ಉದ್ವಿಗ್ನಗೊಂಡ ಜೆಎನ್‌ಯು ಪ್ರತಿಭಟನೆ; 14 ವಿದ್ಯಾರ್ಥಿಗಳ ಬಂಧನ
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೆಹಲಿ ಪೊಲೀಸರು ತಡೆಯುವ ಯತ್ನ ನಡೆಸಿದ್ದು, ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.


Published : February 27, 2026 at 11:48 AM IST
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಗಳು ಮತ್ತು ಪೊಲೀಸರ ನಡುವಿನ ಘರ್ಷಣೆ ಭುಗಿಲೆದ್ದಿದೆ. ಗುರುವಾರ ಶಿಕ್ಷಣ ಸಚಿವಾಲಯದ ಬಳಿ ನಡೆದ ಪ್ರತಿಭಟನಾ ಮೆರವಣಿಗೆ ದೆಹಲಿ ಪೊಲೀಸರೊಂದಿಗಿನ ಘರ್ಷಣೆಗೆ ಕಾರಣವಾಯಿತು. ಇದು ಕ್ಯಾಂಪಸ್ ಒಳಗೆ ಮತ್ತು ಹೊರಗೆ ಉದ್ವಿಗ್ನತೆಯನ್ನುಂಟು ಮಾಡಿತ್ತು. ನಂತರ ಹದಿನಾಲ್ಕು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ) ಮತ್ತು ಜೆಎನ್‌ಯುಎಸ್‌ಯು ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸುವಾಗ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೆಎನ್‌ಯುಎಸ್‌ಯು ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ, ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ, ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
JNUSU protestors are demanding UGC regulations to be implemented. This is in violation of the Honorable Supreme Court which issued a stay on the regulations. JNU Vice Chancellor or Registrar have no powers over the regulations.
— Jawaharlal Nehru University (JNU) (@JNU_official_50) February 26, 2026
As per university administration, JNUSU until today…
ಬಂಧನದ ಬೆನ್ನಲ್ಲೆ ವಿದ್ಯಾರ್ಥಿಗಳು ವಸಂತ್ ಕುಂಜ್ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿದ್ದು, ಬಿಡುಗಡೆಗೆ ಆಗ್ರಹಿಸಿದ್ದಾರೆ.
ಪ್ರತಿಭಟನೆಗೆ ಕಾರಣ: ವಿದ್ಯಾರ್ಥಿ ಸಂಘಟನೆಗಳು ಹೇಳುವಂತೆ, ಫೆಬ್ರವರಿ 26ರಂದು ಉನ್ನತ ಶಿಕ್ಷಣದಲ್ಲಿ ಸಮಾನತೆಗೆ ಸಂಬಂಧಿಸಿದ ಬಹು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೀರ್ಘ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ರೋಹಿತ್ ವೇಮುಲ ಕಾಯ್ದೆಯ ಮಾದರಿಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಮಾನತೆಯ ಮಾರ್ಗಸೂಚಿಗಳನ್ನು ಜಾರಿಗೆ ತರುವುದು, ವಿಶ್ವವಿದ್ಯಾಲಯಗಳಿಗೆ ಸಾರ್ವಜನಿಕ ನಿಧಿಯನ್ನು ಬಲಪಡಿಸುವುದು, ಎನ್‌ಇಪಿ ಸಂಬಂಧಿತ ಕೋರ್ಸ್‌ಗಳನ್ನು ಹಿಂತೆಗೆದುಕೊಳ್ಳುವುದು. ಹೊಸದಾಗಿ ಪರಿಚಯಿಸಲಾದ ಸಿದ್ಧಾಂತ ಫೌಂಡೇಶನ್ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು.
ಇದರ ಜೊತೆಗೆ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಜಾತಿ ಸಂಬಂಧಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಉಪಕುಲಪತಿ ಪ್ರೊಫೆಸರ್ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
ಪ್ರತಿಭಟನೆಗೆ ತಡೆ: ಸಬರಮತಿ ಟಿ- ಪಾಯಿಂಟ್‌ನಿಂದ ಶಿಕ್ಷಣ ಸಚಿವಾಲಯದವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ಮುಖ್ಯದ್ವಾರ ಸಮೀಪಿಸಿದಾಗ, ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್) ಸಿಬ್ಬಂದಿ ಗೇಟ್‌ಗೆ ಬೀಗ ಹಾಕಿ, ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಕ್ಯಾಂಪಸ್‌ನಿಂದ ಹೊರಹೋಗದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.
ಇದನ್ನು ದಾಟಿ ವಿದ್ಯಾರ್ಥಿಗಳು ಮುಂದೆ ಸಾಗಲು ಪ್ರಯತ್ನಿಸಿದಾಗ ಅನೇಕ ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗ ನಡೆಸಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
ಜೆಎನ್‌ಯುಎಸ್‌ಯು ಅಧ್ಯಕ್ಷೆ ಅದಿತಿ ಮಿಶ್ರಾ ಅವರು, ಕೇಂದ್ರವು ಶಿಕ್ಷಣವನ್ನು ಖಾಸಗೀಕರಣಗೊಳಿಸುವ ನೀತಿಗಳನ್ನು ಮುಂದಿಡುತ್ತಿದೆ. ಶಿಕ್ಷಣವನ್ನು ಮಾರಾಟ ಮಾಡಲಾಗುತ್ತಿದೆ. ಅದನ್ನು ವಿರೋಧಿಸುವವರನ್ನು ತಡೆಯಲಾಗುತ್ತಿದೆ. ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ, ವಿದ್ಯಾರ್ಥಿಗಳು ಮತ್ತು ಆಡಳಿತದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಪೊಲೀಸರು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಆರೋಪದ ನಡುವೆ ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಶಿಕ್ಷಕರ ಮಂಡಳಿಯಿಂದಲೂ ಖಂಡನೆ: ಪ್ರತಿಭಟನೆ ವೇಳೆ ಪೊಲೀಸರ ಕ್ರಮ ದಮನ ಕಾರ್ಯಾಚರಣೆಯಾಗಿದ್ದು, ಇದರಲ್ಲಿ ಅನೇಕ ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ ಎಂದು ಜೆಎನ್‌ಯು ಶಿಕ್ಷಕರ ಸಂಘ (ಜೆಎನ್‌ಯುಟಿಎ) ಅಧ್ಯಕ್ಷ ಸೂರಜಿತ್ ಮಜುಂದಾರ್ ತಿಳಿಸಿದ್ದಾರೆ.
ಇವುಗಳನ್ನೂ ಓದಿ:
ಜೆಎನ್ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ
ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಡಪಂಥೀಯ ಒಕ್ಕೂಟಕ್ಕೆ ಭರ್ಜರಿ ಜಯ, ಎಬಿವಿಪಿಗೆ ಹಿನ್ನಡೆ

