ETV Bharat / bharat

ಅಮೆರಿಕದಲ್ಲಿ ಮಾಜಿ ಗೆಳೆಯನಿಂದ ಹೈದರಾಬಾದ್ ಮೂಲದ ಯುವತಿ ಹತ್ಯೆ: ತಮಿಳುನಾಡಿನಲ್ಲಿ ಆರೋಪಿ ಸೆರೆ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆಯಾಗಿದ್ದಾಳೆ. ಆರೋಪಿಯನ್ನು ಆಕೆಯ ಮಾಜಿ ಗೆಳೆಯ, ಭಾರತದ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.

INDIAN WOMAN MURDER IN US
ನಿಕಿತಾ ಗೋಡಿಶಾಲಾ (Special Arrangement)
author img

By ETV Bharat Karnataka Team

Published : January 5, 2026 at 4:10 PM IST

2 Min Read
Choose ETV Bharat

ನ್ಯೂಯಾರ್ಕ್​/ ಹೈದರಾಬಾದ್​: ಅಮೆರಿಕದಲ್ಲಿ ತೆಲಂಗಾಣ ಮೂಲದ ಯುವತಿಯನ್ನು ಆಕೆಯ ಮಾಜಿ ಗೆಳೆಯ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಭಾರತಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಇಂಟರ್​​ಪೋಲ್​ ಪೊಲೀಸರು ತಮಿಳುನಾಡಿನಲ್ಲಿ ಇಂದು (ಸೋಮವಾರ) ಬಂಧಿಸಿದ್ದಾರೆ.

ಹೈದರಾಬಾದ್‌ನ 27 ವರ್ಷದ ನಿಕಿತಾ ಗೋಡಿಶಾಲಾ ಹತ್ಯೆಯಾದ ಯುವತಿ. ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೊಸ ವರ್ಷದ ಹಿಂದಿನ ದಿನ (ಡಿಸೆಂಬರ್​ 31) ಕಾಣೆಯಾಗಿದ್ದಳು. ಬಳಿಕ ಆಕೆಯ ಶವವನ್ನು ಜನವರಿ 3 ರಂದು ಪೊಲೀಸರು ಪತ್ತೆ ಮಾಡಿದ್ದಾರೆ. ನಿಕಿತಾಳನ್ನು ಆಕೆಯ ಮಾಜಿ ಗೆಳೆಯ 26 ವರ್ಷದ ಅರ್ಜುನ್ ಶರ್ಮಾ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಾಪತ್ತೆ ದೂರು ನೀಡಿ, ಭಾರತಕ್ಕೆ ಆರೋಪಿ ಪರಾರಿ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನಿಕಿತಾ ಅವರನ್ನು ಅರ್ಜುನ್​ ಹತ್ಯೆ ಮಾಡಿದ ಬಳಿಕ, ಕಾಣೆಯಾಗಿದ್ದಾಳೆ ಎಂದು ಜನವರಿ 2 ರಂದು ಆತನೇ ಪೊಲೀಸರಿಗೆ ದೂರು ನೀಡಿದ್ದಾನೆ. ಡಿಸೆಂಬರ್ 31 ರಂದು ಎಲ್ಲಿಕಾಟ್ ಸಿಟಿಯಲ್ಲಿ ಕೊನೆಯ ಬಾರಿಗೆ ಆಕೆಯನ್ನು ನೋಡಿದ್ದಾಗಿ ಆತ ದೂರಿನಲ್ಲಿ ತಿಳಿಸಿದ್ದಾನೆ. ದೂರು ದಾಖಲಿಸಿದ ಅದೇ ದಿನ ಅರ್ಜುನ್ ಭಾರತಕ್ಕೆ ಪರಾರಿಯಾಗಿದ್ದಾನೆ.

ಇದೇ ಅನುಮಾನದ ಮೇಲೆ ಅರ್ಜುನ್​ ಉಳಿದಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿದಾಗ ನಿಕಿತಾಳ ಶವ ಪತ್ತೆಯಾಗಿದೆ. ಆಕೆಯ ದೇಹದ ಮೇಲೆ ಇರಿತದ ಗಾಯಗಳಿವೆ. ಡಿಸೆಂಬರ್ 31 ರಂದು ಅರ್ಜುನ್ ಆಕೆಯನ್ನು ಕೊಲೆ ಮಾಡಿರಬಹುದು. ಆದಾಗ್ಯೂ, ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಆರೋಪಿ ಬಂಧನ: ಭಾರತಕ್ಕೆ ಪರಾರಿಯಾದ ಆರೋಪಿ ಅರ್ಜುನ್‌ ಪತ್ತೆಗೆ ಪೊಲೀಸರು ಇಂಟರ್​ಪೋಲ್​ ಅಧಿಕಾರಿಗಳ ನೆರವು ಕೋರಿದ್ದರು. ಅದರಂತೆ, ಪ್ರಯಾಣ ಮಾಹಿತಿ ಬೆನ್ನಟ್ಟಿದಾಗ, ಆತ ತಮಿಳುನಾಡಿಗೆ ತೆರಳಿರುವುದು ಗೊತ್ತಾಗಿದೆ. ಶಂಕಿತ ಆರೋಪಿ ಅರ್ಜುನ್ ಶರ್ಮಾ ಅವರನ್ನು ಇಂಟರ್‌ಪೋಲ್ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಅಮೆರಿಕ ಪೊಲೀಸರು ಈಗಾಗಲೇ ಬಂಧನ ವಾರಂಟ್ ಹೊರಡಿಸಿದ್ದಾರೆ.

ಏತನ್ಮಧ್ಯೆ, ನಿಕಿತಾ ಅವರ ಪೋಷಕರು ಮತ್ತು ಸಂಬಂಧಿಕರು ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೈದರಾಬಾದ್‌ನಲ್ಲಿರುವ ಅವರ ಮನೆಯಲ್ಲಿ ದುಃಖದ ವಾತಾವರಣ ಆವರಿಸಿದೆ. ನಿಕಿತಾ ಅವರ ಮೃತದೇಹವನ್ನು ಹೈದರಾಬಾದ್‌ಗೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ಕಚೇರಿ ಹೇಳಿದೆ.

ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಿದ್ದ ನಿಕಿತಾ: ನಿಖಿತಾ ಮೇರಿಲ್ಯಾಂಡ್‌ನ ವೇದಾ ಹೆಲ್ತ್‌ನಲ್ಲಿ ಡೇಟಾ ಮತ್ತು ಸ್ಟ್ರಾಟಜಿ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಅವರು ಕಂಪನಿ ಸೇರಿದ್ದರು. ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಅವರು 'ಆಲ್-ಇನ್ ಪ್ರಶಸ್ತಿ' ಪಡೆದಿದ್ದರು. ನಿಖಿತಾ ಜೆಎನ್‌ಟಿಯುನಲ್ಲಿ ಫಾರ್ಮಸಿ ಅಧ್ಯಯನ ಮಾಡಿದ್ದು, ಭಾರತದ ಪ್ರಮುಖ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಅವರ ಲಿಂಕ್ಡ್‌ಇನ್ ಖಾತೆಯಿಂದ ತಿಳಿದುಬಂದಿದೆ. ನಂತರ, ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ಅಮೆರಿಕಕ್ಕೆ ಹೋಗಿದ್ದರು.

ಇವುಗಳನ್ನೂ ಓದಿ: