ETV Bharat / bharat

ಬಿಹಾರದ 96 ವರ್ಷ ಹಳೆಯ ಸಸಾಮುಸಾ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಮುಂದಾದ ನಿರಾಣಿ ಎಂಆರ್​ಎನ್​ ಗ್ರೂಪ್​

ನಿತೀಶ್​ ಕುಮಾರ್​ ಸರ್ಕಾರ ಬಂದ್​ ಆಗಿರುವ ಸಕ್ಕರೆ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ಈ ಕಾರ್ಖಾನೆ ಪುನರುಜ್ಜೀವನಗೊಳಿಸಲು ಎಂಆರ್​ಎನ್​ ಗ್ರೂಪ್​ ಮುಂದಾಗಿದೆ.

Karnataka-Based MRN Group To Revive 96-Year-Old Sasamusa Sugar Mill In Bihar
ಸಸಮುಸಾ ಸಕ್ಕರೆ ಕಾರ್ಖಾನೆ (ETV Bharat)
author img

By ETV Bharat Karnataka Team

Published : February 28, 2026 at 1:20 PM IST

2 Min Read
Choose ETV Bharat

ಪಾಟ್ನಾ (ಬಿಹಾರ): ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿರುವ 96 ವರ್ಷ ಹಳೆಯದಾದ ಪ್ರಸಿದ್ಧ ಸಸಾಮುಸಾ ಸಕ್ಕರೆ ಕಾರ್ಖಾನೆ ಪುನರುಜ್ಜೀವನಗೊಳಿಸಿ, ನಿರ್ವಹಿಸಲು ಕರ್ನಾಟಕ ಮೂಲದ ಎಂಆರ್‌ಎನ್ ಗ್ರೂಪ್ ಮುಂದಾಗಿದೆ.

ಈ ಸಂಬಂಧ ಗ್ರೂಪ್‌ನ ಅಧ್ಯಕ್ಷ ಮುರುಗೇಶ್ ಆರ್ ನಿರಾಣಿ ಮತ್ತು ಇತರ ಅಧಿಕಾರಿಗಳು ಮತ್ತು ಬಿಹಾರ ಕಬ್ಬು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಸೆಂಥಿಲ್ ಕುಮಾರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದು, ಅಲ್ಲಿನ ಭೂಮಿ, ಯಂತ್ರೋಪಕರಣಗಳು ಮತ್ತು ಇತರ ಸಂಬಂಧಿತ ಸಮಸ್ಯೆಗಳ ಪರಮಾರ್ಶೆ ನಡೆಸಿದರು.

ಎಂಆರ್‌ಎನ್ ಗ್ರೂಪ್ ಇಂಧನ, ಸಕ್ಕರೆ ಉತ್ಪಾದನೆ, ಸಿಮೆಂಟ್, ನೈಸರ್ಗಿಕ ಅನಿಲ, ನವೀಕರಿಸಬಹುದಾದ ಇಂಧನ, ಶಿಕ್ಷಣ, ಬ್ಯಾಂಕಿಂಗ್, ಚಿಲ್ಲರೆ ವ್ಯಾಪಾರ, ಕೃಷಿ ಉತ್ಪನ್ನಗಳು ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 21 ಕಂಪನಿಗಳನ್ನು ಒಳಗೊಂಡಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಿದ್ದು 'ಏಳು ಸಂಕಲ್ಪಗಳು - 3' ರ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ನಿರ್ಣಯದ ಭಾಗವಾಗಿ ಸರ್ಕಾರ ಬಂದ್​ ಆಗಿರುವ ಸಕ್ಕರೆ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಜೊತೆಗೆ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಕಬ್ಬು ಬೆಳೆಗಾರರ ​​ಆದಾಯವನ್ನು ಹೆಚ್ಚಿಸಲು 25 ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆಗೆ 2025ರ ಡಿಸೆಂಬರ್​ನಲ್ಲಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಯಿತು.

ಸಸಾಮುಸಾ ಸಕ್ಕರೆ ಕಾರ್ಖಾನೆಯ ಇತಿಹಾಸ: ಬ್ರಿಟಿಷರ ಆಡಳಿತದ ಕಾಲದಲ್ಲಿ 1932ರಲ್ಲಿ ನಿರ್ಮಾಣವಾದ ಈ ಸಸಾಮುಸಾ ಸಕ್ಕರೆ ಕಾರ್ಖಾನೆ ಕೈಗಾರೀಕರಣದ ಹೆಗ್ಗರುತಾಗಿದೆ. ವಾಯುವ್ಯ ಬಿಹಾರದ ಗೋಪಾಲಗಂಜ್ ಮತ್ತು ಗಂಡಕ್ ನದಿ ಜಲಾನಯನ ಪ್ರದೇಶದ ಫಲವತ್ತಾದ ಜಮೀನುಗಳ ರೈತರಿಗೆ ಭರವಸೆಯಾಗಿ ಪ್ರಾರಂಭವಾಯಿತು. ಹಲವು ದಶಕಗಳ ಕಾಲ ಉತ್ತಮ ಆರ್ಥಿಕ ಸ್ಥಿತಿ ಹೊಂದಿದ್ದ ಕಾರ್ಖಾನೆ 2015ರಲ್ಲಿ ನಷ್ಟಕ್ಕೆ ಒಳಗಾಗಲಾರಂಭಿಸಿತು. 2018ರಲ್ಲಿ ಉಂಟಾದ 9 ಕಾರ್ಮಿಕರ ಸಾವು, ಕಾರ್ಖಾನೆಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು. 2019ರಲ್ಲಿ 10 ದಿನಗಳ ಕಾಲ ಕಾರ್ಖಾನೆ ಪುನರಾರಂಭಿಸಲಾಯಿತಾದರೂ, ಕಾರ್ಯಾಚರಣೆಗಳು ಸ್ಥಗಿತಗೊಂಡವು. ಅಂದಿನಿಂದ ಕಾರ್ಖಾನೆ ಸಂಪೂರ್ಣವಾಗಿ ಬಂದ್​ ಆಯಿತು.

ಇದೀಗ ಬಿಹಾರ ಸರ್ಕಾರ ಪುನರುಜ್ಜೀನ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಬಾಕಿ ಇರುವ ಪಾವತಿಗಳ ಬಗ್ಗೆಯೂ ನಾವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸೆಂಥಿಲ್ ತಿಳಿಸಿದ್ದಾರೆ. ಕಾರ್ಖಾನೆ ಪರಿಶೀಲಿಸಿದ ಬಳಿಕ ಮಾತನಾಡಿದ ನಿರಾಣಿ, ಬಿಹಾರ ಸರ್ಕಾರವು ಕಬ್ಬು ಅರೆಯುವುದನ್ನು ಪುನರಾರಂಭಿಸಲು ಗಮನಾರ್ಹ ಬೆಂಬಲವನ್ನು ನೀಡುತ್ತಿದೆ. ಕೇವಲ ಸಕ್ಕರೆ ಅರೆದರೆ ಸಾಕಾಗುವುದಿಲ್ಲ. ಅದರಿಂದ ಸ್ಥಳೀಯ ರೈತರು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಜೈವಿಕ ಉತ್ಪನ್ನಗಳನ್ನು ಉತ್ಪಾದಿಸುವ ಯೋಜನೆಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂದರು.

ಈ ಭೇಟಿ ಸಂದರ್ಭದಲ್ಲಿ ಜಂಟಿ ಕಬ್ಬು ಆಯುಕ್ತ ಜೈ ಪ್ರಕಾಶ್ ನಾರಾಯಣ್ ಸಿಂಗ್, ಹಲವಾರು ಬಿಹಾರ ಸರ್ಕಾರಿ ಅಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.

ಈ ತಿಂಗಳ ಆರಂಭದಲ್ಲಿ ಬಿಹಾರ ಸಹಕಾರಿ ಇಲಾಖೆಯು ಮಧುಬನಿ ಜಿಲ್ಲೆಯ ಸಕ್ರಿ ಮತ್ತು ದರ್ಭಂಗಾ ಜಿಲ್ಲೆಯ ರಾಯಮ್‌ನಲ್ಲಿರುವ ಎರಡು ಬಂದ್​ ಆಗಿರುವ ಸಕ್ಕರೆ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಲು ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

1914ರಲ್ಲಿ ರಾಯಮ್ ಕಾರ್ಖಾನೆ ಮತ್ತು 1933ರ ಸಕ್ರಿ ಕಾರ್ಖಾನೆ ಸ್ಥಾಪನೆಗೊಂಡಿದ್ದವು. ಆದರೆ ಈ ಎರಡೂ ಕಾರ್ಖಾನೆಗಳು 1997ರಲ್ಲಿ ಮುಚ್ಚಿದ್ದವು. 68 ಎಕರೆ ಭೂಮಿ ಹೊಂದಿರುವ ರಾಯಮ್​ ಕಾರ್ಖಾನೆ ಕಬ್ಬು ಮತ್ತು ಇತರ ವಸ್ತುಗಳನ್ನು ಸಾಗಿಸಲು 14 ಕಿಮೀ ಉದ್ದದ ಟ್ರಾಲಿ ಹಳಿಗಳನ್ನು ಸಹ ಹೊಂದಿದೆ. ಇನ್ನು ಸಕ್ರಿ ಸಕ್ಕರೆ ಕಾರ್ಖಾನೆ ಸುಮಾರು 47 ಎಕರೆ ಭೂಮಿಯನ್ನು ಹೊಂದಿದೆ.

ಇವುಗಳನ್ನೂ ಓದಿ:

ಹೆಲಿಕಾಪ್ಟರ್, ವಿಮಾನದ ಇಂಧನದಲ್ಲೂ ಕಬ್ಬಿನ ಉಪ ಉತ್ಪನ್ನ ''ಎಥೆನಾಲ್'' ಮಿಶ್ರಣ : ನಿರಾಣಿ

ರೈತರ ಬಾಕಿ ಹಣ ಪಾವತಿ ವಿಚಾರ: ಪ್ರಮಾಣ ಪತ್ರ ಸಲ್ಲಿಸಲು ನಿರಾಣಿ ಶುಗರ್ಸ್‌ಗೆ ಹೈಕೋರ್ಟ್ ಸೂಚನೆ