ETV Bharat / bharat

ಶೋಪಿಯಾನ್​ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ : ಎನ್‌ಕೌಂಟರ್​ಗೆ​​ LET ಭಯೋತ್ಪಾದಕ ಹತ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.

LET TERRORIST KILLED
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : July 8, 2026 at 1:13 PM IST

1 Min Read
Choose ETV Bharat

ಶೋಪಿಯಾನ್( ಜಮ್ಮು ಮತ್ತು ಕಾಶ್ಮೀರ್​): ಶೋಪಿಯಾನ್ ಜಿಲ್ಲೆಯ ಸೈದಪೋರಾ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭದ್ರತಾ ಪಡೆಗಳು ನಡೆಸುತ್ತಿರುವ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕನೊಬ್ಬ ಹತನಾಗಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತ ಭಯೋತ್ಪಾದಕನನ್ನು ಕುಲ್ಗಮ್ ಜಿಲ್ಲೆಯ ನಿವಾಸಿ ಜಾಕೀರ್ ಅಹ್ಮದ್ ಗನಿ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಗನಿ 2023 ಸೆಪ್ಟಂಬರ್ 27 ರಿಂದ ಕಾಣೆಯಾಗಿದ್ದ, ನಂತರ ಭಯೋತ್ಪಾದಕರ ಗುಂಪಿಗೆ ಸೇರಿದ್ದನು.

ಸೈದಪೋರಾ ಗ್ರಾಮದಲ್ಲಿ ಭಯೋತ್ಪಾದಕರ ಇರುವಿಕೆ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶನಿವಾರ ಪ್ರಾರಂಭಿಸಲಾದ ಕಾರ್ಯಾಚರಣೆ ಬುಧವಾರ ಸತತ ಐದನೇ ದಿನಕ್ಕೆ ಕಾಲಿಟ್ಟಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಮುಂದುವರಿಸಿದಾಗ, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯ ನಂತರ, ಪ್ರದೇಶದಿಂದ ಭಯೋತ್ಪಾದಕನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‌ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಬೇರೆ ಯಾವುದೇ ಭಯೋತ್ಪಾದಕರು ಅಡಗಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ್​ ಪೊಲೀಸರು "ನೀವು ಓಡಬಹುದು, ಆದರೆ ನೀವು ಅಡಗಿಕೊಳ್ಳಲು ಸಾಧ್ಯವಿಲ್ಲ!" ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಸೇನೆಯ ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆ ಗುಂಪು (SOG) ಶೋಪಿಯಾನ್ ಒಬ್ಬ ಲಷ್ಕರ್-ಎ-ತೈಬಾ ಭಯೋತ್ಪಾದಕನನ್ನು ಹೊಡೆದುರುಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಗಳು ಮುಂದುವರೆದಿರುವುದರಿಂದ ಪ್ರದೇಶದ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿ ಪ್ರದೇಶವನ್ನು ಸಂಪೂರ್ಣವಾಗಿ ಸುರಕ್ಷಿತವೆಂದು ಘೋಷಿಸಿದ ನಂತರ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಮತ್ತು ಇತರೆ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಯುಎಪಿಎ ಅಡಿ 23 ಭಯೋತ್ಪಾದಕರನ್ನ ಪಟ್ಟಿ ಮಾಡಿದ ಗೃಹ ಸಚಿವಾಲಯ