ಬಲಗೊಳ್ಳುತ್ತಿದೆ ಮುಂಗಾರು, ಭಾರತದಾದ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಇಂದು ಮತ್ತೆ ನಾಳೆ ದೇಶದ ಹಲವು ಕಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Published : July 6, 2026 at 2:47 PM IST
ನವದೆಹಲಿ: ನೈಋತ್ಯ ಮಾನ್ಸೂನ್ ಅಧಿಕೃತವಾಗಿ ದೆಹಲಿಯನ್ನು ಪ್ರವೇಶಿದರೂ ನಿರೀಕ್ಷಿಸಿದ ಮಳೆಗಾಗಿ ಇಲ್ಲಿನ ಜನತೆ ಕಾಯುತ್ತಿದ್ದಾರೆ. ಭಾನುವಾರ, ಕೆಲವು ಪ್ರದೇಶಗಳಲ್ಲಿ ಲಘು ಮಳೆಯಾಗಿದ್ದರೂ, ನಗರದ ಹೆಚ್ಚಿನ ಭಾಗವು ಆರ್ದ್ರ ಪರಿಸ್ಥಿತಿಯೊಂದಿಗೆ ಕಂಡು ಬಂತು. ಇನ್ನು ಈ ವಾರ ಗುಡುಗು ಮತ್ತು ಬಿರುಗಾಳಿ ಬೀಸುವ ಜೊತೆಗೆ ಹೆಚ್ಚಿನ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಜೂನ್‌ನಲ್ಲಿ ಕಾಣದ ಮಾನ್ಸೂನ್ ಜುಲೈನಲ್ಲಿ ಉತ್ತರ ಭಾರತದಾದ್ಯಂತ ಮತ್ತೆ ಬಲಗೊಳ್ಳುವ ಸಾಧ್ಯತೆಗಳಿವೆ. ಜೂನ್‌ನಲ್ಲಿ ಮಳೆಯು ಸಾಮಾನ್ಯಕ್ಕಿಂತ ಸುಮಾರು ಶೇ 40ರಷ್ಟು ಕಡಿಮೆಯಾಗಿತ್ತು. ಆದರೆ, ಜೂನ್ 24ರ ಸುಮಾರಿಗೆ ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆರಾಯ ತಂಪೆರೆದಿದ್ದ. ಬಳಿಕ ಆರು ದಿನಗಳವರೆಗೆ ಮತ್ತೆ ವರುಣರಾಯ ಕಾಣೆಯಾಗಿದ್ದ.
ಟ್ರೋಫ್ ಹಿಮಾಲಯದ ತಪ್ಪಲಿನ ಕಡೆಗೆ ಬದಲಾದಾಗ, ಉತ್ತರ ಭಾರತದ ಮೇಲೆ ಮಳೆ ಕಡಿಮೆಯಾಯಿತು. ಈಗ ಅದು ಮತ್ತೆ ಸಕ್ರಿಯವಾಗುತ್ತಿರುವುದರಿಂದ ಮಾನ್ಸೂನ್ ತನ್ನ ಮುನ್ನಡೆಯನ್ನು ಪುನರಾರಂಭಿಸಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಹವಾಮಾನ ಬದಲಾವಣೆಯು ಭಾರತದ ಹವಾಮಾನವನ್ನು ಹೆಚ್ಚು ಅನಿರೀಕ್ಷಿತಗೊಳಿಸುತ್ತಿದೆ. ಈ ಹವಮಾನ ಪ್ರವಾಹ ಮತ್ತು ಬರಗಾಲದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತಾಪಮಾನವು ಹೆಚ್ಚುತ್ತಲೇ ಇರುವುದರಿಂದ ಭಾರತದಲ್ಲಿ ಅನೇಕ ಮಕ್ಕಳು ಶಾಖದ ಅಲೆಗಳು ಮತ್ತು ಬರಗಾಲಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ವರದಿಗಳು ಮತ್ತಷ್ಟು ತೋರಿಸುತ್ತವೆ.
ಹಲವಾರು ರಾಜ್ಯಗಳಲ್ಲಿ ಭಾರಿ ಮಳೆಯ ಎಚ್ಚರಿಕೆ: ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಉತ್ತರ ಅರೇಬಿಯನ್ ಸಮುದ್ರದ ಹೆಚ್ಚಿನ ಭಾಗಗಳು, ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ಗೆ ಅನುಕೂಲಕರವಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರದ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ. ಮಾನ್ಸೂನ್‌ನ ಉತ್ತರ ಮಿತಿ ಪ್ರಸ್ತುತ ಜಾಮ್‌ನಗರ, ಉದಯಪುರ, ಅಜ್ಮೀರ್, ಜುನ್ಜುನು, ಹಿಸಾರ್ ಮತ್ತು ಬಟಿಂಡಾ ಮೂಲಕ ಹಾದುಹೋಗುತ್ತದೆ.
ಜುಲೈ 11 ರವರೆಗೆ ಉತ್ತರ ಭಾರತದಾದ್ಯಂತ ಭಾರಿ ಮಳೆ ಸಾಧ್ಯತೆ: ಜುಲೈ 11 ರವರೆಗೆ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ವಾರದ ವಿವಿಧ ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ರುದ್ರಪ್ರಯಾಗ, ಉತ್ತರಾಖಂಡ್ ಭಾರಿ ಮಳೆಯಾಗಿದ್ದು, ಇದರಿಂದಾಗಿ ಅಲಕನಂದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉತ್ತರ, ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು ಗಂಟೆಗೆ 40-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗಾಳಿಯ ವೇಗ ಗಂಟೆಗೆ 70 ಕಿ.ಮೀ. ತಲುಪಬಹುದು.
ಛತ್ತೀಸ್‌ಗಢ, ಕೊಂಕಣ ಮತ್ತು ಗುಜರಾತ್‌ಗಳಿಗೆ ಅತಿ ಭಾರಿ ಮಳೆಯಾಗುವ ಎಚ್ಚರಿಕೆ: ಜುಲೈ 6 ರಂದು ಛತ್ತೀಸ್‌ಗಢದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಕೊಂಕಣ ಮತ್ತು ಗೋವಾ, ಗುಜರಾತ್ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಜುಲೈ 6–7 ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಮಧ್ಯ ಭಾರತದಲ್ಲಿ ವ್ಯಾಪಕ ಮಳೆ: ಪಶ್ಚಿಮ ಮಧ್ಯಪ್ರದೇಶ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಜುಲೈ 11 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ. ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದರೆ, ಛತ್ತೀಸ್‌ಗಢದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆಯ ಅಬ್ಬರ: ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಒಡಿಶಾ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಈ ವಾರ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಬಿಹಾರ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಪಶ್ಚಿಮ ಕರಾವಳಿಯಲ್ಲಿ ತೀವ್ರ ಮಾನ್ಸೂನ್ ಮಳೆ: ಕೊಂಕಣ ಮತ್ತು ಗೋವಾ, ಗುಜರಾತ್ ಪ್ರದೇಶ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಸೌರಾಷ್ಟ್ರ ಮತ್ತು ಕಚ್‌ನಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 6–7 ರ ಅವಧಿಯಲ್ಲಿ ಕೊಂಕಣ ಮತ್ತು ಗೋವಾ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮುಂದುವರೆಯುವ ಮಳೆ: ಕೇರಳ, ಕರಾವಳಿ ಕರ್ನಾಟಕ, ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನ ದಾಖಲು: ಮಾನ್ಸೂನ್ ಸಕ್ರಿಯವಾಗಿದ್ದರೂ, ದೇಶದಲ್ಲಿ ಅತಿ ಹೆಚ್ಚು ಗರಿಷ್ಠ ತಾಪಮಾನ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 43.2°C ದಾಖಲಾಗಿದ್ದರೆ, ಬಯಲು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಮಹಾರಾಷ್ಟ್ರದ ಜೆಯೂರ್‌ನಲ್ಲಿ 18.5°C ದಾಖಲಾಗಿದೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರಿ ಮಳೆ: ಮುಳುಗಿದ ಶಿವನ ಪ್ರತಿಮೆ, ಕೊಚ್ಚಿ ಹೋದ ರಸ್ತೆಗಳು, ಕಾಲ್ನಡಿಗೆಯಲ್ಲಿಯೇ ದೇವಸ್ಥಾನ ತಲುಪಿದ ವಧು-ವರ

