ETV Bharat / bharat

ಹಿಜಾಬ್​ ಧರಿಸಿದ್ದಕ್ಕೆ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ನಿರಾಕರಣೆ: ಜಮೈತ್​ ಉಲೇಮಾ ಆರೋಪ

ಗುಜರಾತ್​​ನ ಕೇಂದ್ರವೊಂದರಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗೆ ಹಿಜಾಬ್​ ಧರಿಸಿ ಬಂದಿದ್ದ ಮಹಿಳಾ ಅಭ್ಯರ್ಥಿಯನ್ನು ನಿಂದಿಸಿ, ಪರೀಕ್ಷೆ ಬರೆಯಲು ಬಿಟ್ಟಿಲ್ಲ ಎಂದು ಜಮೈತ್​ ಉಲೇಮಾ ಎ ಹಿಂದ್​ ಆರೋಪಿಸಿದೆ.

HIJAB CONTROVERSY
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಮಾಡಿದ ಜೆಯುಹೆಚ್​ (ETV Bharat)
author img

By ETV Bharat Karnataka Team

Published : December 31, 2025 at 8:58 PM IST

2 Min Read
Choose ETV Bharat

ಭಾವನಗರ (ಗುಜರಾತ್​): ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್​ ವಿವಾದದ ಸರದಿ ಈಗ ಗುಜರಾತ್​​ನದ್ದು. ಇಲ್ಲಿ ಡಿಸೆಂಬರ್​ 24 ರಂದು ನಡೆದ ರೈಲ್ವೆ ನೇಮಕಾತಿ ಪರೀಕ್ಷೆಯ ವೇಳೆ ಹಿಜಾಬ್​ ಧರಿಸಿದ್ದಕ್ಕಾಗಿ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂದು ಜಮೈತ್​ ಉಲೇಮಾ ಎ ಹಿಂದ್​ ಆರೋಪಿಸಿದೆ.

ಈ ಬಗ್ಗೆ ದೂರಿನ ಹೇಳಿಕೆ ಬಿಡುಗಡೆ ಮಾಡಿರುವ ಜೆಯುಹೆಚ್​​, ನೇಮಕಾತಿ ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಯನ್ನು ಅವಮಾನಿಸಲಾಗಿದೆ. ಜೊತೆಗೆ ಹಿಜಾಬ್​ ಧರಿಸಿದ ಕಾರಣ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಪರೀಕ್ಷಾ ಕೇಂದ್ರದ ತಪ್ಪಿತಸ್ಥ ಮೇಲ್ವಿಚಾರಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.

ಜಮೈತ್​ ಉಲೇಮಾ ಆರೋಪವೇನು?: ಗುಜರಾತ್‌ನ ಭಾವನಗರದಲ್ಲಿನ ತಾರಸಾಮಿಯಾದ ಜೆಪಿಎಂ ಸರ್ಕಾರಿ ಶಾಲೆಯಲ್ಲಿ ಡಿಸೆಂಬರ್ 24 ರಂದು ನಡೆದ ರೈಲ್ವೆ ನೇಮಕಾತಿ ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಯೊಬ್ಬರು ಹಿಜಾಬ್​ ಧರಿಸಿದ್ದರು. ಮೇಲ್ವಿಚಾರಕರು ಆಕೆಯ ಗುರುತನ್ನು ಪರಿಶೀಲಿಸಲು ಹಿಜಾಬ್ ತೆಗೆಯುವಂತೆ ಕೇಳಿಕೊಂಡರು. ಅದಕ್ಕೆ ಹುಡುಗಿ ಒಪ್ಪಿಕೊಂಡಳು. ಆದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಉಲ್ಲೇಖಿಸಿ ಮಹಿಳಾ ಮೇಲ್ವಿಚಾರಕರ ಮುಂದೆ ಮಾತ್ರ ತೆಗೆಯುವುದಾಗಿ ಹೇಳಿದಳು.

ಆಕೆಯ ಈ ವಿನಂತಿಯನ್ನು ಮೇಲ್ವಿಚಾರಕರು ನಿರಾಕರಿಸಿದ್ದಾರೆ. ಜೊತೆಗೆ, ಅಲ್ಲಿನ ಸಿಬ್ಬಂದಿ ಮಹಿಳಾ ಅಭ್ಯರ್ಥಿಯ ವಿರುದ್ಧ ನಿಂದನೀಯ ಭಾಷೆ ಬಳಸಿದ್ದಾರೆ. ನಿಮ್ಮಂತಹ ಜನರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ಟೀಕಿಸಿದ್ದಾರೆ. ಕೊನೆಗೆ ಆ ಯುವತಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆದರೂ, ಆಕೆ ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸಲಿಲ್ಲ. ಬದಲಿಗೆ ಸಾಧ್ಯವಾದಷ್ಟು ಮೇಲ್ವಿಚಾರಕರ ಸೂಚನೆಗಳನ್ನು ಪಾಲಿಸಿದಳು" ಎಂದು ಜೆಯುಹೆಚ್​ ಹೇಳಿದೆ.

ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ: ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಭಾಷೆ, ಧರ್ಮ, ಜಾತಿ ಅಥವಾ ಇತರ ಸಾಮಾಜಿಕ-ಧಾರ್ಮಿಕ ಆಧಾರದ ಮೇಲೆ ಯಾವುದೇ ಅಭ್ಯರ್ಥಿಯು ತಾರತಮ್ಯವನ್ನು ಎದುರಿಸಬಾರದು ಎಂದು ಜಮೈತ್​ ಉಲೇಮಾ ಎ ಹಿಂದ್​ ತಿಳಿಸಿದೆ.

ಸುಪ್ರೀಂಕೋರ್ಟ್​ ತಡೆಯಾಜ್ಞೆ: ಈ ಹಿಂದಿನ ಘಟನೆಯೊಂದರಲ್ಲಿ, ಕ್ಯಾಂಪಸ್‌ನಲ್ಲಿ ಹಿಜಾಬ್, ಬುರ್ಖಾ, ಕ್ಯಾಪ್ ಮತ್ತು ನಿಖಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆಯಾಜ್ಞೆ ನೀಡಿದೆ. ವಿದ್ಯಾರ್ಥಿನಿಯರು ತಮ್ಮ ಇಷ್ಟದ ಬಟ್ಟೆಗಳನ್ನು ಧರಿಸುವ ಸ್ವಾತಂತ್ರ್ಯ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳು ಡ್ರೆಸ್ ಕೋಡ್ ಅನ್ನು ಒತ್ತಾಯಿಸುವಂತಿಲ್ಲ ಎಂದು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿದೆ.

ಇವುಗಳನ್ನೂ ಓದಿ: