ಖಮೇನಿ ಅಂತ್ಯಕ್ರಿಯೆ: ಮೆಹಬೂಬಾ ಮುಫ್ತಿ ಸೇರಿದಂತೆ ಐವರು ಶಿಯಾ ನಾಯಕರಿಗೆ ಆಹ್ವಾನ
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವಂತೆ ಕಾಶ್ಮೀರದ ನಾಯಕರಿಗೆ ಆಹ್ವಾನ ನೀಡಲಾಗಿದೆ.


Published : July 2, 2026 at 4:39 PM IST
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಐವರು ಶಿಯಾ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಇದೇ ಫೆ. 28ರಂದು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದು, ಇರಾನ್ ಸರ್ಕಾರ ಇದೀಗ ಅವರ ಅಂತ್ಯಕ್ರಿಯೆ ನಡೆಸಲು ಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಜಗತ್ತಿನ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ.
ಅದರಂತೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಮತ್ತು ಶಿಯಾ ನಾಯಕ ಅಗಾ ಸೈಯದ್ ರುಹುಲ್ಲಾ, ಮಾಜಿ ಸಚಿವ ಮತ್ತು ಶಿಯಾ ನಾಯಕ ಇಮ್ರಾನ್ ಅನ್ಸಾರಿ, ಶಿಯಾ ಧರ್ಮಗುರು ಮಸ್ರೂರ್ ಅಬ್ಬಾಸ್ ಅನ್ಸಾರಿ ಮತ್ತು ಅಗಾ ಸೈಯದ್ ಹಸನ್ ಮೊಸಾವಿ ಅಲ್ ಸಫಾವಿ ಅವರಿಗೆ ಆಹ್ವಾನಿಸಲಾಗಿದೆ.
ಮಾಜಿ ಸಚಿವ ಮತ್ತು ಶಿಯಾ ನಾಯಕ ಇಮ್ರಾನ್ ಅನ್ಸಾರಿ ಕೂಡ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೂ ಈಗಾಗಲೇ ಇರಾನ್‌ಗೆ ತೆರಳಿದ್ದಾರೆ ಎಂದು ಅವರ ಕಚೇರಿ ಸಹಾಯಕ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇಂದು ಇರಾನ್‌ಗೆ ತೆರಳಿದ್ದಾರೆ. ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇದು ತಮಗೆ ಸಿಕ್ಕ ಅಪಾರ ಗೌರವ ಮತ್ತು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ ಎಂದು ಹೇಳಿದ್ದಾಠೆ.
ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರ ಕಚೇರಿಯ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ನಿರ್ದೇಶಕರಾದ ಮೊಹ್ಸಿನ್ ಕುಮ್ಮಿ ಈ ಆಹ್ವಾನವನ್ನು ನೀಡಿದ್ದಾರೆ. ರಾಷ್ಟ್ರೀಯ ಶೋಕಾಚರಣೆಯ ಅವಧಿ ಮತ್ತು ಇಸ್ಲಾಮಿಕ್ ಗಣರಾಜ್ಯದ ಶಿಷ್ಟಾಚಾರಗಳಿಗೆ ಅನುಗುಣವಾಗಿ, ಟೆಹ್ರಾನ್‌ನಲ್ಲಿ ಸರ್ಕಾರಿ ಅಂತ್ಯಕ್ರಿಯೆ ಸಮಾರಂಭವನ್ನು ನಡೆಸಲಾಗುವುದು.
ಆಹ್ವಾನ ಪತ್ರಿಕೆಯಲ್ಲಿ, ಇರಾನ್ ಇಸ್ಲಾಮಿಕ್ ಗಣರಾಜ್ಯ ಮತ್ತು ಭಾರತ ಗಣರಾಜ್ಯದ ನಡುವಿನ ಗಾಢವಾದ ಐತಿಹಾಸಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಗೌರವಾನ್ವಿತ ಅತಿಥಿಗಳಾಗಿ ಈ ಗಂಭೀರ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮ್ಮನ್ನು ಆಹ್ವಾನಿಸುವುದನ್ನು ನಾನು ಮಹಾನ್ ಗೌರವ ಎಂದು ಭಾವಿಸುತ್ತೇನೆ. ತಮ್ಮ ಉಪಸ್ಥಿತಿಯು ನಮ್ಮೆರಡೂ ಶ್ರೇಷ್ಠ ಹಾಗೂ ಪ್ರಾಚೀನ ನಾಗರಿಕತೆಗಳ ನಡುವಿನ ಆಳವಾದ ಸ್ನೇಹ ಮತ್ತು ಪರಸ್ಪರ ಗೌರವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ತಿಳಿಸಲಾಗಿದೆ.
ಸಮಾರಂಭದ ವಿವರಗಳ ಪ್ರಕಾರ, 2026ರ ಜುಲೈ 3ರ ಶುಕ್ರವಾರದಂದು ಟೆಹ್ರಾನ್‌ನ 'ಗ್ರ್ಯಾಂಡ್ ಮೊಸಲ್ಲಾ ಕಾಂಪ್ಲೆಕ್ಸ್'ನಲ್ಲಿ ಖಮೇನಿ ಅವರಿಗೆ ವಿದಾಯ ಸಲ್ಲಿಸಲಿದೆ. ಜುಲೈ 4ರಂದು ಟೆಹ್ರಾನ್‌ನ 'ಸಮ್ಮಿಟ್ ಕಾನ್ಫರೆನ್ಸ್ ಹಾಲ್'ನಲ್ಲಿ ಸ್ಮರಣಾರ್ಥ ಸಮಾವೇಶ ನಡೆಯಲಿದ್ದು, ಜುಲೈ 6ರಂದು ಟೆಹ್ರಾನ್‌ನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ನಡೆಯಲಿದೆ.
ಖಮೇನಿ ಕಾಶ್ಮೀರ ಸಂಬಂಧ: ಅಂತ್ಯಕ್ರಿಯೆಗೆ ಆಹ್ವಾನಿತರಾಗಿರುವ ಅಗಾ ಸೈಯದ್ ಹಸನ್ ಮೊಸಾವಿ ಅಲ್ ಸಫಾವಿ, ಖಮೇನಿ ಅವರ ಕಾಶ್ಮೀರದ ಸಂಬಂಧ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿದ್ದಾರೆ. ಖಮೇನಿ 1980ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಕಾಶ್ಮೀರಕ್ಕೆ ಆಗಮಿಸಿದ್ದರು. 1979 ರ ಇಸ್ಲಾಮಿಕ್ ಕ್ರಾಂತಿಯನ್ನು ಮುನ್ನಡೆಸಿದ್ದ ಅಯತೊಲ್ಲಾ ರುಹೊಲ್ಲಾ ಖಮೇನಿಯವರ ರಾಯಭಾರಿಯಾಗಿ ಅವರು ಇಲ್ಲಿಗೆ ಬಂದಿದ್ದರು ಎಂದರು.
ಆಯತೊಲ್ಲಾ ಅಲಿ ಖಮೇನಿ ಹೋಟೆಲ್ ಜಹಾಂಗೀರ್‌ನಲ್ಲಿ ಮೂರು ದಿನಗಳ ಕಾಲ ತಂಗಿದ್ದರು. ಅವರ ಭೇಟಿಯ ಸಮಯದಲ್ಲಿ ಬುಡ್ಗಾಮ್‌ಗೆ ಭೇಟಿ ನೀಡಿದ್ದರು. ಶ್ರೀನಗರದ ಡೌನ್‌ಟೌನ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದರು. ಆ ಬಳಿಕ ಹಜರತ್‌ಬಾಲ್ ದರ್ಗಾಕ್ಕೆ ಭೇಟಿ ನೀಡಿದ್ದರು. ಬುಡ್ಗಾಮ್‌ನಲ್ಲಿ ಅವರಿಗೆ ನಮ್ಮ ಮನೆಯಲ್ಲಿಯೇ ಊಟ ಆಯೋಜಿಸಿದ್ದೆವು, ಅವರು ಇಲ್ಲಿನ ಜನರು ಮತ್ತು ಶಿಯಾ ಧರ್ಮಗುರುಗಳೊಂದಿಗೆ ಸಂವಹನ ಕೂಡಾ ಮಾಡಿದ್ದರು.
ಇರಾನ್ ಮತ್ತು ಕಾಶ್ಮೀರಗಳು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳಿಂದ ಪಡೆದ ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಇಸ್ಲಾಂ ಅನ್ನು ಕಾಶ್ಮೀರದಲ್ಲಿ ಇರಾನಿನ ವಿದ್ವಾಂಸರು ಮತ್ತು ಧರ್ಮಪ್ರಚಾರಕರು ಹರಡಿದರು. ಇದು ನಮ್ಮ ಸಂಸ್ಕೃತಿಯು ಇರಾನ್ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅದಕ್ಕಾಗಿಯೇ ಕಾಶ್ಮೀರವನ್ನು ಇರಾನ್-ಎ-ಸಘೀರ್ ಎಂದು ಕರೆಯಲಾಗುತ್ತದೆ. ಇರಾನ್ ಭಾರತದೊಂದಿಗೆ ಸಾಂಸ್ಕೃತಿಕ ಮತ್ತು ರಾಜಕೀಯ ಸಂಬಂಧಗಳನ್ನು ಸಹ ಹೊಂದಿದೆ ಎಂದರು.
ಕಾಶ್ಮೀರದ ವಿಶೇಷ ಮಾನ್ಯತೆ ವಿಧಿ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿದಾಗ ಕಾಶ್ಮೀರದ ಕುರಿತು ಖಮೇನಿ ಹೇಳಿಕೆ ನೀಡಿದ್ದರು. ಕಾಶ್ಮೀರದಲ್ಲಿನ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ನಮಗೆ ಕಳವಳವಿದೆ. ಭಾರತದೊಂದಿಗಿನ ನಮ್ಮ ಸಂಬಂಧಗಳು ಉತ್ತಮವಾಗಿವೆ. ಆದಾಗ್ಯೂ, ಭಾರತವು ನ್ಯಾಯಯುತ ನೀತಿಯನ್ನು ಅಳವಡಿಸಿಕೊಳ್ಳಬೇಕು. ಈ ಪ್ರದೇಶದ ಮುಸ್ಲಿಮರ ವಿರುದ್ಧ ದಬ್ಬಾಳಿಕೆಯನ್ನು ತಡೆಯಬೇಕು ಎಂದು 2019ರ ಆಗಸ್ಟ್ 21ರಂದು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಆಹ್ವಾನ

