ಇಂದೋರ್ ಕಲುಷಿತ ನೀರು ಪ್ರಕರಣ: 8 ಮಂದಿ ಸಾವೆಂದ ಸರ್ಕಾರದಿಂದ 18 ಮಂದಿಗೆ ಪರಿಹಾರ ಘೋಷಣೆ
ಕಲುಷಿತ ನೀರು ಸೇವಿಸಿ ಕಳೆದ ವಾರ 8 ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಇದೀಗ ಮಧ್ಯ ಪ್ರದೇಶ ಸರ್ಕಾರ 18 ಜನರಿಗೆ ಪರಿಹಾರ ಘೋಷಣೆ ಮಾಡಿರುವುದು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.


Published : January 8, 2026 at 4:24 PM IST
ಇಂದೋರ್(ಮಧ್ಯ ಪ್ರದೇಶ): ಇಂದೋರ್ನಲ್ಲಿ ಇತ್ತೀಚಿಗೆ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಹಲವು ಸಾವುಗಳು ಸಂಭವಿಸಿದ್ದು, ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ಇದೀಗ ರಾಜ್ಯ ಸರ್ಕಾರ ಸಾವನ್ನಪ್ಪಿದ 18 ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಪಟ್ಟಿ ಸಿದ್ಧಪಡಿಸಿದ್ದು, ವಿಪಕ್ಷಗಳು ಮುಗಿಬಿದ್ದಿವೆ.
ಕಳೆದ ವಾರ ಅಧಿಕಾರಿಗಳು ಕಲುಷಿತ ನೀರಿನ ಸೇವನೆಯಿಂದಾಗಿ 8 ಸಾವು ಸಂಭವಿಸಿದೆ ಎಂದು ಹೇಳಿದ್ದರು. ಆದರೀಗ ಹೊಸ ಪಟ್ಟಿಯಲ್ಲಿ 18 ಜನರ ಸಾವಿಗೆ ತಲಾ 2 ಲಕ್ಷ ರೂ ಪರಿಹಾರ ನೀಡುವುದಾಗಿ ಸರ್ಕಾರ ತಿಳಿಸಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳಲ್ಲಿನ ಈ ವ್ಯತ್ಯಾಸಗಳ ಕುರಿತು ಗಂಭೀರ ಪ್ರಶ್ನೆಗಳೆದ್ದಿವೆ.
ಅಲ್ಲದೇ ಈ ವಿಚಾರ ರಾಜಕೀಯ ಟೀಕೆಗಳಿಗೂ ಕಾರಣವಾಗಿದೆ. ಸರ್ಕಾರ ಸಾವಿನ ನಿಜವಾದ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸಚಿವ ಕೈಲಾಶ್ ವಿಜಯವರ್ಗಿಯ ಅವರು ಅಂತಿಮ ವರದಿಗಳಿಗಾಗಿ ಕಾಯದೆ ಕೆಲವು ಕುಟುಂಬಗಳಿಗೆ ಪರಿಹಾರ ಚೆಕ್‌ಗಳನ್ನು ವಿತರಿಸಿದ್ದು, ಇದು ಮತ್ತಷ್ಟು ವಿವಾದ ಸೃಷ್ಟಿಸಿದೆ.
ಇಂದೋರ್ ಜಿಲ್ಲಾಧಿಕಾರಿ ಶಿವಂ ವರ್ಮಾ ಮಾತನಾಡಿ, "ಇದುವರೆಗೆ ಮೃತಪಟ್ಟ 18 ಜನರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ. ಇನ್ನೂ ಮೂರು ಪ್ರಕರಣಗಳಿಗೆ ಪ್ರಕ್ರಿಯೆ ನಡೆಯುತ್ತಿದೆ. ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸಾವಿನ ಅಂಕಿಅಂಶಗಳು ಮರಣೋತ್ತರ ವರದಿಗಳನ್ನು ಆಧರಿಸಿದೆ" ಎಂದು ಹೇಳಿದರು.
"ಪರಿಹಾರದ ಅಂಕಿಅಂಶಗಳು ಮತ್ತು ಅಧಿಕೃತವಾಗಿ ದೃಢಪಡಿಸಿದ ಸಾವುಗಳ ನಡುವಿನ ವ್ಯತ್ಯಾಸಕ್ಕೆ ಕಾರ್ಯವಿಧಾನದ ಸಮಸ್ಯೆ ಕಾರಣ. ಮರಣೋತ್ತರ ಪರೀಕ್ಷೆಯ ವರದಿಗಳ ಮೂಲಕ ದೃಢಪಡಿಸಲಾದ ಸಾವುಗಳನ್ನು ಮಾತ್ರ ಅಧಿಕೃತ ಸಂಖ್ಯೆಯಲ್ಲಿ ಎಣಿಸಲಾಗುತ್ತಿದೆ. ಆದರೆ ಮಧ್ಯಂತರ ಪರಿಹಾರದ ಕ್ರಮವಾಗಿ ಪೀಡಿತ ಕುಟುಂಬಗಳಿಗೆ ಸಹಾಯ ವಿಸ್ತರಿಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾ.ಅಲೋಕ್ ಅವಸ್ಥಿ ಅವರನ್ನೊಳಗೊಂಡ ಪೀಠ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ ಎಂದು ಸರ್ಕಾರವನ್ನು ಟೀಕಿಸಿದ ಬಳಿಕ ಬಿಡುಗಡೆಯಾಗಿರುವ ಈ ಪರಿಹಾರ ಪಟ್ಟಿ ನ್ಯಾಯಾಲಯದ ಗಮನ ಸೆಳೆದಿದೆ.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಮೋಹನ್ ಯಾದವ್, "ಒಂದು ಜೀವದ ನಷ್ಟ ಸರ್ಕಾರಕ್ಕೆ ತೀವ್ರ ದುಃಖಕರವಾಗಿದೆ. ನಾವು ಸಾವಿನ ಅಂಕಿಅಂಶಗಳನ್ನು ಹೆಚ್ಚು ಆಳವಾಗಿ ಪರಿಶೀಲಿಸುವುದಿಲ್ಲ. ಸಾವುಗಳನ್ನು ದೃಢೀಕರಿಸಲು ಆಡಳಿತವು ಸ್ಥಾಪಿತ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ವಿಪಕ್ಷಗಳು, ಸರ್ಕಾರ ಪಟ್ಟಿ ಮಾಡಿರುವ 18 ಮೃತರ ಕುಟುಂಬಗಳಿಗೆ ಪರಿಹಾರವನ್ನು ಹೇಗೆ ಪಾವತಿಸಲಾಗಿದೆ ಎಂಬುದರ ಕುರಿತು ಸ್ಪಷ್ಟ ಮತ್ತು ಪಾರದರ್ಶಕ ವಿವರಣೆ ಕೇಳಿದೆ.
ಸ್ವತಂತ್ರ ತನಿಖೆಗೆ ಕಾಂಗ್ರೆಸ್ ಆಗ್ರಹ: ಇಂದೋರ್ ಘಟನೆಯ ಕುರಿತು ಸುಪ್ರೀಂ ಕೋರ್ಟ್ ಮಟ್ಟದ ಸ್ವತಂತ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, "ಘಟನೆಯಿಂದ ಬಿಜೆಪಿ ಸರ್ಕಾರದ ಕೊಳಕು, ಕ್ರೂರ ಮತ್ತು ಸಂಪೂರ್ಣ ನಿರ್ದಯ ಮುಖ ಬಯಲಾಗಿದೆ" ಎಂದು ಕಟು ಟೀಕೆ ಮಾಡಿದ್ದಾರೆ.
ಇವುಗಳನ್ನೂ ಓದಿ:

