ವರ್ಷಕ್ಕೆ 8 ಬಾರಿ ಫಸಲು! ₹6-8 ಲಕ್ಷ ಆದಾಯ: ಔಷಧೀಯ ಗುಣಗಳ ಕಣಜ 'ನೋನಿ' ಹಣ್ಣಿನ ಕೃಷಿಯತ್ತ ರೈತರ ಚಿತ್ತ
ವರ್ಷಕ್ಕೆ ಎಂಟು ಬಾರಿ ಫಲ ನೀಡುವ ಹಾಗೂ ಹಲವು ಔಷಧೀಯ ಗುಣಗಳನ್ನು ಹೊಂದಿರುವ ನೋನಿ ಕೃಷಿಯತ್ತ ಒಡಿಶಾ ರೈತರು ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಣ್ಣಿನ ಬಗ್ಗೆ ನಿಮಗೆ ಗೊತ್ತೇ?

Published : December 31, 2025 at 1:15 PM IST
|Updated : December 31, 2025 at 1:49 PM IST
ಬಾಲಸೋರ್(ಒಡಿಶಾ): ಹೇರಳ ಔಷಧೀಯ ಗುಣಗಳ 'ನೋನಿ' ಎಂಬ ಹಣ್ಣನ್ನು ಬ್ಯಾಲಸೋರ್ ಜಿಲ್ಲೆಯ ರೆಮುನಾ ಪ್ರದೇಶದಲ್ಲಿ ಇದೇ ಮೊದಲ ಬಾರಿ ಬೆಳೆಯುವ ಮೂಲಕ ನಾಲ್ವರು ರೈತರು ಗಮನ ಸೆಳೆದಿದ್ದಾರೆ.
153 ರೋಗಗಳ ನಿವಾರಣೆ: 'ನೋನಿ' ಹಣ್ಣಿನ ರಸ ಸೇವನೆಯಿಂದ 153 ರೀತಿಯ ರೋಗಗಳಿಂದ ಪರಿಹಾರ ಸಿಗುತ್ತದೆ. ಈ ಹಣ್ಣನ್ನು ತಿನ್ನಬಹುದು, ಒಣಗಿಸಿ ಪುಡಿಮಾಡಿ ಚಹಾದಂತೆಯೂ ಕುಡಿಯಬಹುದು. ಇದರ ಬೀಜಗಳನ್ನು ಕಾಫಿ ರೂಪದಲ್ಲೂ ಸೇವಿಸಬಹುದು ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ.
ನೋನಿ ರಸ ಮಾರಾಟ ಮಾಡುವ ಮೂಲಕವೂ ಉತ್ತಮ ಆದಾಯ ಗಳಿಸಬಹುದು. ವರ್ಷಕ್ಕೆ ಆರು ಬಾರಿ ಹಣ್ಣುಗಳನ್ನು ಆರಿಸಿಕೊಂಡು ಬರುತ್ತೇವೆ. ಮನೆಯಲ್ಲೇ ಅದರ ರಸ ತಯಾರಿಸುತ್ತೇವೆ. ತಯಾರಿಸಿದ ರಸ ಕುಡಿಯಲು ಸೂಕ್ತವಾಗಿದೆಯೇ ಎಂಬುದನ್ನು ತಿಳಿಯಲು ಸ್ವತಃ ಸೇವಿಸಿಯೇ ಇತರರಿಗೆ ಮಾರಾಟ ಮಾಡುತ್ತೇವೆ. ಒಂದು ಮರ ವರ್ಷದಲ್ಲಿ ಎಂಟು ಬಾರಿ ಫಲ ನೀಡುತ್ತದೆ ಎನ್ನುತ್ತಾರೆ ರೈತರು.
ಮೊದಲ ಬಾರಿಗೆ ನೋನಿ ನೆಟ್ಟು ಕೃಷಿ ಮಾಡಿರುವ ರೆಮುನಾ ಕಾರಂಜಿಯಾ ಪ್ರದೇಶದ ಸುಬೋಧ್ ಚಂದ್ರ ಪಾಂಡಾ ಮಾತನಾಡಿ, "ಇಲ್ಲಿನ ಓರ್ವ ರೈತ ಆಕಸ್ಮಿಕ ಎಂಬಂತೆ ನೋನಿ ಮರ ನೆಟ್ಟಿದ್ದರು. ಆ ಹಣ್ಣಿನ ಬಗ್ಗೆ ಗೊತ್ತಿರದ ಅವರು ಕೆಲವು ದಿನಗಳ ಬಳಿಕ ಕತ್ತರಿಸಿದರು. ಕತ್ತರಿಸಿದ ಮರ ಮತ್ತೆ ಬೆಳೆದು ಫಲ ನೀಡಿದಾಗ, ಅದನ್ನು ನನಗೆ ತೋರಿಸಲು ಬಂದರು. ನಾನು ಈ ಹಣ್ಣಿನ ಬಗ್ಗೆ ಅವರಿಗೆ ತಿಳಿಸಿದೆ. ಅಲ್ಲಿಂದ ಬರುವಾಗ ಕೆಲವು ಹಣ್ಣುಗಳನ್ನೂ ತಂದಿದ್ದೆ. ಆ ಹಣ್ಣಿನಿಂದ ರಸ ತಯಾರಿಸಿ ಬೀಜಗಳನ್ನು ತೆಗೆದು ಮೊದಲು ಅವುಗಳನ್ನು ಒಂದು ತೊಟ್ಟಿಯಲ್ಲಿ ನೆಟ್ಟೆ. ಕ್ರಮೇಣ 100ಕ್ಕೂ ಹೆಚ್ಚು ಮರಗಳನ್ನು ಬೆಳೆದೆ. ಸ್ಥಳೀಯ ರೈತರು, ನಿರ್ದೇಶಕರನ್ನು ಕರೆದು ಈ ಬಗ್ಗೆ ಹೇಳಿದೆ. ಅವರಲ್ಲಿ 5-6 ಜನರು ಆಸಕ್ತಿಯಿಂದ ತೆಗೆದುಕೊಂಡು ತಮ್ಮ ತಮ್ಮ ಗದ್ದೆಗಳಲ್ಲಿ ನೆಟ್ಟರು. 2022ರಿಂದ ನಾಟಿ ಪ್ರಾರಂಭವಾಯಿತು" ಎಂದರು.

"ಈ ಮರ ನೆಟ್ಟ 9 ತಿಂಗಳ ನಂತರ ಫಲ ನೀಡುತ್ತದೆ. ಒಂದು ಮರ ವರ್ಷದಲ್ಲಿ ಎಂಟು ತಿಂಗಳವರೆಗೆ ಫಲ ನೀಡಬಲ್ಲದು. ಒಂದು ಮರದಿಂದ ವರ್ಷದಲ್ಲಿ ಐದರಿಂದ ಆರು ಬಾರಿ ಹಣ್ಣುಗಳನ್ನು ಕೀಳಬಹುದು. ಒಂದು ಮರದಿಂದ 50 ಕೆ.ಜಿ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿಗೆ 40 ರೂ. ಬೆಲೆ ಇದೆ. ಇದನ್ನು ಖರೀದಿಸುವ ಕಂಪನಿಯೊಂದಿಗೆ ನಾವು ಒಪ್ಪಂದಕ್ಕೂ ಕೂಡ ಸಹಿ ಹಾಕಿದ್ದೇವೆ. ಲಂಡನ್‌ನ ಒಂದು ಕಂಪನಿ ನಮ್ಮ ವೆಬ್‌ಸೈಟ್ ಮೂಲಕ ನೋನಿ ಕೃಷಿ ಬಗ್ಗೆ ತಿಳಿದುಕೊಂಡಿದ್ದು, ಮುಂದಿನ ಮಾರ್ಚ್‌ನಲ್ಲಿ ನಮ್ಮಿಂದ ಈ ಹಣ್ಣುಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೇವಲ ಒಂದು ಎಕರೆ ಭೂಮಿಯಲ್ಲಿ ನೋನಿ ಬೆಳೆದರೆ ಸಾಕು, ಒಬ್ಬ ರೈತ ವಾರ್ಷಿಕವಾಗಿ 6-8 ಲಕ್ಷ ರೂಪಾಯಿ ಗಳಿಸಬಹುದು" ಎಂದು ಮಾಹಿತಿ ನೀಡಿದರು.

ಔಷಧ ಕಂಪನಿಗಳಿಗೆ ಹಣ್ಣು ರಫ್ತು: ರೆಮುನಾ ಹಟಿಯಾಗೊಂಡ್ ಪ್ರದೇಶದ ಪ್ರಸಿದ್ಧ ರೈತ ಮತ್ತು ಉದ್ಯಮಿ ಜ್ಯೋತಿ ಪ್ರಕಾಶ್ ಬೆಹೆರಾ ಪ್ರತಿಕ್ರಿಯಿಸಿ, "ನಾನು ಈ ಬಗ್ಗೆ ಸಂಶೋಧನೆ ಮಾಡಿದ್ದೇನೆ. ಈಗ ನೆಟ್ಟಿದ್ದೇನೆ. ರೆಮುನಾ ಬ್ಲಾಕ್‌ನಲ್ಲಿ ಸುಮಾರು 100 ಮರಗಳನ್ನು ನೆಡಲಾಗಿದೆ. ಇದಲ್ಲದೆ, ನಾವು ಈಸ್ಟ್ ಬಾಲಸೋರ್ ಫಾರ್ ಏಜ್ ಫಾರ್ ಫಾರ್ಮ್ ಪ್ರೊಡ್ಯೂಸರ್ ಸೊಸೈಟಿ ಎಂಬ ಹೆಸರಿನ APO ರಚಿಸಿದ್ದೇವೆ. ನಮ್ಮ ಮುಖ್ಯ ಉದ್ದೇಶ, ಆ ಮರಗಳನ್ನು ದೊಡ್ಡ ಪ್ರಮಾಣದಲ್ಲಿ ನೆಡುವುದು ಮತ್ತು ಎಲ್ಲ ಔಷಧ ಕಂಪನಿಗಳಿಗೆ ಹಣ್ಣುಗಳನ್ನು ರಫ್ತು ಮಾಡುವುದು"ಎಂದು ಹೇಳಿದರು.

ರುಪ್ಸಾ ವೈದ್ಯಕೀಯ ಕಾಲೇಜಿನ ಆಯುಷ್ ವೈದ್ಯಾಧಿಕಾರಿ ಡಾ.ಸುಭಾಶಿಶ್ ಮೊಹಂತಿ ಮಾತನಾಡಿ, "ನೋನಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದಿಂದ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಪ್ರಾಥಮಿಕ ಹಂತದಲ್ಲಿ, ನೋನಿ ರಸ ದೇಹದ ಎಲ್ಲ ಅಂಗಗಳು ಮತ್ತು ವ್ಯವಸ್ಥೆಗಳ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ, ನೋನಿ ರಸ ಕುಡಿಯುವುದರಿಂದ ಆಮ್ಲೀಯತೆ, ಪಿತ್ತಗಲ್ಲು ಕಾಯಿಲೆ, ಕ್ಯಾನ್ಸರ್ ಮತ್ತು ಆಯಾಸ ನಿವಾರಣೆಯಾಗುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: 18 ಗುಂಟೆ ಜಮೀನಿನಲ್ಲಿ 28 ಬೆಳೆಗಳು; ಖರ್ಚಿಲ್ಲದೆ ಸಾವಯವ ಕೃಷಿಯಲ್ಲಿ ಯಶಸ್ವಿಯಾದ ರೈತ!

