ನೇಪಾಳ ಪ್ರವಾಹ: ಸಾವಿನ ಸಂಖ್ಯೆ 903ಕ್ಕೆ ಏರಿಕೆ: 4,247 ಜನರು ನಾಪತ್ತೆ, 140 ಭಾರತೀಯರ ಸ್ಥಳಾಂತರ
ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಅನೇಕ ಭಾರತೀಯರ ಸುಳಿವು ಸಿಗುತ್ತಿಲ್ಲ. ಕನಿಷ್ಠ 149 ರಿಂದ 180 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.


By ANI
Published : August 31, 2026 at 10:41 AM IST
|Updated : August 31, 2026 at 2:58 PM IST
ಕಠ್ಮಂಡು, ನೇಪಾಳ: ನೇಪಾಳದಲ್ಲಿ ಭೀಕರ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 903ಕ್ಕೆ ಏರಿದೆ, 4,247 ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರನ್ನು ಇನ್ನೂ ಹುಡುಕುತ್ತಲೇ ಇವೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಚಿತ್ವಾನ್‌ನಲ್ಲಿ ಅತಿ ಹೆಚ್ಚು ಅಂದರೆ 272 ಸಾವುಗಳು ಸಂಭವಿಸಿವೆ. ಇದರಲ್ಲಿ ಮಾನವ ಅವಶೇಷಗಳು ಪತ್ತೆಯಾಗಿವೆ. ನವಲ್ಪರಾಸಿ (ಪೂರ್ವ) ದಿಂದ 207 ಮೃತದೇಹಗಳು ಸಿಕ್ಕಿವೆ. ನಂತರ ನವಲ್ಪರಾಸಿ (ಪಶ್ಚಿಮ) 151, ನುವಕೋಟ್ 95, ಗೂರ್ಖಾ 62, ಧಾಡಿಂಗ್ 55, ತನಹುನ್ 37 ಮತ್ತು ರಸುವಾ 24 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ.
ನೇಪಾಳದ ಟಿಬೆಟ್ ಗಡಿ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ಈವರಗೆ ಸುಮಾರು 903ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಭದ್ರತಾ ಪಡೆಗಳು 8,700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಈ ಪ್ರವಾಹದಲ್ಲಿ 20,000 ಭದ್ರತಾ ಸಿಬ್ಬಂದಿ ಮತ್ತು 14 ಸೇನಾ ಹೆಲಿಕಾಪ್ಟರ್‌ಗಳನ್ನು ಒಳಗೊಂಡ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಆಗಸ್ಟ್ 26 ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಿಲುಕಿರುವ ಅನೇಕ ಭಾರತೀಯರ ಸುಳಿವು ಸಿಗುತ್ತಿಲ್ಲ. ಕನಿಷ್ಠ 149 ರಿಂದ 180 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 275 ರಿಂದ 320 ಮಂದಿ ನಾಪತ್ತೆಯಾಗಿದ್ದಾರೆ ಅಥವಾ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇವರಲ್ಲಿ ಆಂಧ್ರಪ್ರದೇಶ ಮೂಲದ 14 ಯಾತ್ರಾರ್ಥಿಗಳು ಇದ್ದಾರೆ. ಅವರಲ್ಲಿ 7 ಮಂದಿ ಆಂಧ್ರಪ್ರದೇಶದವರು ಮತ್ತು 7 ಮಂದಿ ಅನಿವಾಸಿ ಭಾರತೀಯರು ಎಂದು ಮಾಹಿತಿ ನೀಡಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಪಾರಾದ 20 ಮಂದಿ ತೆಲುಗು ಯಾತ್ರಾರ್ಥಿಗಳ ಗುಂಪೊಂದು ಟಿಬೆಟ್‌ನಿಂದ ಸುರಕ್ಷಿತವಾಗಿ ಕಠ್ಮಂಡುವನ್ನು ತಲುಪಿದೆ. ಈ ನಡುವೆ ನಾಪತ್ತೆಯಾಗಿರುವ ನೂರಾರು ಮಂದಿಗಾಗಿ ಅಧಿಕಾರಿಗಳು ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. 144 ಯಾತ್ರಾರ್ಥಿಗಳ ಗುಂಪೊಂದು ಟಿಬೆಟ್‌ನ ಸಾಗಾ ಕೌಂಟಿಯಿಂದ ಕೋಡಾರಿ ಚೆಕ್‌ಪಾಯಿಂಟ್ ಮೂಲಕ ಕಠ್ಮಂಡುವನ್ನು ಸುರಕ್ಷಿತವಾಗಿ ತಲುಪಿದೆ.
ಭೋಟೇಕೋಶಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ, ನೇಪಾಳದ ಅಧಿಕಾರಿಗಳು ಭಾನುವಾರ ಮತ್ತೊಮ್ಮೆ ಪ್ರವಾಹ ಉಂಟಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಭೀಕರ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶವೊಂದಕ್ಕೆ ಕಠ್ಮಂಡು ಸಂಪರ್ಕಿಸುವ ಪ್ರಮುಖ ಹೆದ್ದಾರಿಯನ್ನು ತೆರವುಗೊಳಿಸಲು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿದ್ದಂತೆಯೇ, ಭಾನುವಾರ ಮುಂಜಾನೆ ಸಾರ್ವಜನಿಕರ ಮೊಬೈಲ್ ಫೋನ್‌ಗಳಿಗೆ ಪ್ರವಾಹದ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿತ್ತು. ರಾಜ್ಯ ಅಧಿಕಾರಿಗಳು ನೇಪಾಳದ ಸಹವರ್ತಿಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದಾರೆ.
ಸುಮಾರು 20,000 ಭದ್ರತಾ ಸಿಬ್ಬಂದಿ ಮತ್ತು 14 ಸೇನಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಹಾಗೂ ಆರು ವಿಶೇಷ ಶಸ್ತ್ರಚಿಕಿತ್ಸಾ ತಂಡಗಳು ತುರ್ತು ವೈದ್ಯಕೀಯ ನೆರವನ್ನು ಒದಗಿಸುತ್ತಿವೆ.
ತ್ರಿಶೂಲಿ-3ಎ ಜಲವಿದ್ಯುತ್ ಸುರಂಗದಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ, ಭಾರತದ ವಿಶೇಷ ಸುರಂಗ ರಕ್ಷಣಾ ತಂಡ ಮತ್ತು ತಾಂತ್ರಿಕ ತಜ್ಞರು ನೆರವನ್ನು ನೀಡಿದ್ದಾರೆ. ಈ ತಂಡವು ನೇಪಾಳದ ಸೇನೆಯೊಂದಿಗೆ ನಿಕಟ ಸಮನ್ವಯ ಸಾಧಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ನೇಪಾಳದಲ್ಲಿನ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಪ್ರವಾಹದಿಂದಾಗಿ 25 ಮೈಲಿಗೂ ಹೆಚ್ಚು ರಸ್ತೆಗಳು ಮತ್ತು 40 ತೂಗು ಸೇತುವೆಗಳು ನಾಶವಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಭಾರಿ ಮಳೆ, ಭೂಕುಸಿತಗಳು, ಕಣಿವೆಗಳಲ್ಲಿ ಉಂಟಾದ ತಡೆಗಳು ಮತ್ತು ಟಿಬೆಟ್‌ನಲ್ಲಿನ ಅಪಾಯಕಾರಿ ಸ್ಥಿತಿಯಲ್ಲಿರುವ ತಾತ್ಕಾಲಿಕ ಸರೋವರವು ಗಂಭೀರವಾದ ಪರೋಕ್ಷ ಅಪಾಯಗಳನ್ನು ಉಂಟುಮಾಡುತ್ತಲೇ ಇವೆ ಎಂದಿದ್ದಾರೆ.
ಇವುಗಳನ್ನೂ ಓದಿ:
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 675ಕ್ಕೇರಿಕೆ, 2500ಕ್ಕೂ ಹೆಚ್ಚು ಮಂದಿ ನಾಪತ್ತೆ
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 734ಕ್ಕೆ ಏರಿಕೆ; ತಮಿಳುನಾಡಿನ 219 ಜನ ಸುರಕ್ಷಿತ, ನಾಳೆ ತವರಿಗೆ

