ರಾಮ ಮಂದಿರಕ್ಕೆ ನೀಡಿದ ದೇಣಿಗೆ ವಾಪಸ್ ಕೇಳಿದ ಕಾಂಗ್ರೆಸ್ಸಿಗ: ನಾನೇ ಕೊಡುವೆ ಎಂದ ರಾಮಭಕ್ತ
ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದ ಕಾಂಗ್ರೆಸ್ ನಾಯಕ. ಇದೀಗ ಹಣ ಮರಳಿ ಪಡೆಯುವ ಇಚ್ಛೆ. ಇದಕ್ಕೆ ರಾಮಭಕ್ತರಿಂದ ತಿರುಗೇಟು.

Published : July 5, 2026 at 1:28 PM IST
ಇಂದೋರ್ (ಮಧ್ಯಪ್ರದೇಶ): ರಾಮ ಮಂದಿರ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ರಾಜಕೀಯ ದಿನೇ ದಿನೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್-ಬಿಜೆಪಿ ಮತ್ತು ರಾಮಭಕ್ತರ ನಡುವೆ ಹೇಳಿಕೆ- ಪ್ರತಿ ಹೇಳಿಕೆಗಳು ದಾಖಲಾಗುತ್ತಲೇ ಇವೆ. ಇದೀಗ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಸರದಿಯಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ದೇಣಿಗೆ ಕಳ್ಳತನದಿಂದ ತಮಗೆ ನೋವಾಗಿದೆ. ಮಂದಿರ ನಿರ್ಮಾಣದ ವೇಳೆ ತಾವು ನೀಡಿದ 1.10 ಲಕ್ಷ ರೂಪಾಯಿ ದೇಣಿಗೆಯನ್ನು ಮರಳಿ ಪಡೆಯಲು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ಇದಕ್ಕೆ ರಾಮಭಕ್ತರೊಬ್ಬರು ತಿರುಗೇಟು ನೀಡಿದ್ದು, ನಾನೇ ಆ ಹಣವನ್ನು ನೀಡುವೆ. ಕಾಂಗ್ರೆಸ್ ನಾಯಕ ಅದಕ್ಕಾಗಿ ಕೋರ್ಟ್ಗೆ ಹೋಗುವ ಅಗತ್ಯವಿಲ್ಲ. ಹಣದ ಚೆಕ್ ಅನ್ನು ಅವರ ಮನೆಗೇ ಕಳುಹಿಸುವುದಾಗಿ ಹೇಳಿದ್ದಾರೆ.
ರಾಮಭಕ್ತನಾಗಿ ನಾನೇ ಹಣ ಕೊಡುವೆ: ಹೌದು. ಇಂದೋರ್‌ನ ದೇಪಾಲ್‌ಪುರದ ರೈತ ರಾಮ್ ಸಿಂಗ್ ಮಕ್ವಾನಾ ಎಂಬುವರು ದಿಗ್ವಿಜಯ ಸಿಂಗ್ ಅವರಿಗೆ 1.10 ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಲು ಮುಂದಾಗಿದ್ದಾರೆ. "ದಿಗ್ವಿಜಯ ಸಿಂಗ್ ಮಂದಿರ ನಿರ್ಮಾಣಕ್ಕೆ ಕೊಟ್ಟಿದ್ದ ದೇಣಿಗೆಯನ್ನು ಮರಳಿ ಪಡೆಯಲು ಯೋಜಿಸುತ್ತಿದ್ದರೆ. ನಾನೇ ಆ ಮೊತ್ತವನ್ನು ಅವರಿಗೆ ಹಿಂದಿರುಗಿಸುತ್ತೇನೆ" ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಹರಿಬಿಟ್ಟಿರುವ ರೈತ ರಾಮ್ ಸಿಂಗ್, "ನ್ಯಾಯಾಲಯದ ವಿಚಾರಣೆಗಳು ಬಹಳ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ದಿಗ್ವಿಜಯ ಸಿಂಗ್ ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ನನ್ನಂತಹ ರಾಮನ ಭಕ್ತರು ಇರುವವರೆಗೆ, ದಿಗ್ವಿಜಯಗ್ ಸಿಂಗ್ ನ್ಯಾಯಾಲಯವನ್ನು ಸಂಪರ್ಕಿಸುವ ಅಗತ್ಯವಿಲ್ಲ. ಅವರ ಹೆಸರಿನಲ್ಲಿ 1.10 ಲಕ್ಷ ರೂಪಾಯಿ ಚೆಕ್ ಅನ್ನು ನಾನು ಸಿದ್ಧಪಡಿಸಿದ್ದೇನೆ. ಅವರು ಇಂದೋರ್‌ಗೆ ಭೇಟಿ ನೀಡಿದರೆ, ನಾನು ಅದನ್ನು ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸುತ್ತೇನೆ. ಇಲ್ಲದಿದ್ದರೆ, ನಾನೇ ಅದನ್ನು ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಹೇಳಿದ್ದೇನು? ರಾಮ ಮಂದಿರ ನಿರ್ಮಾಣಕ್ಕಾಗಿ ತಾನು ದೇಣಿಗೆ ನೀಡಿದ್ದೆ. ಈಗ ಅಯೋಧ್ಯೆಯಲ್ಲಿ ಅಕ್ರಮ ನಡೆದಿರುವುದು ನೋವು ತಂದಿದೆ. ಹೀಗಾಗಿ, ಆ ಹಣವನ್ನು ವಾಪಸ್ ಪಡೆಯುವ ಕಾನೂನು ಮಾರ್ಗಗಳನ್ನು ಹುಡುಕುತ್ತಿದ್ದೇನೆ. ಅಯೋಧ್ಯೆ ಕೋರ್ಟ್ನಲ್ಲಿ ಮೊಕದ್ದಮೆ ಹೂಡುವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದರು. ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದು ರಾಮಭಕ್ತರು ಮತ್ತು ಬಿಜೆಪಿ ಟೀಕಿಸಿದೆ.
ಇವುಗಳನ್ನೂ ಓದಿ:

