ETV Bharat / bharat

ಅಮೆರಿಕ - ಭಾರತದ ನಡುವೆ ಟ್ಯಾಂಕ್​ಗಳ ಮೇಲೆ ದಾಳಿ ಮಾಡಬಲ್ಲ, 100 ಜಾವೆಲಿನ್​ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ

ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಸರ್ಕಾರ ಅಮೆರಿಕದ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಅದರ ಟ್ಯಾಂಕ್ ನಿಗ್ರಹ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದೆ.

INDIA US MISSILE DEAL
ಟ್ಯಾಂಕ್​ಗಳ ಮೇಲೆ ದಾಳಿ ಮಾಡಬಲ್ಲ ಜಾವೆಲಿನ್​ ಕ್ಷಿಪಣಿ ವ್ಯವಸ್ಥೆ (IANS)
author img

By ETV Bharat Karnataka Team

Published : August 29, 2026 at 3:37 PM IST

2 Min Read
Choose ETV Bharat

ನವದೆಹಲಿ: ಭಾರತ ಮತ್ತು ಅಮೆರಿಕದ ನಡುವೆ ಜಾವೆಲಿನ್ ಶಸ್ತ್ರಾಸ್ತ್ರ ಒಪ್ಪಂದ ಏರ್ಪಟ್ಟಿದೆ. ಟ್ಯಾಂಕ್​ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಲ್ಲ ಜಿಪಿಎಸ್​ ನಿರ್ದೇಶಿತ 100 ಕ್ಷಿಪಣಿ ವ್ಯವಸ್ಥೆಯನ್ನು ಸರಬರಾಜು ಮಾಡಲು ಅಮೆರಿಕ ಒಪ್ಪಿದೆ.

ಈ ಜಾವೆಲಿನ್​ ಟ್ಯಾಂಕ್​ ನಿಗ್ರಹ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ಖರೀದಿಸಲು ಭಾರತ 16 ವರ್ಷಗಳ ಹಿಂದೆಯೇ ಮುಂದಾಗಿತ್ತು. ಇದೀಗ, ಅಮೆರಿಕ ತನ್ನ ಬತ್ತಳಿಕೆಯಲ್ಲಿನ ಶಸ್ತ್ರವನ್ನು ಭಾರತಕ್ಕೆ ನೀಡಲು ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭುಜದ ಮೇಲೆ ಒಬ್ಬರೇ ಹೊತ್ತು ಸಾಗಬಲ್ಲ ಜಾವೆಲಿನ್​​ ಕ್ಷಿಪಣಿಗಳನ್ನು ಭಾರತಕ್ಕೆ ಸರಬರಾಜು ಮಾಡಲಾವುದು. ಈ ಟ್ಯಾಂಕರ್​ ವಿರೋಧಿ ವ್ಯವಸ್ಥೆಯನ್ನು ಆರ್‌ಟಿಎಕ್ಸ್ ಮತ್ತು ಲಾಕ್‌ಹೀಡ್ ಮಾರ್ಟಿನ್ ನಡುವಿನ ಪಾಲುದಾರಿಕೆಯಲ್ಲಿ ಉತ್ಪಾದಿಸುತ್ತದೆ ಎಂದು ತಿಳಿಸಿದೆ.

ಈ ಒಪ್ಪಂದವು ಪರಸ್ಪರ ಪ್ರಯೋಜನಕಾರಿ, ಸಹ ಉತ್ಪಾದನೆ ಮತ್ತು ಎರಡೂ ದೇಶಗಳ ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಸಾಧ್ಯವಾಗಲಿದೆ. ಭಾರತೀಯ ಸೇನೆಯು ಅಮೆರಿಕದಿಂದ ಕ್ಷಿಪಣಿ ವ್ಯವಸ್ಥೆಯ ಖರೀದಿ ಪತ್ರಕ್ಕೆ ಸಹಿ ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೊ ಗೊರ್​, "ಈ ಒಪ್ಪಂದವು ಸಮರ್ಥ ಮತ್ತು ಹೆಚ್ಚು ಪರಿಣಾಮಕಾರಿ ರಕ್ಷಣಾ ಪಾಲುದಾರಿಕೆಯಾಗಿದೆ. ಜಾವೆಲಿನ್ ಟ್ಯಾಂಕ್​ ನಿಗ್ರಹ ಕ್ಷಿಪಣಿ ವ್ಯವಸ್ಥೆಯ ಒಪ್ಪಂದವು ಭಾರತೀಯ ಸೇನೆಗೆ ಅಮೆರಿಕದ ಬೆಂಬಲವನ್ನು ಸೂಚಿಸುತ್ತದೆ. ಉಭಯ ರಾಷ್ಟ್ರಗಳ ರಕ್ಷಣಾ ಪಡೆಗಳು ಒಟ್ಟಾಗಿ ಕೆಲಸ ಮಾಡಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

8,780.34 ಕೋಟಿ ರೂಪಾಯಿ ವೆಚ್ಚದಲ್ಲಿ ಭುಜದ ಮೇಲೆ ಹೊತ್ತು ಸಾಗಬಹುದಾದ 100 ಜಾವೆಲಿನ್​ಗಳನ್ನು ಸರಬರಾಜು ಮಾಡಲಾಗುವುದು. ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸಲು ಕಳೆದ ವರ್ಷದ ನವೆಂಬರ್​ನಲ್ಲಿಯೇ ಅಮೆರಿಕ ಸಮ್ಮತಿಸಿತ್ತು. ಇದೀಗ, ಒಂಬತ್ತು ತಿಂಗಳ ನಂತರ ಒಪ್ಪಂದ ಅಧಿಕೃತವಾಗಿ ಕುದುರಿದೆ.

ಏನಿದರ ವಿಶೇಷತೆ?: ಮಧ್ಯಮ ದೂರಗಾಮಿ ಟ್ಯಾಂಕ್​ಗಳನ್ನು ನಾಶಪಡಿಸಲು ಈ ಕ್ಷಿಪಣಿಗಳು ಹೆಚ್ಚು ಉಪಯುಕ್ತವಾಗಿವೆ. ಅಮೆರಿಕದ ಸೇರಿದಂತೆ ಹಲವು ದೇಶಗಳು ಈಗಾಗಲೇ ಇವುಗಳನ್ನು ಬಳಸುತ್ತಿವೆ. ಒಮ್ಮೆ ಗುರಿ ಇಟ್ಟು ದಾಳಿ ಮಾಡಿದರೆ, ತಾನಾಗಿಯೇ ತೆರಳಿ ಟ್ಯಾಂಕ್​ಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇವುಗಳು ಹೊಂದಿವೆ.

ಟ್ಯಾಂಕ್​ನ ಮೇಲ್ಭಾಗದಲ್ಲಿ ದಾಳಿ ಮಾಡುವ ಮೂಲಕ ಶತ್ರು ಪಾಳಯಕ್ಕೆ ಹೆಚ್ಚಿನ ನಾಶ ಉಂಟು ಮಾಡುತ್ತದೆ. ಒಬ್ಬರೇ ತಮ್ಮ ಹೆಗಲ ಮೇಲೆ ಇಟ್ಟುಕೊಂಡು ಇವುಗಳನ್ನು ಸಾಗಿಸಬಹುದು. ಆರ್​ಟಿಎಕ್ಸ್​​ ಮತ್ತು ಲಾಕ್​ ಹೀಡ್​ ಮಾರ್ಟಿನ್​​ನ ಜಂಟಿ ಸಹಭಾಗಿತ್ವದಲ್ಲಿ ಜಾವೆಲಿನ್ ಸಂಸ್ಥೆಯು ಈ ಕ್ಷಿಪಣಿ ವ್ಯವಸ್ಥೆಯನ್ನು ಉತ್ಪಾದಿಸುತ್ತದೆ. ಗುರಿಯನ್ನು ನಿಗದಿ ಮಾಡಿದರೆ, ಈ ಕ್ಷಿಪಣಿಗಳು ಜಿಪಿಎಸ್​ ಬಳಸಿ ದಾಳಿ ಮಾಡುತ್ತವೆ. ಇವುಗಳು ನಿರ್ದೇಶಿತ ಫಿರಂಗಿಗಳಾಗಿದ್ದು, ದಾಳಿಯ ನಿಖರತೆ ಕರಾರುವಾಕ್ಕಾಗಿದೆ.

2010 ರಲ್ಲಿಯೇ ಭಾರತ, ಈ ವ್ಯವಸ್ಥೆಯನ್ನು ಖರೀದಿಸುವ ಯೋಜನೆಯನ್ನು ಘೋಷಿಸಿತ್ತು. ಆದರೆ, ಅದು ನಂತರದಲ್ಲಿ ಸ್ಥಗಿತಗೊಂಡಿತ್ತು. ಕಾರಣ, ಅಮೆರಿಕವು ಈ ಕ್ಷಿಪಣಿಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳು ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕುವ ಸಾಧ್ಯತೆ ಹಿನ್ನೆಲೆ ಖರೀದಿ ಯೋಜನೆ ತಾತ್ಕಾಲಿಕವಾಗಿ ಅರ್ಧಕ್ಕೆ ನಿಂತಿತ್ತು.

ತಜ್ಞರು ಏನಂತಾರೆ?: "ಜಾವೆಲಿನ್ ಉತ್ತಮ ಕ್ಷಿಪಣಿ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ, ಇದು ದುಬಾರಿ ಎಂದು ನಿವೃತ್ತ ಮೇಜರ್ ಜನರಲ್ ಎಸ್.ಬಿ. ಅಸ್ತಾನಾ ಹೇಳಿದರು.

"ಅಮೆರಿಕವು ಈ ಕ್ಷಿಪಣಿಗಳ ತಂತ್ರಜ್ಞಾನ ವರ್ಗಾವಣೆ ನೀಡಿದರೆ ಮಾತ್ರ ಒಳ್ಳೆಯ ಒಪ್ಪಂದವಾಗಲಿದೆ. ವೆಚ್ಚದ ಕಾರಣದಿಂದಾಗಿ ಈ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಅಂದು ಅಮೆರಿಕವು ನಮಗೆ ಪರೀಕ್ಷೆ ನಡೆಸಲು ಅವಕಾಶ ನೀಡಲಿಲ್ಲ. ತಂತ್ರಜ್ಞಾನ ವರ್ಗಾವಣೆಯನ್ನು ನೀಡಿರಲಿಲ್ಲ ಎಂದು ತಿಳಿಸಿದರು.

ಇವುಗಳನ್ನೂ ಓದಿ: