ರೀಲ್ಸ್ ಸೃಷ್ಟಿಕರ್ತರು ನಿಜವಾಗಿಯೂ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆಯೇ?: ಭಾರತದಲ್ಲಿದ್ದಾರೆ 2.5 ಮಿಲಿಯನ್ ಕಂಟೆಂಟ್ ಕ್ರಿಯೇಟರ್ಗಳು!
ವಯಸ್ಸಿನ ಮಿತಿಯಿಲ್ಲದೇ ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ಗಳು ಮತ್ತು ಶಾರ್ಟ್ಸ್ ವೀಕ್ಷಿಸುತ್ತಿದ್ದಾರೆ. ಈ ಕ್ರೇಜ್ ಕಂಟೆಂಟ್ ಕ್ರಿಯೇಷನ್ ದೇಶದ ಆರ್ಥಿಕತೆಯ ಬೆನ್ನೆಲುಬಾಗಲು ಕಾರಣವಾಗಿದೆ. ಈ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

Published : January 10, 2026 at 5:41 PM IST
ಹೈದರಾಬಾದ್(ತೆಲಂಗಾಣ): ಲೈಕ್, ಕಾಮೆಂಟ್, ಶೇರ್.. ಸಾಮಾಜಿಕ ಮಾಧ್ಯಮಗಳು ನಿಮ್ಮನ್ನು ರಂಜಿಸುವುದಲ್ಲದೇ, ಶಿಕ್ಷಣ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಇದೀಗ ಕಂಟೆಂಟ್ ಕ್ರಿಯೇಷನ್ ಉದ್ಯಮವಾಗಿ ವಿಕಸನಗೊಂಡಿದೆ. ವಯಸ್ಸಿನ ಮಿತಿಯಿಲ್ಲದೇ ಎಲ್ಲರೂ ವಿಶೇಷವಾಗಿ ಜನರೇಷನ್ ಝಡ್ ತಮ್ಮ ಬಿಡುವಿನ ವೇಳೆ ರೀಲ್ಸ್ಗಳು ಮತ್ತು ಶಾರ್ಟ್ಸ್ ವೀಕ್ಷಿಸುತ್ತಿದ್ದಾರೆ. ಈ ಕ್ರೇಜ್ ಕಂಟೆಂಟ್ ಕ್ರಿಯೇಷನ್ ದೇಶದ ಆರ್ಥಿಕತೆಯ ಬೆನ್ನೆಲುಬಾಗಲು ಕಾರಣವಾಗಿದೆ.
ಡಿಜಿಟಲ್ ಜಗತ್ತಿನಲ್ಲಿ ಖ್ಯಾತಿ ಗಳಿಸಲು 20 - 25 ಲಕ್ಷ ಮಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಅಂಕಿ - ಅಂಶಗಳಿಂದ ತಿಳಿದುಬಂದಿದೆ. ಇವರು ಜನರನ್ನು ರಂಜಿಸಲು ಸಾಧ್ಯವಾದಷ್ಟು ಉತ್ತಮವಾದ ಕಂಟೆಂಟ್ಗಳನ್ನು ರಚಿಸುತ್ತಿದ್ದಾರೆ. ಆದರೆ ಕೇವಲ ಶೇ.10% ಕಂಟೆಂಟ್ ಕ್ರಿಯೇಟರ್ಗಳು ಮಾತ್ರ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ, ಅಂದರೆ ಹಣ ಸಂಪಾದಿಸುತ್ತಿದ್ದಾರೆ. ಶೇ.10ರಷ್ಟು ಕಂಟೆಂಟ್ ಕ್ರಿಯೇಟರ್ಗಳು 350-400 ಬಿಲಿಯನ್ ಡಾಲರ್ (ಸರಿಸುಮಾರು 31-36 ಲಕ್ಷ ಕೋಟಿ ರೂಪಾಯಿಗಳು) ಮೌಲ್ಯದ ಆರ್ಥಿಕತೆಯನ್ನು ಸೃಷ್ಟಿಸಿದ್ದಾರೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ವರದಿಯ ಪ್ರಕಾರ, ಈ ಅಂಕಿ - ಅಂಶವು 2030ರ ವೇಳೆಗೆ 1 ಟ್ರಿಲಿಯನ್ ಡಾಲರ್ (ಸುಮಾರು 90 ಲಕ್ಷ ಕೋಟಿ ರೂಪಾಯಿಗಳು) ಮೀರುವ ನಿರೀಕ್ಷೆಯಿದೆ. ಕಂಟೆಂಟ್ ಕ್ರಿಯೇಷನ್ ಉದ್ಯಮ ಎಂದರೇನು, ಅದರಲ್ಲಿ ಜನರು ಹೇಗೆ ಮತ್ತು ಎಷ್ಟು ಗಳಿಸುತ್ತಿದ್ದಾರೆ, ಅದು ದೇಶದ ಆರ್ಥಿಕತೆಗೆ ಹೇಗೆ ಕೊಡುಗೆ ನೀಡುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳೇನು ಎಂಬ ಮಾಹಿತಿ ಇಲ್ಲಿದೆ.
ಕಂಟೆಂಟ್ ಕ್ರಿಯೇಟರ್ ಆರ್ಥಿಕತೆ ಎಂದರೇನು?: ಮೊದಲು, ಕಂಟೆಂಟ್ ಕ್ರಿಯೇಷನ್ ಎಂದರೇನು, ಕಂಟೆಂಟ್ ಕ್ರಿಯೇಟರ್ಸ್ ಯಾರು? ಮತ್ತು ಅವರು ಆರ್ಥಿಕತೆಗೆ ಹೇಗೆ ಕೊಡುಗೆ ನೀಡುತ್ತಿದ್ದಾರೆ? ಎಂಬುದನ್ನು ತಿಳಿದುಕೊಳ್ಳೋಣ. ಸಾಮಾಜಿಕ ಮಾಧ್ಯಮದಲ್ಲಿ ಕಿರು ವಿಡಿಯೋಗಳಾದ ರೀಲ್ಸ್ ಮತ್ತು ಶಾರ್ಟ್ಸ್ ರಚಿಸುವವರನ್ನು ಕಂಟೆಂಟ್ ಕ್ರಿಯೇಟರ್ಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲಕ ಬರುವ ಗಳಿಕೆಯನ್ನು ಕಂಟೆಂಟ್ ಕ್ರಿಯೇಟರ್ ಆರ್ಥಿಕತೆಗೆ ಲಿಂಕ್ ಮಾಡಲಾಗುತ್ತದೆ. ಕಂಟೆಂಟ್ ಕ್ರಿಯೇಟರ್ ಆರ್ಥಿಕತೆಯ ತಿರುಳಿನಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಬಳಕೆದಾರರನ್ನು ಮತ್ತು ಕಂಟೆಂಟ್ ಕ್ರಿಯೇಟರ್ ಸಂಪರ್ಕಿಸುತ್ತದೆ, ಇದು ಆರ್ಥಿಕತೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಭಾರತದಲ್ಲಿ ಎಷ್ಟು ಕಂಟೆಂಟ್ ಕ್ರಿಯೇಟರ್ಗಳಿದ್ದಾರೆ?: BCG ವರದಿಯ ಪ್ರಕಾರ, ಭಾರತದಲ್ಲಿ ಸರಿಸುಮಾರು 20 ರಿಂದ 25 ಲಕ್ಷ ಮಂದಿ ಹಣ ಗಳಿಸುತ್ತಿರುವ ಕಂಟೆಂಟ್ ಕ್ರಿಯೇಟರ್ಗಳಿದ್ದಾರೆ. 2020ರಲ್ಲಿ, ಕಂಟೆಂಟ್ ಕ್ರಿಯೇಟರ್ಗಳ ಸಂಖ್ಯೆ 1 ಮಿಲಿಯನ್‌ಗಿಂತ ಕಡಿಮೆಯಿತ್ತು. ಆದಾಗ್ಯೂ, 2024ರ ಹೊತ್ತಿಗೆ 4 ಮಿಲಿಯನ್‌ಗಿಂತಲೂ ಹೆಚ್ಚು ಕಂಟೆಂಟ್ ಕ್ರಿಯೇಟರ್ಗಳು ಇದ್ದರು, ಇದು 4 ವರ್ಷಗಳಲ್ಲಿ ಶೇ 322ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಇವರಲ್ಲಿ ಹಲವರು ಬಹಳ ಕಡಿಮೆ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸರಿಸುಮಾರು 2 ಮಿಲಿಯನ್ ಜನರು 1,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು( ಫಾಲೋವರ್ಸ್) ಹೊಂದಿದ್ದಾರೆ. ಮತ್ತೊಂದೆಡೆ, ಅಂದಾಜು 2 ರಿಂದ 2.5 ಲಕ್ಷ ಮಂದಿ ಭಾರತೀಯ ಕಂಟೆಂಟ್ ಕ್ರಿಯೇಟರ್ಗಳು 1,000 ಫಾಲೋವರ್ಸ್ ಗಡಿಯನ್ನು ದಾಟಿದ್ದಾರೆ. ಇವರು ಹಣ ಗಳಿಸುವ ಕಂಟೆಂಟ್ ಕ್ರಿಯೇಟರ್ಗಳು ಎಂದು ಪರಿಗಣಿಸಲಾಗಿದೆ.
ದೇಶದಲ್ಲಿ ಎಷ್ಟು ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಾರೆ: ಪ್ರಸ್ತುತ ಸುಮಾರು 659 ಮಿಲಿಯನ್ ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇ.47.1 ರಷ್ಟು. ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬಳಕೆಯ ಮಾರುಕಟ್ಟೆಯಾಗಿದ್ದು, ಚೀನಾವನ್ನೂ ಹಿಂದಿಕ್ಕಿದೆ.
ಜನರು ದಿನಕ್ಕೆ ಎಷ್ಟು ಗಂಟೆ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ: ಜಾಗತಿಕವಾಗಿ, ಜನರು ದಿನಕ್ಕೆ ಸರಾಸರಿ 4.37 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇಂಡೋನೇಷ್ಯಾದಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ 6.05 ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸುತ್ತಾನೆ. ಭಾರತದಲ್ಲಿ, ಒಬ್ಬ ವ್ಯಕ್ತಿಯು ದಿನಕ್ಕೆ 4.77 ಗಂಟೆ ಕಾಲವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಾನೆ.
ಕಂಟೆಂಟ್ ಕ್ರಿಯೇಟರ್ಗಳು ಎಷ್ಟು ಹಣ ಗಳಿಸುತ್ತಾರೆ?: BCG ವರದಿಯ ಪ್ರಕಾರ, ಹೆಚ್ಚಿನ ಕ್ರಿಯೇಟರ್ಗಳು ತಿಂಗಳಿಗೆ ₹18,000 ಕ್ಕಿಂತ ಕಡಿಮೆ ಅಥವಾ ವಾರ್ಷಿಕವಾಗಿ 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಗಳಿಸುತ್ತಾರೆ. ಸಣ್ಣ ಕ್ರಿಯೇಟರ್ಗಳು ವಾರ್ಷಿಕವಾಗಿ ಸುಮಾರು 3.8 ಲಕ್ಷ ಗಳಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, 1 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು ಮತ್ತು ಬ್ರ್ಯಾಂಡ್ ಡೀಲ್‌ಗಳನ್ನು ಹೊಂದಿರುವ ಕ್ರಿಯೇಟರ್ಗಳು ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚು ಗಳಿಸುತ್ತಾರೆ ಎಂದು ವರದಿ ತಿಳಿಸಿದೆ.
ಕಂಟೆಂಟ್ ಕ್ರಿಯೇಟರ್ಗಳು ಹೇಗೆ ಹಣ ಗಳಿಸುತ್ತಾರೆ: ಕಂಟೆಂಟ್ ಕ್ರಿಯೇಟರ್ಗಳು ಜಾಹೀರಾತು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಕಂಟೆಂಟ್ ಕ್ರಿಯೆಟ್ ಮಾಡುವ ಮೂಲಕ ಗಳಿಸುತ್ತಾರೆ. ಬಿಸಿಜಿ ವರದಿಯು, ಕ್ರಿಯೇಟರ್ಗಳು ತಮ್ಮ ಆದಾಯದ ಹರಿವುಗಳನ್ನು ವೈವಿಧ್ಯಗೊಳಿಸಬೇಕು ಮತ್ತು ಅವರ ಅಭಿಮಾನಿಗಳೊಂದಿಗೆ ಆಳವಾಗಿ ತೊಡಗಿಸಿಕೊಳ್ಳುವಿಕೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಸೂಚಿಸುತ್ತದೆ. ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್‌ಗಳು ಈಗ ಕ್ರಿಯೇಟರ್ಗಳಿಗೆ ಚಂದಾದಾರಿಕೆ ಕಾರ್ಯಕ್ರಮಗಳನ್ನು ನೀಡುತ್ತವೆ, ಇದು ಅವರ ಬಳಕೆದಾರರಿಗೆ ವಿಶೇಷ ವಿಷಯವನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಭಾರತದಲ್ಲಿ ಕಂಟೆಂಟ್ ಕ್ರಿಯೇಷನ್ ಯಾವಾಗ ಪ್ರಾರಂಭವಾಯಿತು?: ಶತಮಾನಗಳಿಂದ ಭಾರತದಲ್ಲಿ ಕಂಟೆಂಟ್ ಕ್ರಿಯೇಷನ್ ಜನಪ್ರಿಯವಾಗಿದೆ. ಆರಂಭದಲ್ಲಿ, ಕಂಟೆಂಟ್ ಕ್ರಿಯೇಷನ್ ಪುಸ್ತಕಗಳು, ಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನದ ರೂಪದಲ್ಲಿತ್ತು. 2000ನೇ ಇಸವಿಯ ಸುಮಾರಿಗೆ, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಯೊಂದಿಗೆ ಕಂಟೆಂಟ್ ಕ್ರಿಯೇಷನ್ ಸುಲಭವಾಯಿತು. ಕಳೆದ 7-8 ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಇದು ಗಮನಾರ್ಹ ವೇಗ ಪಡೆಯಿತು. ಆದಾಗ್ಯೂ, ಕೈಗೆಟುಕುವ ಇಂಟರ್ನೆಟ್ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಕಂಟೆಂಟ್ ಕ್ರಿಯೇಷನ್ ಬೆಳವಣಿಗೆಯಲ್ಲಿ ಪ್ರಮುಖ ಅಂಶಗಳಾಗಿವೆ.
ಬಳಕೆದಾರರು ಯಾವ ರೀತಿಯ ಕಂಟೆಂಟ್ ಇಷ್ಟಪಡುತ್ತಿದ್ದಾರೆ: ಯೂಟ್ಯೂಬ್ ಗ್ಲೋಬಲ್ ಕಲ್ಚರ್ ಮತ್ತು ಟ್ರೆಂಡ್ಸ್ ರಿಪೋರ್ಟ್ 2025ರ ಪ್ರಕಾರ, ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಷಯವನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಹಾಸ್ಯ, ಚಲನಚಿತ್ರಗಳು, ದೈನಂದಿನ ಧಾರಾವಾಹಿಗಳು ಮತ್ತು ಫ್ಯಾಷನ್ ಸೇರಿವೆ. ಬಳಕೆದಾರರು ಫ್ಯಾಷನ್, ಮನರಂಜನೆ, ಸೌಂದರ್ಯ ಮತ್ತು ವೈಯಕ್ತಿಕ ಸಮಸ್ಯೆಗಳ ಬಗೆಗಿನ ವಿಷಯವನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಮನರಂಜನೆ ಮತ್ತು ಫ್ಯಾಷನ್ ಕಂಟೆಂಟ್ನಿಂದ ಕ್ರಿಯೇಟರ್ಗಳು ಗಮನಾರ್ಹ ಯಶಸ್ಸು ಕಂಡಿದ್ದಾರೆ.
ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಜನರು ಸಕ್ರಿಯರಾಗಿದ್ದಾರೆ: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2020ರಲ್ಲಿ ಸರಿಸುಮಾರು 740 ಮಿಲಿಯನ್‌ನಿಂದ 2024ರಲ್ಲಿ 950 ಮಿಲಿಯನ್‌ಗೆ ಏರಿಕೆಯಾಗಿದೆ. ಈ ಸಂಖ್ಯೆ 2030 ರ ಅಂತ್ಯದ ವೇಳೆಗೆ 130 ಮಿಲಿಯನ್ ತಲುಪುವ ನಿರೀಕ್ಷೆಯಿದೆ, ಇದು ಶೇ.75ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
ಒಬ್ಬ ವ್ಯಕ್ತಿಯು ತಿಂಗಳಿಗೆ ಎಷ್ಟು ಇಂಟರ್ನೆಟ್ ಬಳಸುತ್ತಿದ್ದಾನೆ: BCG ಪ್ರಕಾರ, 2020ರಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿಯು ತಿಂಗಳಿಗೆ 12 GB ಇಂಟರ್ನೆಟ್ ಡೇಟಾವನ್ನು ಬಳಸುತ್ತಿದ್ದನು. ಇದು 2024 ರ ವೇಳೆಗೆ 27 GBಗೆ ಏರಿತು. 2030ರ ವೇಳೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 60 GB ಬಳಸಲಿದ್ದಾನೆ ಎಂದು ಅಂದಾಜಿಸಲಾಗಿದೆ. ಇದು ಐದು ಪಟ್ಟು ಹೆಚ್ಚಳವನ್ನು ಸೂಚಿಸುತ್ತದೆ.
ದೇಶದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಎಷ್ಟು: ದೇಶವು ಗಮನಾರ್ಹ ಸಂಖ್ಯೆಯ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಸಾಮಾಜಿಕ ಮಾಧ್ಯಮ ಬಳಕೆ 32.2% ತಲುಪುತ್ತದೆ. ಅಂದರೆ 462 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಇಂಟರ್ನೆಟ್ ಬಳಕೆದಾರರಿದ್ದಾರೆ. ಈ ಬಳಕೆದಾರರಲ್ಲಿ ಶೇ 65 ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಕಂಟೆಂಟ್ ಕ್ರಿಯೇಷನ್ ಪ್ರಧಾನಿ ಮೋದಿ 1 ಬಿಲಿಯನ್ ಡಾಲರ್ ನೀಡಲಿದ್ದಾರೆ: ಕಂಟೆಂಟ್ ಕ್ರಿಯೇಟರ್ಗಳ ಆರ್ಥಿಕತೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 1 ಬಿಲಿಯನ್ ಡಾಲರ್ ನಿಧಿಯನ್ನು (ಸುಮಾರು 83,000 ಕೋಟಿ ರೂ.) ಘೋಷಿಸಿದೆ. ಇದು ಕ್ರಿಯೇಟರ್ಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವ ಗುರಿ ಹೊಂದಿದೆ. ಇದು ಅವರ ಕೌಶಲ್ಯಗಳನ್ನು ಹೆಚ್ಚಿಸುವ ಮತ್ತು ಜಾಗತಿಕವಾಗಿ ಭಾರತೀಯ ಕಂಟೆಂಟ್ ಅನ್ನು ಉತ್ತೇಜಿಸುವ ಗುರಿ ಹೊಂದಿದೆ.
ಸರ್ಕಾರವು ಪಿಪಿಪಿ ಮಾದರಿಯ ಮೂಲಕ ಕಂಟೆಂಟ್ ಕ್ರಿಯೇಟರ್ಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುತ್ತದೆ: ಈ ನಿಧಿಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಡಿಯಲ್ಲಿ ರಚಿಸಲಾಗುವುದು, ಇದು ಕ್ರಿಯೇಟರ್ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮುನ್ನಡೆಯಲು ಅವಕಾಶ ಒದಗಿಸುತ್ತದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, WAVES 2025 (ವಿಶ್ವ ಆಡಿಯೋ-ವಿಶುವಲ್ ಮತ್ತು ಮನರಂಜನಾ ಶೃಂಗಸಭೆ) ಸಂದರ್ಭದಲ್ಲಿ ನಿಧಿಯನ್ನು ಘೋಷಿಸಿದ್ದರು.
ಮುಂಬೈ ಫಿಲ್ಮ್ ಸಿಟಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ ಸ್ಥಾಪನೆ: ಸೃಜನಶೀಲ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಉತ್ತೇಜಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐಐಸಿಟಿ) ಸ್ಥಾಪನೆಗೆ ಸರ್ಕಾರ 391 ಕೋಟಿ ರೂ ನೀಡಲು ಅನುಮೋದಿಸಿದೆ. ಐಐಟಿಗಳು ಮತ್ತು ಐಐಎಂಗಳ ಮಾದರಿಯಲ್ಲಿ ಮಾರ್ಪಡಿಸಲಾದ ಈ ಸಂಸ್ಥೆಯು ಮುಂಬೈ ಫಿಲ್ಮ್ ಸಿಟಿ, ಗೋರೆಗಾಂವ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಲಿದೆ.
ಸರ್ಕಾರ ಕಂಟೆಂಟ್ ಕ್ರಿಯೇಟರ್ಗಳನ್ನು ಏಕೆ ಉತ್ತೇಜಿಸುತ್ತಿದೆ?: ಭಾರತೀಯ ಕಂಟೆಂಟ್ ಕ್ರಿಯೇಟರ್ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಈಗ ಬ್ರ್ಯಾಂಡ್ ಪಾಲುದಾರಿಕೆಗಳ ಮೂಲಕ ಕಾರ್ಪೊರೇಟ್ ಮಾರ್ಕೆಟಿಂಗ್ ತಂತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಜಾಗತಿಕವಾಗಿ ಭಾರತದ ಶಕ್ತಿಯನ್ನು ಬಲಪಡಿಸಲು ಹಿಂದಿ ಸಿನಿಮಾದಂತೆಯೇ ಕಂಟೆಂಟ್ ಕ್ರಿಯೇಟರ್ಗಳನ್ನು ಪ್ರಬಲ ಸಾಧನವೆಂದು ಪರಿಗಣಿಸಲಾಗುತ್ತಿದೆ. ಕಂಟೆಂಟ್ ಕ್ರಿಯೇಷನ್ ಉದ್ಯಮವು ಅಪಾರ ಉದ್ಯೋಗಾವಕಾಶಗಳನ್ನು ನೀಡುತ್ತದೆ, ಏಕೆಂದರೆ ವಿಷಯವು ಫ್ಯಾಷನ್, ಪ್ರವಾಸ, ಫಿಟ್ನೆಸ್, ಆಹಾರ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳನ್ನು ನೀಡುತ್ತದೆ.
ಭಾರತದ ಆರ್ಥಿಕತೆಯ ಐದನೇ ಒಂದು ಭಾಗಕ್ಕೆ ಕಂಟೆಂಟ್ ಕ್ರಿಯೇಷನ್ ಆರ್ಥಿಕತೆ ಕಾರಣವಾಗಿದೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಡಿಸೆಂಬರ್ 2024 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಕ್ರಿಯೇಟರ್ ಆರ್ಥಿಕತೆಯು $5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಭಾರತದ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ತರುತ್ತಿದೆ ಎಂದು ಹೇಳಿದ್ದರು. ಅದರಂತೆ, ಕಂಟೆಂಟ್ ಕ್ರಿಯೇಷನ್ ಆರ್ಥಿಕತೆಯು ಭಾರತದ ಆರ್ಥಿಕತೆಯ ಐದನೇ ಒಂದು ಭಾಗವನ್ನು ಹೊಂದಬಹುದು.
ಭಾರತದಲ್ಲಿ ಕಂಟೆಂಟ್ ಕ್ರಿಯೇಟರ್ಗಳ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು BCG ವರದಿ ಹೇಳುತ್ತದೆ. ಪ್ರಸ್ತುತ 2 ರಿಂದ 2.5 ಮಿಲಿಯನ್ ಕ್ರಿಯೇಟರ್ಗಳು 350-400 ಬಿಲಿಯನ್ ಡಾಲರ್ ಮೌಲ್ಯದ ಗ್ರಾಹಕ ಖರ್ಚಿನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಅಂಕಿ ಅಂಶವು 2030ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ.
ಇವುಗಳನ್ನೂ ಓದಿ:

