ETV Bharat / bharat

33 ವರ್ಷದ ಹಿಂದೆ ಸಿಕ್ಕ ₹8 ಸಾವಿರ ಹಣ ಮೂಲ ಮಾಲೀಕರಿಗೆ ಈಗ ಹಿಂತಿರುಗಿಸಿ ಆತ್ಮಸಾಕ್ಷಿ ಮೆರೆದ ವ್ಯಕ್ತಿ!

1933 ರಲ್ಲಿ ಸಿಕ್ಕ ಹಣವನ್ನು ವ್ಯಕ್ತಿಯೊಬ್ಬರು 2026 ರಲ್ಲಿ ಅದನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಿದ ಅಪರೂಪದ ವಿದ್ಯಮಾನ ಮಧ್ಯಪ್ರದೇಶದಲ್ಲಿ ನಡೆದಿದೆ.

MAN RETURNS LOST MONEY
ಹಣ ವಾಪಸ್​ ನೀಡಿದ ಅಧಿಕಾರಿ ಸಕೀರ್ ಹುಸೇನ್ ಮನ್ಸೂರಿ (ಎಡಭಾಗ) (ETV Bharat)
author img

By ETV Bharat Karnataka Team

Published : May 2, 2026 at 4:03 PM IST

2 Min Read
Choose ETV Bharat

ರತ್ಲಂ (ಮಧ್ಯಪ್ರದೇಶ): 'ಪರರ ಹಣ ಪಾಶಾಣಕ್ಕೆ ಸಮ' ಎಂಬ ಮಾತಿದೆ. ಅದರ ಜೊತೆಗೆ, ಕೆಲವೊಮ್ಮೆ ಅಚಾನಕ್ಕಾಗಿ ಸಿಕ್ಕ ಹಣವೂ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇಲ್ಲೊಬ್ಬರಿಗೆ, ಕಳೆದ 33 ವರ್ಷಗಳ ಹಿಂದೆ ಸಿಕ್ಕ ಕೇವಲ 8 ಸಾವಿರ ರೂಪಾಯಿ ಆತನನ್ನು ಇನ್ನಿಲ್ಲದಂತೆ ಕಾಡಿದೆ. ಮಾನಸಿಕ ತೊಳಲಾಟ ತಪ್ಪಿಸಿಕೊಳ್ಳಲು ಮೊತ್ತದ ನಿಜವಾದ ಮಾಲೀಕನನ್ನು ಈಗ ಪತ್ತೆ ಮಾಡಿ ಹಿಂದಿರುಗಿಸಿ ನಿರಾಳರಾಗಿದ್ದಾರೆ.

ಈ ಘಟನೆಯು ಆತನ ಆತ್ಮಸಾಕ್ಷಿ ಮತ್ತು ಉದಾರತೆಗೆ ಹಿಡಿದ ಕನ್ನಡಿ. 10 ರೂಪಾಯಿಗಾಗಿ ಕೊಲೆ ನಡೆಯುವ ಈ ಕಾಲದಲ್ಲಿ 33 ವರ್ಷಗಳ ನಂತರ ಹಣವನ್ನು ಹಿಂತಿರುಗಿಸಿರುವುದು ನಿಜಕ್ಕೂ ಮಾದರಿ ನಡೆ.

ರತ್ಲಂ ಜಿಲ್ಲಾ ಪಂಚಾಯತ್‌ನಲ್ಲಿ ಅಸಿಸ್ಟೆಂಟ್​ ಸ್ಟಾಟಸ್ಟಿಕಲ್​ ಆಫೀಸರ್​ ಆಗಿ ಕೆಲಸ ಮಾಡುತ್ತಿರುವ ಸಕೀರ್ ಹುಸೇನ್ ಮನ್ಸೂರಿ ಹಣ ಹಿಂತಿರುಗಿಸಿದವರು. ಹಣ ಸಿಕ್ಕಿದ್ದು, ನಂತರದ ಮಾನಸಿಕ ಹೊಯ್ದಾಟ, ಇದರಿಂದ ತಪ್ಪಿಸಿಕೊಳ್ಳಲು ಮಾಲೀಕರಿಗೆ ಹಣ ಹಿಂದಿರುಗಿಸಿದ ಬಗ್ಗೆ ಸಕೀರ್​ ಅವರು ಮಾಹಿತಿ ಹಂಚಿಕೊಂಡಿದ್ದು ಹೀಗಿದೆ..

ರಸ್ತೆಯಲ್ಲಿ ಸಿಕ್ಕ ಹಣದ ಚೀಲ: 1993ರ ಆಗಸ್ಟ್ 8 ರಂದು ರಾತ್ರಿ 10 ಗಂಟೆ ಸುಮಾರಿನಲ್ಲಿ ರತ್ಲಂನಿಂದ ಜಾವೋರಾಗೆ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿ ಚೀಲವೊಂದು ಸಿಕ್ಕಿತು. ತೆಗೆದು ನೋಡಿದಾಗ ಅದರಲ್ಲಿ 8 ಸಾವಿರ ರೂಪಾಯಿ ಹಣ ಜೊತೆಗೆ ಒಂದಷ್ಟು ರಸೀದಿ, ದಾಖಲೆಗಳು ಇದ್ದವು. ಇಷ್ಟು ದೊಡ್ಡ ಮೊತ್ತವನ್ನು ಕಂಡು ಸಂತೋಷವಾಗಿತ್ತು. ನನ್ನ ಜೊತೆಗಿದ್ದ ಸ್ನೇಹಿತನ ಜೊತೆಗೂಡಿ ಹಣವನ್ನು ಹಂಚಿಕೊಂಡೆ. ಅದನ್ನು ನನ್ನ ಅಗತ್ಯಗಳಿಗಾಗಿ ಖರ್ಚು ಮಾಡಿದೆ.

ವರ್ಷಗಳು ಕಳೆದವು. ಆದರೆ, ಯಾರದ್ದೋ ಕಳೆದುಹೋದ ಹಣವನ್ನು ನಾವು ತಿಂದು ತೇಗಿದೆವು ಎಂಬ ಅಳುಕು ಮಾತ್ರ ನನ್ನಲ್ಲಿತ್ತು. ಕಳೆದುಕೊಂಡವರು ಎಷ್ಟು ಕಷ್ಟ ಅನುಭವಿಸಿದರೋ ಎಂಬುದು ನನ್ನನ್ನು ಕಾಡುತ್ತಿತ್ತು. ಹಣವನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಬೇಕಿತ್ತು ಎಂದು ಹಲವು ಬಾರಿ ಆಲೋಚಿಸಿದ್ದೆ.

ಇದರ ನಡುವೆ, ನನ್ನೊಂದಿಗೆ ಹಣ ಹಂಚಿಕೊಂಡ ಸ್ನೇಹಿತ ಸಾವಿಗೀಡಾದ. ಈ ಘಟನೆಯು ನನ್ನನ್ನು ಇನ್ನಿಲ್ಲದಂತೆ ಕಾಡಿತು. ಸಿಕ್ಕ ಹಣದಿಂದಲೇ ನಮಗೆ ತಾಪತ್ರಯಗಳು ಬರುತ್ತಿವೆ ಎಂದೆನಿಸತೊಡಗಿತು. ಹೇಗಾದರೂ ಮಾಡಿ ಹಣವನ್ನು ವಾಪಸ್​ ಕೊಡಲೇಬೇಕು ಎಂದು ಅಂದೇ ನಿಶ್ಚಯಿಸಿದೆ.

ಕಳೆದುಹೋದ ಹಣದ ಮಾಲೀಕರಿಗಾಗಿ ಹುಡುಕಾಟ: ಅಪರಾಧ ಭಾವನೆ ನನ್ನಲ್ಲಿ ಹೆಚ್ಚಿತು. ದಾಖಲೆಗಳನ್ನು ನಾಶ ಮಾಡಿದರೂ, ಹಣವನ್ನಾದರೂ ವಾಪಸ್ ಕೊಡಬೇಕು ಎಂದು ನಿರ್ಧರಿಸಿ ಅದರ ಮೂಲ ಮಾಲೀಕರಿಗಾಗಿ ಹುಡುಕಾಟ ಪ್ರಾರಂಭಿಸಿದೆ. ಅಂದು ದಾಖಲೆಗಳನ್ನು ನಾಶ ಮಾಡುವಾಗ, ಸಂಸ್ಥೆಯೊಂದರ ಹೆಸರು ನೆನಪಿತ್ತು. ಅದನ್ನು ನನ್ನ ಸ್ನೇಹಿತರು, ಪರಿಚಯಸ್ಥರ ಬಳಿ ವಿಚಾರಿಸಿದೆ.

ದೀರ್ಘ ಹುಡುಕಾಟದ ನಂತರ, ರತ್ಲಂನಲ್ಲಿರುವ ಉದ್ಯಮಿ ಬಾಲಕೃಷ್ಣ ರಾಥೋಡ್ ಅವರಿಗೆ ಸಂಬಂಧಿಸಿದ ಸಂಸ್ಥೆ ಎಂಬುದು ಪತ್ತೆ ಮಾಡಿದೆ. ಅವರನ್ನು ವಿಚಾರಿಸಿದಾಗ, ಆ ಮೊತ್ತವು ರಾಥೋಡ್ ಅವರ ಸೋದರಳಿಯನಿಗೆ ಸೇರಿದ್ದು. ಆತ ಅಂದು ಕಳೆದುಕೊಂಡಿದ್ದ. ಇದರಿಂದ ಅವರು ತೀವ್ರ ನೊಂದಿದ್ದರು ಎಂಬುದು ಗೊತ್ತಾಯಿತು.

ಬಳಿಕ ನಾನು, "ಅಷ್ಟೂ ಹಣವನ್ನು ಅವರಿಗೆ ಹಿಂತಿರುಗಿಸಿ ಕ್ಷಮೆಯಾಚಿಸಿದೆ. ಅವರ ಕುಟುಂಬವು ಹಣವನ್ನು ಪಡೆದುಕೊಂಡು, ನನ್ನನ್ನು ಕ್ಷಮಿಸಿದರು. ಬಹಳ ವರ್ಷಗಳಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಸೆಣಸಾಡುತ್ತಿದ್ದ ನಾನು ಇಂದು ನಿರಾಳನಾದೆ. ಒಬ್ಬ ಮನುಷ್ಯ ತಪ್ಪು ಮಾಡಿದರೆ, ಆತನ ಅಂತಃಆತ್ಮಸಾಕ್ಷಿಯು ನಿರಂತರವಾಗಿ ಕಾಡುತ್ತಿರುತ್ತದೆ. ಆ ತಪ್ಪನ್ನು ಸರಿಪಡಿಸಿಕೊಂಡಾಗ ಮಾತ್ರ ನಿಜವಾದ ಶಾಂತಿ ಸಿಗುತ್ತದೆ" ಎಂಬುದು ಸಕೀರ್ ಹುಸೇನ್ ಮನ್ಸೂರಿ ಮಾತು.

ಇವುಗಳನ್ನೂ ಓದಿ: