ಅಮೆರಿಕ ಸೇನಾ ಕಾರ್ಯಾಚರಣೆ: ಭಾರತೀಯರು ವೆನೆಜುವೆಲಾಗೆ ಪ್ರಯಾಣಿಸದಂತೆ ವಿದೇಶಾಂಗ ಇಲಾಖೆ ಸೂಚನೆ
ಅಮೆರಿಕದ ಸೇನಾ ಕಾರ್ಯಾಚರಣೆಯಿಂದಾಗಿ ವೆನೆಜುವೆಲಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಭಾರತೀಯರಿಗೆ ಮತ್ತು ಅನಿವಾಸಿ ಭಾರತೀಯರಿಗೆ ವಿದೇಶಾಂಗ ಇಲಾಖೆ ಸಲಹೆ ಹಾಗೂ ಮುನ್ನೆಚ್ಚರಿಕೆಗಳನ್ನು ನೀಡಿದೆ.


Published : January 4, 2026 at 11:25 AM IST
ನವದೆಹಲಿ: ಶನಿವಾರ (ಜ.3) ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ನಂತರ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೆನಿಜುವೆಲಾಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ. ವೆನೆಜುವೆಲಾದ ಎಲ್ಲಾ ಭಾರತೀಯರು ತೀವ್ರ ಜಾಗರೂಕರಾಗಿರುವಂತೆ ತಿಳಿಸಿದೆ.
ಮಡುರೊ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸುತ್ತ ಬಂದಿದ್ದ ಅಮೆರಿಕ ಶನಿವಾರ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಮಿಲಿಟರಿ ದಾಳಿ ನಡೆಸಿತು. ತೈಲ ಸಮೃದ್ಧ ದೇಶದ ಅಧ್ಯಕ್ಷ ನಿಕೋಲಸ್ ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದರು. ಯುಎಸ್ ಪಡೆಗಳು ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ಅಮೆರಿಕಕ್ಕೆ ಕರೆದೊಯ್ದಿವೆ. ಅಮೆರಿಕದ ಕ್ರಮದ ನಂತರ ವೆನೆಜುವೆಲಾ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
Advisory for Venezuela ⬇️
— Randhir Jaiswal (@MEAIndia) January 3, 2026
🔗 https://t.co/vz4hBkOhVx pic.twitter.com/hzJsL3WQBL
"ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ವೆನೆಜುವೆಲಾಕ್ಕೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. "ಯಾವುದೇ ಕಾರಣಕ್ಕೂ ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಜಾಗರೂಕರಾಗಿರಲು, ತಮ್ಮ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಕ್ಯಾರಕಾಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಹಾಯವಾಣಿ ಬಿಡುಗಡೆ: ಭಾರತೀಯರು +58-412-9584288 ಫೋನ್ ಸಂಖ್ಯೆ (ವಾಟ್ಸಾಪ್ ಕರೆಗಳಿಗೂ ಸಹ) ಮತ್ತು cons.caracas@mea.gov.in ಇಮೇಲ್ ಐಡಿ ಮೂಲಕ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸಚಿವಾಲಯವು ಭಾರತೀಯರನ್ನು ಕೋರಿದೆ. ಕ್ಯಾರಕಾಸ್‌ನಲ್ಲಿರುವ ರಾಯಭಾರ ಕಚೇರಿಯ ಪ್ರಕಾರ, ವೆನಿಜುವೆಲಾದಲ್ಲಿ ಸುಮಾರು 50 ಅನಿವಾಸಿ ಭಾರತೀಯರು ಮತ್ತು 30 ಭಾರತೀಯ ಮೂಲದ ವ್ಯಕ್ತಿಗಳು ಇದ್ದಾರೆ.
ಅಮೆರಿಕದ ಈ ಕ್ರಮವು ದಕ್ಷಿಣ ಅಮೆರಿಕದ ಈ ದೇಶದಲ್ಲಿ ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿದೆ. ರಷ್ಯಾ ಮತ್ತು ಚೀನಾ ಸೇರಿದಂತೆ ಅನೇಕ ಪ್ರಮುಖ ದೇಶಗಳು ಮಡುರೊ ಮತ್ತು ಅವರ ಪತ್ನಿಯ ಕಾರ್ಯಾಚರಣೆ ಮತ್ತು ಸೆರೆಹಿಡಿಯುವಿಕೆಯನ್ನು ಟೀಕಿಸಿವೆ. ಕ್ಯಾರಕಾಸ್‌ನಲ್ಲಿ ಕಾರ್ಯಾಚರಣೆಯ ಕೆಲ ಗಂಟೆಗಳ ಬಳಿಕ, ಟ್ರಂಪ್ ಅಮೆರಿಕದ ಯುದ್ಧನೌಕೆ USS ಐವೊ ಜಿಮಾದಲ್ಲಿ ಮಡುರೊ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಮಡುರೊ ಅವರನ್ನು ನ್ಯೂಯಾರ್ಕ್‌ಗೆ ಕರೆತರಲಾಗಿದೆ, ಅಲ್ಲಿ ಅವರು ಡ್ರಗ್ ಕಾರ್ಟೆಲ್‌ಗಳನ್ನು ಬೆಂಬಲಿಸುವ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರ ವರ್ಗಾವಣೆ ನಡೆಯುವವರೆಗೆ ಅಮೆರಿಕ ವೆನೆಜುವೆಲಾವನ್ನು ನಿಯಂತ್ರಣಕ್ಕೆ ಪಡೆಯುತ್ತದೆ ಎಂದು ಟ್ರಂಪ್ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು. "ನಾವು ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆ ಮಾಡುವವರೆಗೆ ಆ ದೇಶವನ್ನು ಮುನ್ನಡೆಸುತ್ತೇವೆ" ಎಂದು ಅವರು ತಿಳಿಸಿದರು.
"ಅತ್ಯಂತ ಯಶಸ್ವಿ" ಕಾರ್ಯಾಚರಣೆಯು ಅಮೆರಿಕದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುವ ಅಥವಾ ಅಮೆರಿಕನ್ನರ ಜೀವಗಳಿಗೆ ಅಪಾಯವನ್ನುಂಟುಮಾಡುವ ಯಾರಿಗಾದರೂ ಈ ಕಾರ್ಯಾಚರಣೆ ಎಚ್ಚರಿಕೆಯ ಸಂದೇಶವಾಗಿರಬೇಕು ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಅಮೆರಿಕದ ಕ್ರಮಕ್ಕೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಕ್ಯಾರಕಸ್ ನಾಗರಿಕರ ಮೇಲೆ ಅಮೆರಿಕ ದಾಳಿ; ವೆನಿಜುವೆಲಾದ ಅಧ್ಯಕ್ಷ, ಆತನ ಪತ್ನಿಯನ್ನು ಸೆರೆಹಿಡಿದಿದ್ದೇವೆ- ಟ್ರಂಪ್

