ಮಹಿಳೆಯರ ಕುರಿತು ಕೇರಳದ ಇಸ್ಲಾಮಿಕ್ ಧರ್ಮಗುರುವಿನ ವಿವಾದಿತ ಹೇಳಿಕೆಗೆ ವ್ಯಾಪಕ ಟೀಕೆ
ಮಹಿಳೆಯರ ಸಾರ್ವಜನಿಕ ಉಪಸ್ಥಿತಿಯ ಕುರಿತು ಕೇರಳದ ಇಸ್ಲಾಮಿಕ್ ಧರ್ಮಗುರುಗಳ ಹೇಳಿಕೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.

Published : August 31, 2026 at 4:43 PM IST
ಎರ್ನಾಕುಲಂ(ಕೇರಳ): ''ಮಹಿಳೆಯರನ್ನು ಇಸ್ಲಾಮಿಕ್ ಧಾರ್ಮಿಕ ಆಚರಣೆ ಸೇರಿದಂತೆ ಸಾರ್ವಜನಿಕ ರಂಗಕ್ಕೆ ಕರೆತಂದರೆ ಕರೆತಂದರೆ ಭಾರಿ ವಿನಾಶಕ್ಕೆ ಕಾರಣವಾಗಬಹುದು'' ಎಂದಿರುವ ಕೇರಳದ ಸುನ್ನಿ ಮುಸ್ಲೀಮರ ಧರ್ಮಗುರು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿವೆ.
ಈ ಹೇಳಿಕೆಗೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಮತ್ತು ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಿಂದು ಕೃಷ್ಣ ಅವರೂ ಕೂಡ ಟೀಕಿಸಿದ್ದಾರೆ.
ಕೊಚ್ಚಿಯಲ್ಲಿ ನಡೆದ 'ಹುಬ್ಬುರ್ ರಸೂಲ್' ಸಮ್ಮೇಳನದಲ್ಲಿ ಭಾಗವಹಿಸಿ ಭಾಷಣ ಮಾತನಾಡಿದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ''ಇಸ್ಲಾಮಿಕ್ ಆಚರಣೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಇತರ ಪುರುಷರೊಂದಿಗೆ ಮಹಿಳೆಯರ ಉಪಸ್ಥಿತಿಯು ದೊಡ್ಡ ವಿಪತ್ತಿಗೆ ಕಾರಣವಾಗಬಹುದು. ಮಹಿಳೆಯರು ತಮ್ಮ ಮನೆಗಳಿಗಷ್ಟೇ ಸೀಮಿತವಾಗಿರಬೇಕು ಮತ್ತು ಸಾರ್ವಜನಿಕ ರಂಗವನ್ನು ಪ್ರವೇಶಿಸಬಾರದು. ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ ಹೆಚ್ಚಿನ ಹಾನಿಯಾಗಬಹುದು. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಮತ್ತು ಅಂತಹ ಅಪಾಯಗಳನ್ನು ತಪ್ಪಿಸಲು ಇಸ್ಲಾಂ ಧರ್ಮ ಪರ್ದಾ ಪದ್ಧತಿಯನ್ನು ಕಡ್ಡಾಯಗೊಳಿಸಿದೆ. ಧರ್ಮವನ್ನು ಚೆನ್ನಾಗಿ ಅಧ್ಯಯನ ಮಾಡಿರುವ ನಾನು, ಸಮುದಾಯಕ್ಕೆ ಇಂತಹ ವಿಷಯಗಳನ್ನು ಹೇಳುವ ಎಲ್ಲ ಹಕ್ಕನ್ನು ಹೊಂದಿದ್ದೇನೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ಓಡಿಹೋಗದೇ ಸೂಕ್ತ ಉತ್ತರ ನೀಡುತ್ತೇನೆ. ಟೀಕೆಗಳಿಗೆ ಹೆದರಿ ನಾನು ಹಿಂದೆ ಸರಿಯುವುದಿಲ್ಲ'' ಎಂದು ಹೇಳಿದ್ದಾರೆ.
ಕೇರಳ ಜಮಿಯ್ಯತುಲ್ ಉಲಮಾ ಸಂಘಟನೆಗಳ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಉಲಮಾ ಸಂಘಟನೆಯ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಅವರು ಮಿಲಾದ್-ಉನ್-ನಬಿ ಆಚರಣೆಗಳ ಕುರಿತು ಮಹಲ್ ಮತ್ತು ಮದರಸಾ ಸಮಿತಿಗಳಿಗೆ ಈ ಕುರಿತಂತೆ ಜಂಟಿ ಸುತ್ತೋಲೆ ಹೊರಡಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
''ಇಸ್ಲಾಮಿಕ್ ಆಚರಣೆಗಳ ಸಮಯದಲ್ಲಿ ಯುವತಿಯರನ್ನು ಇತರ ಪುರುಷರ ನಡುವೆ ಕರೆತರಬಾರದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರನ್ನು ಪ್ರದರ್ಶಿಸುವುದು ನಂಬಿಕೆಯುಳ್ಳವರಿಗೆ ಸೂಕ್ತವಲ್ಲ'' ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
''ಧಾರ್ಮಿಕ ಗಡಿಗಳನ್ನು ದಾಟುವ ಇಸ್ಲಾಮಿಕ್ ಆಚರಣೆ ಮತ್ತು ಸಮಾರಂಭಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಲ್ ಅಧಿಕಾರಿಗಳು ಕಾರ್ಯಕ್ರಮಗಳು ಸಂಪೂರ್ಣವಾಗಿ ಇಸ್ಲಾಮಿಕ್ ರೂಢಿಗಳಿಗೆ ಬದ್ಧವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಧಾರ್ಮಿಕ ಸಮಾರಂಭಗಳೊಂದಿಗೆ ಇಸ್ಲಾಮಿಕ್ ಅಲ್ಲದ ಪದ್ಧತಿಗಳು ಮತ್ತು ಆಚರಣೆ ವಿಧಾನಗಳನ್ನು ಬೆರೆಸಬಾರದು'' ಎಂದೂ ಕೂಡ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ವ್ಯಾಪಕ ಟೀಕೆ: ''ಕಾಂತಪುರಂ ಧರ್ಮಗುರುಗಳು ಅತ್ಯಂತ ಸ್ತ್ರೀದ್ವೇಷಿ ಮತ್ತು ಮಧ್ಯಕಾಲೀನ ಊಳಿಗಮಾನ್ಯ ಮೌಲ್ಯಗಳನ್ನು ನೆನಪಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ'' ಎಂದು ಸಿಪಿಎಂ ನಾಯಕರು ಆರೋಪಿಸಿದ್ದಾರೆ.
ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದು, ಕೇರಳದಲ್ಲಿ ಮುಸ್ಲಿಂ ಮಹಿಳೆಯರು, ಉನ್ನತ ಶಿಕ್ಷಣ ಪಡೆದು ಶಾಸಕರು, ಪಂಚಾಯತ್ ಅಧ್ಯಕ್ಷರು, ನ್ಯಾಯಾಧೀಶರು ಮತ್ತು ವಿಜ್ಞಾನಿಗಳಾಗಿ ಮಿಂಚುತ್ತಿರುವ ಈ ಯುಗದಲ್ಲಿ, ಅವರನ್ನು ಮನೆಯೊಳಗೆ ಬಂಧಿಸಲು ಪ್ರಯತ್ನಿಸುವುದು ಈ ಕಾಲಕ್ಕೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.
''ಜೀವಂತ ಮನುಷ್ಯರ ಬಗ್ಗೆ 'ಪ್ರದರ್ಶನ' ಎಂಬ ಪದವನ್ನು ಬಳಸುವುದು ಅತ್ಯಂತ ಅವಮಾನಕರ'' ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಪಿ.ಕೆ. ಶ್ರೀಮತಿ ಹೇಳಿದರೆ, ''ಮಹಿಳಾ ವಿರೋಧಿ ನಿಲುವುಗಳು ಸ್ವೀಕಾರಾರ್ಹವಲ್ಲ'' ಎಂದು ಎ.ಕೆ. ಬಾಲನ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆರ್. ಬಿಂದು, ''ಸಂವಿಧಾನದಲ್ಲಿ ಎಲ್ಲ ನಾಗರಿಕರಿಗೂ ಸಮಾನತೆಯನ್ನು ಕೊಡಲಾಗಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ನಾಯಕತ್ವವನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಕೇರಳದ ಮಹಿಳೆಯರು ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ಆಡಳಿತದಲ್ಲಿ ಪ್ರಮುಖ ಪ್ರಗತಿ ಸಾಧಿಸಿದ್ದಾರೆ. ಮಹಿಳೆಯರು ಸಾರ್ವಜನಿಕ ಜೀವನವನ್ನು ಪ್ರವೇಶಿಸದಂತೆ ಹೇಳುವುದು ಆಧುನಿಕ ಸಮಾಜಕ್ಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ'' ಎಂದು ಹೇಳುವ ಮೂಲಕ ಭಾರತದ ಮಹಿಳಾ ರಾಷ್ಟ್ರಪತಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತಹ ನಾಯಕಿಯರನ್ನು ಉಲ್ಲೇಖಿಸಿ, ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಯುವ ಸಂಘಟನೆಗಳಾದ SFI ಮತ್ತು DYFI ಇಸ್ಲಾಮಿಕ್ ಧರ್ಮಗುರುಗಳ ಹೇಳಿಕೆಯನ್ನು ''ಸಮಕಾಲೀನ ವಾಸ್ತವದಿಂದ ದೂರವಾದ ಹಿಮ್ಮುಖ ಹೆಜ್ಜೆ'' ಎಂದು ಕರೆದಿವೆ. ''1989ರಲ್ಲಿ ಭಾರತದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ನ್ಯಾಯಮೂರ್ತಿ ಎಂ.ಫಾತಿಮಾ ಬೀವಿ ನೇಮಕಗೊಂಡ ಕೇರಳವನ್ನು ಅವರು ಟೀಕಿಸಿದ್ದಾರೆ. ಅಲ್ಲದೇ, ಹಲವು ವರ್ಷಗಳ ನಂತರವೂ ಇಂತಹ ಮಹಿಳಾ ವಿರೋಧಿ ಸುತ್ತೋಲೆಯನ್ನು ಹೊರಡಿಸುವುದು ಸಾಂಸ್ಕೃತಿಕ ಹಿಂಜರಿತವಾಗಿದೆ'' ಎಂದು ಈ ಸಂಘಟನೆಗಳು ಟೀಕಿಸಿವೆ.
ಕಾಂಗ್ರೆಸ್ ಮುಖಂಡ ಜಿಂಟೋ ಜಾನ್ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು, ಬೀಗ ಹಾಕುವುದು ಮತ್ತು ಅನುಕೂಲವಾದಾಗ ಮಾತ್ರ ಕರೆಸುವುದು ಇದರ ಉದ್ದೇಶವೇ?" ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಕೂಡ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, "ಇದು ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಮೇಲಿನ ನೇರ ಉಲ್ಲಂಘನೆ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರೇ ಇರಬಾರದೆಂದು ಯೋಚಿಸುವವರು ಹಿಂದೂ ಆಗಿ ಉಳಿಯಲ್ಲ: ಮೋಹನ್ ಭಾಗವತ್

