ಅಪಘಾತದ ಬಳಿಕ ವಶಕ್ಕೆ ಪಡೆಯಲಾಗಿದ್ದ ಲ್ಯಾಂಬೋರ್ಗಿನಿ ಕಾರು: 8.30 ಕೋಟಿ ರೂ. ಜಾಮೀನಿನ ಮೇಲೆ ಬಿಡುಗಡೆ
ಫೆ.7ರಂದು ಉದ್ಯಮಿಯ ಪುತ್ರನೊಬ್ಬ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದರು.


Published : February 28, 2026 at 10:51 AM IST
ಕಾನ್ಪುರ (ಉತ್ತರ ಪ್ರದೇಶ): ಈ ತಿಂಗಳ ಆರಂಭದಲ್ಲಿ ಫೆ. 7ರಂದು ಕಾನ್ಪುರ ನಗರದ ಗ್ವಾಲ್ಟೋಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪ್ರಕರಣದಲ್ಲಿ ಲ್ಯಾಂಬೋರ್ಗಿನಿ ರೆವೆಲ್ಟೊ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಈ ಕಾರನ್ನು 8.30 ಕೋಟಿ ರೂ.ಗಳ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸೂರಜ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠವು ಐಷಾರಾಮಿ ವಾಹನವನ್ನು ಷರತ್ತುಗಳೊಂದಿಗೆ ಬಿಡುಗಡೆ ಮಾಡಲು ಆದೇಶಿಸಿದೆ.
ಈ ಪ್ರಕರಣದಲ್ಲಿ ತಾಂತ್ರಿಕ ಪರೀಕ್ಷೆಗಳು ಮತ್ತು ಪೊಲೀಸ್ ವರದಿಯನ್ನು ಸಹ ನ್ಯಾಯಾಲಯ ಕೋರಿತು. ಎರಡೂ ವರದಿಗಳು ಬಂದ ನಂತರ, ನ್ಯಾಯಾಲಯವು ಬಿಡುಗಡೆ ಅರ್ಜಿಯನ್ನು ಸ್ವೀಕರಿಸಿತು. ಈ ವಿಷಯದ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ ಎಂದು ಕೇಂದ್ರ ಡಿಸಿಪಿ ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
ಸದ್ಯ ಈ ಆದೇಶ ಸಾಕಷ್ಟು ಸದ್ದು ಮಾಡಿದ್ದು, ಲ್ಯಾಂಬೋರ್ಗಿನಿ ಕಾರಿನ ಬೆಲೆ 10 ರಿಂದ 12 ಕೋಟಿ ರೂಪಾಯಿಗಳಷ್ಟಿದ್ದು, ಈಗ ಮಾಲೀಕರು ಅದನ್ನು ಪೊಲೀಸ್ ಠಾಣೆಯಿಂದ ಹೊರತರಲು ಭಾರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬ ಮಾತು ಕೇಳಿದೆ.
ಫೆಬ್ರವರಿ 7ರಂದು ಈ ಘಟನೆ ನಡೆದಿದ್ದು, 10 ಕೋಟಿ ರೂ.ಗಳಿಗಿಂತ ಹೆಚ್ಚು ಬೆಲೆಬಾಳುವ ಇಟಾಲಿಯನ್ ಐಷಾರಾಮಿ ಸ್ಪೋರ್ಟ್ಸ್ ಕಾರು ಕಾನ್ಪುರದ ವಿಐಪಿ ರಸ್ತೆಯಲ್ಲಿ ವೇಗವಾಗಿ ಚಲಿಸಿ, ಮೊದಲು ಇ - ರಿಕ್ಷಾ ನಂತರ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಡಿಕ್ಕಿ ಹೊಡೆದು, ಇದರಿಂದ ಬೈಕ್ ಸವಾರ ಗಾಯಗೊಂಡಿದ್ದ. ನಂತರ ಲ್ಯಾಂಬೋರ್ಗಿನಿ ಬೈಕ್‌ನ ಮುಂಭಾಗದ ಚಕ್ರವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು.
ಪ್ರಾಥಮಿಕ ತನಿಖೆಯಲ್ಲಿ ತಂಬಾಕು ಉದ್ಯಮಿಯ ಮಗ ಶಿವಂ ಮಿಶ್ರಾ ಕಾರನ್ನು ಚಲಾಯಿಸುತ್ತಿದ್ದರು ಎಂದು ಕಂಡು ಬಂದಿತು. ಆದರೆ, ಮಿಶ್ರಾ ತಮ್ಮ ಚಾಲಕ ಮೋಹನ್ ಅವರೇ ಕಾರನ್ನು ಚಲಾಯಿಸುತ್ತಿದ್ದ ಎಂದು ಹೇಳಿದ್ದರು.
ಘಟನೆಯ ನಾಲ್ಕು ದಿನಗಳ ನಂತರ ನಿರ್ಲಕ್ಷ್ಯ ಮತ್ತು ವೇಗದ ಚಾಲನೆ, ಜೀವಗಳಿಗೆ ಅಪಾಯ ಮಾಡಿದ ಆರೋಪದ ಮೇಲೆ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.
ಇವುಗಳನ್ನೂ ಓದಿ:ಪಾದಚಾರಿಗಳು, ದ್ವಿಚಕ್ರ ವಾಹನಗಳ ಮೇಲೆ ಲ್ಯಾಂಬೋರ್ಗಿನಿ ಕಾರು ಹರಿಸಿದ ಉದ್ಯಮಿಯ ಮಗ: ಆರು ಮಂದಿಗೆ ಗಾಯ
ಕಾನ್ಪುರ ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣ: ತಂಬಾಕು ಉದ್ಯಮಿಯ ಮಗ ಅರೆಸ್ಟ್

