ಜೂನ್ 3ರವರೆಗೆ ದೇಶದ ಹಲವೆಡೆ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಕರ್ನಾಟಕ ಸೇರಿದಂತೆ ಬಿಹಾರ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಗಾಳಿ 80 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗಿನಿಂದ ಕೂಡಿದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Published : May 29, 2026 at 1:17 PM IST
ನವದೆಹಲಿ: ದೇಶದ ಹಲವು ಭಾಗದಲ್ಲಿ ಜೂನ್ 3ರ ವರೆಗೆ ಗುಡುಗು-ಮಿಂಚಿನಿಂದ ಕೂಡಿದ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಎಚ್ಚರಿಕೆ ನೀಡಿದೆ. ದೇಶದ ದಕ್ಷಿಣ, ಪೂರ್ವ, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಮಳೆಯಾಗಲಿದೆ.
ಐಎಂಡಿ ಪ್ರಕಾರ ಬಿಹಾರ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಗಾಳಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗಿನಿಂದ ಕೂಡಿದ ಮಳೆ ಬೀಳಲಿದೆ. ಅದೇ ರೀತಿ ಛತ್ತೀಸ್ಗಢ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಕರ್ನಾಟಕದಲ್ಲೂ ಭಾರಿ ಮಳೆ ನಿರೀಕ್ಷೆ ಇದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಕೇರಳ, ಒಡಿಶಾ, ಬಿಹಾರ, ಪಂಜಾಬಾ, ತಮಿಳುನಾಡು, ಪುದುಚೇರಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಕುರಿತು ಇಲಾಖೆ ತಿಳಿಸಿದೆ.
ಶಾಖದ ಅಲೆ ಎಚ್ಚರಿಕೆ: ಮತ್ತೊಂದೆಡೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ತೆಲಂಗಾಣ, ಪಶ್ಚಿಮ ರಾಜಸ್ಥಾನ ಮತ್ತು ವಿದರ್ಭದ ಹಲವೆಡೆ ಶಾಖದ ಅಲೆ ಮುಂದುವರೆಯಲಿದೆ. ಆಂಧ್ರದ ರಾಯಲಸೀಮೆ ಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಬಿಸಿ ಮತ್ತು ಆರ್ದ್ರ ಪರಿಸ್ಥಿತಿ ಇರಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸೂಚಿತ ಪ್ರದೇಶಗಳಲ್ಲಿ ಗುಡುಗು-ಮಿಂಚಿನ ಅಬ್ಬರ ಹೆಚ್ಚಿರಲಿದ್ದು ತೆರೆದ ಸ್ಥಳಗಳಲ್ಲಿ ಜನರು ಜಾಗರೂಕರಾಗಿರುವಂತೆ ಹಾಗು ಇಂತಹ ಸ್ಥಳಗಳನ್ನು ತಪ್ಪಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಸ್ಥಳೀಯ ಹವಾಮಾನ ಸಲಹೆಗಳನ್ನು ಅನುಸರಿಸುವಂತೆಯೂ ಐಎಂಡಿ ಸಲಹೆ ನೀಡಿದೆ.
ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ದಕ್ಷಿಣ ಪರ್ಯಾಯ, ನೈಋತ್ಯ ಬಂಗಾಳ ಕೊಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ, ಮಧ್ಯ ಬಂಗಾಳ, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ನೈಋತ್ಯ ಮಾನ್ಸೂನ್‌ಗೆ ಅನುಕೂಲಕರ ಪರಿಸ್ಥಿತಿ ಇರುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತದ ಪ್ರಭಾವದಿಂದಾಗಿ, ಜೂನ್ 1ರಿಂದ 3ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಕೆಲವು ಭಾಗಗಳು ಮತ್ತು ಮೇ 31ರಿಂದ ಜೂನ್ 3ರವರೆಗೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಈ ಅವಧಿಯಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಹಾಗು ಮಾಹೆ, ಮತ್ತು ಲಕ್ಷದ್ವೀಪಗಳಲ್ಲಿಯೂ ಗುಡುಗುಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಮೇ 29ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ, ಮೇ 30ರವರೆಗೆ ಆಂಧ್ರದ ಕರಾವಳಿ ಮತ್ತು ಯಾನಂನಲ್ಲಿ ಗಾಳಿಯ ವೇಗ ಗಂಟೆಗೆ 50-70 ಕಿ.ಮೀ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಭಾರತದಾದ್ಯಂತ ಕಡಿಮೆಯಾಗಲಿದೆ ಬಿಸಿಗಾಳಿ: ಬದಲಾಗಿ ಭಾರಿ ಮಳೆ, ಬಿರುಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

