ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶ ಯಾವುದು? ಹೀಗೊಂದು ಆಘಾತಕಾರಿ ವರದಿ ಬಹಿರಂಗ!
ಭಾರತಕ್ಕೆ ಸಂಬಂಧಿಸಿದಂತೆ ಇದು ನಿಜಕ್ಕೂ ಹೆಮ್ಮೆಯ ವಿಷಯ. ದೇಶ ಆಧುನಿಕತೆಯತ್ತ ವೇಗವಾಗಿ ಸಾಗುತ್ತಿದ್ದರೂ, ವಿಚ್ಛೇದನದ ವಿಷಯದಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಉತ್ತಮ ಸ್ಥಾನದಲ್ಲಿದೆ.

Published : February 26, 2026 at 9:20 PM IST
ವರದಿ - ನರೇಂದ್ರ ಚೌಧರಿ
ಹೈದರಾಬಾದ್: ವಿಶ್ವದಲ್ಲೇ ಸ್ಪೇನ್ ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶವಂತೆ! ಹೀಗೊಂದು ಆಘಾತಕಾರಿ ವರದಿ ಬಹಿರಂಗಗೊಂಡಿದೆ. ವರದಿಯಲ್ಲಿ ಭಾರತದ ಪಾಲು ಎಷ್ಟು ಎಂಬ ಮಾಹಿತಿ ಕೂಡ ಉಲ್ಲೇಖಿಸಲಾಗಿದೆ.
'ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್' ಹೀಗೊಂದು ಆಘಾತಕಾರಿ ವರದಿ ನೀಡಿದೆ. ಜಗತ್ತಿನಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ವಿಚ್ಛೇದನದ ಶೇಕಡಾವಾರು ಪ್ರಮಾಣದ ಬಗ್ಗೆ ಈ ವರದಿ ಬೆಳಕು ಚೆಲ್ಲುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶ ಯಾವುದು ಎಂಬುವುದರ ಜೊತೆಗೆ ಅತಿ ಕಡಿಮೆ ವಿಚ್ಛೇದನ ದರ ಹೊಂದಿರುವ ದೇಶ ಯಾವುದು ಎಂಬ ಮಾಹಿತಿ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಪೇನ್‌ನಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಅತ್ಯಂತ ಕೆಟ್ಟದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದರೆ, ಧಾರ್ಮಿಕ ನಂಬಿಕೆ ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಭಾರತದಲ್ಲಿ ಪರಿಸ್ಥಿತಿ ಹೆಚ್ಚು ಉತ್ತಮವಾಗಿದೆ ಎಂದು ತಿಳಿಸಿದೆ.

ವಿಚ್ಛೇದನದ ಶೇಕಡಾವಾರು ಪ್ರಮಾಣದ ವಿಷಯದಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಹೆಚ್ಚು ಉತ್ತಮವಾಗಿವೆ. ಇದರರ್ಥ ಈ ದೇಶಗಳಲ್ಲಿ ವಿಚ್ಛೇದನಗಳ ಶೇಕಡಾವಾರು ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ, ಅಮೆರಿಕನ್ ಸೋಶಿಯಲಾಜಿಕಲ್ ಅಸೋಸಿಯೇಷನ್‌ನ ವರದಿಯ ಪ್ರಕಾರ, ಮಹಿಳೆಯರು ವಿಚ್ಛೇದನ ಪಡೆಯುವುದರಲ್ಲಿ ಮುಂದು ಎಂದು ಉಲ್ಲೇಖಿಸಿದೆ.
ಸ್ಪೇನ್ ವಿಶ್ವದ ನಂ.1 'ಡಿವೋರ್ಸ್' ದೇಶ: 2025ರ 'ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್' ವರದಿಯ ಪ್ರಕಾರ ಹೇಳುವುದಾದರೆ, ಸ್ಪೇನ್ ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶವಾಗಿದೆ. ಸ್ಪೇನ್‌ನಲ್ಲಿ ದಂಪತಿ ನಡುವೆ ಅತಿ ಹೆಚ್ಚು ಘರ್ಷಣೆಗಳು ಕಂಡುಬರುತ್ತವೆ. ಇಲ್ಲಿ ಶೇ. 86ರಷ್ಟು ದಂಪತಿಗಳು ವಿಚ್ಛೇದನ ಪಡೆದು, ನಂತರ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುತ್ತಾರೆ. ಈ ಶೇಕಡಾವಾರು ಪ್ರಮಾಣವು ವಿಶ್ವದಲ್ಲೇ ಅತಿ ಹೆಚ್ಚು. ಮಾಧ್ಯಮಗಳ ವರದಿಗಳ ಪ್ರಕಾರ, 2024 ರಲ್ಲಿ ಇಲ್ಲಿ 82,991 ವಿಚ್ಛೇದನ ಪ್ರಕರಣಗಳು ವರದಿಯಾಗಿವೆ. ಸ್ಪೇನ್ ದೇಶದ ಜನರು ಮುಕ್ತ ಮನಸ್ಸಿನವರು. ಆರ್ಥಿಕವಾಗಿ ಯಾರೂ ಪರಸ್ಪರ ಅವಲಂಬಿತರಾಗಿರುವುದಿಲ್ಲ. ಆದ್ದರಿಂದ, ಅವರಿಗೆ ಕಿರಿಕಿರಿ ಅನಿಸುವ ಸಂಬಂಧಗಳಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ, ಇದು ಸಂಬಂಧಗಳನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಕಾರಣವಾಗುತ್ತದೆ.
ರಷ್ಯಾ, ಉಕ್ರೇನ್ ಮತ್ತು ಇಟಲಿಯಲ್ಲಿ ಪರಿಸ್ಥಿತಿ ಹೇಗಿದೆ?: ಜಗತ್ತಿನಲ್ಲಿ ಹೆಚ್ಚು ವಿಚ್ಛೇದನಗಳು ನಡೆಯುವ ದೇಶಗಳ ಪಟ್ಟಿಯಲ್ಲಿ ಸ್ಪೇನ್ ನಂತರ ರಷ್ಯಾ ಎರಡನೇ ಸ್ಥಾನದಲ್ಲಿದೆ. ಅಲ್ಲಿ ವಿಚ್ಛೇದನ ದರ ಶೇ. 74ರಷ್ಟಿದೆ. ನಂತರದ ಸ್ಥಾನಗಳಲ್ಲಿ ಉಕ್ರೇನ್ (ಶೇ. 71), ಇಟಲಿ (ಶೇ. 69) ಸ್ಥಾನ ಪಡೆದಿವೆ. ಹೆಚ್ಚು ವಿಚ್ಛೇದನಗಳ ಪಟ್ಟಿಯಲ್ಲಿ ರಷ್ಯಾ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದಲ್ಲಿದ್ದರೆ, ಉಕ್ರೇನ್ ಮೂರು, ಇಟಲಿ ನಾಲ್ಕನೇ ಸ್ಥಾನದಲ್ಲಿದೆ. ಈ ದೇಶಗಳಲ್ಲಿಯೂ ವಿಚ್ಛೇದನದ ಹಿಂದೆ ನಂಬಿಕೆಯ ಕೊರತೆ, ಅನುಮಾನ ಮತ್ತು ಜಗಳಗಳಂತಹ ಹಲವು ಕಾರಣಗಳಿವೆ.
ಫ್ರಾನ್ಸ್, ಲಕ್ಸೆಂಬರ್ಗ್ ಮತ್ತು ಪೋರ್ಚುಗಲ್ ದೇಶಗಳು ಸಹ ಹಿಂದುಳಿದಿಲ್ಲ: ಫ್ರಾನ್ಸ್‌ನಲ್ಲಿ ವಿಚ್ಛೇದನ ಪ್ರಮಾಣ ದರ 55%, ಲಕ್ಸೆಂಬರ್ಗ್‌ನಲ್ಲಿ 54% ಮತ್ತು ಪೋರ್ಚುಗಲ್‌ನಲ್ಲಿ 50% ರಷ್ಟಿದೆ. ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ಟಾಪ್ 10 ದೇಶಗಳಲ್ಲಿ ಇವು ಸೇರಿವೆ. ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುವುದು ಫ್ರಾನ್ಸ್‌ನಲ್ಲಿ ಸಾಮಾನ್ಯ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಕೌಟುಂಬಿಕ ಹಿಂಸೆ ಮತ್ತು ಭಿನ್ನಾಭಿಪ್ರಾಯಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿಯೂ ವಿಚ್ಛೇದನ ಪಡೆಯುತ್ತಾರೆ. ಲಕ್ಸೆಂಬರ್ಗ್‌ನಲ್ಲಿ, ಗಂಡ ಮತ್ತು ಹೆಂಡತಿ ಪರಸ್ಪರ ಸುಲಭವಾಗಿ ವಿಚ್ಛೇದನ ಪಡೆಯಬಹುದು. ಅಲ್ಲಿನ ಕಾನೂನಿನಲ್ಲಿ ಈ ನಿಬಂಧನೆಯನ್ನು ಮಾಡಲಾಗಿದೆ. ಪೋರ್ಚುಗಲ್‌ನಲ್ಲಿ, ಪರಸ್ಪರ ಒಪ್ಪಿಗೆಯ ಕೊರತೆ ಮತ್ತು ಇತರ ಹಲವು ಕಾರಣಗಳು ವಿಚ್ಛೇದನಕ್ಕೆ ಕಾರಣಗಳಾಗಿವೆ ಎಂದು 'ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್' ಉಲ್ಲೇಖಿಸಿದೆ.
ಇತರ ದೇಶಗಳಲ್ಲಿ ಗಂಡ ಹೆಂಡತಿ ನಡುವಿನ ಸಂಬಂಧ ಹೇಗಿದೆ?: ಕೆನಡಾದಲ್ಲಿ ವಿಚ್ಛೇದನ ದರ ಶೇ. 48ರಷ್ಟಿದ್ದರೆ, ದಕ್ಷಿಣ ಕೊರಿಯಾ 47%, ಅಮೆರಿಕ (ಯುಎಸ್ಎ) 45%, ಚೀನಾ 45%, ಯುನೈಟೆಡ್ ಕಿಂಗ್‌ಡಮ್ 41%, ಜರ್ಮನಿ 36%, ಜಪಾನ್ 35%, ಕೊಲಂಬಿಯಾ 30%, ಇಂಡೋನೇಷ್ಯಾ 28%, ಇಥಿಯೋಪಿಯಾ 25%, ಟರ್ಕಿ 25%, ಥೈಲ್ಯಾಂಡ್ 25%, ಬ್ರೆಜಿಲ್ 21%, ದಕ್ಷಿಣ ಆಫ್ರಿಕಾ 17%, ಮೆಕ್ಸಿಕೊ 17%, ಈಜಿಪ್ಟ್ 17%, ಅಲ್ಜೀರಿಯಾ 16% ಮತ್ತು ಇರಾನ್ 14% ಇವೆ. ಈ ದೇಶಗಳಲ್ಲಿ, ಗಂಡ ಹೆಂಡತಿಯ ನಡುವಿನ ಘರ್ಷಣೆಗಳು ವಿವಿಧ ಕಾರಣಗಳಿಗಾಗಿ ವಿಚ್ಛೇದನಕ್ಕೆ ಕಾರಣವಾಗುತ್ತವೆ.
ಭಾರತ ಸೇರಿದಂತೆ ಈ ದೇಶಗಳಲ್ಲಿ ವಿಚ್ಛೇದನ ದರಗಳು ಗಮನಾರ್ಹವಾಗಿ ಕಡಿಮೆ: ವಿಯೆಟ್ನಾಂ ಪ್ರತಿ ವರ್ಷ ಶೇ.7 ರಷ್ಟು ವಿಚ್ಛೇದನ ಪ್ರಕರಣಗಳಿಗೆ ಕಾರಣವಾಗಿದ್ದರೆ, ಟಾಂಜಾನಿಯಾ, ಸುಡಾನ್, ಮ್ಯಾನ್ಮಾರ್ ಮತ್ತು ನೈಜೀರಿಯಾ ತಲಾ ಶೇ.3 ರಷ್ಟು ವಿಚ್ಛೇದನ ಪ್ರಕರಣಗಳಿಗೆ ಕಾರಣವಾಗಿವೆ. ವೈವಾಹಿಕ ಕಲಹದ ವಿಷಯದಲ್ಲಿ ಈ ದೇಶಗಳು ಉಳಿದ ದೇಶಕ್ಕೆ ಹೋಲಿಕೆ ಮಾಡಿದರೆ ಉತ್ತಮ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕೇವಲ ಶೇ.1 ರಷ್ಟು ವಿಚ್ಛೇದನ ದರ ಮಾತ್ರ ಹೊಂದಿವೆ. ಈ ಮೂರು ದೇಶಗಳು ವಿಶ್ವದಲ್ಲೇ ಉತ್ತಮ ದರವನ್ನು ಹೊಂದಿವೆ. ಇಲ್ಲಿನ ಜನರು ಪ್ರೀತಿಯಿಂದ ಸಂಬಂಧಗಳನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಪರಸ್ಪರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಅಲ್ಲದೇ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದಾಗ, ವಿಚ್ಛೇದನದ ಬದಲು ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ಸಂಧಾನ ಮಾಡುವ ಸಂಸ್ಕೃತಿ ನಮ್ಮಲ್ಲಿದೆ. ಅಲ್ಲದೆ, ಸಮಾಜದ ಗೌರವ, ಮಕ್ಕಳ ಭವಿಷ್ಯ ಮತ್ತು ಕುಟುಂಬದ ಪಾವಿತ್ರ್ಯತೆಗಾಗಿ ದಂಪತಿಗಳು ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಲು ಆದ್ಯತೆ ನೀಡುತ್ತಾರೆ.ಇದು ಸಂಬಂಧಗಳನ್ನು ಉಳಿಸಲು ಮುಖ್ಯ ಕಾರಣವಾಗಿದೆ.

ಭಾರತದ ವಿಚ್ಛೇದನ ಪ್ರಮಾಣ ಕಡಿಮೆ- ಆದರೆ!: 2020 ರಿಂದ 2025 ರವರೆಗಿನ ದತ್ತಾಂಶದ ಪ್ರಕಾರ, ಜಾಗತಿಕ ಮಾನದಂಡಗಳ ಪ್ರಕಾರ ಭಾರತದ ವಿಚ್ಛೇದನ ದರದ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಮದುವೆಯನ್ನು ಇನ್ನೂ ಜೀವಮಾನದ ಬದ್ಧತೆ ಎಂದು ಪರಿಗಣಿಸಲಾಗುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಸಂಬಂಧ ಮುರಿಯಲು ಹಿಂಜರಿಯುತ್ತಾರೆ. 1,000 ಜನರಿಗೆ ಕೇವಲ 0.01 ವಿಚ್ಛೇದನಗಳು ಇಲ್ಲಿ ನೋಂದಾಯಿಸಲ್ಪಟ್ಟಿವೆ. bhatlalawfirm.com ಪ್ರಕಾರ, ದೇಶದಲ್ಲಿ ವಿಚ್ಛೇದಿತರ ಸಂಖ್ಯೆ 1.36 ಮಿಲಿಯನ್ ಆಗಿದೆ. ಆದರೂ, ಈ ಅಂಕಿ ಅಂಶವು ಈಗ ಹೆಚ್ಚುತ್ತಿದೆ.
ದೇಶದ ಮೂರು ಪ್ರದೇಶಗಳ ಪರಿಸ್ಥಿತಿ:
ಕೇರಳ: LITEM ದತ್ತಾಂಶದ ಪ್ರಕಾರ, ಕೇರಳ (ಈಗ ಕೇರಳಂ) ದೇಶದ ಅತ್ಯಂತ ವಿದ್ಯಾವಂತ ಮತ್ತು ಪ್ರಗತಿಪರ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಹೊರತಾಗಿಯೂ, ಇದು ಹೆಚ್ಚಿನ ವಿಚ್ಛೇದನ ಪ್ರಮಾಣವನ್ನು ಹೊಂದಿದೆ. 2023ರಲ್ಲಿ, ಕೇರಳದಲ್ಲಿ ವಿಚ್ಛೇದನ ಪ್ರಮಾಣವು 2.5% ರಷ್ಟಿದ್ದು, ಇದು ದೇಶದ ಇತರೆ ರಾಜ್ಯಕ್ಕಿಂತ ಅತಿ ಹೆಚ್ಚು ವಿಚ್ಛೇದನ ದರಗಳಲ್ಲಿ ಒಂದಾಗಿದೆ.
ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿಯೂ ಸಹ, ದಂಪತಿಗಳ ನಡುವಿನ ವಿಚ್ಛೇದನದ ವರದಿಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ವೇಗವಾಗಿ ಬೆಳೆದಷ್ಟು ಇಲ್ಲಿನ ದಂಪತಿಗಳ ಪರಸ್ಪರ ನಂಬಿಕೆಯನ್ನು ಅಷ್ಟೇ ವೇಗವಾಗಿ ಕಳೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಾದ್ಯಂತ ವಿಚ್ಛೇದನ ಪ್ರಮಾಣವು ಸರಿಸುಮಾರು 1.7% ರಷ್ಟಿದ್ದು, ಇಲ್ಲಿಯೂ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುವ ದಂಪತಿಗಳಲ್ಲಿ ವಿಚ್ಛೇದನ ದರಗಳು ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಿಚ್ಛೇದನ ದರವು ಸರಿಸುಮಾರು 1.9% ಆಗಿದೆ. ಈ ಸಂಗತಿಗಳು ಮತ್ತು ಅಂಕಿಅಂಶಗಳು ನಗರೀಕರಣ ಮತ್ತು ಆರ್ಥಿಕ ಅಭಿವೃದ್ಧಿಯು ವೈವಾಹಿಕ ಸ್ಥಿರತೆಯ ಕುಸಿತಕ್ಕೆ ಕಾರಣವಾಗುವ ಎರಡು ಪ್ರಮುಖ ಅಂಶಗಳಾಗಿವೆ ಎಂದು ಸೂಚಿಸುತ್ತವೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಗಳಿಗೆ ಬೆಲೆ ಕೊಡಲಾಗುತ್ತದೆ: LITEM ದತ್ತಾಂಶದ ಪ್ರಕಾರ, 2022 ರಲ್ಲಿ, ಗ್ರಾಮೀಣ ಭಾರತದಲ್ಲಿ ವಿಚ್ಛೇದನ ಪ್ರಮಾಣವು ನಗರ ಪ್ರದೇಶಗಳಿಗಿಂತ ಕಡಿಮೆಯಾಗಿತ್ತು. ಇಲ್ಲಿ, ಗಂಡ ಮತ್ತು ಹೆಂಡತಿಯರು ಪರಸ್ಪರ ಗೌರವಿಸುತ್ತಾರೆ ಮತ್ತು ಕುಟುಂಬವನ್ನು ಒಟ್ಟಿಗೆ ಕರೆದೊಯ್ಯುತ್ತಾರೆ. ಹಾಗಾಗಿ ಗ್ರಾಮಗಳಲ್ಲಿ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಗ್ರಾಮೀಣ ಜನರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಭಿನ್ನಾಭಿಪ್ರಾಯಗಳಿದ್ದಾಗ, ಕುಟುಂಬ ಮತ್ತು ಸಮುದಾಯದ ಸದಸ್ಯರು ದಂಪತಿಗಳು ಸಮನ್ವಯಗೊಳಿಸಲು ಸಹಾಯ ಮಾಡುವುದು ಇದಕ್ಕೆ ಕಾರಣ.
ವಿಚ್ಛೇದನಕ್ಕೆ ಕಾರಣಗಳೇನು? - ಅಂಕಿಅಂಶಗಳಿಂದ ತಿಳಿದುಕೊಳ್ಳಿ: divorcelawyernewdelhi.com ಪ್ರಕಾರ, 2000 ರಿಂದ 2025 ರವರೆಗೆ ದೇಶದಲ್ಲಿ ವಿಚ್ಛೇದನಗಳ ಹಿಂದೆ ವಿವಿಧ ಕಾರಣಗಳು ಕಂಡು ಬರುತ್ತವೆ. ದೇಶಾದ್ಯಂತ, ಪತಿ ಮತ್ತು ಪತ್ನಿಯ ಪರಸ್ಪರ ಒಪ್ಪಿಗೆಯ ಮೇರೆಗೆ 250,000 ರಿಂದ 300,000 ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದೇ ರೀತಿ, ಕ್ರೌರ್ಯದ ಆಧಾರದ ಮೇಲೆ 180,000 ರಿಂದ 200,000 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ವಿವಾಹೇತರ ಸಂಬಂಧಗಳಿಂದಾಗಿ (ಸಂಗಾತಿಯನ್ನು ಹೊರತುಪಡಿಸಿ ಬೇರೆಯವರೊಂದಿಗಿನ ಸಂಬಂಧಗಳು) ಸುಮಾರು 50,000 ರಿಂದ 60,000 ಪ್ರಕರಣಗಳು ವಿಚ್ಛೇದನಕ್ಕಾಗಿ ದಾಖಲಾಗಿವೆ.

ವಿಚ್ಛೇದನಕ್ಕೆ ಪ್ರಮುಖ ಕಾರಣಗಳು: ವಾರ್ಷಿಕವಾಗಿ ಸರಿಸುಮಾರು 40,000 ರಿಂದ 50,000 ವಿಚ್ಛೇದನ ಪ್ರಕರಣಗಳು ದಾಖಲಾಗುತ್ತವೆ. ಇದರಲ್ಲಿ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಹೆಚ್ಚಾಗಿ ಕಂಡುಬರುತ್ತಿದ್ದು, 1.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಿರಂತರ ಸಂಘರ್ಷದಿಂದಾಗಿ ಸುಮಾರು 100,000 ಪ್ರಕರಣಗಳು ವಿಚ್ಛೇದನಕ್ಕಾಗಿ ದಾಖಲಾಗುತ್ತವೆ. ದೇಶಾದ್ಯಂತ ಸುಮಾರು 15,000 ರಿಂದ 20,000 ಪ್ರಕರಣಗಳಿಗೆ ಲೈಂಗಿಕ ಸಮಸ್ಯೆಗಳು ಮತ್ತು ದುರ್ಬಲತೆ ಕಾರಣವಾಗಿದೆ. ಮಾನಸಿಕ ಅಸ್ವಸ್ಥತೆಯಿಂದಾಗಿ ಸುಮಾರು 15,000 ಪ್ರಕರಣಗಳು ದಾಖಲಾಗುತ್ತವೆ. ಧಾರ್ಮಿಕ ಅಥವಾ ಸಾಂಸ್ಕೃತಿಕ ಭಿನ್ನತೆಗಳಿಂದಾಗಿ 5,000 ರಿಂದ 10,000 ಪ್ರಕರಣಗಳು ದಾಖಲಾಗುತ್ತವೆ. ಮದುವೆಗೆ ಮೊದಲು ವಂಚನೆಯಿಂದಾಗಿ 8,000 ರಿಂದ 12,000 ಪ್ರಕರಣಗಳು ವಿಚ್ಛೇದನಕ್ಕಾಗಿ ದಾಖಲಾಗುತ್ತವೆ.
ವಿಚ್ಛೇದನಕ್ಕೆ ಮುಂದಾಗುವವರು ಯಾರು? ಪುರುಷನೇ ಅಥವಾ ಮಹಿಳೆಯೇ?: ಅಮೆರಿಕನ್ ಸೋಶಿಯಲಾಜಿಕಲ್ ಅಸೋಸಿಯೇಷನ್ (ASA) ನ 110ನೇ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗಿರುವ ಹೊಸ ಅಧ್ಯಯನದ ಪ್ರಕಾರ, ಪುರುಷರಿಗಿಂತ ಮಹಿಳೆಯರು ವಿಚ್ಛೇದನಕ್ಕೆ ಮುಂದಾಗುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ, ಶೇ.69 ರಷ್ಟು ಮಹಿಳೆಯರು ವಿಚ್ಛೇದನಕ್ಕೆ ಮೊದಲ ಹೆಜ್ಜೆ ಇಟ್ಟರೆ, ಈ ವಿಷಯದಲ್ಲಿ ಪುರುಷರ ಪಾಲು ಶೇ.31 ರಷ್ಟಿದೆ. ಇದರರ್ಥ ಪುರುಷರು ತಮ್ಮ ಸಂಬಂಧಗಳನ್ನು ಹೇಗಾದರೂ ಉಳಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದರ್ಥ ಕೊಡುತ್ತದೆ. ಆದರೆ, ಈ ಬಗ್ಗೆ ಅಧ್ಯಯನ ನಡೆಸಿದ ರೋಸೆನ್‌ಫೆಲ್ಡ್ ಇದನ್ನು ಅಲ್ಲಗಳೆಯುತ್ತಾರೆ.
ಇದನ್ನೂ ಓದಿ:

