ETV Bharat / bharat

ಇಂದೋರ್​ ಕಲುಷಿತ ನೀರು ಸೇವನೆ ಪ್ರಕರಣ: ಮತ್ತೆ 142 ಮಂದಿ ಆಸ್ಪತ್ರೆಗೆ ದಾಖಲು

ಇಂದೋರ್​ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂಬ ಅಧಿಕಾರಿಗಳ ಹೇಳಿಕೆಯ ನಡುವೆ ಮತ್ತೆ ಅತಿಸಾರ ಪ್ರಕರಣಗಳು ಬೆಳಕಿಗೆ ಬಂದಿವೆ.

indore-water-contamination-142-patients-in-hospitals-20-new-diarrhoea-cases-found
ಇಂದೋರ್​ ಕಲುಷಿತ ನೀರು ಸೇವನೆ ಪ್ರಕರಣ (IANS)
author img

By ETV Bharat Karnataka Team

Published : January 5, 2026 at 11:47 AM IST

2 Min Read
Choose ETV Bharat

ಇಂದೋರ್​(ಮಧ್ಯ ಪ್ರದೇಶ): ಕಲುಷಿತ ನೀರು ಸೇವಿಸಿ 10 ಮಂದಿ ಸಾವನ್ನಪ್ಪಿದ ಬಳಿಕ ಮತ್ತೆ ಇಂದೋರ್​ನಲ್ಲಿ ಅತಿಸಾರ ಪ್ರಕರಣಗಳು ದಾಖಲಾಗಿವೆ. ಇದೀಗ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಗೀರಥಪುರ ಪ್ರದೇಶದಲ್ಲಿ 9,000ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಿದ್ದು, 20 ಹೊಸ ರೋಗಿಗಳು ಪತ್ತೆಯಾಗಿದ್ದಾರೆ.

ಭಾಗೀರಥಪುರದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಂದರ್ಭದಲ್ಲಿ ಆರೋಗ್ಯ ತಂಡಗಳು 2,354 ಮನೆಗಳಿಂದ 9,416 ಜನರನ್ನು ಪರೀಕ್ಷೆಗೆ ಒಳಪಡಿಸಿವೆ. ಈವರೆಗೆ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 256 ರೋಗಿಗಳು ಚೇತರಿಸಿಕೊಂಡಿದ್ದು, ಬಿಡುಗಡೆ ಮಾಡಲಾಗಿದೆ. ಇದೀಗ ಸೋಂಕು ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಮಾಧವ್ ಪ್ರಸಾದ್ ಹಸಾನಿ ಅವರು ಮಾತನಾಡಿ, "ಇಂದೋರ್​ನ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾದ ರಾಷ್ಟ್ರೀಯ ಬ್ಯಾಕ್ಟೀರಿಯಾ ಸೋಂಕು ಸಂಶೋಧನಾ ಸಂಸ್ಥೆಯ (ಎನ್‌ಐಆರ್‌ಬಿಐ) ತಂಡ ನಗರಕ್ಕೆ ಆಗಮಿಸಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತಜ್ಞರ ತಂಡ ಆರೋಗ್ಯ ಇಲಾಖೆಗೆ ತಾಂತ್ರಿಕ ಬೆಂಬಲ ನೀಡುತ್ತಿದೆ" ಎಂದು ಮಾಹಿತಿ ನೀಡಿದರು.

ಈ ನಡುವೆ ಕಲುಷಿತ ನೀರು ಪೂರೈಕೆ ಪ್ರಕರಣದ ಕುರಿತು ಮಾಧ್ಯಮದವರ ಪ್ರಶ್ನೆಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಮಾತನಾಡಿರುವ ಮಧ್ಯಪ್ರದೇಶ ಆರೋಗ್ಯ ಸಚಿವ ವಿಜಯವರ್ಗೀಯ ಅವರನ್ನು ವಜಾಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿ, ಪ್ರತಿಭಟನೆ ನಡೆಸಿದೆ.

ಈ ನಡುವೆ ಪರಿಸ್ಥಿತಿಯನ್ನು ಆದಷ್ಟು ಬೇಗ ಸುಧಾರಿಸಿ, ನೈರ್ಮಲ್ಯ ಕಾಯ್ದುಕೊಳ್ಳದೇ ಇದ್ದಲ್ಲಿ ಜನವರಿ 11ರಂದು ಪ್ರತಿಭಟನೆ ನಡೆಸುವುದಾಗಿ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಜಿತು ಪಟ್ವಾರಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಭಾಗೀರಥಪುರದ ನಿವಾಸಿಗಳು ಪುರಸಭೆಯ ನಲ್ಲಿ ಸಂಪರ್ಕಗಳಿಂದ ಕಲುಷಿತ ನೀರು ಬರುತ್ತಿದೆ ಎಂದು ದೂರು ನೀಡುತ್ತಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಭಾಗೀರಥಪುರದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಅದೂ ಕೂಡ ಕಲುಷಿತವಾಗಿದೆ ಎಂದು ಆರೋಪಿಸಿದರು.

200 ಗಿಳಿಗಳ ದಾರುಣ ಸಾವು: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ವಿಷಾಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿದ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿತ್ತು. ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಸೇತುವೆಯ ಸಮೀಪ ನಾಲ್ಕು ದಿನಗಳಲ್ಲಿ ಇಷ್ಟು ಪ್ರಮಾಣದ ಗಿಳಿಗಳು ಸಾವನ್ನಪ್ಪಿದ್ದವು. ಇದಕ್ಕೆ ಹಕ್ಕಿ ಜ್ವರ ಕಾರಣ ಎಂದು ಮೊದಲಿಗೆ ಶಂಕಿಸಲಾಗಿತ್ತು. ಆದರೆ, ಮೃತಪಟ್ಟ ಗಿಳಿಗಳ ಕಳೇಬರಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಸಾವಿಗೆ ವಿಷ ಪ್ರಾಶನ ಕಾರಣವಾಗಿದೆ ಎಂಬುದು ದೃಢಪಟ್ಟಿತ್ತು. ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವು ಗಿಳಿಗಳು ಜೀವಂತ ಇದ್ದವು. ಆದರೆ, ಆಹಾರದಲ್ಲಿನ ವಿಷ ಪ್ರಮಾಣ ತೀವ್ರವಾಗಿದ್ದ ಕಾರಣ ಅವು ಬದುಕಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್​ ಟೋನಿ ಶರ್ಮಾ ತಿಳಿಸಿದ್ದರು.

ಇದನ್ನೂ ಓದಿ: ಇಂದೋರ್​: ವಿಷ ಆಹಾರ ಸೇವನೆಯಿಂದ 200 ಗಿಳಿಗಳ ಸಾವು