ETV Bharat / bharat

ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿನ ಸಂಘರ್ಷದ ಬಗ್ಗೆ ಭಾರತ ಕಳವಳ: ಭಾರತೀಯರ ರಕ್ಷಣೆಗೆ ಅಗತ್ಯ ಕ್ರಮದ ಭರವಸೆ

ಇರಾನ್​ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜತೆಗೂಡಿ ದಾಳಿ ನಡೆಸಿರುವುದು ಮತ್ತು ಇರಾನ್​ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸಿರುವುದನ್ನು ಭಾರತ ಖಂಡಿಸಿದೆ.

IRAN ISRAEL US WAR
ಖಮೇನಿ ಹತ್ಯೆ ಖಂಡಿಸಿ ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ (PTI)
author img

By ETV Bharat Karnataka Team

Published : March 3, 2026 at 8:47 PM IST

2 Min Read
Choose ETV Bharat

ನವದೆಹಲಿ: ಅಮೆರಿಕ - ಇಸ್ರೇಲ್ ಜೊತೆಗೂಡಿ ಇರಾನ್​ ಮೇಲೆ, ಇದಕ್ಕೆ ಪ್ರತಿಯಾಗಿ ಇರಾನ್​ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವುದು. ಪ್ರಾಣ ಹರಣ ಮತ್ತು ಆಸ್ತಿಪಾಸ್ತಿ ನಷ್ಟದ ಕುರಿತು ಭಾರತದ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರತದ ವಿದೇಶಾಂಗ ಸಚಿವಾಲಯ ಮಂಗಳವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಸಂಘರ್ಷ ತೀವ್ರ ಕಳವಳಕಾರಿಯಾಗಿದೆ. ಈ ಸಮಯದಲ್ಲಿ ಎಲ್ಲೆಡೆ ಇರುವ ಭಾರತೀಯರು ಸಂಯಮದಿಂದ ವರ್ತಿಸಬೇಕು. ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸಬೇಕು. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ದುರದೃಷ್ಟವಶಾತ್ ಪವಿತ್ರ ರಂಜಾನ್ ತಿಂಗಳಲ್ಲಿ ಈ ಉದ್ವಿಗ್ನತೆ ಉಂಟಾಗಿದೆ ಎಂದಿದೆ.

"ಇತ್ತೀಚಿನ ದಿನಗಳಲ್ಲಿ, ಸಂಘರ್ಷವು ಎರಡು ರಾಷ್ಟ್ರಗಳ ನಡುವೆ ಮಾತ್ರವಲ್ಲದೇ, ತೀವ್ರತೆಯು ಇತರ ರಾಷ್ಟ್ರಗಳಿಗೂ ಹರಡುವುದನ್ನು ಕಾಣುತ್ತಿದ್ದೇವೆ. ಸಾಮಾನ್ಯ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಹಾನಿ ಮತ್ತು ಸಾವುಗಳು ಹೆಚ್ಚಿವೆ. ಭದ್ರತೆ ಮತ್ತು ಸ್ಥಿರತೆಯಲ್ಲಿ ನಿರ್ಣಾಯಕ ಪಣಗಳನ್ನು ಹೊಂದಿರುವ ಹತ್ತಿರದ ನೆರೆಯವರಾಗಿ, ಈ ಬೆಳವಣಿಗೆಗಳು ಹೆಚ್ಚಿನ ಆತಂಕವನ್ನು ಉಂಟುಮಾಡುತ್ತವೆ" ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ಗಲ್ಫ್ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಸುಮಾರು 1 ಕೋಟಿ ಭಾರತೀಯ ನಾಗರಿಕರ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ. ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಯಾವುದೇ ಬೆಳವಣಿಗೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಮ್ಮ ವ್ಯಾಪಾರ ಮತ್ತು ಇಂಧನ ಪೂರೈಕೆಯು ಈ ಪ್ರದೇಶದಿಂದಲೇ ಹೆಚ್ಚಿದೆ. ಇಲ್ಲಾಗುವ ಯಾವುದೇ ಅಡಚಣೆಯು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಅದು ಹೇಳಿದೆ.

ವ್ಯಾಪಾರಿ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದು ಖಂಡನೀಯ. ಸಂಘರ್ಷದ ಬದಲಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆ ಮಾರ್ಗವನ್ನು ಅನುಸರಿಸಬೇಕು ಎಂಬುದು ಭಾರತದ ನಿಲುವು. ಘರ್ಷಣೆಯಲ್ಲಿ ಹಲವು ಜೀವಗಳು ಬಲಿಯಾಗಿವೆ. ಇದಕ್ಕೆ ನಮ್ಮ ವಿಷಾದವಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ದಾಳಿ ಪೀಡಿತ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಭಾರತೀಯ ಪ್ರಜೆಗಳು ಮತ್ತು ಸಮುದಾಯದ ಜನರ ಜೊತೆ ನಿಕಟ ಸಂಪರ್ಕದಲ್ಲಿವೆ. ನಿಯಮಿತ ಸಲಹೆಗಳನ್ನು ನೀಡುತ್ತಾ, ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯಾ ದೇಶಗಳ ಸರ್ಕಾರಗಳ ಜೊತೆಗೂ ಸಂಪರ್ಕ ಸಾಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಯುದ್ಧ ಇನ್ನಷ್ಟು ದಿನ ಮುಂದುವರಿಯಲಿದೆ. ಸದ್ಯಕ್ಕೆ ಇದು ಮುಗಿಯುವುದಿಲ್ಲ ಎಂದು ಹೇಳಿಕೆ ನೀಡಿರುವುದು ಕೂಡ ಕಳವಳಕಾರಿ ಸಂಗತಿಯಾಗಿದೆ.

ಇವುಗಳನ್ನೂ ಓದಿ: