ETV Bharat / bharat

'ಶ್ರೀಮಂತರಾದ ಕಾರಣಕ್ಕೆ ಕಾಯ್ದೆಯನ್ನೇ ಪ್ರಶ್ನಿಸುವಂತಿಲ್ಲ': ಸುಪ್ರೀಂನಲ್ಲಿ PMLA ನಿಬಂಧನೆ ಪ್ರಶ್ನಿಸಿದ ಅರ್ಜಿ ವಜಾ

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಆರೋಪಿ ವಕೀಲರು ಪಿಎಂಎಲ್​ಎ ಕಾಯ್ದೆಯ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ.

SUPREME COURT
ಸುಪ್ರೀಂಕೋರ್ಟ್​ (Getty Images)
author img

By ETV Bharat Karnataka Team

Published : January 6, 2026 at 4:17 PM IST

2 Min Read
Choose ETV Bharat

ನವದೆಹಲಿ: ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ವಕೀಲರೊಬ್ಬರು ಪಿಎಂಎಲ್‌ಎ ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಲ್ಲದೆ, ಆರೋಪಿತರು ಸಾಮಾನ್ಯ ನಾಗರಿಕರಂತೆ ವಿಚಾರಣೆಯನ್ನು ಎದುರಿಸಬೇಕು ಎಂದು ತಾಕೀತು ಮಾಡಿದೆ.

"ನಾನು ಶ್ರೀಮಂತನಾಗಿರುವುದರಿಂದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸುತ್ತೇನೆ ಎಂಬ ಪದ್ಧತಿ ನಿಲ್ಲಬೇಕು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ವಕೀಲ ಗೌತಮ್ ಖೈತಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಹೇಳಿದೆ.

"ಆರೋಪ ಕೇಳಿಬಂದಾಗ, ಸಿರಿವಂತರು ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರುವುದು ಹೆಚ್ಚಾಗಿದೆ. ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಲಯದ ಮೊರೆ ಹೋಗುವುದೇಕೆ?. ನೀವು ಆರೋಪಿಯಾಗಿದ್ದರೆ, ಇತರ ಸಾಮಾನ್ಯ ನಾಗರಿಕರಂತೆ ವಿಚಾರಣೆ ಎದುರಿಸಿ" ಎಂದು ಕೋರ್ಟ್ ತಿವಿದಿದೆ.

ಪಿಎಂಎಲ್​​ಎ ಕಾಯ್ದೆ ಪ್ರಶ್ನಿಸಿದ್ದ ವಕೀಲ: ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​​ಎ)ಯ ಸೆಕ್ಷನ್​ 44ರ ಪ್ರಕಾರ ನೀಡುವ ಶಿಕ್ಷೆಯನ್ನು ಪ್ರಶ್ನಿಸಿ ವಕೀಲ ಗೌತಮ್ ಖೈತಾನ್ ಅವರು ಸುಪ್ರೀಂಕೋರ್ಟ್​ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯ ವೇಳೆ ವಕೀಲ ಖೈತಾನ್ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ಸೆಕ್ಷನ್ 44 ರ ಸಾಂವಿಧಾನಿಕ ಸಿಂಧುತ್ವದ ಮೇಲೆ ಪ್ರಶ್ನೆ ಎದ್ದಿದೆ. ನ್ಯಾಯಾಲಯದಿಂದ ಪರಿಶೀಲನೆ ಅಗತ್ಯವಿದೆ ಎಂದು ವಾದಿಸಿದರು.

ವಿಜಯ್ ಮದನ್ಲಾಲ್ ಪ್ರಕರಣದಲ್ಲಿ ತನ್ನ ತೀರ್ಪಿನ ವಿರುದ್ಧ ಈಗಾಗಲೇ ಅಂಥದ್ದೊಂದು ಅರ್ಜಿ ವಿಚಾರಣೆಯಲ್ಲಿದೆ. ಹೀಗಾಗಿ, ಅಂಥದ್ದೇ ಮತ್ತೊಂದು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಸಿರಿವಂತರು ಕಾನೂನಿನ ನಿಬಂಧನೆಗಳನ್ನು ಪ್ರಶ್ನಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂದು ಟೀಕಿಸಿದ ಪೀಠವು, ಬೇಕಾದರೆ ಈಗ ನಡೆಯುತ್ತಿರುವ ವಿಚಾರಣೆಯಲ್ಲಿ ಅರ್ಜಿದಾರರು ಭಾಗವಹಿಸಬಹುದು ಎಂದು ತಿಳಿಸಿತ್ತು.

ಸೆಕ್ಷನ್​ 44 ಹೇಳೋದೇನು?: ಈ ಸೆಕ್ಷನ್​ ಪ್ರಕಾರ, ಪಿಎಂಎಲ್​ಎ ವಿಶೇಷ ನ್ಯಾಯಾಲಯವನ್ನು ಹೊರತುಪಡಿಸಿ ಬೇರೆ ನ್ಯಾಯಾಲಯಗಳು ನಿಗದಿತ ಅಪರಾಧವನ್ನು ಗುರುತಿಸಿದರೆ, ಪ್ರಾಧಿಕಾರವು ಅರ್ಜಿ ಸಲ್ಲಿಸಿದ ನಂತರ ಹಣ ವರ್ಗಾವಣೆ ಅಪರಾಧವನ್ನು ವಿಚಾರಣೆ ನಡೆಲು ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ನಿಬಂಧನೆಯು ತಿಳಿಸುತ್ತದೆ. ನ್ಯಾಯವ್ಯಾಪ್ತಿಯ ಸಂಘರ್ಷ ತಡೆ, ಸುಗಮ ವಿಚಾರಣೆ, ಅಪರಾಧ ಮತ್ತು ಹಣ ವರ್ಗಾವಣೆ ಆರೋಪ ಎರಡನ್ನೂ ನಿರ್ಣಯಿಸಲು ಒಂದೇ ನ್ಯಾಯಾಲಯಕ್ಕೆ ಅನುವು ಮಾಡಿಕೊಡುವ ಮೂಲಕ ಸ್ಥಿರತೆಯನ್ನು ಖಚಿತಪಡಿಸುವುದು ಈ ನಿಬಂಧನೆಯ ಉದ್ದೇಶವಾಗಿದೆ.

ಇವುಗಳನ್ನೂ ಓದಿ: