ETV Bharat / bharat

ಇರಾನ್​ನ 40 ಕಮಾಂಡರ್​ಗಳ ಹತ್ಯೆ: ಪ್ರತಿದಾಳಿ ಮಾಡಿದರೆ 'ಹಿಂದೆಂದೂ ಕಂಡಿರದ ಭೀಕರ ದಾಳಿ'- ಟ್ರಂಪ್​ ಎಚ್ಚರಿಕೆ

ಇರಾನ್​ ಮತ್ತು ಅಮೆರಿಕ- ಇಸ್ರೇಲ್​ ನಡುವಿನ ಸಂಘರ್ಷ ಎರಡನೇ ದಿನವೂ ಮುಂದುವರಿದಿದೆ. ಖಮೇನಿ ಜೊತೆಗೆ ಇರಾನ್​ನ 40 ಉನ್ನತ ಅಧಿಕಾರಿಗಳನ್ನು ಹೊಡೆದುರುಳಿಸಲಾಗಿದೆ.

THE MAIN PEOPLE US KILLED
ಇಸ್ರೇಲ್​-ಯುಎಸ್​ ದಾಳಿಯಲ್ಲಿ ಮೃತಪಟ್ಟ ಇರಾನ್​ನ ಅಧಿಕಾರಿಗಳು (AFP)
author img

By ETV Bharat Karnataka Team

Published : March 1, 2026 at 5:14 PM IST

2 Min Read
Choose ETV Bharat

ನವದೆಹಲಿ: ಇರಾನ್‌ ಮೇಲೆ ಅಮೆರಿಕ-ಇಸ್ರೇಲ್​ ಪಡೆಗಳು ನಡೆಸುತ್ತಿರುವ ದಾಳಿಯು ಎರಡನೇ ದಿನವೂ ಮುಂದುವರಿದಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಜೊತೆಗೆ 40 ಉನ್ನತ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ.

ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್​ ಸೇನೆ ಅಬ್ಬರಿಸಿದೆ. ಪ್ರತಿದಾಳಿ ನಡೆಸಿದರೆ, ಹಿಂದೆಂದೂ ಕಂಡಿರದ ಭೀಕರತೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇರಾನ್​ಗೆ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್​ ಟ್ರಂಪ್​ ಇರಾನ್​ಗೆ ನೀಡಿದ ಎಚ್ಚರಿಕೆ
ಡೊನಾಲ್ಡ್​ ಟ್ರಂಪ್​ ಇರಾನ್​ಗೆ ನೀಡಿದ ಎಚ್ಚರಿಕೆ (Truth Social)

ಇದರ ನಡುವೆ, ಒಮಾನ್ ನೇತೃತ್ವದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಸಲಾಗಿದ್ದು, ಮಹತ್ವದ ಪ್ರಗತಿ ಕಂಡುಬಂದಿದೆ ಎನ್ನಲಾಗಿದೆ. ಇದರ ನಡುವೆಯೂ ದಾಳಿಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿ.

40 ಹಿರಿಯ ಕಮಾಂಡರ್​ಗಳು ಹತ: ಇರಾನ್ ಮೇಲೆ ಭಾನುವಾರ ನಡೆಸಿದ ದಾಳಿಯಲ್ಲಿ 40 ಹಿರಿಯ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಸೇನಾ ಪಡೆ ತಿಳಿಸಿದೆ. "ಸಾವಿರಾರು ಕಿಲೋ ಮೀಟರ್​ ದೂರದಿಂದ ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಒಂದೇ ನಿಮಿಷದಲ್ಲಿ ನಡೆದ ದಾಳಿಯಲ್ಲಿ ಖಮೇನಿ ಸೇರಿದಂತೆ ಇರಾನ್​ನ 40 ಹಿರಿಯ ಕಮಾಂಡರ್‌ಗಳನ್ನು ನಿರ್ಮೂಲನೆ ಮಾಡಿದ್ದೇವೆ" ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾದವ್ ಶೋಶಾನಿ ತಿಳಿಸಿದ್ದಾರೆ.

ಯಾರೆಲ್ಲಾ ಸಾವು? ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಇರಾನ್​​ನ ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಸಚಿವರು ಇದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಭಾನುವಾರ ವರದಿ ಮಾಡಿದೆ.

ಸೇನಾ ಜನರಲ್ ಅಬ್ದುಲ್ ರಹೀಮ್ ಮೌಸವಿ, ರಕ್ಷಣಾ ಸಚಿವ ಜನರಲ್ ಅಜೀಜ್ ನಾಸಿರ್ಜಾದೆಹ್, ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಮೊಹಮ್ಮದ್ ಪಕ್‌ಪೂರ್, ರಕ್ಷಣಾ ಮಂಡಳಿಯ ಕಾರ್ಯದರ್ಶಿ ಮತ್ತು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತ ಸಲಹೆಗಾರ ಅಲಿ ಶಮ್ಖಾನಿ ಅವರು ಮೃತಪಟ್ಟಿದ್ದಾರೆ. ಇನ್ನೂ ಹಲವು ಉನ್ನತ ಕಮಾಂಡರ್​ಗಳ ಹೆಸರುಗಳನ್ನು ನಂತರ ಘೋಷಿಸಲಾಗುವುದು ಎಂದು ಅದು ಹೇಳಿದೆ.

ಹಿಂದೆಂದೂ ಕಂಡಿರದ ದಾಳಿ ಮಾಡ್ತೀವಿ-ಟ್ರಂಪ್​ ಎಚ್ಚರಿಕೆ: ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್​ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​, ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ ಹಿಂದೆಂದೂ ಕಂಡಿರದ ಭೀಕರತೆಯನ್ನು ನೋಡಬೇಕಾಗುತ್ತದೆ ಎಂದು ವಾರ್ನಿಂಗ್​ ನೀಡಿದ್ದಾರೆ.

ತಮ್ಮ ಟ್ರೂತ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್​, ನೀವು (ಇರಾನ್​) ಹಾಗೆ ಮಾಡದಿರುವುದೇ ಉತ್ತಮ. ಒಂದೊಮ್ಮೆ ಹಾಗೆ (ದಾಳಿ) ಮಾಡಿದಲ್ಲಿ ನೀವು ಹಿಂದೆಂದೂ ನೋಡಿರದ ಭೀಕರ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ.

ವಿಶ್ವ ರಾಷ್ಟ್ರಗಳಿಂದ ಪರ-ವಿರೋಧ: ಅಮೆರಿಕ-ಇಸ್ರೇಲ್​ ಕೂಡಿ ಇರಾನ್​ ಮೇಲೆ ದಾಳಿ ಮಾಡಿದ್ದಕ್ಕೆ ವಿಶ್ವ ರಾಷ್ಟ್ರಗಳು ಪರ-ವಿರೋಧ ವ್ಯಕ್ತಪಡಿಸಿವೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಉಕ್ರೇನ್ ಯುಎಸ್- ಇಸ್ರೇಲ್​​ ದಾಳಿಯನ್ನು ಬೆಂಬಲಿಸಿದರೆ, ರಷ್ಯಾ, ಚೀನಾ ಮತ್ತು ಸ್ಪೇನ್ ಖಂಡಿಸಿವೆ. ಇದು ಅಪ್ರಚೋದಿತ ಸಶಸ್ತ್ರ ಆಕ್ರಮಣ ಎಂದು ಜರಿದಿವೆ.

ಇವುಗಳನ್ನೂ ಓದಿ: