ಹೊಸ ಪಕ್ಷ ಘೋಷಿಸಿದ ಬಿಆರ್‌ಎಸ್ ಉಚ್ಚಾಟಿತ ಶಾಸಕಿ ಕವಿತಾ: ಗೆದ್ದು ವಿಧಾನಸಭೆ ಪ್ರವೇಶಿಸುವುದಾಗಿ ಪ್ರತಿಜ್ಞೆ
ಬಿಆರ್‌ಎಸ್ ಪಕ್ಷದ ಉಚ್ಚಾಟಿತ ಶಾಸಕಿ ಕೆ.ಕವಿತಾ ಅವರು ತಮ್ಮ ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ.

Published : January 5, 2026 at 6:34 PM IST
ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ, ಎಂಎಲ್ಸಿ ಆಗಿದ್ದ ಕೆ.ಕವಿತಾ ಅವರು ಬಿಆರ್‌ಎಸ್ ಪಕ್ಷದಿಂದ ಕಳೆದ ವರ್ಷ ಉಚ್ಚಾಟನೆಯಾಗಿದ್ದು ಗೊತ್ತೇ ಇದೆ. ಇಂದು ವಿಧಾನಸಭೆಯಲ್ಲಿ ತಮ್ಮ ಕೊನೆಯ ಭಾಷಣ ಮಾಡಿ, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಹೊಸ ಪಕ್ಷ ಘೋಷಿಸಿದರು.
ಬಿಆರ್‌ಎಸ್ ಪಕ್ಷದಿಂದ ಹೊರದಬ್ಬಿಸಿಕೊಂಡಿದ್ದ ಕವಿತಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅದು ಅಂಗೀಕಾರವಾಗಿರಲಿಲ್ಲ. ಸದನದಲ್ಲಿ ಇಂದು ತಮ್ಮ ಕೊನೆಯ ಭಾಷಣ ಮಾಡಿ, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸಭಾಪತಿಗಳಲ್ಲಿ ಮನವಿ ಮಾಡಿದರು.
ಕವಿತಾ ಭಾವುಕ ಭಾಷಣ: ತಮ್ಮನ್ನು ಬಿಆರ್‌ಎಸ್ ಪಕ್ಷ ಹೇಗೆ ನಡೆಸಿಕೊಂಡಿತು ಎಂಬುದನ್ನು ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಕವಿತಾ ಅವರು, "ಮಾಜಿ ಸಿಎಂ ಕೆ.ಸಿ. ರಾವ್ ಅವರ ಸುತ್ತಮುತ್ತಲಿನ ವ್ಯಕ್ತಿಗಳು ತಮ್ಮ ವಿರುದ್ಧ ಪಿತೂರಿ ನಡೆಸಿದರು. ನನ್ನುನ್ನು ರಾಜಕೀಯವಾಗಿ ಬದಿಗಿಟ್ಟು ಅಂತಿಮವಾಗಿ ಪಕ್ಷದಿಂದಲೇ ಹೊರಗೆ ಕಳುಹಿಸಲಾಯಿತು" ಎಂದು ಆರೋಪಿಸಿದರು.
"ಪಕ್ಷದಲ್ಲಿ ತಮಗೆ ತೀವ್ರ ಅವಮಾನ ಮಾಡಲಾಗಿದೆ. 2014 ರಲ್ಲಿ ತೆಲಂಗಾಣ ರಾಜ್ಯ ರಚನೆಯ ನಂತರ ಬತುಕಮ್ಮ ಹಬ್ಬವನ್ನು ಆಯೋಜಿಸಿದಾಗ ನನ್ನ ವಿರುದ್ಧ ನಿರ್ಬಂಧಗಳು ಹೇರಲಾಯಿತು. ನಾನು ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನನಗೆ ನೀಡಲಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ. ಇದಕ್ಕಾಗಿಯೇ ನಾನು ಎಲ್ಲರೂ ನನ್ನನ್ನು ಗುರಿಯಾಗಿಸಿಕೊಂಡರು" ಎಂದರು.
'ಕೆಸಿಆರ್ಗಾಗಿ ನಾನು ಜೈಲಿಗೆ ಹೋದೆ': "ಪಕ್ಷದಲ್ಲಿಯೇ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವಾಗ ರಾಜ್ಯದಲ್ಲಿ ಪ್ರಜಾಪ್ರಭುತ್ವ ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಪಕ್ಷವು ನನ್ನನ್ನು ಸಂಪೂರ್ಣವಾಗಿ ಅವಮಾನಿಸಿದೆ. ಇ.ಡಿ. ಮತ್ತು ಸಿಬಿಐ ನನ್ನ ವಿರುದ್ಧ ಪ್ರಕರಣ ದಾಖಲಿಸಿದಾಗ ಪಕ್ಷ ನನ್ನೊಂದಿಗೆ ನಿಲ್ಲಲಿಲ್ಲ. ಕೆಸಿಆರ್ ಮೇಲಿನ ರಾಜಕೀಯ ದ್ವೇಷದಿಂದಾಗಿ ಬಿಜೆಪಿ ತನ್ನನ್ನು ಬಂಧಿಸಿತು" ಎಂದು ಕವಿತಾ ಆರೋಪಿಸಿದರು.
"ಪಕ್ಷ ಮತ್ತು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದೇನೆ. ತೆಲಂಗಾಣ ಹುತಾತ್ಮರ ಸ್ಮಾರಕ ನಿರ್ಮಾಣದಿಂದ ಹಿಡಿದು ಜಿಲ್ಲಾ ಕಲೆಕ್ಟರೇಟ್‌ಗಳ ನಿರ್ಮಾಣದವರೆಗೆ ಎಲ್ಲಾ ಕೆಲಸಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದಿಪೇಟೆನಲ್ಲಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಒಂದೇ ಮಳೆಗೆ ಕೊಚ್ಚಿಹೋಯಿತು. ಭ್ರಷ್ಟಾಚಾರಕ್ಕೆ ಇದೇ ಸಾಕ್ಷಿ" ಎಂದು ಅವರು ಹೇಳಿದರು.
ಹೊಸ ಪಕ್ಷ ಘೋಷಣೆ: ಇದೇ ವೇಳೆ, ತಾವು ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ಕವಿತಾ ಅವರು, "ತೆಲಂಗಾಣ ರಚನೆ ಚಳವಳಿಯ ವೇಳೆ ರಚಿಸಿದ್ದ ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಲಾಗುವುದು" ಎಂದರು.
"ಹೊಸ ಪಕ್ಷವನ್ನು ರಾಜ್ಯದಲ್ಲಿ ಬೆಳೆಸುವೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಮತ್ತು ಇತರ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡುತ್ತೇವೆ. ತೆಲಂಗಾಣ ಜಾಗೃತಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ನಾವು ಖಂಡಿತವಾಗಿಯೂ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದ್ದೇವೆ. ಇಂದು ನಾನು ಎಂಎಲ್ಸಿಯಾಗಿ ಸದನದಿಂದ ಹೊರಹೋಗುತ್ತಿದ್ದೇನೆ. ಇಲ್ಲಿಗೆ ನಾನು ಮತ್ತೆ ಶಾಸಕಿಯಾಗಿಯೇ ಒಳಬರುತ್ತೇನೆ" ಎಂದು ಪ್ರತಿಜ್ಞೆ ಮಾಡಿದರು.
"ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ಬಿಆರ್‌ಎಸ್‌ನೊಳಗಿನ ಬಿರುಕಿನ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆಸ್ತಿ ವಿವಾದದಿಂದಾಗಿ ನಾನು ಬಿಆರ್‌ಎಸ್ ತೊರೆಯುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ತಮ್ಮ ಹೋರಾಟ ಆಸ್ತಿಗಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎಂದು ಭಾವುಕರಾಗಿ ಹೇಳಿದರು.
ಇವುಗಳನ್ನೂ ಓದಿ:

