ನಾಳೆ JEE ಅಡ್ವಾನ್ಸ್ಡ್ ಪರೀಕ್ಷಾ ಫಲಿತಾಂಶ: ಕಳೆದ ವರ್ಷಕ್ಕಿಂತ ಕಟ್ಆಫ್ ಅಂಕ ಇಳಿಯುವ ನಿರೀಕ್ಷೆ
2025ರ JEE ಅಡ್ವಾನ್ಸ್ಡ್ ಪರೀಕ್ಷೆಗೆ ಹೋಲಿಸಿದರೆ ಈ ವರ್ಷದ ಪರೀಕ್ಷೆ ಅತ್ಯಂತ ಕಠಿಣ ಎಂದಿರುವ ಶಿಕ್ಷಣ ತಜ್ಞರು, ಕಟ್ಆಫ್ ಅಂಕ 70ಕ್ಕಿಳಿಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

Published : May 31, 2026 at 11:04 AM IST
ಕೋಟಾ(ರಾಜಸ್ಥಾನ): ವಿಶ್ವದ ಎರಡನೇ ಅತ್ಯಂತ ಕಠಿಣ ಹಾಗೂ ಭಾರತದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2026ರ ಫಲಿತಾಂಶ ಜೂನ್ 1 (ನಾಳೆ) ಸೋಮವಾರ ಪ್ರಕಟಗೊಳ್ಳಲಿದೆ.
ಈ ಬಾರಿ 1,80,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇವರಲ್ಲಿ ಸುಮಾರು 45,000 ವಿದ್ಯಾರ್ಥಿಗಳು ಅರ್ಹತೆ ಪಡೆಯುವ ನಿರೀಕ್ಷೆ ಇದೆ. ಈ ವರ್ಷದ ಪ್ರಶ್ನೆಪತ್ರಿಕೆ ಕಠಿಣ ಎಂದಿರುವ ತಜ್ಞರು, ಕಟ್ಆಫ್ ಅಂಕಗಳು ಕಡಿಮೆಯಾಗುವ ನಿರೀಕ್ಷೆ ಹೊಂದಿದ್ದಾರೆ.
ಶಿಕ್ಷಣ ತಜ್ಞ ದೇವ್ ಶರ್ಮಾ ಅವರು ಪ್ರತಿಕ್ರಿಯಿಸಿ, "2025ರಲ್ಲಿ ಒಟ್ಟು 360 ಅಂಕಗಳಲ್ಲಿ 74 ಅಂಕಗಳು ಕಟ್ಆಫ್ (ಕನಿಷ್ಠ ಅಂಕ) ಆಗಿತ್ತು. ಈ ಬಾರಿ ಪ್ರಶ್ನೆಪತ್ರಿಕೆ ಕಠಿಣವಾಗಿದ್ದ ಕಾರಣ ಕಟ್ಆಫ್ 70ಕ್ಕೆ ಇಳಿಯುವ ನಿರೀಕ್ಷೆ ಇದ್ದು, ಈ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹತೆ ಪಡೆಯಬಹುದು" ಎಂದು ತಿಳಿಸಿದರು.
"ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ದೇಶದ 23 ಐಐಟಿಗಳಲ್ಲಿ ಬಿ.ಟೆಕ್, ಬಿ.ಟೆಕ್-ಎಂ.ಟೆಕ್ ಡ್ಯುಯಲ್ ಡಿಗ್ರಿ, ಬಿಎಸ್ಸಿ ಸೈನ್ಸ್ ಮತ್ತು ಬಿಎಸ್ಸಿ ಎಂ.ಎಸ್ ಡ್ಯುಯಲ್ ಡಿಗ್ರಿ ಕೋರ್ಸ್‌ಗಳೂ ಸೇರಿದಂತೆ ಸುಮಾರು 18,160 ಸೀಟುಗಳಿಗೆ ಪ್ರವೇಶ ಒದಗಿಸುತ್ತದೆ" ಎಂದು ಶರ್ಮಾ ವಿವರ ನೀಡಿದರು.
"ಈ ವರ್ಷ ಗಣಿತ ಪತ್ರಿಕೆ ದೀರ್ಘವಾಗಿತ್ತು. ಭೌತಶಾಸ್ತ್ರ ಪತ್ರಿಕೆ ಸಾಕಷ್ಟು ಕಷ್ಟಕರವಾಗಿತ್ತು. ಈ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸವಾಲು ಎದುರಿಸಿದರು. ಈ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಿಂದ 70ಕ್ಕಿಂತ ಹೆಚ್ಚಿದ್ದ ಕಟ್ಆಫ್ ಅಂಕಗಳು ಈ ಬಾರಿ ಕಡಿಮೆಯಾಗುವ ನಿರೀಕ್ಷೆ ಇದೆ" ಎಂದು ಹೇಳಿದರು.
55 ಅಂಕ ಪಡೆದು ಅರ್ಹತೆ ಗಿಟ್ಟಿಸಿದ್ದ ವಿದ್ಯಾರ್ಥಿಗಳು: 2020 ಮತ್ತು 2022ರ ನಡುವೆ ಕಟ್‌ಆಫ್ ಅಂಕಗಳು 55ರಿಂದ 70 ಅಂಕಗಳವರೆಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, 2019ರಲ್ಲಿ ಕಟ್‌ಆಫ್ 93 ಅಂಕಗಳಷ್ಟಿತ್ತು. 2023ರಲ್ಲಿ ಅದು 86 ಮತ್ತು 2024ರಲ್ಲಿ 109 ಆಗಿತ್ತು. 2025ರಲ್ಲಿ ಪ್ರಶ್ನೆಪತ್ರಿಕೆ ಕಷ್ಟಕರವಾಗಿತ್ತು. ಆದರೆ ಈ ಬಾರಿ, 2026ರಲ್ಲಿ ಅದಕ್ಕೂ ಹೆಚ್ಚಿನ ಸವಾಲಿನದ್ದಾಗಿತ್ತು. 2025ರಲ್ಲಿ 54,378 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ಈ ಸಲ ಅರ್ಹತೆ ಪಡೆಯುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ ಎಂದು ದೇವ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಜೆಇಇ ಅಡ್ವಾನ್ಸಡ್ ಉತ್ತರ ಪತ್ರಿಕೆ ಬಿಡುಗಡೆ: ಈ ಬಾರಿ ಇಲ್ಲ ಯಾವುದೇ ಬೋನಸ್ ಅಂಕ

