ETV Bharat / bharat

ಎರಡೂ ಕೈಗಳಿಲ್ಲ! ರೋಟಿ ಬ್ಯಾಂಕ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಹೃದಯವಂತ

ಹುಟ್ಟಿನಿಂದ ಎರಡೂ ಕೈಗಳನ್ನು ಕಳೆದುಕೊಂಡಿರುವ ಪಶ್ಚಿಮ ಬಂಗಾಳದ ಸುಲಭ್ ಬುಧಿಯಾ ಎಂಬಾತ ಹಸಿದವರ ಹೊಟ್ಟೆ ತುಂಬಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

No Arms, So What? Purulia Man Does What Most Cannot Think Of - Fights Food Wastage, Feeds The Hungry
ರೋಟಿ ಬ್ಯಾಂಕ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಸುಲಭ್ ಬುಧಿಯಾ (ETV Bharat)
author img

By ETV Bharat Karnataka Team

Published : August 28, 2026 at 10:58 PM IST

3 Min Read
Choose ETV Bharat

ಪುರುಲಿಯಾ(ಪಶ್ಚಿಮ ಬಂಗಾಳ): 'ಹಸಿದವರಿಗೆ ಅನ್ನ ನೀಡುವುದು ಮಾನವೀಯತೆಯ ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ಕೆಲಸ' ಎಂಬ ಮಾತು ಜನಜನಿತ. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಸುಲಭ್ ಬುಧಿಯಾ ಎಂಬ ಸಾಮಾಜಿಕ ಕಾರ್ಯಕರ್ತ ಈ ಮಾತನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಇವರಿಗೆ ಹುಟ್ಟಿನಿಂದಲೂ ಎರಡೂ ಕೈಗಳಿಲ್ಲ. ಆದರೂ, ದೈಹಿಕ ಸವಾಲುಗಳನ್ನು ಬದಿಗಿಟ್ಟು, ನಿರ್ಗತಿಕ ಹಾಗೂ ಹಸಿದವರ ಹೊಟ್ಟೆ ತುಂಬಿಸುವ ಮಹತ್ತರವಾದ ಕೆಲಸವನ್ನು ಸುಲಭ್ ಬುಧಿಯಾ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ಸಮಾಜ ಸೇವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

No Arms, So What? Purulia Man Does What Most Cannot Think Of - Fights Food Wastage, Feeds The Hungry
ರೋಟಿ ಬ್ಯಾಂಕ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಸುಲಭ್ ಬುಧಿಯಾ (ETV Bharat)

ಸಮಾಜ ಸೇವೆಗೆ ಬರಲು ಕಾರಣ: ಹಸಿದ ಹೊಟ್ಟೆಯನ್ನು ತುಂಬಿಸುವ ಈ ಸೇವಾ ಕಾರ್ಯಕ್ಕೆ ಬರಲು ಮುಖ್ಯ ಕಾರಣ ಏನು?. ಇದರಿಂದ ತಮಗಾಗುವ ಖುಷಿ ಎಂತಹದ್ದು? ಹಸಿದವರ ಹೊಟ್ಟೆ ತುಂಬಿಸಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಲಾಗುತ್ತದೆ ಎಂಬ ಪ್ರಶ್ನೆಗೆ ಸುಲಭ್ ಬುಧಿಯಾ ಇಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಎಲ್ಲರ ಜೀವನದಲ್ಲಿ ಒಂದು ದಿನ ತಿರುವು ಪಡೆದುಕೊಳ್ಳುತ್ತದೆ. ಅದು ನನ್ನ ಜೀವನದಲ್ಲೂ ಬಂದಿತು' ಎನ್ನುವ ಮೂಲಕ ತಾವು ಈ ಸೇವೆಗೆ ಧುಮುಕಲು ಮುಖ್ಯ ಕಾರಣಗಳೇನು ಎನ್ನುವುದನ್ನು ಇಲ್ಲಿ ಹೇಳಿಕೊಂಡಿದ್ದಾರೆ.

''ವರ್ಷಗಳ ಹಿಂದೆ, ಪುರುಲಿಯಾ ಪಟ್ಟಣದ ಮೂಲಕ ಹಾದುಹೋಗುವಾಗ, ಕೆಲವು ಮಕ್ಕಳು ತಮಗೆ ತಿನ್ನಲು ಏನಾದರೂ ಸಿಗುತ್ತದೆಯೋ ಅಂತ ಕಸದ ಬುಟ್ಟಿಯನ್ನು ಹುಡುಕುತ್ತಿದ್ದರು. ಸಿಕ್ಕ ಸಿಕ್ಕ ಕಸದ ಬುಟ್ಟಿಯನ್ನು ತೆರೆದು ನೋಡಿ ತಿನ್ನಲು ಸಿಕ್ಕರೆ ಖುಷಿ ಪಡುತ್ತಿದ್ದರು. ಸಿಗದಿದ್ದರೆ ನಿರಾಸೆಗೊಳ್ಳುತ್ತಿದ್ದರು. ಈ ಮನಕಲಕುವ ದೃಶ್ಯ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅಂದೇ ಬೀದಿಗಳಲ್ಲಿ ಹಸಿದವರಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಮದುವೆ ಮತ್ತು ಇತರೆ ಸಭೆ-ಸಮಾರಂಭಗಳಲ್ಲಿ ತಿಂದುಂಡು ಉಳಿಯುವ ಆಹಾರವನ್ನು ಸಂಗ್ರಹಿಸಲು 'ರೋಟಿ ಬ್ಯಾಂಕ್' ಅನ್ನು ತೆರೆದೆ. ಈ ಮೂಲಕ ಉಳಿದ ಆಹಾರವನ್ನು ಸಂಗ್ರಹಿಸಿ ಅಗತ್ಯವಿರುವ ಜನರಿಗೆ ನೀಡುವ ಪುಟ್ಟದೊಂದು ಸೇವೆ ಆರಂಭಿಸಿದೆ. ಕಳೆದ ಎಂಟು ವರ್ಷಗಳಿಂದ ರೋಟಿ ಬ್ಯಾಂಕ್ ಮೂಲಕ ಈ ಆಹಾರ ವಿತರಣಾ ಸೇವಾ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ'' ಎಂದು ಸುಲಭ್ ಬುಧಿಯಾ ತಮ್ಮ ಈ ಪ್ರಯಾಣದ ಕುರಿತು ಹೇಳಿಕೊಂಡಿದ್ದಾರೆ.

No Arms, So What? Purulia Man Does What Most Cannot Think Of - Fights Food Wastage, Feeds The Hungry
ರೋಟಿ ಬ್ಯಾಂಕ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಸುಲಭ್ ಬುಧಿಯಾ (ETV Bharat)

''ಪುರುಲಿಯಾ ನಿವಾಸಿಯಾದ ನಾನು ಹುಟ್ಟಿನಿಂದಲೇ ನನ್ನ ಎರಡೂ ಕೈಗಳ ಅರ್ಧ ಭಾಗ ಕಳೆದುಕೊಂಡಿರುವೆ. ಆದರೆ, ಕೈಗಳಿಲ್ಲ ಎಂಬ ಸಮಸ್ಯೆ ನನಗೆ ಯಾವತ್ತೂ ಅನ್ನಿಸಿಲ್ಲ. ಕಷ್ಟದ ಜೀವನದಲ್ಲೂ ಕಷ್ಟಪಟ್ಟು ವಾಣಿಜ್ಯ ವಿಭಾಗದಲ್ಲಿ ಪದವಿ ಮಾಡಿದೆ. ಮನೆಯಲ್ಲಿ ನನ್ನ ತಾಯಿ, ಹೆಂಡತಿ, ಸಹೋದರಿ, ಸಹೋದರ ಮತ್ತು ಸಹೋದರನ ಹೆಂಡತಿ ಇದ್ದು, ಎಲ್ಲರೂ ನನ್ನ ಈ ಕೆಲಸಕ್ಕೆ ಬೆನ್ನೆಲುಬಾಗಿದ್ದಾರೆ. ನಮ್ಮದು ದುಡಿದು ತಿನ್ನುವ ಕುಟುಂಬ. ವಿದ್ಯುತ್ ಸರಕುಗಳ ಅಂಗಡಿಯಿಂದ ಬರುವ ಆದಾಯದಿಂದ ನಮ್ಮ ಕುಟುಂಬ ನಡೆಯುತ್ತಿದೆ. ಹೀಗೆ ಒಂದು ದಿನ ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ತರಲೆಂದು ಹೋಗಿ ಬರುವಾಗ ಬೀದಿಗಳಲ್ಲಿ ಪುಟ್ಟ ಪುಟ್ಟ ಮಕ್ಕಳು ಕಸದ ಬುಟ್ಟಿಗಳಿಂದ ಆಹಾರವನ್ನು ಆರಿಸಿ ತಿನ್ನುವುದನ್ನು ನೋಡಿದೆ. ಆ ದೃಶ್ಯ ನನ್ನನ್ನು ಚಲಿಸುವಂತೆ ಮಾಡಿತು. ಆಗಲೇ ಇಂತಹದ್ದೊಂದು ಆಲೋಚನೆ ಬಂದಿತು'' ಎಂದು ಸುಲಭ್ ಹೇಳಿಕೊಂಡರು.

ರೋಟಿ ಬ್ಯಾಂಕ್ ಮೂಲಕ ಸೇವೆ: ''ಮದುವೆ, ಹಬ್ಬ ಅಥವಾ ಸಭೆ-ಸಮಾರಂಭ ನಡೆದಾಗಲೆಲ್ಲಾ, ಆಯೋಜಕರನ್ನು ಸಂಪರ್ಕಿಸಿ ಹೆಚ್ಚಾದ ಆಹಾರವನ್ನು ಎಸೆಯದಂತೆ ಮನವಿ ಮಾಡುತ್ತೇನೆ. ಅದು ಬಳಕೆಗೆ ಯೋಗ್ಯವಾಗಿದ್ದರೆ, ಅದನ್ನು ಸಂಗ್ರಹಿಸಿಕೊಂಡು ಬಂದು ಅಗತ್ಯವಿರುವ ಜನರಿಗೆ ವಿತರಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ರೋಟಿ ಬ್ಯಾಂಕ್ ಎಂಬ ಗ್ರೂಪ್​ ರಚಿಸಿರುವೆ. ಲಭ್ಯವಿರುವ ಬೇಯಿಸಿದ ಆಹಾರದ ಬಗ್ಗೆ ಅಥವಾ ಅಕ್ಕಿ, ಬೇಳೆಕಾಳುಗಳು ಮತ್ತು ಇತರ ಸರಬರಾಜುಗಳನ್ನು ನೀಡಲು ಜನರು ಈ ಗುಂಪನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಸಂಗ್ರಹಿಸಿದ ಆಹಾರವನ್ನು ಸ್ಥಳೀಯ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಪ್ರಮುಖ ಬೀದಿಗಳಲ್ಲಿ ಓಡಾಡುವ ಜನರಿಗೆ ಹಂಚಲಾಗುತ್ತದೆ'' ಎನ್ನುತ್ತಾರೆ ಸುಲಭ್.

No Arms, So What? Purulia Man Does What Most Cannot Think Of - Fights Food Wastage, Feeds The Hungry
ರೋಟಿ ಬ್ಯಾಂಕ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಸುಲಭ್ ಬುಧಿಯಾ (ETV Bharat)

"ನೀವು ತಿನ್ನಬಹುದಾದಷ್ಟು ಆಹಾರವನ್ನು ಮಾತ್ರ ಮಾಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ನಿಮ್ಮ ತಟ್ಟೆಯಲ್ಲಿ ಇಡಬೇಡಿ. ನೀವು ವ್ಯರ್ಥ ಮಾಡುವುದ ಅನ್ನ ಹಸಿದಿರುವ ಯಾರಿಗಾದರೂ ನಗು ತರಿಸಬಹುದು" ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಸುಲಭ್.

ನನ್ನ ಪತಿ ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಸಾಧ್ಯವಾದಾಗಲೆಲ್ಲಾ ಅಡುಗೆಯಲ್ಲಿ ಸಹಾಯ ಮಾಡುತ್ತೇನೆ. ಅವರು ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ನನ್ನ ಆಸೆ. ಮಿತಾಲಿ ಮುರ್ಮು, ಸುಲಭ್ ಪತ್ನಿ

ಇದನ್ನೂ ಓದಿ: ನಿತ್ಯವೂ ಆಹಾರ ನೀಡಿ ಪ್ರಾಣಿ - ಪಕ್ಷಿಗಳ ಹಸಿವು ನೀಗಿಸುತ್ತಿರುವ ವ್ಯಾಪಾರಿ: ಗಂಗಾವತಿಯಲ್ಲಿ 18 ವರ್ಷಗಳಿಂದ ಸದ್ದಿಲ್ಲದೇ ಸಾಗಿದೆ ಕಾರ್ಯ