ದೂರು ಕೊಡಲು ಕಮಿಷನರ್ ಕಚೇರಿಗೆ ಬಂದು, ಪೊಲೀಸರ ಬೈಕನ್ನೇ ಕದ್ದ ವ್ಯಕ್ತಿ ಅರೆಸ್ಟ್
ತನ್ನ ದೂರು ಸ್ವೀಕರಿಸಲಿಲ್ಲ ಎಂದು ಪೊಲೀಸ್ ಅಧಿಕಾರಿಯ ಬೈಕ್ಅನ್ನೇ ಕದ್ದ ಘಟನೆ ಕೇರಳದಲ್ಲಿ ನಡೆದಿದೆ.


By PTI
Published : January 9, 2026 at 12:33 PM IST
ತಿರುವನಂತಪುರಂ (ಕೇರಳ): ಪೊಲೀಸ್ ಆಯುಕ್ತ ಕಚೇರಿಗೆ ದೂರು ನೀಡಲು ಬಂದ ವ್ಯಕ್ತಿಯೋರ್ವ, ಅಲ್ಲೇ ಇದ್ದ ಬೈಕ್ಅನ್ನು ಕದ್ದೊಯ್ದಿರುವ ಘಟನೆ ತಿರುವನಂರಪುರಂ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ನಡೆದಿದೆ. ಆರೋಪಿಯನ್ನು ಅಮಲ್ ಸುರೇಶ್ ಎಂದು ಗುರುತಿಸಲಾಗಿದೆ.
ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಲು ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಕಚೇರಿಗೆ ಹೋಗುವ ಭರದಲ್ಲಿ ಕೀಯನ್ನು ಬೈಕ್ನಲ್ಲೇ ಬಿಟ್ಟು ಒಳ ಹೋಗಿದ್ದರು. ಜೊತೆಗೆ ಬೈಕ್ನಲ್ಲೇ ಬ್ಯಾಗ್ ಬಿಟ್ಟಿದ್ದರು. ಈ ಸಂದರ್ಭದಲ್ಲಿ ದೂರು ನೀಡಲು ಬಂದಿದ್ದ ಆರೋಪಿಯು ಬೈಕ್ನಲ್ಲೇ ಕೀ ಇರುವುದನ್ನು ನೋಡಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನ 3ಕ್ಕೆ ಬಂದು ಬೈಕ್ ಹುಡುಕಾಡಿದಾಗ ಬೈಕ್ ಅಲ್ಲಿರಲಿಲ್ಲ. ತಕ್ಷಣಕ್ಕೆ ಅವರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆರೋಪಿ ಸುರೇಶ್ ಕದೊಯ್ದಿರುವುದು ಗೊತ್ತಾಗಿದೆ.
ಅಧಿಕಾರಿ ದೂರಿನ ಮೇರೆಗೆ ಕಂಟೋನ್ಮೆಂಟ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 303(2) ರ ಅಡಿಯಲ್ಲಿ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿ ಸುರೇಶ್, ಕಳ್ಳತನ ಪ್ರಕರಣದ ಇತಿಹಾಸ ಹೊಂದಿದ್ದಾನೆ. ಈತ ತನ್ನ ತಂದೆ ವಿರುದ್ಧ ದೂರು ದಾಖಲಿಸಲು ಕಮಿಷನರ್ ಕಚೇರಿಗೆ ಆಗಮಿಸಿದ್ದ. ಈ ವೇಳೆ ಕಚೇರಿಯಿಂದ ಹೊರಡುವಾಗ ಈ ಕಳ್ಳತನ ಮಾಡಿದ್ದಾನೆ. ಅದೇ ದಿನ ರಾತ್ರಿ ಮನವೀಯಂ ವಾದಿ ಬಳಿ ಆತನನ್ನು ಬಂಧಿಸಲಾಗಿದ್ದು. ವಾಹನ ಜಪ್ತಿ ಮಾಡಲಾಗಿದೆ.
ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಿದಾಗ, ಪೊಲೀಸ್ ಅಧಿಕಾರಿಗಳು ತಾನು ನೀಡಿದ ದೂರನ್ನು ಸ್ವೀಕರಿಸಲಿಲ್ಲ. ಇದರಿಂದಾಗಿ ಮೋಟಾರ್ ಬೈಕ್ ಕದಿಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ. ಆರೋಪಿಯನ್ನು ವಿಚಾರಣೆಯ ಭಾಗವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಲಮಗಳ ಮೇಲೆ ಕ್ರೌರ್ಯ:
ಐದು ವರ್ಷದ ಮಗಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದಳು ಎಂದು ಮಲತಾಯಿ ಆಕೆಯ ಖಾಸಗಿ ಅಂಗಗಳಿಗೆ ಸುಟ್ಟಿರುವ ಪ್ರಕರಣ ವರದಿಯಾಗಿದೆ. ಬಿಹಾರ ಮೂಲದ ಆರೋಪಿ ತಾಯಿಯನ್ನು ಬಂಧಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಉತ್ತರ ಕೇರಳ ಜಿಲ್ಲೆಯ ಕಾಂಜಿಕೋಡ್ ಬಳಿ ಈ ಘಟನೆ ನಡೆದಿದೆ. ತರಗತಿಯಲ್ಲಿ ಮಗು ಕುಳಿತುಕೊಳ್ಳಲು ಕಷ್ಟಪಡುತ್ತಿರುವುದನ್ನು ಅಂಗನವಾಡಿ ಶಿಕ್ಷಕಿ ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಂದೆ ನೇಪಾಳಿ ಪ್ರಜೆಯಾಗಿದ್ದು, ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅವರು ಮಕ್ಕಳ ಕಲ್ಯಾಣ ಸಮಿತಿ ಆರೈಕೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳನ್ನೂ ಓದಿ: ವೇಗವಾಗಿ ಬಂದು ಮರಕ್ಕೆ ಗುದ್ದಿದ ಕಾರು: ನಾಲ್ವರು ಕಾಲೇಜು ವಿದ್ಯಾರ್ಥಿಗಳು ಸಾವು
ಕದಿಯಲು ಬಂದು ಅಡುಗೆ ಮನೆಯ ಬಿಸಿಗಾಳಿ ಹೋಗಲು ಇರುವ ಚಿಕ್ಕ ಕಿಂಡಿಯಲ್ಲಿ ಸಿಕ್ಕಿಬಿದ್ದ ಕಳ್ಳ!

