ಮಕ್ಕಳ್ ಶಕ್ತಿ ಇಯಕ್ಕಂ: ಜನ್ಮದಿನದಂದೇ ಹೊಸ ರಾಜಕೀಯ ಪಕ್ಷ ಪ್ರಾರಂಭಿಸುತ್ತಾರಾ ಅಣ್ಣಾಮಲೈ!
ತಮಿಳುನಾಡಿನಲ್ಲಿ ಬಿಜೆಪಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ, ಅಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿತ್ತು.


Published : June 2, 2026 at 7:18 AM IST
ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಜೂನ್ 4ರ ತಮ್ಮ ಜನ್ಮದಿನದಂದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಬಹುದು ಎಂಬ ಊಹಾಪೋಹಗಳಿವೆ. ಈ ವಿಚಾರವೀಗ ತಮಿಳುನಾಡಿನಾದ್ಯಂತ ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.
ಅಣ್ಣಾಮಲೈ ಅವರನ್ನು ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ, ಪಕ್ಷವು ರಾಜ್ಯದ ಜನರಲ್ಲಿ ಅಭೂತಪೂರ್ವ ಮಟ್ಟದ ಸ್ವೀಕಾರವನ್ನು ಪಡೆದುಕೊಂಡಿತ್ತು. ಆಗಿನ ಡಿಎಂಕೆ ಸರ್ಕಾರದ ವಿರುದ್ಧ ಅವರು ಟೀಕಾ ಪ್ರಹಾರವನ್ನು ನಡೆಸಿದ್ದರು. ದೈನಂದಿನ ಸಮಸ್ಯೆಗಳ ಬಗ್ಗೆ ದೈನಂದಿನ ಪತ್ರಿಕಾಗೋಷ್ಠಿಗಳು ಮತ್ತು 'ಎನ್ ಮನ್ ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮಾನಸದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಇದಲ್ಲದೇ ಡಿಎಂಕೆ ಆಡಳಿತದಲ್ಲಿನ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಟೀಕೆ ಮಾಡುತ್ತಿದ್ದರು. ಇದು ಸಾರ್ವಜನಿಕ ಚರ್ಚೆಯ ಪ್ರಮುಖ ವಿಷಯವಾಗಿ ಪರಿವರ್ತನೆಯಾಗಿತ್ತು. ಪರಿಣಾಮವಾಗಿ ಆ ಸಮಯದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಾಮಲೈ ವಿರುದ್ಧ ಡಿಎಂಕೆ ಸರ್ಕಾರ ಮೊಕದ್ದಮೆ ಕೂಡಾ ಹೂಡಿತ್ತು.
ಅಣ್ಣಾಮಲೈ ಡಿಎಂಕೆ ವಿರುದ್ಧ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದುದರಿಂದ ತಮಿಳುನಾಡಿನ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ಬಿಜೆಪಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿತ್ತು. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ - ಮತ್ತು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧಾರ ತೆಗೆದುಕೊಂಡ ನಂತರ - ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿಯ ರಾಜ್ಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲಾಯಿತು.
ಅಣ್ಣಾಮಲೈ ಅವರಿಂದ ತೆರವಾದ ಸ್ಥಾನಕ್ಕೆ ನಯಿನಾರ್ ನಾಗೇಂದ್ರನ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಲಾಯಿತು. ಈ ಬೆಳವಣಿಗೆಗಳ ನಂತರ ತಮಿಳುನಾಡು ಬಿಜೆಪಿ ಘಟಕದೊಳಗೆ ವಿವಿಧ ಸೈದ್ಧಾಂತಿಕ ಸಂಘರ್ಷಗಳು ನಡೆಯುತ್ತಿವೆ ಎಂಬ ವರದಿಗಳು ಹೊರ ಬೀಳತೊಡಗಿದವು.
ಈ ಆಂತರಿಕ ಭಿನ್ನಾಭಿಪ್ರಾಯಗಳಿಂದ ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸದಿರಲು ನಿರ್ಧರಿಸಿದ್ದರು ಎಂದು ನಂಬಲಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಸ್ಪರ್ಧಿಸಬೇಕು ಎಂದು ಪದೇ ಪದೆ ಒತ್ತಾಯಿಸಿದರೂ, ಅಣ್ಣಾಮಲೈ ಅವರ ವಿನಂತಿಯನ್ನು ಸ್ವೀಕರಿಸಲು ನಿರಾಕರಿಸಿದರು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮೂರನೇ ಸ್ಥಾನಕ್ಕೆ ಕುಸಿದ ಕಾರಣ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಅಣ್ಣಾಮಲೈ ತಮ್ಮ ಹುಟ್ಟುಹಬ್ಬದಂದು ಜೂನ್ 4 ರಂದು ಮಕ್ಕಳ್ ಶಕ್ತಿ ಇಯಕ್ಕಂ (ಜನಶಕ್ತಿ ಚಳವಳಿ) ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಉದ್ದೇಶಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಯಿತು. ಈ ವೇಳೆ, ನೀವು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೀರಾ ಎಂದು ವರದಿಗಾರರು ಅವರನ್ನು ಪ್ರಶ್ನಿಸಿದರು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಅಣ್ಣಾಮಲೈ ಎರಡು ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿ ದೆಹಲಿಗೆ ಹಾರಿದರು.
ಅದೇ ಸಮಯದಲ್ಲಿ ಕೆಲವು ಹಿರಿಯ ಬಿಜೆಪಿ ಕಾರ್ಯಕರ್ತರು ಅಣ್ಣಾಮಲೈ ರಾಜಕೀಯ ಹುದ್ದೆಯನ್ನು ಬಯಸುವ ವ್ಯಕ್ತಿಯಲ್ಲ ಮತ್ತು ಬಿಜೆಪಿ ಬೆಳೆಯಲು ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದು ಏನೇ ಇರಲಿ ಅವರ ಬೆಂಬಲಿಗರಲ್ಲಿ ಪ್ರಮುಖ ನಿರೀಕ್ಷೆಯೆಂದರೆ ಅಣ್ಣಾಮಲೈ ಅವರ ಹುಟ್ಟುಹಬ್ಬದಂದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸುತ್ತಾರೋ ಇಲ್ಲವೋ ಎಂಬುದೇ ಆಗಿದೆ.
ಇದನ್ನು ಓದಿ:
ವಿಧಾನಸಭೆ ಚುನಾವಣೆ ಸೋಲು, ಪಕ್ಷದಲ್ಲಿನ ಆಂತರಿಕ ಭಿನ್ನಮತಕ್ಕೆ ನೊಂದು ಎಐಎಡಿಎಂಕೆ ಕಾರ್ಯಕರ್ತ ಆತ್ಮಹತ್ಯೆ
ಅಗತ್ಯ ಸಂದರ್ಭಗಳಲ್ಲಿ DNA ಪರೀಕ್ಷೆ ನಡೆಸುವಂತೆ ಕೋರ್ಟ್ಗಳು ಸೂಚಿಸಬಹುದು: ಸುಪ್ರೀಂ ಕೋರ್ಟ್

