ETV Bharat / bharat

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 8 ಮಕ್ಕಳು ಸೇರಿ 11 ಸಾವು, ಹಲವರಿಗೆ ಗಾಯ

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಪಿಪ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

BLAST AT FIRECRACKER WAREHOUSE IN KAUSHAMBI 11 DEAD SEVERAL INJURED
ನೆಲಸಮವಾದ ಪಟಾಕಿ ಕಾರ್ಖಾನೆ (ETV Bharat)
author img

By ETV Bharat Karnataka Team

Published : August 31, 2026 at 8:16 PM IST

2 Min Read
Choose ETV Bharat

ಕೌಶಂಬಿ(ಉತ್ತರ ಪ್ರದೇಶ): ಜಿಲ್ಲೆಯ ಪಿಪ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟಾಕಿ ಗೋದಾಮಿನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ 11 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಿಯಾಂಜಲಿ (5), ಪ್ರವೀಣ್ ಸಿಂಗ್ (13), ಜಾನ್ವಿ (12), ಆದಿತ್ಯ (12), ರವಿ (8), ಗ್ಯಾನ್ ಸಿಂಗ್ (40), ಆದಿತ್ಯ (8), ಅಂಜು (32), ವಿಕ್ರಮ್ ಸರೋಜ್ (35), ಅಂಶ್ (6) ಮತ್ತು ನನ್ಹಾ (4) ಮೃತರೆಂದು ತಿಳಿದು ಬಂದಿದೆ.

ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ ಸಂಪೂರ್ಣವಾಗಿ ನೆಲಸಮವಾಗಿದೆ. ಸುತ್ತಮುತ್ತಲಿನ ಮನೆಗಳೂ ಕುಸಿದಿವೆ. ಕಾರ್ಖಾನೆಯೊಳಗೆ 15ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಗಾಯಾಳುಗಳನ್ನು ಪ್ರಯಾಗ್ ರಾಜ್‌ನ ಎಸ್‌ಆರ್‌ಎನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ರಕ್ಷಣಾ ತಂಡ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕೌಶಂಬಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಪಾಲ್ ಹೇಳಿದರು.

ಮನುರಿ ಮಾರುಕಟ್ಟೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಯುಪಿ ಎಟಿಎಸ್ ತಂಡ ಸ್ಥಳಕ್ಕೆ ತಲುಪಿದ್ದು, ತನಿಖೆಗೆ ಮುಂದಾಗುವ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಪ್ರಯಾಗ್‌ರಾಜ್ ಎಡಿಜಿ ಜ್ಯೋತಿ ನಾರಾಯಣ್ ಮತ್ತು ಐಜಿ ಅಜಯ್ ಮಿಶ್ರಾ ಕೂಡ ಘಟನಾ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಐವರು ಮೃತಪಟ್ಟ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದರು.

ಮೂರು ತಾಲೂಕುಗಳಿಂದ ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ವೃತ್ತ ಅಧಿಕಾರಿ ಶಿವಾಂಕ್ ಸಿಂಗ್ ಮಾಹಿತಿ ನೀಡಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಖಾನೆಯು ಮಾನ್ಯವಾದ ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತೇ? ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತೇ? ಎಂದು ತಿಳಿಯಲು ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ನಡೆಸುತ್ತಿವೆ. ತನಿಖೆ ಪೂರ್ಣಗೊಂಡ ನಂತರವೇ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಸದ್ಯ ಗೋದಾಮಿನಲ್ಲಿ ಸಂಗ್ರಹಿಸಲಾದ ಪಟಾಕಿಗಳ ಪ್ರಮಾಣವನ್ನೂ ಸಹ ಪರಿಶೀಲಿಸಲಾಗುತ್ತಿದೆ. ಸ್ಥಳದಲ್ಲಿ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸಂತಾಪ ಸೂಚಿಸಿದ್ದಾರೆ.

''ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮೃತರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಸೂಚಿಸಲಾಗಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ'' ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಮೇಲ್ಛಾವಣಿಯ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆ!