ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಮಳೆ ಮುನ್ಸೂಚನೆ
ಆಗಸ್ಟ್ 31 ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

By ANI
Published : August 31, 2026 at 5:40 PM IST
ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಒಡಿಶಾದ ಉತ್ತರ ಕರಾವಳಿ ಹಾಗೂ ಬಂಗಾಳಕೊಲ್ಲಿಯ ವಾಯುವ್ಯ ಪ್ರದೇಶಗಳಲ್ಲಿ ವಾಯುಭಾರ ಕುಸಿತದಿಂದಾಗಿ ದೇಶದ ಹಲವಾರು ರಾಜ್ಯಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ ಮೊದಲ ವಾರದವರೆಗೆ ಮಳೆ: ದೇಶಾದ್ಯಂತ ನೈಋತ್ಯ ಮಾನ್ಸೂನ್ ಮತ್ತೆ ಸಕ್ರಿಯವಾಗಿದೆ. ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಮಾನ್ಸೂನ್ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ತೇವಾಂಶವುಳ್ಳ ಗಾಳಿಯಿಂದಾಗಿ ದೇಶದ ವಿವಿಧೆಡೆ ಮಳೆಯಾಗುತ್ತಿದೆ. ಪೂರ್ವ ಮತ್ತು ಉತ್ತರ ಭಾರತ ಹಾಗೂ ಪಶ್ಚಿಮ ಘಟ್ಟಗಳಲ್ಲಿಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
Extremely heavy rainfall observed at isolated places over Chhattisgarh; Very heavy rainfall over Assam & Meghalaya, Bihar, East Uttar Pradesh, Jharkhand, West Uttar Pradesh and Odisha; Heavy rainfall over Gangetic West Bengal, Himachal Pradesh, Nagaland, Manipur, Mizoram &… pic.twitter.com/I3myJdjRS9
— India Meteorological Department (@Indiametdept) August 31, 2026
ಉತ್ತರ ಭಾರತದಲ್ಲಿ ಮಳೆ: ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 1ರಿಂದ 5 ರವರೆಗೆ ಹಾಗೂ ಪಶ್ಚಿಮ ರಾಜಸ್ಥಾನದಲ್ಲಿ ಸೆಪ್ಟೆಂಬರ್ 3 ರಿಂದ 5ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಹಿಮಾಲಯ ಪ್ರದೇಶಗಳಲ್ಲಿ ಮಳೆಯ ಜೊತೆಗೆ ಭೂಕುಸಿತದ ಅಪಾಯವಿದೆ. ಮಧ್ಯ ಹಾಗೂ ಈಶಾನ್ಯ ಭಾಗದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ: ಒಡಿಶಾದ ಭಾಗಶಃ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 2 - 3ರವರೆಗೆ ಮುಂದುವರಿಯಬಹುದು. ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಗುಜರಾತ್, ಪೂರ್ವ ಮಧ್ಯಪ್ರದೇಶ, ವಿದರ್ಭ ಪ್ರದೇಶಗಳು ಸೇರಿದಂತೆ ಇತರೆಡೆ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಮುಂದಿನ 24 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಮತ್ತು ಒಡಿಶಾ - ಪಶ್ಚಿಮ ಬಂಗಾಳ - ಬಾಂಗ್ಲಾದೇಶ ಕರಾವಳಿಯಲ್ಲಿ ಗಂಟೆಗೆ 45 - 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಬಂಗಾಳ ಕೊಲ್ಲಿಯ ಮೇಲೆ ಸಮುದ್ರದ ವಾತಾವರಣ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಮೀನುಗಾರರು ಉತ್ತರ ಬಂಗಾಳ ಕೊಲ್ಲಿಗೆ ಮತ್ತು ಒಡಿಶಾ - ಪಶ್ಚಿಮ ಬಂಗಾಳ - ಬಾಂಗ್ಲಾದೇಶ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭೂಕುಸಿತದ ಅಪಾಯ: ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಅಲ್ಮೋರಾ, ಚಮೋಲಿ, ರುದ್ರಪ್ರಯಾಗ, ಹರಿದ್ವಾರ, ನೈನಿತಾಲ್ ಮತ್ತು ಉತ್ತರಾಖಂಡದ ಇತರ ಪ್ರದೇಶಗಳಲ್ಲಿ ಮಳೆ, ಗುಡುಗು ಮತ್ತು ಮಿಂಚು ಬೀಳುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಸೆಪ್ಟೆಂಬರ್ 3ರವರೆಗೆ ಶಿಮ್ಲಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜೌರಿ, ಬಾರಾಮುಲ್ಲಾ, ಕುಪ್ವಾರಾ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಪ್ರದೇಶಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾದರೆ ಮಣ್ಣು ದುರ್ಬಲಗೊಂಡು ಭೂಕುಸಿತದ ಅಪಾಯ ಹೆಚ್ಚಾಗಬಹುದು. ಹಠಾತ್ ಪ್ರವಾಹ ಮತ್ತು ರಸ್ತೆ ಮುಚ್ಚುವಿಕೆಯಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ದಕ್ಷಿಣದಲ್ಲೂ ಮಳೆ ಸಾಧ್ಯತೆ: ದಕ್ಷಿಣ ಭಾರತದ ಹಲವು ಭಾಗಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶ ಸೇರಿದಂತೆ ಆಂಧ್ರ, ಯಾನಂ, ರಾಯಲಸೀಮಾ, ಉತ್ತರ ಮತ್ತು ದಕ್ಷಿಣ ಕರ್ನಾಟಕ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ತೆಲಂಗಾಣದಲ್ಲಿ ಸೆ.5ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ವಾರವಿಡೀ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ವಾದ - ಪ್ರತಿವಾದವೇನು?

