ETV Bharat / bharat

'ಹಣ, ಟಿಕೆಟ್‌ಗಾಗಿ ನಾನು ತಂದೆಗೆ ಕೆಟ್ಟ ಕಿಡ್ನಿ ದಾನ ಮಾಡಿರುವುದಾಗಿ ಆರೋಪಿಸಿದ್ರು, ಹಲ್ಲೆ ಮಾಡಲು ಚಪ್ಪಲಿ ಎತ್ತಿದ್ರು'

ತೇಜಸ್ವಿ ಯಾದವ್, ಅವರ ಆಪ್ತ ಸ್ನೇಹಿತ ರಮೀಜ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಯಾದವ್ ನನ್ನನ್ನು ಮನೆಯಿಂದ ಹೊರಹಾಕಿದರು ಎಂದು ಲಾಲು ಪ್ರಸಾದ್​ ಯಾದವ್ ಅವರ​ ಪುತ್ರಿ ರೋಹಿಣಿ ಆರೋಪಿಸಿದ್ದಾರೆ.

ROHINI ACHARYA
ತಂದೆ ಲಾಲು ಪ್ರಸಾದ್​ ಜೊತೆ ರೋಹಿಣಿ ಆಚಾರ್ಯ (ETV Bharat)
author img

By ETV Bharat Karnataka Team

Published : November 16, 2025 at 5:33 PM IST

2 Min Read
Choose ETV Bharat

ಪಾಟ್ನಾ(ಬಿಹಾರ): ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್​ ಅವರ ಮನೆಯಲ್ಲಿ ಕೌಟುಂಬಿಕ ಕಲಹ ಭುಗಿಲೆದ್ದಿದೆ. ನಿನ್ನೆಯಷ್ಟೇ ತಾನು ಕುಟುಂಬ ತ್ಯಜಿಸುತ್ತಿದ್ದೇನೆ ಮತ್ತು ರಾಜಕೀಯ ತೊರೆಯುತ್ತಿದ್ದೇನೆಂದು ಘೋಷಿಸಿದ್ದ ಯಾದವ್​ ಅವರ ಪುತ್ರಿ ರೋಹಿಣಿ ಆಚಾರ್ಯ, ಇಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿ ಸಹೋದರ ತೇಜಸ್ವಿ ಯಾದವ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೋಟ್ಯಂತರ ಹಣ ಮತ್ತು ಪಕ್ಷದ ಟಿಕೆಟ್​ಗೆ ಬದಲಾಗಿ ನಾನು ನನ್ನ ತಂದೆಗೆ ಕೆಟ್ಟ ಮೂತ್ರಪಿಂಡ ದಾನ ಮಾಡಿರುವುದಾಗಿ ಸಹೋದರ ತೇಜಸ್ವಿ ಯಾದವ್ ಆರೋಪಿಸಿದ್ದಾರೆ. ತೇಜಸ್ವಿ ಯಾದವ್, ರಾಜ್ಯಸಭಾ ಸಂಸದ ಸಂಜಯ್ ಯಾದವ್ ಮತ್ತು ತೇಜಸ್ವಿ ಅವರ ಆಪ್ತ ಸ್ನೇಹಿತ ರಮೀಜ್ ಅವರು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನಿನ್ನೆ ನನ್ನ ಮೇಲೆ ದೌರ್ಜನ್ಯ ಎಸಗಲಾಯಿತು ಎಂದು ಆರೋಪಿಸಿದ್ದಾರೆ.

ಎಲ್ಲ ವಿವಾಹಿತ ಮಹಿಳೆಯರು ತಮ್ಮ ಹೆತ್ತವರನ್ನು ಉಳಿಸಲು ಎಂದಿಗೂ ಪ್ರಯತ್ನ ಮಾಡಬಾರದು. ನಿಮಗೆ ಸಹೋದರನಿದ್ದರೆ, ಆತನಿಗೆ ಮೂತ್ರಪಿಂಡವನ್ನು ದಾನ ಮಾಡುವಂತೆ ಕೇಳಬೇಕು ಅಥವಾ ಆತನ ಸ್ನೇಹಿತನಿಗೆ ಮೂತ್ರಪಿಂಡ ದಾನ ಮಾಡುವಂತೆ ಹೇಳಬೇಕು. ನನ್ನ ಪತಿ, ಅತ್ತೆಯ ಒಪ್ಪಿಗೆ ಪಡೆಯದೆ, ನನ್ನ ಮೂವರು ಮಕ್ಕಳ ಬಗ್ಗೆ ಯೋಚಿಸದೆ ನನ್ನ ಮೂತ್ರಪಿಂಡವನ್ನು ತಂದೆಗೆ ದಾನ ಮಾಡುವ ಮೂಲಕ ನಾನು ಪಾಪ ಮಾಡಿದೆ. ನನ್ನ ಗತಿ ಯಾರಿಗೂ ಬರದಿರಲಿ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಮೇಲೆ ಹಲ್ಲೆ ಮಾಡಲು ಚಪ್ಪಲಿ ಎತ್ತಿದ್ರು: ಮತ್ತೊಂದು ಪೋಸ್ಟ್‌ನಲ್ಲಿ, ನಾನು ವಿವಾಹಿತ ಮಹಿಳೆ ಮತ್ತು ಮೂರು ಮಕ್ಕಳ ತಾಯಿಯಾಗಿದ್ದರೂ, ನನ್ನನ್ನು ನಿಂದಿಸಿದರು. ನನ್ನ ಮೇಲೆ ಹಲ್ಲೆ ಮಾಡಲು ಚಪ್ಪಲಿ ಕೈಗೆತ್ತಿಕೊಂಡರು. ಇದು ನನ್ನ ಹೆತ್ತವರು ಮತ್ತು ಸಹೋದರಿಯರನ್ನು ತೊರೆದು, ದುಃಖದಿಂದ ಮನೆಯಿಂದ ಹೊರಗೆ ಹೋಗುವಂತೆ ಮಾಡಿತು. ನನ್ನನ್ನು ಅನಾಥೆಯನ್ನಾಗಿ ಮಾಡಲಾಗಿದೆ. ನನ್ನಂಥ ಹಣೆಬರಹ ಹೊಂದಿರುವ ಮಗಳು, ಸಹೋದರಿ ಯಾವುದೇ ಮನೆಯಲ್ಲಿ ಹುಟ್ಟದಿರಲಿ ಎಂದು ಭಾವುಕರಾಗಿದ್ದಾರೆ.

ಆರ್‌ಜೆಡಿ ವಿಭಜನೆಯಾಗುತ್ತದೆ- ಬಿಜೆಪಿ ನಾಯಕ ರೂಡಿ: ರೋಹಿಣಿ ಆಚಾರ್ಯ ರಾಜಕೀಯ ತ್ಯಜಿಸಲು ನಿರ್ಧರಿಸಿರುವ ಕುರಿತು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಪ್ರತಿಕ್ರಿಯಿಸಿ, ಇದು ಅವರ ಕುಟುಂಬದ ವಿಷಯ. ಅವರು ಸ್ವಲ್ಪ ನಿರಾಶರಾಗಿದ್ದಾರೆ. ಆರ್‌ಜೆಡಿ ವಿಭಜನೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಬೆಳವಣಿಗೆ ಆರ್​ಜೆಡಿ ಪಕ್ಷಕ್ಕೆ ಒಳ್ಳೆಯದಲ್ಲ ಎಂದರು.

ಇದು ಲಾಲು ಯಾದವ್ ಕುಟುಂಬದ ಆಂತರಿಕ ವಿಷಯ. ಕುಟುಂಬ ಒಡೆಯಬಾರದು ಎಂದು ನಾನು ವಿನಂತಿಸುತ್ತೇನೆ. ಒಬ್ಬ ವ್ಯಕ್ತಿಯಿಂದಾಗಿ ಕುಟುಂಬವು ಒಡೆಯುತ್ತಿದ್ದರೆ, ಅದು ಒಳ್ಳೆಯದಲ್ಲ. ಲಾಲು ಯಾದವ್ ಮತ್ತು ರಾಬ್ರಿ ದೇವಿ ಈ ಕುಟುಂಬವನ್ನು ಉಳಿಸಬೇಕು. ಇದು ಅವರ ಕುಟುಂಬದ ವಿಷಯ, ಹೆಚ್ಚು ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.

ಇವುಗಳನ್ನೂ ಓದಿ: 'ನನ್ನಂಥ ಮಗಳು ಹುಟ್ಟಬಾರದು, ನನಗಾದ ಪರಿಸ್ಥಿತಿ ನಿಮಗೆ ಬರದಿರಲಿ': ಲಾಲು ಪುತ್ರಿ ರೋಹಿಣಿ ಕಣ್ಣೀರು

ರಾಜಕೀಯ ತೊರೆದ ಲಾಲು ಪುತ್ರಿ: ಕುಟುಂಬದ ಸಂಬಂಧವನ್ನು ಕಡಿದುಕೊಂಡ ರೋಹಿಣಿ