ETV Bharat / bharat

ಟಿಎಂಸಿ ಮಾಲೀಕತ್ವದ ವಿವಾದ: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಬಣದಿಂದ ಉತ್ತರ ಸಲ್ಲಿಕೆ

ಟಿಎಂಸಿ ಮಾಲೀಕತ್ವಕ್ಕಾಗಿ ರಿತಬ್ರತ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಬಣದಿಂದ ಪೈಪೋಟಿ - ಚುನಾವಣಾ ಆಯೋಗದ ಮುಂದೆ ಉತ್ತರ ಸಲ್ಲಿಸಿದ ಉಭಯ ಬಣಗಳು.

TMC OWNERSHIP TUSSLE
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ETV Bharat)
author img

By ETV Bharat Karnataka Team

Published : July 6, 2026 at 8:25 PM IST

3 Min Read
Choose ETV Bharat

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮಾಲೀಕತ್ವಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಪಕ್ಷದ ಎಲ್ಲ ಆಸ್ತಿ, ಕಚೇರಿಗಳ ಒಡೆತನ ತನ್ನ ವಶಕ್ಕೆ ನೀಡಬೇಕು ಎಂದು ರಿತಬ್ರತ ಬ್ಯಾನರ್ಜಿ ಬಣ ಕೇಳಿದೆ. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಮಮತಾ ಬ್ಯಾನರ್ಜಿ ಬಣಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು. ಈ ಬೆನ್ನಲ್ಲೇ, ಮಮತಾ ನೇತೃತ್ವದ ಬಣವು ಇಂದು ಆಯೋಗಕ್ಕೆ ತನ್ನ ಲಿಖಿತ ಉತ್ತರ ಸಲ್ಲಿಸಿದೆ.

ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎದುರು ಹೀನಾಯವಾಗಿ ಸೋತ ದಿನದಿಂದ ಟಿಎಂಸಿ ಪಕ್ಷವು ಆಂತರಿಕವಾಗಿ ಭಾರಿ ಬೇಗುದಿ ಎದುರಿಸುತ್ತಿದೆ. ಪಕ್ಷದ ಶಾಸಕರು ಮಾಜಿ ಸಿಎಂ ಮಮತಾ ವಿರುದ್ಧವೇ ಬಂಡೆದಿದ್ದಾರೆ. ತಾವೇ ಪಕ್ಷದ ನಾಯಕರು, ತಮಗೆ ಶಾಸಕರ ಬೆಂಬಲವಿದೆ ಎಂದು ರಿತಬ್ರತ ಬ್ಯಾನರ್ಜಿ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ಬಣವೂ ಸಹ ಈ ವಿಷಯವಾಗಿ ಆಯೋಗವನ್ನು ಸಂಪರ್ಕಿಸಿತ್ತು.

ಪಕ್ಷದ ಸಾಂಸ್ಥಿಕ ಚುನಾವಣೆಗಳು ಮತ್ತು ಅಧಿಕೃತ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ತಮ್ಮ ವಾದ ಮಂಡಿಸುವಂತೆ ಚುನಾವಣಾ ಆಯೋಗವು ಎರಡೂ ಬಣಗಳಿಗೆ ಸೂಚಿಸಿತ್ತು. ಸೋಮವಾರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗವು ಉಭಯ ಬಣಗಳಿಗೆ ಗಡುವು ನೀಡಿತ್ತು. ಅದರಂತೆ ಮಮತಾ ಬಣ ಉತ್ತರ ಸಲ್ಲಿಸಿದೆ.

ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, "ರಿತಬ್ರತ ಬ್ಯಾನರ್ಜಿ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಕೇಳಿದ್ದ ಪ್ರಶ್ನೆಗಳಿಗೆ ಇಂದು ನಾವು ಅಧಿಕೃತವಾಗಿ ಉತ್ತರವನ್ನು ದಾಖಲಿಸಿದ್ದೇವೆ" ಎಂದು ತಿಳಿಸಿದರು. ಈ ವೇಳೆ ಅವರೊಂದಿಗೆ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸಾಗರಿಕಾ ಘೋಷ್ ಉಪಸ್ಥಿತರಿದ್ದರು.

ಮಮತಾ ಬಣದ ವಾದವಿದು: ರಿತಬ್ರತ ಬಣದ ವಾದ ಪ್ರಸ್ತಾಪಿಸಿದ ಕಲ್ಯಾಣ್ ಅವರು, "2022 ರಲ್ಲಿ ಆರಂಭವಾದ ಪಕ್ಷದ ಕಾರ್ಯಕಾರಿ ಸಮಿತಿಯ ಮೂರು ವರ್ಷಗಳ ಅವಧಿ ಮುಕ್ತಾಯಗೊಂಡಿದೆ ಎಂದು ಅವರು ವಾದಿಸುತ್ತಿದ್ದಾರೆ. ಆದರೆ, 1997 ರಲ್ಲಿ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಅನ್ನು ರಾಜಕೀಯ ಪಕ್ಷವೆಂದು ಆಯೋಗ ಗುರುತಿಸಿತ್ತು. ಡಿಸೆಂಬರ್ 1997 ರಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಜಿತ್ ಪಂಜಾ ಅವರು ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ತಾವು ಬೇರೆ ಯಾವುದೇ ಪಕ್ಷದ ಸದಸ್ಯರಲ್ಲ, ತೃಣಮೂಲ ಕಾಂಗ್ರೆಸ್‌ನೊಂದಿಗೆ ಇದ್ದೇವೆ ಎಂದು ಘೋಷಿಸಿದ್ದರು" ಎಂದರು.

"1997 ರ ಡಿಸೆಂಬರ್‌ನಲ್ಲಿ ಆಯೋಗದ ಪೂರ್ಣ ಪೀಠವು 'ಹುಲ್ಲಿನ ಮೇಲಿನ ಜೋಡಿ ಹೂವು' ಚಿಹ್ನೆಯನ್ನು ಮಂಜೂರು ಮಾಡಿತು. ಪಕ್ಷವು 1998ರ ಲೋಕಸಭೆ ಚುನಾವಣೆಯಲ್ಲಿ 7 ಮತ್ತು 1999 ರಲ್ಲಿ 8 ಸ್ಥಾನಗಳನ್ನು ಗೆದ್ದಿತು. 2000ನೇ ಇಸವಿಯಲ್ಲಿ, ಹಲವು ರಾಜ್ಯಗಳಲ್ಲಿ ಕಚೇರಿಗಳನ್ನು ತೆರೆದ ಹಿನ್ನೆಲೆಯಲ್ಲಿ ಇದನ್ನು 'ಅಖಿಲ ಭಾರತ ತೃಣಮೂಲ ಕಾಂಗ್ರೆಸ್' (AITC) ಎಂದು ಮರುನಾಮಕರಣ ಮಾಡಲಾಗಿರುವ ಕುರಿತು ಆಯೋಗಕ್ಕೆ ಲಿಖಿತವಾಗಿ ತಿಳಿಸಲಾಯಿತು. ಅಂದಿನ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿತ್ತು" ಎಂದು ಅವರು ವಿವರಿಸಿದರು.

2006 ರಲ್ಲಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಿ ಸಮಿತಿಯ ಅವಧಿಯನ್ನು ನಾಲ್ಕು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಿರುವ ಬಗ್ಗೆ ಚುನಾವಣಾ ಆಯೋಗದ ಕಾರ್ಯದರ್ಶಿಗೆ ತಿಳಿಸಿದ್ದರು. ಅಂದಿನಿಂದ ಸಾಂಸ್ಥಿಕ ಚುನಾವಣೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ನಿಯಮಿತವಾಗಿ ನಡೆಯುತ್ತಿವೆ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. 2022 ರಲ್ಲಿ ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣೆ ನಡೆದು ಮಮತಾ ಬ್ಯಾನರ್ಜಿ ಅವರು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಬಂಡಾಯ ಶಾಸಕರಿಗೆ ಸವಾಲು: ರಿತಬ್ರತ ಬಣದ ತರ್ಕದ ವಿರುದ್ಧ ಕಿಡಿಕಾರಿದ ಕಲ್ಯಾಣ್ ಬ್ಯಾನರ್ಜಿ, "ಅವಧಿ ಮುಗಿದಿದೆ ಎನ್ನುವುದಾದರೆ, ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಚಿಹ್ನೆಯಡಿಯಲ್ಲೇ ಹೇಗೆ ಸ್ಪರ್ಧಿಸಿದರು? ಆ ಚಿಹ್ನೆಯನ್ನು ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲೇ ಹಂಚಿಕೆ ಮಾಡಲಾಗಿತ್ತು. ಅವರ ವಾದವನ್ನೇ ಒಪ್ಪುವುದಾದರೆ, 2026 ರ ಚುನಾವಣೆಯೇ ಅಸಿಂಧುವಾಗುತ್ತದೆ. ಹಾಗಿದ್ದಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು.

ಮೇ 6 ಮತ್ತು ಮೇ 19 ರಂದು ನಡೆದ ಟಿಎಂಸಿ ಶಾಸಕರ ಸಭೆಗಳಲ್ಲಿ ಈ ಬಂಡಾಯ ನಾಯಕರು ಭಾಗವಹಿಸುವ ಮೂಲಕ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ಸಹಿ ವಿವಾದಕ್ಕೆ ಸಂಬಂಧಿಸಿದಂತೆ ರಿತಬ್ರತ ಅವರು ನೀಡಿದ ಪೊಲೀಸ್ ದೂರಿನಲ್ಲೂ ತಮ್ಮನ್ನು ಟಿಎಂಸಿ ಶಾಸಕ ಎಂದೇ ಬಣ್ಣಿಸಿಕೊಂಡಿದ್ದಾರೆ ಎಂದು ಕಲ್ಯಾಣ್ ನೆನಪಿಸಿದರು.

ಜೂನ್ 3 ರಂದು ಅವರು ಸ್ಪೀಕರ್ ಅವರಿಗೆ ಪತ್ರ ಬರೆದು ತಾವು ಟಿಎಂಸಿ ಒಳಗಿನ ಒಂದು ಬಣ ಎಂದು ಹೇಳಿಕೊಂಡಿದ್ದರು. ಈಗ ಹೊಸ ತೃಣಮೂಲ ಪಕ್ಷ ಕಟ್ಟುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಇದ್ಯಾವುದೂ ಕಾನೂನುಬದ್ಧವಾಗಿ ನಡೆದಿಲ್ಲ. ಯಾವುದೇ ಬ್ಲಾಕ್ ಅಥವಾ ಜಿಲ್ಲಾ ಮಟ್ಟದ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ಕಲ್ಯಾಣ್ ಆರೋಪಿಸಿದರು.

ಇವುಗಳನ್ನೂ ಓದಿ: