ಮಮತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಏನಾಗುತ್ತೆ?: ಸಂವಿಧಾನ ತಜ್ಞರು ಹೇಳುವುದೇನು?
ಮಮತಾ ಬ್ಯಾನರ್ಜಿ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು ಮಾತನಾಡಿದ್ದಾರೆ.


Published : May 6, 2026 at 4:50 PM IST
ನವದೆಹಲಿ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್‌ನ ಹೀನಾಯ ಸೋಲು ಅನುಭವಿಸಿದೆ. ಚುನಾವಣೆ ಫಲಿತಾಂಶದ ನಂತರ ಪಶ್ಚಿಮ ಬಂಗಾಳದ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ. ಈ ಮೂಲಕ ಅವರು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಗ್ಗೆ ಸಂವಿಧಾನ ತಜ್ಞರು ತಮ್ಮದೇ ಅಭಿಪ್ರಾಯಗಳನ್ನು ನೀಡಿದ್ದಾರೆ.
ಹೊಸ ಸರ್ಕಾರ ರಚನೆಯಾಗುವವರೆಗೂ ಬ್ಯಾನರ್ಜಿ ತಮ್ಮ ಹುದ್ದೆಯಲ್ಲಿ ಮುಂದುವರಿಯಬಹುದು, ಆ ಮೇಲೆ ಅವರು ಸಂವಿಧಾನದ ಪ್ರಕಾರ ಅವರು ಹುದ್ದೆಯಿಂದ ಸ್ವಯಂ ಚಾಲಿತವಾಗಿ ನಿವೃತ್ತರಾಗಲಿದ್ದಾರೆ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಪ್ರತಿಪಾದಿಸಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಸಂಪ್ರದಾಯದ ಪ್ರಕಾರ, ಹಾಲಿ ಮುಖ್ಯಮಂತ್ರಿ ತಮ್ಮ ಪಕ್ಷ ಅಥವಾ ಒಕ್ಕೂಟದ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸಲು ವಿಫಲವಾದರೆ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಾರೆ. ಇದು ಹೊಸ ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡಲು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಮೂರು ಅವಧಿಗಳ ತೃಣಮೂಲ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಸರ್ಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಟಿಎಂಸಿ ಕೇವಲ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಈ ನಡುವೆ ಭಾರತೀಯ ಚುನಾವಣಾ ಆಯೋಗದ ಬೆಂಬಲದೊಂದಿಗೆ ಭಾರತೀಯ ಜನತಾ ಪಕ್ಷವು ಚುನಾವಣೆಯಲ್ಲಿ ಅಕ್ರಮವೆಸಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ತಾವೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ಹೇಳಿರುವ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
ಬಿಜೆಪಿಯ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ್ದ ಮಮತಾ ಬ್ಯಾನರ್ಜಿ, ಅಧಿಕೃತವಾಗಿ ಚುನಾವಣಾ ಆಯೋಗದ ಮೂಲಕ, ಅವರು ನಮ್ಮನ್ನು ಸೋಲಿಸಬಹುದು. ಆದರೆ, ನೈತಿಕವಾಗಿ, ನಾವು ಚುನಾವಣೆಗಳನ್ನು ಗೆದ್ದಿದ್ದೇವೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಶ್ನೆ ಉದ್ಭವಿಸುವುದಿಲ್ಲ. ನಾನು ಸೋತಿಲ್ಲ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಮಮತಾ ಬ್ಯಾನರ್ಜಿ ಅವರ ಈ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಮಾತನಾಡಿರುವ ಆಚಾರ್ಯ, ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋತಿದೆ. ಆದರೆ ಹೊಸ ವಿಧಾನಸಭೆ ರಚನೆಯಾಗಿ ಹೊಸ ಸರ್ಕಾರ ರಚನೆಯಾಗುವವರೆಗೂ ಹಳೆಯ ವಿಧಾನಸಭೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಆಡಳಿತ ಪಕ್ಷ ಚುನಾವಣೆಯಲ್ಲಿ ಸೋತ ತಕ್ಷಣ, ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸುತ್ತಾರೆ. ಅದನ್ನು ಎಲ್ಲರೂ ಅನುಸರಿಸುತ್ತಾರೆ. ನಂತರ ರಾಜ್ಯಪಾಲರು ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಮುಖ್ಯಮಂತ್ರಿಗೆ ಸಲಹೆ ನೀಡುತ್ತಾರೆ ಎಂದು ಆಚಾರ್ಯ ಹೇಳಿದರು.
ಸರ್ಕಾರ ರಚನೆಯಾಗುವವರೆಗೆ ಅವರು ಮುಖ್ಯಮಂತ್ರಿಯಾಗಬಹುದು. ಅವರು ಇಂದು ರಾಜೀನಾಮೆ ನೀಡಿದರೂ ರಾಜ್ಯಪಾಲರು ಅವರನ್ನು ಕಚೇರಿಯಲ್ಲಿ ಮುಂದುವರಿಯುವಂತೆ ಕೇಳಿಕೊಳ್ಳುತ್ತಾರೆ ಇದು ನಿಯಮ ಕೂಡಾ ಹೌದು ಎಂದು ತಿಳಿಸಿದ್ದಾರೆ.
ಇದರಲ್ಲಿ ರಾಜ್ಯಪಾಲರ ಪಾತ್ರ ಏನು?: ಸಿಎಂ ಒಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದ ಈ ಸಂದರ್ಭದಲ್ಲಿ ರಾಜ್ಯಪಾಲರು ಏನು ಮಾಡಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಚಾರ್ಯ ಅವರು, ಸದಸ್ಯರ ಪರೀಕ್ಷೆಯ ಅಗತ್ಯವಿಲ್ಲ. ಏಕೆಂದರೆ ಬಿಜೆಪಿಗೆ ಭಾರಿ ಬಹುಮತವಿದೆ. ಈ ಸಂದರ್ಭದಲ್ಲಿ ಬಹುಮತದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಹುಮತದ ಬಗ್ಗೆ ಸಂದೇಹವಿದ್ದಾಗ ಬಹುಮತದ ಪರೀಕ್ಷೆ ನಡೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈತ್ರಿಕೂಟವಿದ್ದಾಗ ರಾಜ್ಯಪಾಲರು ಬಹುಮತದ ಪರೀಕ್ಷೆಯನ್ನು ಕೇಳಬಹುದು ಎಂದು ಆಚಾರ್ಯ ಹೇಳಿದರು. ಅದು ಈಗ ಅಗತ್ಯವಿಲ್ಲ. ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಹಾಗಾದರೆ, ಬಹುಮತ ಪರೀಕ್ಷೆಯ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಮರು ಪ್ರಶ್ನಿಸಿರುವ ಅವರು, ಅದರ ಅಗತ್ಯ ಈಗಿರುವುದಿಲ್ಲ ಎಂದು ಹೇಳಿದರು. ಈ ವೇಳೆ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಬೇಕಿದೆ. ಹೊಸ ಸಿಎಂಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಿದ್ದಂತೆ ಹಳೆಯ ಸರ್ಕಾರದ ಅವಧಿ ಮುಗಿದು ಹೋಗುತ್ತದೆ. ಬ್ಯಾನರ್ಜಿ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೇ ಅದು ಅಸ್ತಿತ್ವದಲ್ಲಿ ಇರುವುದಿಲ್ಲ. ಹೀಗಾಗಿ ಅವರು ಸಹ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಅವರು ಸಾಂವಿಧಾನಿಕ ನಿಯಮದ ಬಗ್ಗೆ ಹೇಳಿದರು.
ಹೊಸ ವಿಧಾನಸಭೆಯು ಚುನಾವಣಾ ಆಯೋಗದ ಅಧಿಸೂಚನೆಯ ಕುರಿತು ಹಾಗೂ ಚುನಾವಣಾ ಆಯೋಗವು ಸರ್ಕಾರ ರಚನೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಆಚಾರ್ಯ ಇದೇ ವೇಳೆ ಸ್ಪಷ್ಟಪಡಿಸಿದರು. ಆಯೋಗವು ಎಲ್ಲಾ ಚುನಾಯಿತ ಸದಸ್ಯರನ್ನು ಒಳಗೊಂಡ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದೆ. ಅಧಿಸೂಚನೆ ಹೊರಡಿಸಿದ ನಂತರ, ಸದನವು ಅಸ್ತಿತ್ವಕ್ಕೆ ಬಂದಿದೆ ಎಂದು ಪರಿಗಣಿಸಲಾಗುತ್ತದೆ. ಹೊಸ ಸರ್ಕಾರವು ಹಿಂದಿನ ಸದನವನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಸಲಹೆ ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಹಾಲಿ ವಿಧಾನಸಭೆಯ ಅಧಿಕಾರಾವಧಿ ಮೇ 7 ರಂದು ಮುಕ್ತಾಯಗೊಳ್ಳುತ್ತದೆ.
ಇವುಗಳನ್ನೂ ಓದಿ:
ಲೋಕಸಭೆಯಲ್ಲಿ ಬಿಜೆಪಿಯ ಪ್ರತಿ 6ನೇ ಸಂಸದ ಮತ ಕದ್ದು ಗೆದ್ದಿದ್ದಾರೆ: ರಾಹುಲ್ ಗಾಂಧಿ

