ಓಮನ್ ಕರಾವಳಿಯಲ್ಲಿ 15 ಭಾರತೀಯ ಸಿಬ್ಬಂದಿ ಇದ್ದ ತೈಲ ಟ್ಯಾಂಕರ್ ಮೇಲೆ ದಾಳಿ
ಓಮನ್ ಕರಾವಳಿಯಲ್ಲಿ ಇರಾನ್ ಸೇನೆ 15 ಭಾರತೀಯ ಸಿಬ್ಬಂದಿ ಇದ್ದ ತೈಲ ಟ್ಯಾಂಕರ್ ಮೇಲೂ ದಾಳಿ ನಡೆಸಿದೆ. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.

By PTI
Published : March 1, 2026 at 11:03 PM IST
ನವದೆಹಲಿ: ಓಮನ್‌ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ತೈಲ ಟ್ಯಾಂಕರ್ ಮೇಲೆ ಇರಾನಿನ ಸೇನೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಓಮನ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ನಂತರ ಇರಾನ್ ಮುಖ್ಯವಾಗಿ ಹಲವಾರು ಗಲ್ಫ್ ದೇಶಗಳಲ್ಲಿನ ಇಸ್ರೇಲ್ ಮತ್ತು ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಿದೆ. ಇಸ್ರೇಲ್-ಯುಎಸ್ ದಾಳಿಯಲ್ಲಿ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಟೆಹ್ರಾನ್ ಭಾನುವಾರ ಬೆಳಗ್ಗೆ ಘೋಷಿಸಿದ ನಂತರ ಇರಾನಿನ ಪ್ರತೀಕಾರ ಹೆಚ್ಚಾಗಿದೆ.
ಓಮನ್ ಸುದ್ದಿ ಸಂಸ್ಥೆಯ ಪ್ರಕಾರ, ಮುಸಂದಮ್ ಗವರ್ನರೇಟ್‌ನಲ್ಲಿರುವ ಖಸಾಬ್ ಬಂದರಿನ ಉತ್ತರಕ್ಕೆ ಐದು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ತೈಲ ಟ್ಯಾಂಕರ್ ಸ್ಕೈಲೈಟ್ ಮೇಲೆ ದಾಳಿ ನಡೆದಿದೆ ಎಂದು ಒಮನ್‌ನ ಸಾಗರ ಭದ್ರತಾ ಕೇಂದ್ರ ತಿಳಿಸಿದೆ. 15 ಭಾರತೀಯ ಪ್ರಜೆಗಳು ಮತ್ತು ಐವರು ಇರಾನಿಯನ್ನರು ಸೇರಿದಂತೆ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅದು ಹೇಳಿದೆ.
ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಅದು ಹೇಳಿದೆ. ಘಟನೆಯ ಬಗ್ಗೆ ತಿಳಿದಿರುವ ಜನರು ನವದೆಹಯಲ್ಲಿನ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸೂಚಿಸಿದ್ದಾರೆ.
ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಭಾನುವಾರ ಹೇಳಿದೆ. ಇದು ಮಧ್ಯಪ್ರಾಚ್ಯದಲ್ಲಿ ವ್ಯಾಪಕ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ. ಇರಾನಿನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ವಾರಗಳ ಕಾಲ ನಡೆದ ಮಾತುಕತೆಗಳ ನಂತರ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ಸೇನಾ ದಾಳಿಗಳನ್ನು ನಡೆಸಿವೆ.
ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ಶನಿವಾರ ಹೇಳಿದೆ. "ಎಲ್ಲಾ ಕಡೆಯವರು ಸಂಯಮದಿಂದ ವರ್ತಿಸಬೇಕು, ಉಲ್ಬಣಗೊಳ್ಳುವುದನ್ನು ತಪ್ಪಿಸಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು" ಎಂದು ಹೇಳಿದೆ.
"ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಆಧಾರವಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು. ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು" ಎಂದು ಅದು ಹೇಳಿದೆ.
ಯುಎಇ ಮೇಲೆ ಇರಾನ್ ಗಾಯಗೊಂಡ 58 ಜನರಲ್ಲಿ ಭಾರತೀಯ ಪ್ರಜೆ: ಯುಎಇ ಹಂಚಿಕೊಂಡ ವಿವರಗಳ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಗುರಿಯಾಗಿಸಿಕೊಂಡು ನಡೆದ ಇರಾನಿನ ಮಿಲಿಟರಿ ದಾಳಿಯಲ್ಲಿ 58 ಜನರು ಗಾಯಗೊಂಡಿದ್ದು, ಈ ಪೈಕಿ ಓರ್ವ ಭಾರತೀಯ ಪ್ರಜೆ ಸೇರಿದ್ದಾರೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗೆ ಆಗಿರುವ ಗಾಯದ ಬಗ್ಗೆ ತಿಳಿದಿದೆ ಮತ್ತು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.
"ಭಾರತೀಯ ಪ್ರಜೆ ಅಪಾಯದಿಂದ ಪಾರಾಗಿದ್ದಾರೆ. ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ" ಎಂದು ಮಿಷನ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಇರಾನಿನ ದಾಳಿಯಲ್ಲಿ ಮೂವರು ಜನರು ಸಾವನ್ನಪ್ಪಿದ್ದಾರೆ ಮತ್ತು 58 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಇರಾನ್ ಹಲವಾರು ಗಲ್ಫ್ ದೇಶಗಳಲ್ಲಿನ ಇಸ್ರೇಲಿ ಮತ್ತು ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದೆ.
ಇಸ್ರೇಲ್-ಯುಎಸ್ ದಾಳಿಯಲ್ಲಿ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಟೆಹ್ರಾನ್ ಭಾನುವಾರ ಮುಂಜಾನೆ ಘೋಷಿಸಿದ ನಂತರ ಇರಾನಿನ ಪ್ರತೀಕಾರ ಹೆಚ್ಚಾಯಿತು.
ದಾಳಿ ಪ್ರಾರಂಭವಾದಾಗಿನಿಂದ ತನ್ನ ಸೇನೆಯು 165 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಎರಡು ಕ್ರೂಸ್ ಕ್ಷಿಪಣಿಗಳು ಮತ್ತು ಇರಾನ್ ಹಾರಿಸಿದ 541 ಡ್ರೋನ್‌ಗಳನ್ನು ಎದುರಿಸಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.
"ಒಟ್ಟು 541 ಇರಾನಿನ ಡ್ರೋನ್‌ಗಳನ್ನು ಪತ್ತೆಹಚ್ಚಲಾಯಿತು, ಅವುಗಳಲ್ಲಿ 506 ಅನ್ನು ತಡೆಹಿಡಿದು ನಾಶಪಡಿಸಲಾಯಿತು, ಆದರೆ 35 ದೇಶದೊಳಗೆ ಬಿದ್ದು ವಸ್ತು ಹಾನಿಯನ್ನುಂಟುಮಾಡಿತು" ಎಂದು ಹೇಳಿದೆ.
"ಈ ಘಟನೆಗಳಲ್ಲಿ ಪಾಕಿಸ್ತಾನಿ, ನೇಪಾಳಿ ಮತ್ತು ಬಾಂಗ್ಲಾದೇಶದ ಮೂವರು ಪ್ರಜೆಗಳು ಸಾವನ್ನಪ್ಪಿದ್ದಾರೆ ಮತ್ತು ಎಮಿರೇಟ್ಸ್, ಈಜಿಪ್ಟ್, ಇಥಿಯೋಪಿಯನ್, ಫಿಲಿಪಿನೋ, ಪಾಕಿಸ್ತಾನಿ, ಇರಾನಿಯನ್, ಭಾರತೀಯ, ಬಾಂಗ್ಲಾದೇಶಿ, ಶ್ರೀಲಂಕಾ, ಅಜೆರ್ಬೈಜಾನಿ, ಯೆಮೆನ್, ಉಗಾಂಡ, ಎರಿಟ್ರಿಯನ್, ಲೆಬನೀಸ್ ಮತ್ತು ಅಫ್ಘಾನ್ ಪ್ರಜೆಗಳು ಸೇರಿ ಒಟ್ಟು 58 ಮಂದಿ ಗಾಯಗೊಂಡಿದ್ದಾರೆ" ಎಂದು ಅದು ತಿಳಿಸಿದೆ. ಆದ್ರೆ ಯುಎಇಯಲ್ಲಿ ಭಾರತೀಯ ಪ್ರಜೆ ಗಾಯಗೊಂಡ ನಿರ್ದಿಷ್ಟ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ. (ಪಿಟಿಐ)
ಇದನ್ನೂ ಓದಿ: ಇರಾನ್ನ 40 ಕಮಾಂಡರ್ಗಳ ಹತ್ಯೆ: ಪ್ರತಿದಾಳಿ ಮಾಡಿದರೆ 'ಹಿಂದೆಂದೂ ಕಂಡಿರದ ಭೀಕರ ದಾಳಿ'- ಟ್ರಂಪ್ ಎಚ್ಚರಿಕೆ

