ನಕ್ಸಲ್ ಭದ್ರಕೋಟೆ ನಯ ಪಿಡಿಯಾದಲ್ಲಿ 21 ವರ್ಷಗಳ ಬಳಿಕ ತೆರೆದ ಶಾಲೆ; ಸಂಭ್ರಮದಲ್ಲಿ ಮಕ್ಕಳು
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಪಿಡಿಯಾ ಪ್ರದೇಶದಲ್ಲಿರುವ ದಂಡಕಾರಣ್ಯವು ಮಾವೋವಾದಿ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿತ್ತು.


Published : July 4, 2026 at 4:31 PM IST
ಚಾರ್ಲಾ (ಛತ್ತೀಸ್‌ಗಢ): ಎರಡು ವರ್ಷಗಳ ಹಿಂದೆ ಮಾವೋವಾದಿಗಳ ಭದ್ರಕೋಟೆಯಾಗಿತ್ತು. ಇಲ್ಲಿ ಅವರದ್ದೇ ಶಾಲೆ ಮತ್ತು ಆಶ್ರಮಗಳನ್ನು ನಡೆಸಲಾಗುತ್ತಿತ್ತು. ಅಲ್ಲದೇ ತಮ್ಮ ಪಡೆಗಳನ್ನು ಬಲಪಡಿಸಲು ಅವರು ನಿರಂತರವಾಗಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತಿದ್ದರು. ಇದೇ ಕಾರಣಕ್ಕಾಗಿ, ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಪಿಡಿಯಾ ಪ್ರದೇಶದಲ್ಲಿರುವ ದಂಡಕಾರಣ್ಯವು ಮಾವೋವಾದಿ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿತ್ತು. ನಕ್ಸಲ್ ಮಿಷನ್-2026ರ ಯಶಸ್ಸಿನೊಂದಿಗೆ, ಈಗ ಈ ಪ್ರದೇಶದಲ್ಲಿ ಶಾಲಾ ಗಂಟೆಗಳ ಸದ್ದು ಕೇಳಿ ಬರುತ್ತಿದೆ.
ಇಲ್ಲಿನ ಸುತ್ತಮುತ್ತಲಿನ 11 ಹಳ್ಳಿಗಳಲ್ಲಿ 21 ವರ್ಷಗಳ ಬಳಿಕ ಶಾಲೆಗಳು ತೆರೆದಿವೆ. ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಜಿಲ್ಲಾಧಿಕಾರಿ ವಿಶ್ವದೀಪ್ ಮತ್ತು ಡಿಇಒ ರಾಜೇಶ್ ಪಾಂಡೆ ಅವರ ಪ್ರಯತ್ನ ಯಶಸ್ವಿಯಾಗಿದ್ದು, ಪಿಡಿಯಾ, ಪೆಡಪಾಲ್, ಚೋಟೆಗೋಟೋಡಿ, ಕುಮ್, ಮದ್ಪಾಲ್, ಉಂಡ್ರಿ, ಇಡೆನಾರ್, ಡೊಂಡಿತುಯ್ನಾರ್, ಮಿರ್ಗಂಗೋತುಲ್, ಗಂಪುರ ಮತ್ತು ತಮೋಡಿ ಗ್ರಾಮಗಳಲ್ಲಿ 20 ಪ್ರಾಥಮಿಕ ಮತ್ತು 17 ಹಿರಿಯ ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯಲಾಗಿದೆ. ಆಯಾ ಗ್ರಾಮಗಳ 539 ಮಕ್ಕಳು ಅಕ್ಷರಗಳನ್ನು ಕಲಿಯುತ್ತಿದ್ದಾರೆ.
ಪಿಡಿಯಾದಲ್ಲಿನ ಶಾಲೆಗಳಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಾನಕಿ ಕೊರ್ಸಾ ಔಪಚಾರಿಕವಾಗಿ ಉದ್ಘಾಟಿಸಿದರು. ಅವರು ಶಿಕ್ಷಣ ರಾಯಭಾರಿಗಳಿಗೆ ಪೋರ್ಟ್ಫೋಲಿಯೊಗಳು ಮತ್ತು ಬೋಧನಾ ಸಾಮಗ್ರಿಗಳನ್ನು ವಿತರಿಸಿದರು. ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳು ಮತ್ತು ಪುಸ್ತಕಗಳನ್ನು ಹಸ್ತಾಂತರಿಸುವುದರ ಜೊತೆಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.

