ಜಾರ್ಖಂಡ್ನಲ್ಲಿ HIV ಸೋಂಕಿತರು ಹೆಚ್ಚಳ: 13 ART ಕೇಂದ್ರಗಳ ಆಘಾತಕಾರಿ ಅಧ್ಯಯನ ವರದಿ ಬಹಿರಂಗ
ಜಾರ್ಖಂಡ್ನಲ್ಲಿ ಹೆಚ್‌ಐವಿ ಸೋಂಕಿತರು ಹೆಚ್ಚಳವಾಗುತ್ತಿರುವುದು, ರಾಜ್ಯದ 13 ಎಆರ್‌ಟಿ ಕೇಂದ್ರಗಳ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

Published : March 4, 2026 at 4:35 PM IST
ಧನ್ಬಾದ್ (ಜಾರ್ಖಂಡ್): ರಾಜ್ಯದಲ್ಲಿರುವ 13 ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಕೇಂದ್ರಗಳು ನೀಡಿದ ವರದಿಯು ಆತಂಕಕಾರಿಯಾಗಿದೆ. ರಾಜ್ಯದಲ್ಲಿ ಹೆಚ್‌ಐವಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ವಲಸೆ, ಅಸುರಕ್ಷಿತ ವೈದ್ಯಕೀಯ ಪದ್ಧತಿ ಮತ್ತು ಸೋಂಕಿತರು ತಪ್ಪಿಸಿಕೊಳ್ಳುತ್ತಿರುವುದು ಈ ಹೆಚ್ಚಳಕ್ಕೆ ಕಾರಣ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಅನುಮೋದನೆಯೊಂದಿಗೆ ನಡೆಸಲಾದ ಈ ಅಧ್ಯಯನವು ಕಳೆದ ವರ್ಷ ಪತ್ತೆಯಾದ 645 ಹೊಸ HIV ಪಾಸಿಟಿವ್ ಪ್ರಕರಣಗಳನ್ನು ವಿಶ್ಲೇಷಿಸಿದೆ. ಇಲ್ಲಿನ ಶಹೀದ್ ನಿರ್ಮಲ್ ಮಹತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (SNMMCH) ಡಾ. ರಿಷಭ್ ರಾಣಾ ಈ ಸಂಶೋಧನೆಯ ನೇತೃತ್ವ ವಹಿಸಿದ್ದಾರೆ. ಈ ವರದಿಯನ್ನು ಹೆಚ್ಚಿನ ಪರಿಶೀಲನೆಗಾಗಿ NACO ಗೆ ಕಳುಹಿಸಲಾಗಿದೆ.
ಪರೀಕ್ಷಿಸಿದ 645 ರೋಗಿಗಳಲ್ಲಿ 404 ಪುರುಷರು, 236 ಮಹಿಳೆಯರು ಮತ್ತು ಐವರು ತೃತೀಯ ಲಿಂಗಿಗಳು ಇದ್ದಾರೆ. ರೋಗಿಗಳ ಕೆಲಸ, ಪ್ರಯಾಣದ ಇತಿಹಾಸ, ಲೈಂಗಿಕ ನಡವಳಿಕೆ ಮತ್ತು ಆರೋಗ್ಯದ ಕುರಿತು ಸಂಶೋಧಕರು ವಿವರ ವರದಿ ಸಂಗ್ರಹಿಸಿದ್ದಾರೆ.
ಈ ಸಂಶೋಧನೆಯ ಪ್ರಕಾರ ಹೆಚ್‌ಐವಿ ತಗುಲಲು ಪ್ರಮುಖ ಕಾರಣ ಸೋಂಕಿತರ ವಲಸೆ. ಸುಮಾರು 60% ರೋಗಿಗಳು ಹಿಂದಿನ ವರ್ಷದಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಜಾರ್ಖಂಡ್ನಿಂದ ಹೊರಗೆ ಕೆಲಸದ ಮೇಲೆ ಹೋಗಿದ್ದರು. ಧನ್ಬಾದ್ನಂತಹ ಕಲ್ಲಿದ್ದಲು ಗಣಿಗಾರಿಕೆ ಜಿಲ್ಲೆಗಳಿಂದ ಕಾರ್ಮಿಕರ ವಲಸೆ ಹೊಸ ಸೋಂಕುಗಳಿಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ.
ಆರೋಗ್ಯ ಇಲಾಖೆ ತಜ್ಞರು ಹೇಳುವಂತೆ ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಅಸುರಕ್ಷಿತ ಲೈಂಗಿಕತೆ, ಜಾಗೃತಿ ವಹಿಸದೇ ಇರುವುದು ಇದಕ್ಕೆ ಕಾರಣ. ಅಧ್ಯಯನವು, ಲೈಂಗಿಕ ನಡವಳಿಕೆಯ ಅಪಾಯಗಳನ್ನೂ ಎತ್ತಿ ತೋರಿಸಿದೆ. ಸುಮಾರು 21% ರೋಗಿಗಳು ಬಹು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಪುರುಷರು ಪುರುಷರೊಂದಿಗೆ ದೇಹ ಸಂಪರ್ಕ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ರಾಜ್ಯದ ಚೈಬಾಸಾ ಸದರ್ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಯ ನಂತರ ಥಲಸ್ಸೆಮಿಯಾ ಪೀಡಿತ ಐವರು ಮಕ್ಕಳಿಗೆ ಹೆಚ್‌ಐವಿ ಪಾಸಿಟಿವ್ ಕಂಡುಬಂದಿದೆ. ಈ ಕುರಿತು ರಾಜ್ಯ ಮಟ್ಟದ ತನಿಖೆ ನಡೆದು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಧನ್ಬಾದ್ ಒಂದರಲ್ಲೇ ಸುಮಾರು 3,200 ಜನರು ಹೆಚ್‌ಐವಿ ಪೀಡಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1,500 ಜನರು ಎಸ್‌ಎನ್‌ಎಂಎಂಸಿಹೆಚ್ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2024ರ ಏಪ್ರಿಲ್ನಿಂದ 2025 ರ ಫೆಬ್ರವರಿ ನಡುವೆ ಜಿಲ್ಲೆಯಲ್ಲಿ 55 ಹೆಚ್‌ಐವಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕ್ಷಯ ಮತ್ತು ನ್ಯುಮೋನಿಯಾದಿಂದ ಮೂತ್ರಪಿಂಡದ ತೊಂದರೆಗಳು ಹೆಚ್ಚಾಗುತ್ತಿರುವುದರಿಂದ ಮರಣದ ಕಾರಣಗಳಲ್ಲಿ ಬದಲಾವಣೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇವುಗಳನ್ನೂ ಓದಿ:

