ETV Bharat / bharat

ಹೋಟೆಲ್​ ರೂಮ್​ನಲ್ಲಿ ನಕಲಿ ನೋಟು​ ತಯಾರಿಸುತ್ತಿದ್ದ ಆರೋಪ; ಬೆಂಗಳೂರು ಐಐಟಿ ಪದವೀಧರನ ಬಂಧನ

ಬಂಧಿತ ಆರೋಪಿಯನ್ನು ವಿನಾಯಕ್​ ಝಾ ಎಂದು ಗುರುತಿಸಲಾಗಿದ್ದು, ಈತ ಐಐಟಿ ಬೆಂಗಳೂರಿನ ಪದವೀಧರ ಎಂದು ತಿಳಿದುಬಂದಿದೆ. ನೋಯ್ಡಾದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

IIT Graduate Working At Noida MNC Arrested For 'Printing Fake Currency' In Faridabad Hotel; Probe Underway
ಬಂಧಿತ ಆರೋಪಿಯೊಂದಿಗೆ ಅಧಿಕಾರಿಗಳು (ETV BHARAT)
author img

By ETV Bharat Karnataka Team

Published : June 30, 2026 at 11:05 AM IST

2 Min Read
Choose ETV Bharat

ಫರಿದಾಬಾದ್​ (ಹರಿಯಾಣ): ನಕಲಿ ನೋಟು ತಯಾರಿಸುತ್ತಿದ್ದ ಆರೋಪದಡಿ ಐಟಿ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಗರದ ಸೂರಜ್‌ಕುಂಡ್ ಪ್ರದೇಶದ ಹೋಟೆಲ್ ಕೋಣೆಯೊಳಗೆ ನಕಲಿ ನೋಟು ತಯಾರಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿರುವ ಅಧಿಕಾರಿಗಳು ಮಷಿನ್​ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ವಿನಾಯಕ್​​ ಝಾ ಎಂದು ಗುರುತಿಸಲಾಗಿದ್ದು, ಈತ ಐಐಟಿ ಬೆಂಗಳೂರಿನ ಪದವೀಧರನಾಗಿದ್ದು, ನೋಯ್ಡಾದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಮೂಲಗಳ ಪ್ರಕಾರ, ನಕಲಿ ಕರೆನ್ಸಿ ತಯಾರಿಕೆಗೆ ಬಳಕೆಗೆ ಬೇಕಾದ ವಸ್ತುಗಳನ್ನು ಹೋಟೆಲ್ ಕೊಠಡಿಯೊಂದರಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿ ಸಿಕ್ಕ ಆಧಾರದ ಮೇಲೆ ಪೊಲೀಸರು ಮತ್ತು ವಿಚಕ್ಷಣ ದಳದ ಅಧಿಕಾರಿಗಳು ಜಂಟಿಯಾಗಿ ಈ ದಾಳಿ ನಡೆಸಿದ್ದರು. ನಕಲಿ ನೋಟುಗಳನ್ನು ಮುದ್ರಿಸಲು ಬಳಸಿದ ವಸ್ತುಗಳು, ನಕಲಿ ಕರೆನ್ಸಿ ಮತ್ತು ಇತರೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಹಿತಿ ಆಧಾರದ ಮೇಲೆ ಕೂಡಲೇ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತಾದರೂ, ಕೊಠಡಿಯೊಳಗೆ ಯಾರೂ ಕಂಡುಬರಲಿಲ್ಲ. ನಂತರ, ಆ ತಂಡ ಕೊಠಡಿಯಲ್ಲಿ ಪರಿಶೀಲಿಸಿದಾಗ ಲ್ಯಾಪ್‌ಟಾಪ್, ಪ್ರಿಂಟರ್, ಕರೆನ್ಸಿ ಮುದ್ರಣಕ್ಕೆ ಬಳಸುವ ವಿಶೇಷ ಕಾಗದ, 500 ರೂಪಾಯಿಯ ಒಂದು ನಕಲಿ ನೋಟು ಮತ್ತು 100 ರೂಪಾಯಿಯ ಹತ್ತು ನಕಲಿ ನೋಟುಗಳು ಪತ್ತೆಯಾದವು. ನಕಲಿ ನೋಟುಗಳ ಮುದ್ರಣಕ್ಕೆ ಸಂಬಂಧಿಸಿದ ಇತರೆ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಯಿತು.

ಈ ಕುರಿತು ತನಿಖೆ ನಡೆಸಿದಾಗ, ಹೋಟೆಲ್‌ನ ರಿಜಿಸ್ಟರ್ ಮತ್ತು ಬುಕಿಂಗ್ ದಾಖಲೆಯಲ್ಲಿ ಕೊಠಡಿಯನ್ನು ಫರಿದಾಬಾದ್‌ನ ಸೆಕ್ಟರ್ -17ರ ನಿವಾಸಿ ವಿನಾಯಕ್ ಝಾ ಅವರು ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪ್ರಾರಂಭಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬೆಂಗಳೂರಿನ ಐಐಟಿ ಪದವೀಧರನಾಗಿದ್ದು, ನೋಯ್ಡಾ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.

ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ನಕಲಿ ಕಾರ್ಯಾಚರಣೆ ಎಷ್ಟು ದಿನಗಳಿಂದ ನಡೆಯುತ್ತಿದೆ, ಬೇರೆ ಯಾರು ಭಾಗಿಯಾಗಿದ್ದಾರೆ ಮತ್ತು ವಸ್ತುಗಳ ಮೂಲವನ್ನು ಕಂಡುಹಿಡಿಯಲು ತನಿಖೆ ಆರಂಭಿಸಲಾಗಿದೆ. ಆರೋಪಿಗಳು ಉನ್ನತ ಶಿಕ್ಷಣ ಪಡೆದಿದ್ದರೂ ಸಹ ಇಂತಹ ಅಪರಾಧದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ಮಾತನಾಡಿ, ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ, ಈ ಹಿಂದೆ ನಕಲಿ ನೋಟುಗಳನ್ನು ತಯಾರು ಮಾಡಲಾಗಿತ್ತೆ ಎಂಬ ಕುರಿತು ಹಾಗೂ ಇದರ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಮತ್ತು ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಲು ತಂಡ ಕಾರ್ಯ ನಿರ್ವಹಿಸಲಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಆರ್‌ಬಿಐ ಕಚೇರಿಯಲ್ಲಿ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನ: ಬೆಂಗಳೂರಲ್ಲಿ ಆರೋಪಿ ಬಂಧನ