕ್ಕಿಂತ ಮೇಲು ಎಂದು ನೀವು ಹೇಳುತ್ತೀರಿ. ಅಳಿವಿನಂಚಿನಲ್ಲಿರುವ ಮತ್ತು ಬುಡಕಟ್ಟು ಭಾಷೆಗಳನ್ನು ಮಾತನಾಡುವವರು ಹೆಚ್ಚಾಗಿ ತಾರತಮ್ಯ ಎದುರಿಸುತ್ತಾರೆ. ಹೀಗಿರುವಾಗ, ನಿಮ್ಮ ಕಾರ್ಯವು ಈ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯನ್ನು ಪುನಃಸ್ಥಾಪಿಸುವ ದೊಡ್ಡ ಪ್ರಯತ್ನ ಎಂಬುದಾಗಿ ನೋಡಬಹುದೇ?
ಪ್ರೊ.ಸತುಪತಿ ಪ್ರಸನ್ನ ಶ್ರೀ: ಹೌದೌದು, ಬಹಳಷ್ಟು. ಜನರು ನಮ್ಮದಲ್ಲದ ಇಂಗ್ಲಿಷ್ ಭಾಷೆಯತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವ ದಿನಗಳಿವು. ನಾವು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇವೆ ಹಾಗೂ ಯೋಚಿಸುತ್ತೇವೆ. ಆದರೆ ನಮ್ಮ ಸ್ಥಳೀಯ ಭಾವನೆ ಎಂದರೆ, ಅದು ನಮ್ಮ ಸ್ಥಳೀಯ ಭಾಷೆಯಾಗಿದೆ. ನಾವು ನಮ್ಮ ಭಾವನೆಗಳನ್ನು ಎಲ್ಲರೂ ಕೇಳಬಹುದಾದ ಭಾಷೆಯಲ್ಲಿಯೇ ವ್ಯಕ್ತಪಡಿಸುತ್ತೇವೆ.
ಸಿದ್ಧಾರ್ಥ್ ರಾವ್: ಬುಡಕಟ್ಟು ಹಿನ್ನೆಲೆಯಿಂದ ಬಂದ ನಿಮ್ಮ ವೈಯಕ್ತಿಕ ಗುರುತು, ಬುಡಕಟ್ಟು ಹಿನ್ನೆಲೆಯಿಂದ ಬಂದ ಮಹಿಳೆಯಾಗಿ, ನಿಮ್ಮ ಪ್ರಯಾಣವನ್ನು ಹೇಗೆ ರೂಪಿಸಿದೆ? ಅಲ್ಲದೆ, ನೀವು ನಾರಿ ಪುರಸ್ಕಾರ ಪ್ರಶಸ್ತಿ ಮತ್ತು ಈಗ ರಾಮೋಜಿ ಶ್ರೇಷ್ಠತಾ ಪ್ರಶಸ್ತಿಯಂತಹ ಅನೇಕ ಗೌರವಗಳಿಗೆ ಭಾಜನರಾಗಿರುವಿರಿ. ಅವುಗಳೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಏನು ಹೇಳುವಿರಿ?
ಪ್ರೊ.ಸತುಪತಿ ಪ್ರಸನ್ನ ಶ್ರೀ: ನನ್ನ ಹಿನ್ನೆಲೆಯಿಂದಾಗಿ, ನನ್ನ ಪೂರ್ವಜರೆಲ್ಲರೂ ಸಂಪ್ರದಾಯವಾದಿಗಳಾಗಿದ್ದರು. ಆದರೆ ನನ್ನ ತಂದೆ ತುಂಬಾ ಉದಾರವಾದಿಯಾಗಿದ್ದರು. ಹುಡುಗಿಯರು ಶಿಕ್ಷಣ ಪಡೆಯಬೇಕೆಂದು ಅವರು ಅಂದುಕೊಂಡಿದ್ದರು. ಒಬ್ಬ ಮಹಿಳೆ ತನ್ನದೇ ಆದ ಬೇರುಗಳನ್ನು ಹುಡುಕುತ್ತಾ ಬುಡಕಟ್ಟು ಪ್ರದೇಶಗಳಿಗೆ ಹೋದಾಗ ಮತ್ತು ಅವಳು ಸಂಪೂರ್ಣ ಹೊಸದಾದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಮುಂದಾದಾಗ, ಅದನ್ನು ಯಾರೂ ಸುಲಭವಾಗಿ ಸ್ವೀಕರಿಸುವುದಿಲ್ಲ. ಈ ರೀತಿಯ ಜಾಗವನ್ನು ಪ್ರವೇಶಿಸುವ ಮಹಿಳೆಯು ಪುರುಷರಿಗೆ ಇಷ್ಟವಾಗಲಿಲ್ಲ, ಪಿತೃಪ್ರಭುತ್ವ ಮೊದಲಿನಿಂದಲೂ ಇತ್ತು ಮತ್ತು ಅವರು ಈ ಇಡೀ ವಿದ್ಯಮಾನವನ್ನು ನಿಷಿದ್ಧವೆಂದು ಪರಿಗಣಿಸಿದ್ದರು. ಸಾಮಾಜಿಕವಾಗಿ, ನನ್ನ ಗುರುತಿನ ಕಾರಣದಿಂದಾಗಿ ಅನೇಕ ಜನರು ನನ್ನನ್ನು ಬಹಿಷ್ಕರಿಸಿದ್ದಾರೆ. ಆದರೆ ನಾನು ಅದರ ಬಗ್ಗೆ ಎಂದಿಗೂ ಚಿಂತಿಸಲಿಲ್ಲ. ನಾನು ಏನು ಮಾಡಬೇಕೆಂದು ಬಯಸಿದ್ದೆನೋ ಅದನ್ನು ಮಾಡಿದ್ದೇನೆ. ಅದನ್ನು ಪ್ರಾಮಾಣಿಕವಾಗಿ ಮಾಡಿದರೆ, ಜಗತ್ತು ಕೂಡ ಮೆಚ್ಚಿಕೊಳ್ಳುತ್ತದೆ ಎಂದು ನನಗೆ ಅನಿಸಿತು. ದೇವರು ಮತ್ತು ಸ್ವರ್ಗವೂ ಕೂಡ ಇದನ್ನೇ ಬಯಸಿದ್ದವು, ನಾನು ಕೇವಲ ಅದನ್ನು ಮಾಡಿದ್ದೇನಷ್ಟೇ.
ಇವುಗಳನ್ನೂ ಓದಿ: ರಾಮೋಜಿ ರಾವ್ ಶ್ರೇಷ್ಠತಾ ಪ್ರಶಸ್ತಿಗೆ ಭಾಜನರಾದ ಸಾಧಕರು: ಈ ಏಳು ಪುರಸ್ಕೃತರ ಸಾಧನೆಯ ಹಾದಿ ಇಲ್ಲಿದೆ
ರಾಮೋಜಿ ರಾವ್ 89ನೇ ಜನ್ಮ ವಾರ್ಷಿಕೋತ್ಸವ: ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಪ್ರದಾನ - 7 ಸಾಧಕರಿಗೆ ಗೌರವ

